ಅಮ್ಮಂದಿರ ಕಥೆ · ಅಮ್ಮಾ.. · ಅವಳು · ಕಾಡುವ ಹನಿಗಳು · ನೆನಪಿನ ಹನಿ · ಹುಸೇನಿ_ಪದ್ಯಗಳು

ಅವಳು …

ಚಿತ್ರ ಕೃಪೆ : ಹಾರಿಸ್ ಖಾನ್

೧.
ಬಹುಮಹಡಿ ಮನೆಯಲ್ಲಿ
ಕಾಲಿಗೊಂದು ಕಾಲಾಳು,
ಕೋಣೆಗೊಂದು ಸೀಸಿ ಕ್ಯಾಮರಾ
ಅವಳು ಬಿಕ್ಕುವುದು ಮಾತ್ರ
ಗೋಡೆಗಷ್ಟೇ ತಿಳಿಯುತ್ತದೆ.

೨.
ಸೂರ್ಯ ಸರಿದರೂ ಮನೆ ಮುಟ್ಟದ
ಮಗಳು;
ಜಾಗರಣದ ಜಗತ್ತಿನಲ್ಲಿ ಅವಳಿಗೆ
ಸೂರ್ಯನ ಮೇಲೆ ಮುನಿಸು.

೩.
ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;
ಉಸಿರು ನಿಲ್ಲಿಸಿ
ತೊಟ್ಟಿಲಿನ ಉಸಿರನ್ನು ಆಲಿಸಿ
ನಿಟ್ಟುಸಿರಿಟ್ಟಳು ಅವಳು …

ನೆನಪಿನ ಹನಿ · ಹುಸೇನಿ_ಪದ್ಯಗಳು

ಅಪೂರ್ಣ ಸಾಲುಗಳು .. 1

ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …
ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 🙂

1.
ಮೋಡ ಮುಸುಕಿದ ಅರ್ಧ ಚಂದಿರ, ಮೈಚಾಚಿ ಮಲಗಿದ ರಸ್ತೆ, ಕರಿಮೋಡದಂಚಿನ ಮಿಂಚಿನಸೆಲೆ, ನಸುಕಿನಲ್ಲಿ ಬಿರಿಯಲಣಿಯಾಗುತ್ತಿರುವ ನೈದಿಲೆ ಮತ್ತು ಮೆಲ್ಲುಸಿರಿನ ಪಿಸುಮಾತಿನ ಜೊತೆ ನೀನು, ಎದೆಯ ತಿದಿಯಲ್ಲಿ ಗರ್ಭಗಟ್ಟಿದ ಕನಸುಗಳು ಈ ರಾತ್ರಿಯ ವಿಶೇಷಗಳು..

2.
ಹಲವು ರಾತ್ರಿಗಳು ನಿನ್ನ ರೂಪ ಪಡೆದು ದೇದೀಪ್ಯಮಾನವಾಗಿ ಹೊಳೆಯುತ್ತದೆ.. ಆ ರಾತ್ರಿಗಳಲ್ಲಿ ಹೊಸ ಹಾಡು, ಹೊಸ ಚೈತನ್ಯ, ಹೊಸ ಹಂಬಲಗಳೊಂದಿಗೆ ನನ್ನದು ಮರು ಹುಟ್ಟು…

3.
ಸಂಜೆಯಾಗುತ್ತದೆ
ಅವಳಂತಹದ್ದೇ ಸಂಜೆ
ಸಂಜೆಯಿಂದ ಅವಳ
ಅವಳಿಂದ ಸಂಜೆಯ
ಬೇರ್ಪಡಿಸುವ ಆಟಕ್ಕಿಳಿದವನಿಗೆ
ಎದೆ ಬಯಲಿನಲ್ಲಿ
ಇಬ್ಬನಿ ನಲಿಯುವ
ಮುಂಜಾನೆ ದೊರೆಯುತ್ತದೆ.
ಮತ್ತೆ ಸಂಜೆಯಾಗುವವರೆಗೂ
ಮುಗುಳ್ನಗಿಸುವ ಮುಂಜಾವು ದೊರೆಯುತ್ತದೆ.

4.
ಯಾ ರೂಹಿ…
ನೀನು ಅನಂತ ಗೋಲ;
ಅಖಂಡ ರಾಶಿ ತಾರೆಗಳ,ಕಾಯಗಳ,
ಗ್ರಹಗಳ ತುಂಬಿಕೊಂಡು
ನನ್ನೆದೆ ಬಾಂದಳದಿ ನಿಗೂಢವಾಗಿ
ಮಿನುಗುತ್ತಿದ್ದಾನೆ

5.
…..ಕೆಲವು ಬಂಧಗಳು ಹಾಗೆಯೇ ಅಲ್ಲೆಲ್ಲೋ ಮೀಟಿದ ತಂತಿಯ ನಾದದಿಂದ ಹೊಮ್ಮಿದ ರಾಗಕ್ಕೆ ಇಲ್ಲೆಲ್ಲೋ ಒಂದು ಹೃದಯ ತಲೆದೂಗುತ್ತದೆ. ಅಲ್ಲೆಲ್ಲೋ ಕಾಪಿಟ್ಟ ಮೋಡ ಇಲ್ಲಿ ಹನಿಯುತ್ತದೆ,ಮುಂಜಾನೆಯೊಂದು ಶುಭ ಹಾರೈಕೆ, ಮುಸ್ಸಂಜೆಯಲ್ಲೊಂದಿಷ್ಟು ಹರಟೆಗಳು, ರಾತ್ರಿಯ ನಿಶೀತತೆಯಲ್ಲಿ ಅಂತರಾಳದ ತಪನೆಗೊಂದಿಷ್ಟು ತಂಪುಕೊಡುವ ಮಾತುಕತೆಗಳು,ಇಷ್ಟಗಳನ್ನೂ ಕಷ್ಟಗಳನ್ನು ಹರವಿಕೊಂಡು ಬದುಕಿನ ಅರ್ಥ ಕಂಡುಕೊಳ್ಳುವ ಪ್ರಯತ್ನಗಳು. ಇಹದ ಭವ ಬಂಧಗಳಾಚೆಗಿನ ಖಾಲಿ ಅವಕಾಶದಲ್ಲಿ ಮೂಡುವ ಆತ್ಮೀಯತೆ ಅದು. ಮನಸ್ಸಿಂದ ಮನಸ್ಸಿಗೆ ನಿಸ್ತಂತು ಸಂವಹನ ಅದು. ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬಸಿದು ಕೊಡುವ ಈ ಆತ್ಮೀಯತೆಗೆ ಮಿಗಿಲಾದ್ದು ಇಲ್ಲಿ ಇರುವುದಾದರೂ ಏನು… ?

~ಹುಸೇನಿ

ಕಾಡುವ ಹನಿಗಳು · ನೆನಪಿನ ಹನಿ · ಹುಸೇನಿ_ಪದ್ಯಗಳು

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ
ಮೇಲೆ ಉರುಳಾಡಿ ಎದ್ದವನ
ಮಾನವ ಪ್ರಜ್ಞೆಯ ಹೆಣ
ಮೌಢ್ಯದ ಮಂಟಪದ ತೋರಣವಾಯಿತು;

ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ
ಅಲ್ಲೆಲ್ಲೋ ಬಿದ್ದಿರಬಹುದಾ ?

ಹುಸೇನಿ ~

ಕಾಡುವ ಹನಿಗಳು · ನೆನಪಿನ ಸಂಚಿ - ಹತ್ತು ಲಕ್ಷ ದಾಟಿದ ಓದುಗರು · ನೆನಪಿನ ಹನಿ · ನ್ಯಾನೋ ಕಥೆಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ಸಣ್ಣ ಕತೆ · ಹುಸೇನಿ_ಪದ್ಯಗಳು

ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!

nenapinasanchi 10 lacks readres
ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು ಲಕ್ಷ] ದಾಟಿದೆ. ನನ್ನೆಲ್ಲಾ ಖುಷಿ, ಆದ್ವಾನ, ಸಂಕಟ , ತಳಮಳ, ಕ್ಷುಲ್ಲಕತನ, ಒಂಟಿತನ, ಸೋಲಿನ ಅಂಚಿನ ಗೆಲುವು, ಪ್ರೇಮ ಮುಂತಾದ ಮನುಷ್ಯ ಸಹಜ ಅವಸ್ಥೆಗಳಲ್ಲಿ ಮೂಡಿದ ಭಾವವನ್ನು ಅಕ್ಷರವಾಗಿಸಿ ಗುಡ್ಡ ಹಾಕಿರುವ ನನ್ನದೇ ಮನಸ್ಸಿನ ಪ್ರತಿಫ಼ಲನದ ಪುಟಗಳವು . ಬಹುಶಃ ನಿಮ್ಮ ಎದೆಯ ಹಾಡು ಕೂಡ ಅದೇ ಆಗಿದ್ದರಿಂದ ಏನೋ ನಾಲ್ಕೈದು ವರ್ಷಗಳ ಹಿಂದೆ ನಾನು ಆರಂಭಿಸಿದ್ದ ಬ್ಲಾಗ್ ಈ ಮಟ್ಟಕ್ಕೆ ಬೆಳೆದಿರುವುದು. ಮುಂಚೆಲ್ಲಾ ಕವಿತೆಗಳಲ್ಲಿ ಮುಳುಗಿ ಹೋಗುವ ಜಾಯಮಾನ ನನ್ನದು. ಬದುಕಿನ ಆದ್ಯತೆಗಳು ಬದಲಾದಂತೆಲ್ಲಾ ನನ್ನನ್ನು ನಾನೇ ಕಳೆದುಕೊಂಡಿದ್ದೀನಿ ಅನಿಸಿತ್ತದೆ.
ಅನಿಸಿಕೆಗಳಿಗಿಂತ ಹೆಚ್ಚಾಗಿ ಆ ದಿನ , ಆಕ್ಷಣ ಆ ಘಟನೆ, ಆ ವಸ್ತುವಿನ ಬಗ್ಗೆ ನನ್ನ ಬರಹಗಳು ಹೆಚ್ಚಾಗಿ ಮಾತನಾಡುವುದರಿಂದ ಏನೋ ಕಾವ್ಯಾತ್ಮಕ ಅಲ್ಲದ ಹಲವು ಬರಹಗಳು ನೀವಲ್ಲಿ ಕಾಣಬಹುದು. ಎಲ್ಲದಕ್ಕೂ ಅತೀತವಾಗಿ ಕಾಡುವ ಬದುಕು, ಬಾಲ್ಯ, ಆ ತೊರೆ ತೀರದ ನೆನಪುಗಳು, ಸಮುದ್ರ, ತೀರ ಹೆಚ್ಚಾಗಿ ಬಂದು ಹೋಗುತ್ತದೆ. ಒಂದಷ್ಟು ಹನಿಗಳು, ಕವಿತೆಗಳು(?), ನ್ಯಾನೋ ಕಥೆಗಳು, ಸಂಧ್ಯಾಲಾಪಗಳು… ಮತ್ತೊಂದಿಷ್ಟು ಕಾಡುವ ಬದುಕು.. ಇದು ನಿಮ್ಮದೇ “ನೆನಪಿನ ಸಂಚಿ”.
ಪ್ರೀತಿಯ ಓದುಗರಿಗೆ ಮನದಾಳದ ಅನಂತ ಧನ್ಯವಾದಗಳು

ನಿಮ್ಮವನೇ,
ಹುಸೇನಿ ~

ನಿಮ್ಮ ನಲ್ನುಡಿ

ಕಾಡುವ ಹನಿಗಳು · ನೆನಪಿನ ಹನಿ · ಬಿರಿಯದ ಮೊಗ್ಗು · ಬಿರಿಯದ ಮೊಗ್ಗು - 15

ಬಿರಿಯದ ಮೊಗ್ಗು – 15

ಆ ಮೋಟು ಜಡೆ, ನಿಚ್ಚಳ
ಕಣ್ಣುಗಳು..
ನಿಷ್ಕರುಣಿ ಕಾಲ ಯಾವುದನ್ನು
ಮರೆಸುತ್ತಿಲ್ಲ..
ಎಣ್ಣೆ ತೀರಿದ ಬತ್ತಿಯ ಕಮಟು
ಇನ್ನೂ
ಗಾಳಿಯಿಂದ ಆರಿಲ್ಲ..

ಹುಸೇನಿ ~

Leave a comment

ಕಾಡುವ ಹನಿಗಳು · ನೆನಪಿನ ಹನಿ · ಮತ್ತೇನಿಲ್ಲ ...

ಮತ್ತೇನಿಲ್ಲ …

chitte
ಮತ್ತೇನಿಲ್ಲ..
ನಿನ್ನ ಮುಂಗುರುಳಲಿ ಜಿನುಗುವ
ಕವಿತೆಯಾಗಬೇಕು
ಅಷ್ಟೇ …

ಮತ್ತೇನಿಲ್ಲ
ನೀನೆಂಬ ದೀಪದ ಮುಂದೆ
ಪತಂಗವಾಗಬೇಕು;
ಅಷ್ಟೇ …
~
ಈ ಬಾರಿ
ಪತಂಗ ಮುತ್ತಿಕ್ಕುವ
ಮೊದಲೇ ಗಾಳಿ
ದೀಪವನ್ನು ಆರಿಸಿದೆ..

ಹುಸೇನಿ ~

Leave a comment

ಕಾಡುವ ಹನಿಗಳು · ಗೆಳೆಯಾ · ನೆನಪಿನ ಹನಿ · ಬಿಂದು · ಬಿಂದು – 11

ಬಿಂದು – 11

ನಾನು – ನನ್ನದು
ಎಂದವರೆಲ್ಲಾ ನಿರಂಬಳವಾಗಿ
ನಿಟ್ಟುಸಿರಿಟ್ಟು
ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ..

ಬಾ
ನಾವು ನಮ್ಮದು ಎಂದು ಪ್ರಾರಂಭಿಸೋಣ…

ಹುಸೇನಿ ~

ನಿಮ್ಮ ನಲ್ನುಡಿ

ಅಮ್ಮಂದಿರ ಹನಿ -5 · ಕಾಡುವ ಹನಿಗಳು · ನೆನಪಿನ ಹನಿ

ಅಮ್ಮಂದಿರ ಹನಿ -5

“ಅಮ್ಮ”
ಭಾವತಂತವೊಂದು ಮೀಟಿ
ರಾಗವಾಗುವ,
ಹಾಡಿನಾಚೆಗೂ ಇರುವ
ಶುಭದ ಹಾದಿಯನ್ನು
ತೆರೆಯುವ ಎರಡಕ್ಷರದ
ಕ ವಿ ತೆ

ಹುಸೇನಿ~