ನ್ಯಾನೋ ಕಥೆಗಳು

ವ್ಯತ್ಯಾಸ ಮತ್ತು ಇತರೆ ನ್ಯಾನೋ ಕತೆಗಳು


ನೀನಿಲ್ಲದೆಯೂ
ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ಮಿಗಿಲಾಗಿ ಆತ ಹೆಂಡತಿಯನ್ನು ಪ್ರೀತಿಸುತ್ತಿದ್ದ. ತನ್ನ ಸರ್ವಸ್ವವನ್ನೂ ಅವಳಿಗೆ ಮುಡಿಪಾಗಿಟ್ಟಿದ್ದ. ಅವಳಿಲ್ಲದ ಒಂದು ದಿನವನ್ನು ಅವನಿಂದ ಕಲ್ಪಿಸಲೂ ಆಗುತ್ತಿರಲಿಲ್ಲ .
ಅದೊಂದು ದಿನ ಅವಳು ಮಾತಿನ ನಡುವೆ “ನೀನಿಲ್ಲದೆಯೂ ಬದುಕಬಲ್ಲೆ”.. ಎಂದಿದ್ದಳು.
ಮರುದಿನ ಆತ ಹೆಣವಾಗಿದ್ದ.

ಸಾಧನೆ
ಆ ತಂದೆಗೆ ಚಿಕ್ಕ ಪ್ರಾಯದ ತನ್ನ ಮಗನ ಬದುಕಿನ ಬಗ್ಗೆ ಅಗಾದ ಕನಸಿತ್ತು . ತನ್ನ ಮಗನ ಸಾಧನೆಯಲ್ಲಿ ಅಭಿಮಾನ ಹೊಂದಿದ್ದ ತಂದೆ, ಮಗನಿಂದ ಇನ್ನಷ್ಟು ಸಾಧನೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ವಿಧಿಯ ಆಟ ಬೇರೆಯಾಗಿತ್ತು, ಮಗನ ಅಕಾಲ ಮರಣ ಆತನನ್ನು ಕಂಗಾಲು ಮಾಡಿತ್ತು .
ಕೆಲ ದಿನಗಳ ನಂತರ ಅವನಿಗೆ ಚಿಕಿತ್ಸೆ ಕೊಟ್ಟ ಆಸ್ಪತ್ರೆಯಿಂದ ಡಾಕ್ಟರ್ ಕರೆಮಾಡಿದ್ದರು “ನಿಮ್ಮ ಮಗ ದಾನ ಮಾಡಿದ್ದ ಕಣ್ಣುಗಳಿಂದ ಇವತ್ತು ಇಬ್ಬರಿಗೆ ದೃಷ್ಟಿ ಕೊಟ್ಟೆ !”.
ತಂದೆ ತುಂಬು ಅಭಿಮಾನದಿಂದ ತೂಗು ಹಾಕಿದ ಮಗನ ಫೋಟೋವನ್ನೊಮ್ಮೆ ದಿಟ್ಟಿಸಿದರು. .

ಸತ್ತ ಮನುಷ್ಯ
ಒಂದೇ ಕುಟುಂಬದ ಮೂವರನ್ನು ಕೊಂದಿದ್ದ ಆಗಂತುಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಆತನೇ ವರ್ತನೆಯಲ್ಲಿ ಯಾವುದೇ ಪಶ್ಚಾತಾಪ ಭಾವವಿರಲಿಲ್ಲ . ಎಳ್ಳಷ್ಟೂ ಅಳುಕಿಲ್ಲದ ಅವನನ್ನು ದಿಟ್ಟಿಸಿ ನೋಡಿದ ವಯಸ್ಸಾದ ಪೇದೆಯೊಬ್ಬನನ್ನು ಆತ ದಟ್ಟ ಸ್ವರದಲ್ಲಿ ಗದರಿಸುವಂತೆ ಕೇಳಿದ “ಏನನ್ನು ನೋಡ್ತಾ ಇದ್ದೀಯ..? ”
“ನಿನ್ನೊಳಗೆ ಸತ್ತಿರುವ ಮನುಷ್ಯನನ್ನು” ಪೇದೆ ಮಾರ್ಮಿಕವಾಗಿ ಉತ್ತರಿಸಿದ.

ವ್ಯತ್ಯಾಸ
ಅವರಿಬ್ಬರು ಊರಿನ ಆಗರ್ಭ ಶ್ರೀಮಂತರು . ಒಬ್ಬ ಕೊಡುಗೈ ದಾನಿಯಾಗಿದ್ದ. ಸಹಾಯ ಯಾಚಿಸಿ ಬಂದ ಯಾರನ್ನೂ ಆತ ಬರಿಗೈಯ್ಯಲ್ಲಿ ಕಳಿಸುತ್ತಿರಲಿಲ್ಲ. ಮತ್ತೊಬ್ಬ ಕಡು ಜಿಪುನನಾಗಿದ್ದ. ಯಾರಿಗೂ ನಯಾಪೈಸೆ ದಾನ ಮಾಡಿದವನಲ್ಲ. ಕೊನೆಗೆ ಇಬ್ಬರೂ ಸತ್ತು ಹೋದರು.
ವ್ಯತ್ಯಾಸ ಇಷ್ಟೇ, ಒಬ್ಬ ಸತ್ತು ಮಣ್ಣಾಗಿ ಹೋದ. ಮತ್ತೊಬ್ಬ ಸತ್ತೂ ಜನಮಾನಸದಲ್ಲಿ ಬದುಕಿಬಿಟ್ಟ.


Leave a Comment

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್.. · ವಾಸ್ತವ ಸಂಚಿ

ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್..

ಸವಿತಾ ಹಾಲಪ್ಪನವರ್!. ಜೀವರಕ್ಷಣೆಗೆ ನಿರೂಪಿಸಿದ ‘ಅಮಾನುಷ’ ಕಾನೂನಿನಿಂದಾಗಿ ಜೀವ ಕಳೆದುಕೊಂಡ ನಮ್ಮ ಬೆಳಗಾವಿ ಮೂಲದ ದಂತವೈದ್ಯೆ. ಧಾರ್ಮಿಕ ಸಂಕುಚಿತತೆಯ ನೆರಳಿನಲ್ಲಿ ಜೀವಪರ ಎಂಬ ಹಣೆಪಟ್ಟ ಕಟ್ಟಿ ಐರ್ಲೆಂಡ್ ಸರಕಾರ ರೂಪಿಸಿದ ಕಾನೂನು ಒಂದು ಜೀವವನ್ನೇ ಬಲಿತೆಗೆದುಕೊಂದದ್ದು ಆ ದೇಶದ ಇತಿಹಾಸ ದುರಂತವೇ ಸರಿ. ಎಲ್ಲರಿಗೂ ಬದುಕುವ ಹಕ್ಕನ್ನು ಪ್ರತಿಪಾದಿಸುವ ಈ ಕಾನೂನು ಹೆಣ್ಣಿನ ಜೀವನದ ಮತ್ತೊಂದು ಮಜಲನ್ನು ಕಾಣದೆ ಹೋದದ್ದು ದೊಡ್ಡ ದುರಂತ.

ಮಾಜಿ ಕೆ.ಪಿ.ಟಿ.ಸಿ.ಎಲ್ ಉದ್ಯೋಗಿ ಆನಂದ್ ಯಾಳಗಿ ಮತ್ತು ಅಕ್ಕಮಹಾದೇವಿಯವರ ಪುತ್ರಿ ಸವಿತಾ ಸದಾ ಸ್ಪೂರ್ತಿಯ ಚಿಲುಮೆ, ಸ್ನಿಗ್ದ ಸೌಂದರ್ಯವತಿ. ಬಾಲ್ಯದಲ್ಲಿಯೇ ಹತ್ತು ಹಲವು ಸಾಧನೆಗಳ ರೂವಾರಿ. ಉದ್ಯೋಗ ನಿಮಿತ್ತ ಆಕೆ ಪತಿ ಪ್ರವೀಣ್ ಹಾಲಪ್ಪನವರ್ ಜೊತೆ ಕೆಲ ವರ್ಷದಿಂದ ದೂರದ ಐರ್ಲೆಂಡ್ ನಲ್ಲಿ ವಾಸವಾಗಿದ್ದರು. 5 ತಿಂಗಳ ಬಸುರಿಯಾಗಿದ್ದ ಆಕೆಗೆ ಅಕ್ಟೋಬರ್ 21ರಿಂದು ಇದ್ದಕ್ಕಿಂದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತ್ತು .ಗಾಲ್ವೆಯ ವಿವಿ ಯಲ್ಲಿ ಪರೀಕ್ಷೆ ಮಾಡಿದ ವೈದ್ಯರು ಭ್ರೂಣ ಜಾರಿದೆ, ಅಲ್ಲದೆ ಗರ್ಭಕೋಶ ಊದಿಕೊಂಡಿದ್ದು, ಅಮಿನಿಯೋಟಿಕ್ ದ್ರವ ಸೋರಿಕೆಯಾಗುತ್ತಿದ್ದರಿಂದ ಮಗು ಉಳಿಯೋದು ಕಷ್ಟ ಎಂದಿದ್ದರು. ಈ ನಡುವೆ ಆಕೆಗೆ ತೀವ್ರ ಹೊಟ್ಟೆ ನೋವೂ ಕಾಣಿಸಿಕೊಂಡಿತ್ತು. ರಕ್ತಸ್ರಾವ ತೀವ್ರವಾಗುತ್ತಿದ್ದಂತೆ ಗರ್ಭಪಾತ ಮಾಡಿಸಿ ಪತ್ನಿಯ ಜೀವ ಉಳಿಸುವಂತೆ ಪ್ರವೀಣ್ ಕೇಳಿಕೊಂಡರು. ಆದರೆ ಭ್ರೂಣ ಇನ್ನೂ ಸತ್ತಿಲ್ಲವಾದ್ದರಿಂದ ವೈದ್ಯರು ಗರ್ಭಪಾತ ಮಾಡಲು ಒಪ್ಪಿಕೊಳ್ಳಲಿಲ್ಲ. “ಇದು ಕ್ಯಾಥೊಲಿಕ್ ರಾಷ್ಟ್ರ, ಇಲ್ಲಿ ಭ್ರೂಣ ಹತ್ಯೆಗೆ ಕಾನೂನು ಅವಕಾಶ ಕೊಟ್ಟಿಲ್ಲ” ಎಂಬುದಾಗಿತ್ತು ವೈದ್ಯರ ಉತ್ತರ. ಪತ್ನಿಯ ನರಕಯಾತನೆ ನೋಡಲಾರದೆ ಪ್ರವೀಣ್ ವೈದ್ಯರ ಕಾಲಿಗೆ ಬಿದ್ದರೂ ವೈದ್ಯರ ಮನಸು ಕರಗಲಿಲ್ಲ. ಯಾತನಾಮಯ ನೋವಿನಿಂದ ಸವಿತಾ “ನಾನು ಕ್ಯಾಥೊಲಿಕ್ ಅಲ್ಲ, ಐರ್ಲೆಂಡ್ ಪ್ರಜೆಯೂ ಅಲ್ಲ, ನಾನೊಬ್ಬ ಹಿಂದೂ, ದಯಮಾಡಿ ಮಗುವನ್ನು ಹೊರ ತೆಗೀರಿ” ಅಂತ ಗೊಗೆರೆದರೂ ಅವಳ ಮೊರೆ ಕೇಳಲಿಲ್ಲ. ಭ್ರೂಣದ ಎದೆಬಡಿತ ನಿಲ್ಲುವವರೆಗೂ ನಾವು ಏನೂ ಮಾಡುವಂತಿಲ್ಲ ಎಂದು ವೈದ್ಯರು ಕೈ ಚೆಲ್ಲಿದರು. ಮುಂದಿನ ಮೂರು ದಿನಗಳಲ್ಲಿ ಸವಿತಾ ಮತ್ತು ಪ್ರವೀಣ್ ಹಲವಾರು ಬಾರಿ ಅಬಾರ್ಶನ್ ಮಾಡುವಂತೆ ಆಸ್ಪತ್ರೆ ಅಧಿಕಾರಿಗಳಲ್ಲಿ ವಿನಂತಿಸಿದ್ದರೂ, ಅವರು ಕಾನೂನಿನ ಹೆಸರು ಹೇಳಿ ನಿರಾಕರಿಸಿದ್ದರು. ಅಕ್ಟೋಬರ್ 23 ರಂದು ಶೌಚಾಲಯದಲ್ಲಿ ಕುಸಿದು ಬಿದ್ದ ಆಕೆಯನ್ನು ಐ.ಸಿ.ಯುಗೆ ಸೇರಿಸಿದ ಕೆಲವೇ ಗಂಟೆಗಳಲ್ಲಿ ಭ್ರೂಣದ ಎದೆ ಬಡಿತ ನಿಂತಿತು. ಕೊನೆಗೂ ಮಗುವನ್ನು ಅಬಾರ್ಶನ್ ಮಾಡಿ ಹೊರತೆಗೆಯಲಾಯಿತು. ಅಷ್ಟರಲ್ಲೇ ಸಮಯ ಮೀರಿತ್ತು. ಅದಾದ ಮೂರನೇ ದಿನದಲ್ಲಿ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ದೇಹದ ಉಷ್ಣತೆಯಲ್ಲಿ ಏರು ಪೇರಾಯಿತು. ಹೃದಯ, ಮೂತ್ರಜನಕಾಂಗ ಮತ್ತು ಪಿತ್ತಜನಕಾಂಗ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೊನೆಗೆ ನವೆಂಬರ್ 1ಕ್ಕೆ ಅಕೆಯ ನರಕಮಯ ಬದುಕು ಕೊನೆಗೊಂಡಿತು.

ಮಾನವ ಹಕ್ಕುಗಳ ಪಾಲಕರೆಂದು ಬೊಬ್ಬಿಡುವ ಐರ್ಲೆಂಡ್ ದೇಶದ ಕಾನೂನು ಎಷ್ಟೊಂದು ಅಮಾನುಷ ಮತ್ತು ಜೀವಭಕ್ಷಕೆವೆಂದು ಈ ಪ್ರಕರಣದ ಮೂಲಕ ಬೆಳಕಿಗೆ ಬಂದಿದೆ. ಧರ್ಮಾಂಧತೆಯ ತಳಹದಿಯ ಮೇಲೆ ದೇಶದ ಕಾನೂನನ್ನು ಕಟ್ಟಿದರೆ ಆಗುವ ಅನಾಹುತಕ್ಕೆ ಈ ಪ್ರಕರಣ ಕನ್ನಡಿಯಂತಿದೆ. 1861ರ ಕಾನೂನಿನ ಪ್ರಕಾರ ಐರ್ಲೆಂಡ್ ದೇಶದಲ್ಲಿ ಗರ್ಭಪಾತ ನಿಷೇಧಿಸಲಾಯಿತು. ಈ ಕಾನೂನಿನ ಹಿಂದೆ ಸಂಪ್ರದಾಯವಾದಿ ಕ್ಯಾಥೊಲಿಕರ ದಟ್ಟ ಪ್ರಾಭಾವವಿತ್ತು. ‘ಎಲ್ಲರಿಗೂ ಬದುಕುವ ಹಕ್ಕಿದೆ’ ಎಂಬ ನೀತಿಯನ್ನು ಜಾರಿಗೊಳುಸುವ ನಿಟ್ಟಿನಲ್ಲಿ ಈ ಕಾಯಿದೆ ಜಾರಿ ಬಂತಾದರೂ, ಸ್ತ್ರೀ ಬದುಕಿನ ಇನ್ನೊಂದು ಆಯಾಮವನ್ನು ಅಳೆಯಲು ಈ ಕಾನೂನು ಸಂಪೂರ್ಣವಾಗಿ ವಿಫಲಗೊಂಡಿತ್ತು. ಅಗತ್ಯ ಸನ್ನಿವೇಶಗಳಲ್ಲಿ ಗರ್ಭವನ್ನು ಉಳಿಸುವ ಅಥವಾ ಬಿಡುವ ಆಯ್ಕೆಯನ್ನು ವೈದ್ಯರಿಗೆ ಮತ್ತು ಆ ಮಹಿಳೆಗೆ ಬಿಟ್ಟು ಕೊಡದೆ ಕಾನೂನಿನ ಕೈಗೆ ಒಪ್ಪಿಸುವುದು ಒಂಥರಾ ಮೂರ್ಖತನದ ಪರಮಾವದಿ. ಹಲವು ಕ್ಯಾಥೊಲಿಕ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಈ ನಿಟ್ಟಿನಲ್ಲಿ ತಮ್ಮ ಕಾನೂನಿಗೆ ಅಗತ್ಯ ಬದಲಾವಣೆಯನ್ನು ತಂದಿದೆ.

ಈ ಮೊದಲು 1992ರಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಗರ್ಭಪಾತಕ್ಕೆ ಅವಕಾಶ ಕೊಡದ ಈ ಕಾನೂನಿನ ಬಗ್ಗೆ ಅಲ್ಲಿನ ಪ್ರಜ್ಞಾವಂತ ನಾಗರಿಕರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದರು. 2009ರಲ್ಲಿ ಐರೊಪ್ಯ ಒಕ್ಕೂಟ ಈ ಕಾಯಿದೆಗೆ ಬದಲಾವಣೆಯನ್ನು ತರಲು ಸೂಚನೆ ಕೊಟ್ಟಿತು. ಆದರೆ ಧಾರ್ಮಿಕ ಕಟ್ಟರ್ ವಾದಿಗಳ ಕೊಪವನ್ನೆದುರಿಸಲು ಸಿದ್ದರಿಲ್ಲದ ಅಲ್ಲಿನ ಸರಕಾರ ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ.

ಸದ್ಯ ಈ ಪ್ರಕರಣಕ್ಕೆವಿಶ್ಯವ್ಯಾಪಿ ಸಂಚಲನ ಮೂಡಿಸಿದುದಲ್ಲದೆ, ಇದರ ವಿರುದ್ದ ಭಾರಿ ಅಕ್ರೋಶ ವ್ಯಕ್ತವಾಗಿದೆ. ಸ್ವತಃ ಐರ್ಲೆಂಡ್ ನಲ್ಲೆ ಜನರು ಆಕ್ರೋಶದಿಂದ ಬೀದಿಗಿಳಿದಿದ್ದಾರೆ. ಅಲ್ಲಿನ ಅರೋಗ್ಯ ಸಚಿವರು ಎರಡು ಕಡೆಯಿಂದ ತನಿಖೆಗೆ ಆದೇಶಿಸಿದ್ದಾರೆ. ಇನ್ನಾದರೂ ಅಲ್ಲಿನ ಸರಕಾರ ಎಚ್ಚೆತ್ತು ಧಾರ್ಮಿಕ ನಂಬಿಕೆಯನ್ನು ವೈದ್ಯಕೀಯ ಕ್ಷೇತ್ರದಿಂದ ಬೇರ್ಪಡಿಸಿ ಆ ಕ್ಷೇತ್ರವನ್ನು ಸ್ವತಂತ್ರವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ಆ ಮೂಲಕ ಕಾನೂನಿನಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಬೇಕು. ಇಲ್ಲದಿದ್ದರೆ ಇನ್ನೂ ಅದೆಷ್ಟು ಸವಿತೆಯರು ಬದುಕುವ ಹಕ್ಕಿನ ಹೆಸರಲ್ಲಿ ಬದುಕನ್ನು ಕಳೆಯಬೇಕೋ ….?


1 comment

ಈ ಲೇಖನವನ್ನು VkNewz ನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಈ ಲೇಖನವನ್ನು ಗಲ್ಫ್ ಕನ್ನಡಿಗದಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ದನಿಯಾಗದ ಹನಿಗಳು · ಹುಸೇನಿ ಪದ್ಯಗಳು - 11 · ಹುಸೇನಿ_ಪದ್ಯಗಳು

ದನಿಯಾಗದ ಹನಿಗಳು(ಹುಸೇನಿ ಪದ್ಯಗಳು – 11)

1.
ನೀ ಕೊಟ್ಟ ನಲಿವಿಗಿಂತ
ನೋವುಗಳೇ ಹೆಚ್ಚು
ಅಪ್ಯಾಯಮಾನ…!

2.
ಪರ್ವತದೊಳಗೂ
ಬೆಂಕಿಯಂತೆ..,
ನನ್ನೊಡಲೊಳಗೆ
ನಿನ್ನ ನೆನಪಂತೆ…!

3.
ನಿನಗೆ ಗೊತ್ತೇ ಗೆಳತಿ..?
ನನಗೆ ಸ್ವರ್ಗದಿಂದ
ಉಡುಗೊರೆಯೊಂದು ಸಿಕ್ಕಿದ್ದು,
ಅದು ನೀನೆ…!

4.
ನೀ ನನ್ನ ಹೃದಯವ
ಕೊಂದವಳಲ್ಲ…!
ಸತ್ತ ಹೃದಯದೊಂದಿಗೆ
ಬದುಕಲು ಕಲಿಸಿದವಳು..!

5.
ಧುತ್ತೆಂದು ಒಸರಿ ಬರುವ
ಕಣ್ಣೀರನ್ನೂ ಹರಿ ಬಿಡುವ
ಮನಸ್ಸಿಲ್ಲ, ಅದು ನೀನನಗೆ ಕೊಟ್ಟ
ಕೊನೆಯ ಉಡುಗೊರೆ…!


Leave a Comment

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ