ತೊರೆಯ ತೀರದ ನೆನಪುಗಳು · ನಾನೆಂಬ ಅಹಂ

ನಾನೆಂಬ ಅಹಂ

ನಾನೆಂಬ ಅಹಂ ಎಂಬ ತಲೆ ಬರಹದಲ್ಲಿ ನೆನಪಿನ ಸಂಚಿಯ ‘ನನ್ನ ಬಗ್ಗೆ’ ಎಂಬ ಪುಟವನ್ನು ಸುಮಾರು ೫ ವರ್ಷಗಳ ಮುಂಚೆ ಬ್ಲಾಗ್ ಆರಂಭಿಸಿದಾಗ ಬರೆದಿದ್ದೆ. ಅಂದಿನ ನಂಗೂ ೫ ವರ್ಷ ವಯಸ್ಸೇರಿದ ಇಂದಿನ ನಂಗೂ ಯೋಚನಾ ಲಹರಿಯಲ್ಲೂ ಅಥವಾ ಇನ್ಯಾವುದೇ ‘ಸ್ಥಿತ್ಯಂತರದ ಸ್ಥಿತಿ’ಯಲ್ಲಿ ಹಲವು ವ್ಯತ್ಯಾಸವಿದೆ, ಅದು ಬಹು ಸೂಕ್ಶ್ಮ, ಮತ್ತು ಮನುಷ್ಯ ಪ್ರಕೃತಿಯ ಸಹಜವಾದುದು. ಆದುದರಿಂದ ಅಂದಿನ “ನನ್ನ ಬಗ್ಗೆ” ಇಂದಿನ “ನನ್ನ ಬಗ್ಗೆ”ಯಾಗದು. ಹಾಗೆಂದು ಯೋಚಿಸುತ್ತಾ ಬೆರೆಯಲು ಕೂತೆ.  ಸದಾ ಗೊಂದಲದ ಗೂಡಾದ, ನನಗೆ ನಾನೇ, ತುಂಬಾ ಆಪ್ತನೆನಿಸುವ, ಮತ್ತೊಮ್ಮೆ ಪರಕೀಯನೆನಿಸುವ  ನಾನೆಂಬ ನನ್ನನ್ನು ಹಾಗೆಲ್ಲಾ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಅಪೂರ್ಣವೆನಿಸಿದರೂ ಆ ಹೊತ್ತಿಗೆ ನನಗೆ ನಿಲುಕಿದಷ್ಟು ನನ್ನನ್ನು ನಿಮ್ಮ ಓದಿಗೆ ಇಲ್ಲಿ ಹಾಕಿದ್ದೇನೆ.

ನಾನೆಂಬ ಅಹಂ
14237699_1155557847839456_8547636511193526244_nನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬರೆಯುವ ವೇಳೆ ‘ಈ ಕ್ಷಣ’ ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..

ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. “ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ”, ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..

ಇಂತೀ ನಿಮ್ಮ,
ಹುಸೇನಿ ~

Leave a comment

ಕಾಡುವ ಹನಿಗಳು · ನೆನಪಿನ ಹನಿ · ಹುಸೇನಿ_ಪದ್ಯಗಳು

english to kannada language

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ
ಮೇಲೆ ಉರುಳಾಡಿ ಎದ್ದವನ
ಮಾನವ ಪ್ರಜ್ಞೆಯ ಹೆಣ
ಮೌಢ್ಯದ ಮಂಟಪದ ತೋರಣವಾಯಿತು;

ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ
ಅಲ್ಲೆಲ್ಲೋ ಬಿದ್ದಿರಬಹುದಾ ?

ಹುಸೇನಿ ~

ಕಾಡುವ ಹನಿಗಳು · ಗೆಳೆಯಾ

ಗೆಳೆಯಾ..

BF

ಭವಿತವ್ಯದ ಕವಲಿನಲಿ
ತುಂಬು ತಮವಿದೆ
ಬೆಳಕಾಗಿ ಬರಿ ನಿನ್ನನ್ನಷ್ಟೇ
ತುಂಬಿಕೊಂಡಿದ್ದೇನೆ ಗೆಳೆಯಾ…
ನೀನೊಂದು ಕಂದೀಲು
ಆವರಿಸಿದಂತೆಲ್ಲಾ ನನ್ನನ್ನು ನಾನೆ
ಕಾಣುತ್ತಿದ್ದೇನೆ…

‪#‎ಆತ್ಮೀಯ_ಗೆಳೆಯನಿಗೆ‬

Leave a comment

... ಮತ್ತದೇ ಖಾಲಿತನ.. · ಮತ್ತೆ ಸಂಜೆಯಾಗುತ್ತಿದೆ..

… ಮತ್ತದೇ ಖಾಲಿತನ..

evening-window

ಕಪ್ಪುಗಟ್ಟಿದ ಭಾನು,
ರೆಕ್ಕೆ ಮುರಿದುಕೊಂಡ ಕಾಗೆ,
ಕಂಡವರಿಗೆ ಕೈ ಚಾಚುವ ಹರಕಲು ಹುಡುಗಿ,
ಸಂತೆ ಮುಗಿದ ನೀರವ ರಸ್ತೆ,
ಬೊಚ್ಚು ಬಾಯಿ ಅಜ್ಜಿಯ ನಿರಿ ಚಹರೆ
ಕಿಟಕಿಯಾಚೆಗೆ ಏನೂ ಹೊಸದಿಲ್ಲ…
ಈಚೆಗೂ ಅಷ್ಟೇ…
ನಿನ್ನ ನೆನಪುಗಳು… ಮತ್ತದೇ ಖಾಲಿತನ…
ಹುಸೇನಿ ~
ಹುಸೇನಿ ಪದ್ಯಗಳು - 35 · ಹುಸೇನಿ_ಪದ್ಯಗಳು

ಕನ್ನಡ ಕವನಗಳು Kannada Kavanagalu

ನಿಯ್ಯತ್ತಿನ ಕರೆಗಳು (ಹುಸೇನಿ ಪದ್ಯಗಳು – 35)


road_nenapinasanchi

ನಿಯ್ಯತ್ತು ಸುತ್ತಿಕೊಂಡಿದೆ,
ಉಸಿರಿಗೊಂದಿಷ್ಟು
ಗಾಳಿ
ಕೊಡಿ

~

ನಿಯ್ಯತ್ತು ಅಂದರೆ
ಪಾದ ಮತ್ತು
ಚಪ್ಪಲಿ;
ಅಷ್ಟೂ ಸನಿಹವಿರುವ
ಸಾವು..

~

ನಿಯ್ಯತ್ತು ಎಂದರೆ
ನಡೆದ ಕಾಲುದಾರಿ
ನಡುವೆ
ತೊಟ್ಟಿಕ್ಕಿದ
ನೆತ್ತರು,
ಮತ್ತದರ
ಕಮಟು ..

~

ಮತ್ತೆ
ನಿಯತ್ತಿಗೇ
ಸುತ್ತಿಕೊಳ್ಳುತ್ತೇನೆ,
ಪರಿಧಿಯಾಚೆಗಿನ ಅವಕಾಶ ತುಂಬಾ
ಜೇಡರ ಬಲೆ
ನಡುವೆ ಸಿಕ್ಕಿ ಹಾಕಿಕೊಂಡ
ಚಿಟ್ಟೆ !

ಹುಸೇನಿ ~

Leave a comment

ದೊರೆಯೊಂದಿಗಿನ ಸ್ವಗತ

ದೊರೆಯೊಂದಿಗಿನ ಸ್ವಗತ

nenapinasanchi_praying

ನನ್ನದೆಲ್ಲವೂ ನಿನ್ನದು
ಎಂದರಿತ ದಿನದಿಂದ
ಕಳೆದುಕೊಳ್ಳುವ
ಭಯವ ತೊರೆದಿದ್ದೇನೆ
ದೊರೆಯೇ…

~

ನಾನು ಜನರಿಗೆ ಮೋಸ ಮಾಡೋದಿಲ್ಲ
ಅಂತ ಹೇಳಿದ್ದ ದಿನ
ಅಪರಾತ್ರಿ ಎದ್ದು ಬಿಕ್ಕಿ ಬಿಕ್ಕಿ
ಅತ್ತಿದ್ದೆ ದೊರೆಯೇ…
ಈ ಕಾಲವೆಲ್ಲ ನಿನಗೆ
ವಂಚಿಸಿದುದನ್ನು ನೆನೆನೆನೆದು…

ಹುಸೇನಿ ~

Leave a comment

ಬಿಂದು · ಬಿಂದು – 17

ಬಿಂದು – 17

ಕೂಡಿಕೊಂಡ ಬಳಿಕ
ಕಳಚಿಕೊಳ್ಳಲೇಬೇಕಾದ
ನಿಯ್ಯತ್ತಿನ ಕವಲುಗಳ
ಹಾದಿಯಲಿ
ದಾರಿಯ ಬದಲು ಪಯಣವನ್ನು
ನೆಚ್ಚಿಕೊಂಡ
ಮುಸಾಫಿರ ನಾನು…

ಹುಸೇನಿ ~

ಬಿಂದು · ಬಿಂದು – 16

ಬಿಂದು – 16

ಗಾಳಿ, ನೀರು, ಬೆಳಕು
ಉಚಿತವಾಗಿರುವ ಜಗತ್ತಿನಲ್ಲಿ
ಬದುಕುವುದನ್ನು ದುಸ್ತರ ಮಾಡಿಕೊಂಡ
ಮನುಷ್ಯ
ಇನ್ನೊಬ್ಬರಿಗೆ ಬದುಕುವ
ಪಾಠವನ್ನೂ ಹೇಳಿಕೊಡುತ್ತಾನೆ..

ಹುಸೇನಿ ~

Leave a comment