ಹುಸೇನಿ ಪದ್ಯಗಳು – 38 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 38

alone_beach_nenapina sanchi

೧)
ನಿನ್ನೆಲ್ಲಾ ನೆನಪ ಗುಡ್ಡ ಹಾಕಿ
ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ
ಹೊಗೆ ಶ್ವಾಸದಲ್ಲಿ ಲೀನವಾಯ್ತು,
ನಾಳೆಯ ನನ್ನ ಉಸಿರಿಗೆ
ನಿನ್ನ ಗಂಧವಿರಬಹುದಾ .. ?

೨)
ನೀನಿಲ್ಲದೇ ಆ ತೀರ ಮೌನವಾಗಿತ್ತು.
ಮರಳನ್ನು ಮಾತನಾಡಿಸ ಹೊರಟೆ,
ಅವು ಶತಮಾನಗಳ
ನೀರಡಿಕೆಯಿಂದ ಬಳಲಿತ್ತು.

೩)
ನಿನ್ನ ಬದಲು ಆ ಕ್ಷಣದ
ನಿನ್ನ ಸ್ನಿಗ್ಧ ನಗುವಷ್ಟನ್ನೇ ತುಂಬಿಕೊಂಡೆ.
ಈ ಬದುಕು ಕಳೆಯಲು
ಅಷ್ಟೇ ಸಾಕೆನಿಸಿತು.

೪)
ಸಾವಿನ ಮನೆಯಲ್ಲಿ
ಅಗರಬತ್ತಿಯ ಸುವಾಸನೆ
ಮಂಕಾಗಿದ್ದ ಮುಖಗಳಲ್ಲಿ
ನವ ಚೈತನ್ಯ ತುಂಬುತ್ತಿದೆ..

ಹುಸೇನಿ ~