ನನ್ನ ಹೆಸರು.. · ಯಾ ರೂಹಿ ....

ನನ್ನ ಹೆಸರು..

nanna-hesaru

“ನಿನ್ನ ಹೆಸರು ಹೇಳುವಾಗೆಲ್ಲಾ ಖುಷಿಯಲೆಗಳು ಪುಟಿದೇಳುತ್ತವೆ.. ಭಾವ ತಂತುವೊಂದು ಮೀಟಿ ರಾಗವ ಹೊಮ್ಮಿದ ಹಾಗೆ.. ಅದು ತರಂಗವೆಬ್ಬಿಸುತ್ತಾ ಹಾಡಿನಾಚೆಗೂ ಇರುವ ಶುಭದ ಹಾದಿಯನ್ನೇ ತೆರೆಯುವ ಹಾಗೆ.. ನನ್ನ ಕುಟುಂಬದಲ್ಯಾರೂ ಈ ಹೆಸರಿನವರಿಲ್ಲ.. ಯಾರಾದರೂ ಬಾಯಿಂದ ಈ ಹೆಸರು ಕೇಳಿದರೆ ಆತ್ಮದೊಳಗೊಂದು ವಿದ್ಯುತ್-ಸಂಚಲನ… ನಿನ್ನ ಹೆಸರು ಮತ್ತೆ ಮತ್ತೆ ಕೂಗುವುದು ನನ್ನೊಳಗೆ ಸಂಭ್ರಮದ ಹೊನಲು ಸೃಷ್ಟಿಸುತ್ತದೆ… “..
ನನ್ನ ಹೆಸರಿನ ಬಗ್ಗೆ ಅವಳು ಹೇಳುತ್ತಲೇ ಇದ್ದಳು..

ಅವತ್ತು ಭಾನುವಾರ ನಾನು ಊರಲ್ಲಿದ್ದೆ, ಹಾಸ್ಟೆಲಿನಲ್ಲಿ ಒಂದೆರಡು ಮಂದಿ ಮಾತ್ರ ಇದ್ದರು. ಅಂದು ಬೆಳಿಗ್ಗೆ ಮೂರು ದಿನಗಳ ಹಿಂದಷ್ಟೇ ಹಾಸ್ಟೆಲು ಸೇರಿದ್ದ ನನ್ನ ಹೆಸರಿನ ವಯಸ್ಸಾದ ಒಬ್ಬರು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಅಸುನೀಗಿದ್ದರು. ಕ್ಷಣ ಮಾತ್ರದಲ್ಲಿ ಹಾಸ್ಟೆಲಿಂದ ಹೋದ ಮೆಸೇಜ್ ಈ ರೀತಿಯಿತ್ತು “ಹುಸೇನ್ ನೋ ಮೋರ್.. ”
ಮೆಸೇಜ್ ಓದಿದವರೆಲ್ಲಾ ದಿಗ್ಭ್ರಾಂತರಾದರು. ಪಾಪ.. ಅವನಿಗೆ ಸಾವಿನ ವಯಸ್ಸಾಗಲಿಲ್ಲವೇ…. ?? ಅಂತೆಲ್ಲಾ ಮಾತುಕತೆ ನಡೆಯಿತು. ಕೊನೆಗೆ ಆ ದಿನ ಸಂಜೆ ಸತ್ತಿದ್ದು ನಾನಲ್ಲ ಅಂತ ಗೊತ್ತಾದ್ಮೇಲೆ ಅದು ತಮಾಷೆ ವಸ್ತುವಾಯ್ತು.
ಅಲ್ಲೂ..ಇಲ್ಲೂ ನನ್ನ ಹೆಸರು… ಒಂದು ಕಡೆ ಬದುಕಿನ ಉತ್ಸಾಹ ಕೊಟ್ಟಿತು. ಇನ್ನೊಂದು ಕಡೆ ಸಾವಿನ ಸೂತಕವಾಯ್ತು .. !

~ಹುಸೇನಿ

Leave a comment

ಮತ್ತೆರಡು ರೂಹಿ ಪದ್ಯ · ಹುಸೇನಿ ಪದ್ಯಗಳು - 29 · ಹುಸೇನಿ_ಪದ್ಯಗಳು

ಮತ್ತೆರಡು ರೂಹಿ ಪದ್ಯ..(ಹುಸೇನಿ ಪದ್ಯಗಳು – 29)

roohi

೧)
ಯಾ ರೂಹಿ…
ನನ್ನ ಉರಿ ಹಂಬಲಗಳ ಹೊಗೆ
ಅಷ್ಟೂ ಮೇಣದ ಬತ್ತಿಗಳ ಬೂದಿ
ಯಾವುದೂ ಈಗ ನೆನಪಾಗುತ್ತಿಲ್ಲ
ಜೀವಕ್ಕೆ ಜೀವ ಜೋತುಬೀಳುವುದನ್ನು
ಕಲಿಯುವಾಗ
ನನ್ನೊಳಗೆ ಮರು ಹುಟ್ಟಿನ ಸಂಭ್ರಮ..
ಈಗ ‘ಬದುಕುತ್ತಿದ್ದೇನೆ’ ಅಷ್ಟೇ… !
೨)
ಯಾ ರೂಹಿ..
ಇಂದೂ ಸಂಜೆಸೂರ್ಯನ ಕಿರಣ ವೈಭವಿಸುತ್ತಿತ್ತು.
ನಮ್ಮ ಪಿಸುಮಾತಿಗೆ ಕಿವಿಯಾದ
ಕಡಲ ಕಿನಾರೆ ಮೌನವ ಹೊದ್ದು ಮಲಗಿತ್ತು.
ನಿನ್ನ ಕಣ್ಣುಗಳಲ್ಲಿ ಅದೇ ಹೊಳಪಿತ್ತು.
ನಾನೂ ಪಾರವಿರದ ಆನಂದದಲ್ಲಿದ್ದೆ;
ಆ… ಕ್ಷಣದ ಮೌನದ ನಂತರ ಇಬ್ಬರೂ
ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೋ… ?

~ಹುಸೇನಿ

Leave a comment

ಮತ್ತೆ ಸಂಜೆಯಾಗುತ್ತಿದೆ..

ಮತ್ತೆ ಸಂಜೆಯಾಗುತ್ತಿದೆ..

moon-sunset
… ಮತ್ತೆ ಸಂಜೆಯಾಗುತ್ತಿದೆ… ಪಡುವಣದ ಮೂಲೆಯಲ್ಲಿ ಸಂಧ್ಯಾ ಸೂರ್ಯನ ಸಾವಿನ ಬಣ್ಣದ ಪಡಿಯಚ್ಚು ಈ ಕೊಳದ ಮೇಲೆ ಇಂದೂ ಮೂಡಿದೆ. ಮುಂಜಾವಿಗೆ ಇದೇ ರವಿಯ ಹೊಂಗಿರಣದ ಸ್ಪರ್ಶದಿ ನವಿರಾಗಿ ಅರಳಿದ್ದ ನೈದಿಲೆ ಈಗ ಅವನ ಒಂಟಿ ವಿರಹದ ಸಾವಿಗೆ ಶೋಕಗೀತೆ ಹಾಡುತ್ತಿದೆ. ಪಾರಿವಾಳದ ಹಿಂಡು ಗೂಡಿಗೆ ಮರಳುತ್ತಿದೆ. ನಾನು ಮನದ ವಿಸ್ಮಯಲೋಕವನ್ನು ಆಗಷ್ಟೇ ತೆರೆದು ನಿನ್ನಯ ನೆನಪಿನರಮನೆಗೆ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಿದ್ದೇನೆ. ನಿನ್ನ ನೆನಹುಗಳು ನನ್ನೊಳಗೆ ವರ್ಣ ಕಾರಂಜಿಯ ಚಿತ್ರೋಧ್ಯಾನ ಧೇನಿಸಿ ಕಾಮನ ಬಿಲ್ಲಿನ ಅಚ್ಚುಗಳ ಹುಚ್ಚೆಬ್ಬಿಸುವ ಸಂಭ್ರಮದಲ್ಲಿದೆ. ಅದು ನನ್ನ ಕಣ ಕಣದಲಿ ಮೆಲುವಾಗಿ ಪಸರಿಸುತ, ವಿಹರಿಸುತಾ ವಿಹಂಗಮವಾಗಿ ನನ್ನನ್ನು ಆವರಿಸಿಕೊಳ್ಳುತ್ತದೆ. ನನ್ನೊಳಗಿನ ಕನವರಿಕೆಗಳಿಗೆ ರೆಕ್ಕೆ ಪುಕ್ಕ ಮೂಡಿ ಗಗನವೇರಿ ತೇಲುತ್ತವೆ. ಕೇವಲ ಕಲ್ಪನೆಯಲ್ಲಿಯೇ ಬದುಕು ಕ್ಷಿಪಣಿಯ ವೇಗ ಪಡೆದು ಹಾರುವಾಗ ನನ್ನೆಲ್ಲ ನೋವು ಹತಾಶೆಗಳು ಕಕ್ಕಾಬಿಕ್ಕಿಯಾಗಿ ಹತಗೊಂದು ಹರಡಿ ಬೀಳುತ್ತವೆ. ಆ ಕ್ಷಣ ನಾನು ಸ್ಥಬ್ದ.. !. ಕ್ಷಣ ಮಾತ್ರದಲ್ಲಿ ವಿಷಣ್ಣ ನಗುವೊಂದನ್ನು ತುಟಿಗೆ ಎಳೆದು ತರುತ್ತೇನೆ. ಅದು ನನ್ನ ಅಸ್ತಿತ್ವಕ್ಕೆ ಸವಾಲೊಡ್ಡುವ ಮುಂಚೆಯೇ ವಿರುದ್ದ ದಿಕ್ಕಿನಲ್ಲಿ ಮೆಲ್ಲನೆ ಕವಲೊಡೆದು ಮೂಡುವ ಚಂದ್ರಮನ ಬೆಳಕಿನ ಮೊದಲ ಕಣದ ಆಹ್ಲಾದಕರ ಸೊಂಪನ್ನು ಕಣ್ತುಂಬ ತುಂಬಿಕೊಂಡು ಜಾರಿಬಿದ್ದ ಕಣ್ಣೀರ ಹನಿಗೆ ಅದೇ ಚಂದ್ರಮನನ್ನು ಹಕ್ಕುದಾರನನ್ನಾಗಿ ಮಾಡಿ ಅವನ ಮೇಲೆ ಕಲ್ಲೆಸೆಯುವ ಪ್ರಯೋಗಕ್ಕೆ ಮುಂದಾಗುತ್ತೇನೆ….

~ಹುಸೇನಿ

Leave a comment

Long Live Kejriwal. · Politics

Long Live Kejriwal..

aap
ಆಫೀಸಿಗೆ ಬಂದು ಕುಳಿತಾಗಿನಿಂದ ವಿಲಕ್ಷಣ ಖುಷಿ ಅನುಭವಿಸುತ್ತಿದ್ದೇನೆ. ಈ ಮೌಸು,ಕೀ-ಬೋರ್ಡು, ಮೊನಿಟರೂ ಎನೂ ಬೇಡದಾಗಿದೆ. ಮನಸ್ಸು ದೂರದ ದೆಲ್ಲಿಯ ಬಿಳಿ ಟೋಪಿಧಾರಿ ಮಕ್ಕಳ, ಮಹಿಳೆಯರ, ಬದುಕಿಗಾಗಿ ಕಷ್ಟಪಡುವ ಕಾರ್ಮಿಕವರ್ಗ ಮತ್ತು ಸಾಮಾನ್ಯ ಜನರ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದೆ, ಜಯಘೋಶದ ಮೆರವಣಿಗೆಯಲ್ಲಿ ಸಾಥಿಯಾಗಿದೆ. ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರೋಧಿಯಲ್ಲ. ಅಧಿಕಾರ ಎಂಬ ಏಕಮೇವ ಉದ್ದೇಶದ ಬೆನ್ನು ಬಿದ್ದು ಅವರು ಹರಡುವ, ಜನರ ಮೇಲೆ ಹೇರುವ ಕೀಳು ರಾಜಕೀಯ ಆದರ್ಶಗಳ ವಿರೋಧಿ ನಾನು. ಯಾವ ತತ್ವಾದರ್ಶಗಳು ನಮ್ಮ ದೇಶದ ಸಂವಿಧಾನದ ಮೂಲ ಪರಿಕಲ್ಪನೆಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತೋ.. ಅಂಥ ರಾಜಕೀಯ ವ್ಯವಸ್ಥೆಯ, ಅಂಥಹ ರಾಜಕೀಯ ವ್ಯಕ್ತಿಯ ವಿರೋಧಿ ನಾನು. ಪ್ರಜಾಪ್ರಭುತ್ವ ಭಾರತದಲ್ಲಿ ಮೋದಿಯೆಂಬ ಸರ್ವಾಧಿಕಾರಿ ಬೆಳೆಯುತ್ತಿರುವುದು ನನಗೆ ಅಸಮಾಧಾನ ತರುತ್ತದೆ. ಇಡೀ ದೇಶದ ಆಡಳಿತ ವ್ಯವಸ್ಥೆ ವ್ಯಕ್ತಿ ಕೇಂದ್ರಿತವಾಗುವುದು ಒಂದು ಅಪಾಯಕಾರಿ ಬೆಳವಣಿಗೆ. ಒಂದು ದೇಶ, ಒಂದು ಧರ್ಮ, ಒಬ್ಬ ನಾಯಕ ಎಂಬುದು ಸಮಾನತೆ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ವ್ಯವಸ್ಥೆಯನ್ನು ಇಲ್ಲದಾಗಿಸುತ್ತದೆ. ಇಡೀ ವ್ಯವಸ್ಥೆಯ ‘ರಿಮೋಟ್ ಕಂಟ್ರೊಲ್’ ಭಾರತದ ಸಂವಿಧಾನವನ್ನು ತಿರಸ್ಕರಿಸಿ ಮನು ಸ್ಮೃತಿಯನ್ನು ಎತ್ತಿ ಹಿಡಿಯುವ, ಮತ್ತು ಹಿಟ್ಲರ್-ಮುಸೊಲಿನಿ ಫ್ಯಾಸಿಸ್ಟ್ ಚಳುವಳಿಯಿಂದ ಸ್ಪೂರ್ತಿ ಪಡೆದ ಆರೆಸ್ಸೆಸ್ ಎಂಬ ಸಂಘಟನೆಗೆ ಕೈಯಲ್ಲಿ.. !. ಅಲ್ಲೊಂದು ಸಾದ್ವಿ ನೆರೆದ ಜನರೆದುರು ತನ್ನ ಹರಕು ಬಾಯಲ್ಲಿ “ನಿಮಗೆ ದೆಹಲಿಯಲ್ಲಿ ರಾಮನಿಗೆ ಹುಟ್ಟಿದ ಮಕ್ಕಳ ಸರ್ಕಾರ ಬೇಕೋ ಅಥವಾ ಅನೈತಿಕವಾಗಿ ಹುಟ್ಟಿದ ಮಕ್ಕಳ ಸರ್ಕಾರ ಬೇಕೋ..” ಎಂದು ಕಿರುಚುತ್ತಾಳೆ. ಆ ಪಕ್ಷದ ಹೊಣೆ ಹೊತ್ತ ಘನ ಸಚಿವೆ ಅದು.. !. ಇಂಥ ಹೇಳಿಕೆಗಳು ನೀಡಲು ಅವರಿಗೆ ಕೊಟ್ಟ ಪ್ರಚೋದನೆ ಏನು..?. ಒಂದಲ್ಲಾ ಎರಡಲ್ಲಾ ಹಲವಾರು ಸಮಾಜ ವಿರೋಧಿ ಹೇಳಿಕೆಗಳು, ಘರ್ ವಾಪಸಿ ಅಂಥಹ ಸಾಮಾಜಿಕ ಅನಿಷ್ಟಗಳಿಗೆ ಮಣೆ ಹಾಕಿದ್ದು.. ಇದೆಲ್ಲ ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತದೆ?.
ಈ ಎಲ್ಲಾ ಬೆಳವಣಿಗೆಗಳು ಪ್ರಜ್ಞಾವಂತರನ್ನು ಕಾಡಿದ್ದು ಸುಳ್ಳಲ್ಲ. ಅವರೇ ಹೇಳುವ ಹಾಗೆ “ಅನೈತಿಕವಾಗಿ” ಹುಟ್ಟಿದ ಜನರು ಅವರನ್ನು ಪೊರಕೆಯಿಂದ ಅಟ್ಟಿ ಓಡಿಸಿದ್ದಾರೆ. ಓಡಿಸಲೇಬೇಕು..
ಪೊಳ್ಳು ಅಭಿವೃದ್ದಿಯ ಮಂತ್ರಗಳು, ಭೂ ಸ್ವಾಧೀನ ಕಾಯಿದೆಯ ಮೂಲಕ ದೇಶದ ಬೆನ್ನೆಲುಬಾದ ರೈತರ ಭೂಮಿಯನ್ನು ಅಂಬಾನಿ, ಅದಾನಿಗಳಿಗೆ ಅಡವಿಡುವ ಪ್ರಯತ್ನಗಳಿಗೆ ಇನ್ನಾದರೂ ಕಡಿವಾಣ ಬೀಳಲೇಬೇಕು. ಕೇಜ್ರಿವಾಲ ಎಂಬ ಶಕ್ತಿ ಇನ್ನಷ್ಟು ಬಲಿಷ್ಟವಾಗಲಿ.. ದೇಶದ ಮೂಲೆ ಮೂಲೆಗೂ ಈ ಶಕ್ತಿ ಹರಡಲಿ, ಸ್ವಚ್ಛ ಭಾರತ ಅಭಿಯಾನ ರಾಜಧಾನಿಯಿಂದಲೇ ಶುರುವಾಗಲಿ…. Long Live Kejriwal..! Long live India…!!

~ಹುಸೇನಿ

Leave a comment

ದಿಲ್ಲಿ ಗದ್ದುಗೆ ಆಪ್ ಪಾಲಾಗಲಿ

ದಿಲ್ಲಿ ಗದ್ದುಗೆ ಆಪ್ ಪಾಲಾಗಲಿ..

kej
ಮಾತು.. ಬರಿ ಬಣ್ಣದ ಮಾತುಗಳು ಇನ್ನು ಚಲಾವಣೆಯಾಗುವುದಿಲ್ಲ. ಜನರಿಗೆ ಎಲ್ಲ ಕಾಲದಲ್ಲಿ ಮಂಕುಬೂದಿ ಎರಚಲು ಸಾಧ್ಯವಿಲ್ಲ. ಮೋಡಿ ಮಾಡುವ , ಪ್ರಚೋದನಾಕಾರಿ ಹೇಳಿಕೆಗಳು ಮತ್ತು ಸುಳ್ಳು ಅಭಿವೃದ್ದಿಯ ಮಂತ್ರದ ಮೂಲಕ ಇನ್ನೂ ಜನರನ್ನು ಹುಚ್ಚೆಬ್ಬಿಸಲಾಗದು. ಮಾತುಗಳು ಯಾರ ಹೊಟ್ಟೆಯನ್ನು ತುಂಬಿಸುವುದಿಲ್ಲ, ನೊಂದವರ ಕಣ್ಣೀರು ಒರೆಸುವುದಿಲ್ಲ. ಸಾಮಾಜಿಕ, ಆರ್ಥಿಕ ಅಭದ್ರತೆಯಿಂದ ದಿನದೂಡುವ ಒಟ್ಟು ಜನಸಂಖ್ಯೆಯ 42% ಜನರ ಒಪ್ಪೊತ್ತಿನ ಕೂಲಿಗಾಗಿ ಪರಿತಪಿಸುವ ಅಹಾಕಾರವನ್ನು ಈ ಮಾತುಗಳು ಎಳ್ಳಷ್ಟೂ ಶಮನಗೊಳಿಸುವುದಿಲ್ಲ. ಕೊಳೆಗೇರಿಗಳ, ರಾಜಕೀಯ ಹುನ್ನಾರಗಳ ಕೋಮುಗಲಭೆಯಿಂದ ಮನೆ ಮಕ್ಕಳು ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಸಂಕ್ರಾಮಿಕ ರೋಗಗಳಿಗೆ ತುತ್ತಾಗುವ ನಿರಾಶ್ರಿತ ಶಿಬಿರಗಳ ಅಮ್ಮಂದಿರ ಕಣ್ಣೀರಿಗೆ ಈ ಅಬ್ಬರದ ಮಾತುಗಳು ಸಾಂತ್ವನವಾಗುವುದಿಲ್ಲ. ಜಗದೇಕ ಮಾತಿನ ಮಲ್ಲನಿಗೆ ಇಂಥದ್ದೊಂದು ಸ್ಪಷ್ಟ ಸಂದೇಶ ಕೊಟ್ಟ ದೆಹಲಿಯ ಜನತೆಗೆ ಧನ್ಯವಾದಗಳು. ಕೆಜ್ರಿವಾಲ ಎಂಬ ಹೊಸ ರಾಜಕೀಯ ವ್ಯವಸ್ಥೆಯ ಹರಿಕಾರ ಭರವಸೆ ಮೂಡಿಸುತ್ತಾನೆ. ಯಾವ ಜಾತಿ ಧರ್ಮದ ಜಾಡ್ಯಕ್ಕೆ ಜೋತುಬೀಳದ, ಅಂಥಹ ಹಂಗಿನ ಪಾಲುದಾರಿಕೆಯಿಲ್ಲದ ರಾಜಕೀಯ ವ್ಯವಸ್ಥೆಗೆ ಮುನ್ನುಡಿ ಬರೆಯಿತ್ತಿದ್ದಾನೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ನಮ್ಮ ಸಂವಿಧಾನದ ಮೂರು ಕಂಬಗಳು ಧರ್ಮ ನಿರಪೇಕ್ಷತೆಯನ್ನು ಸಾರುವವಂಥ ನನ್ನ ಕನಸಿನ ಭಾರತ ಚಿಗುರುತ್ತಿದೆ ಅನ್ನಿಸುತ್ತಿದೆ.

~ಹುಸೇನಿ

Leave a comment
 

ಏ ರೂಹಿ...! ನೀ ತಾಯಿಯಾಗುವಾಗೆಲ್ಲ... · ತೊರೆಯ ತೀರದ ನೆನಪುಗಳು · ಯಾ ರೂಹಿ ....

ಏ ರೂಹಿ…! ನೀ ತಾಯಿಯಾಗುವಾಗೆಲ್ಲ…

Huseni

…. ನೀನು ಮಗುವಾಗ್ತಾ ಇದ್ದೀಯಾ …
…. ನೀನು ತಾಯಿಯಾದಂತೆಲ್ಲಾ ನಾನು ಮಗುವಾಗುತ್ತಿದ್ದೇನೆ…

ಹೌದು.. ನೀನು ಮಮತೆಯ ಮಡಿಲಾದಂತೆಲ್ಲಾ ನಾನು ಮಗುವಾಗುತ್ತೇನೆ… ಮತ್ತೆ ಮತ್ತೆ.. ಹಾಗೆ ಮಗುವಾದಾಗೆಲ್ಲ ನನ್ನ ಮಗುತನ ಸುಮ್ಮನೆ ಗರಿ ಬಿಚ್ಚುತ್ತದೆ.. ಮಗುತನದಲ್ಲೇ ಏನೇನೋ ಹುಚ್ಚು ಆಸೆಗಳು..
ಪೆಪ್ಪರ್ಮೆಂಟಿಗೆ ಸೋಗುಹಾಕಿ ಅತ್ತು ಕರೆದು ರಚ್ಚೆ ಹಿಡಿದು ಇಷ್ಟಗಲ ಬೊಚ್ಚು ಬಾಯಲ್ಲಿ ಆಆ ಅಂತ ಅಳಬೇಕು. ಬೆಳಿಗ್ಗೆ ನಿನ್ನ ಕೂಗನ್ನು ಲೆಕ್ಕಿಸದೆ ಹಾಗೆ ಮಲಗಬೇಕು, ನೀ ಮೂರು ಬಾರಿ ಎಬ್ಬಿಸಿ ಹೋದರು ಅಲುಗಾಡದೆ ರಗ್ಗು ಹೊದ್ದು ಮತ್ತೆ ಮಲಗಬೇಕು, ಆಮೇಲೆ ಕೋಪದಲ್ಲೇ ನೀ ಬಂದು ದಿಂಬನ್ನೂ ರಗ್ಗನ್ನೂ ಬಲವಂತವಾಗಿ ಬಿಸಾಕಿ ನನ್ನನ್ನು ಹೆಗಲ ಮೇಲೆ ಎತ್ಕೊಂಡು ಬಾತ್ರೂಮಲ್ಲಿ ಇಳಿಸಿ ಬ್ರಶ್ಶಿಗೆ ಪೇಸ್ಟ್ ಹಾಕಿ ಬಾಯಿಗೆ ತುರುಕಿ ಹೋಗಿ ಒಂದೈದು ನಿಮಿಷದ ನಂತರ ಬಂದು ನೋಡುವಾಗ ಹಾಗೆಯೆ ಬಾಯಲ್ಲಿ ಬ್ರಶ್ಶಿಟ್ಟು ಕೂತಲ್ಲೇ ನಿದ್ದೆ ಮಾಡಬೇಕು.. ಆಮೇಲೆ ನಿನ್ನ ಕೈಯಾರೆ ಹಲ್ಲುಜ್ಜಿಸಬೇಕು. ಹೊಟ್ಟೆನೋವೆಂಬ ಸುಳ್ಳು ನೆಪ ಹೇಳಿ ಶಾಲೆಗೇ ಚಕ್ಕರ್ ಹಾಕಬೇಕು. ಆಮೇಲೆ ಕಹಿ ಕಷಾಯದೊಂದಿಗೆ ನೀ ಬಂದಾಗ ಶರ್ಟು ಎತ್ತಿ ಹೊಟ್ಟೆ ನೋವೇ ಇಲ್ಲ ನೋಡು ಅಂತ ಮುಗುಮ್ಮಾಗಿ ಸಾಗ ಹಾಕಬೇಕು. ನೀ ತಟ್ಟೆಯಲ್ಲಿ ಊಟ ಹಿಡಿದು ಬಂದಾಗೆಲ್ಲ ನಿನ್ನ ಕೈಗೆ ಸಿಗದೇ ಓಡಿಹೋಗಬೇಕು, ನೀ ಅಟ್ಟಾಡಿಸಿ ಬಾಯಿಗೆ ತುರುಕುವ ಅನ್ನವನ್ನೆಲ್ಲ ಅರ್ಧ ತಿಂದು ಅರ್ಧ ಪಿಚಕ್ಕನೆ ಉಗುಳಿ ನಿನ್ನ ಬಟ್ಟೆಯನ್ನೆಲ್ಲ ಕೊಳೆಯಾಗಿಸಬೇಕು. ಬಾಗಿಲ ಸಂಧಿಯಲ್ಲಿ ಅಡಗಿ ನೀ ಒಳ ಬರುವಾಗ ಬ್ಹೋ ಅಂತ ನಿನ್ನ ಹೆದರಿಸಬೇಕು. ಅಟ್ಟದಲ್ಲಿ ಅಡಗಿ ಕೂತು ನೀ ಹೆದರಿ ಹುಡುಕುವ ಪರಿಯ ನೋಡಬೇಕು. ನೀನು ಮನೆಕೆಲಸದಿಂದ ದಣಿವಾದಾಗ ಬಣ್ಣದ ಕಾಗದವನ್ನು ನೀರಲ್ಲಿ ಹಾಕಿ ಬಾಟಲಿಯಲ್ಲಿ ತುಂಬಿಸಿ ಬಣ್ಣ ಬಣ್ಣದ ಶರಬತ್ತು ನಿನಗೆ ಕೊಡಬೇಕು. ಭಾನುವಾರದ ದಿನ ಹಬ್ಬದ ಕುಶಿಯಲ್ಲಿ ನಿನ್ನ ಜೊತೆ ಜೊತೆಗೇ ಇರಬೇಕು. ನೀ ತೆಂಗಿನ ಕಾಯಿ ಒಡೆಯುವಾಗ ಅದರ ನೀರಿಗೆ ಓಡಿ ಬರಬೇಕು. ಆ ಕಾಯಿಯನ್ನು ತುರಿದ ಮೊದಲ ಭಾಗವನ್ನೆತ್ತಿ ಬಾಯಿಗಿಡಬೇಕು. ಕೋಳಿ ಸಾರಿನ ದಿನ ನಿನ್ನ ಜೊತೆ ಅಡುಗೆಮನೆಯಲ್ಲೇ ಗಿರಕಿ ಹೊಡೆಯಬೇಕು. ಒಲೆಯಿಂದಲೇ ಒಂದು ಚಿಕ್ಕ ತುಂಡು ಎತ್ತಿ ನೀ ಕೊಟ್ಟಾಗ ಅದನ್ನು ತಿಂದು ಕೈಯನ್ನೂ ಚಪ್ಪರಿಸಬೇಕು. ಗೆಳೆಯರೊಂದಿಗೆ ಜಗಳ ಮಾಡ್ಕೊಂಡು ಇದ್ದ ಎರಡು ಬಿಳಿ ಅಂಗಿಯಲ್ಲಿ ಒಂದನ್ನು ಹರಿದು ಬಂದು ಪೆಚ್ಚು ಮೋರೆ ಹಾಕಿ ನಿಲ್ಲಬೇಕು. ನೀನದನ್ನ ನೋಡಿ ಸಿಟ್ಟಿನಿಂದ ಕಣ್ಣು ಕೆಂಪು ಮಾಡುವುದನ್ನು ನೋಡಬೇಕು. ಮಳೆಗಾಲದಲ್ಲಿ ದಾರಿಯಲ್ಲಿರುವ ಹೊಂಡಗಳ ಕೆಸರನ್ನು ಬೆನ್ನುವರೆಗೂ ಮೆತ್ತಿಸಿಕೊಂಡು ಬರಬೇಕು. ಹಾಗೆ ಬರುವಾಗೆಲ್ಲ ನನಗೂ ಮಳೆಗೂ ಬಯ್ಯುತ್ತಾ ಸೆರಗಿನಲ್ಲೆ ತಲೆ ಒರೆಸಬೇಕು. ಹುಳ ತಿಂದ ಕಾಲಿಗೆ ನಿನ್ನ ಕಯ್ಯಾರೆ ಸೀಮೆ ಎಣ್ಣೆ ಹಚ್ಚಬೇಕು. ಸಂಜೆ ಸ್ನಾನಕ್ಕೆ ನೀ ಕರೆವಾಗೆಲ್ಲ ಭೂಮಿಗೆ ಬೇರು ಬಿಟ್ಟವನಂತೆ ಕದಲದೆ ಕೂರಬೇಕು, ಕಾದು ಸುಸ್ತಾಗಿ ನೀ ನನ್ನನ್ನೆತ್ತಿ ಬಚ್ಚಲು ಮನೆಗೆ ಓಡುವಾಗ ಕೊಸರಿ ತೊಳಲಾಡಿ ಜಾರಿ ಬಿದ್ದು ಎದ್ದು ಓಡಿಹೊಗಬೇಕು. ಮಳೆಗಾಲಕ್ಕೆ ನೀ ಮಾಡಿಟ್ಟ ಹಲಸಿನ ಪಪ್ಪಡಕ್ಕಾಗಿ ಅದು ಮುಗಿಯುವವರೆಗೂ ಕಾಡಿಸಬೇಕು. ಆಟವಾಡುವಾಗ ಕಾಲು ಗುದ್ದಿ ತೋರು ಬೆರಳಿನ ಉಗುರು ಕಿತ್ತು ಹೋಗಿ, ಅದು ಒಣಗುವ ಮೊದಲೇ ಮತ್ತೊಮ್ಮೆ ಇನ್ನೊಂದು ಕಾಲಿಗೆ ಗಾಯ ಮಾಡ್ಕೊಂಡು ನಿನ್ನ ಹತ್ರ ಬೈಸ್ಕೋಬೇಕು. ರಾತ್ರಿ ಗುಡುಗಿಗೆ ನಿನ್ನ ಮಡಿಲೊಳಗೆ ಬಚ್ಚಿಟ್ಟುಕೊಳ್ಳಬೇಕು. ಆ ತೊರೆಯಲ್ಲಿ ನೀ ಬಟ್ಟೆ ಒಗೆಯುವಾಗ, ನಿನ್ನ ಸೀರೆಯಲ್ಲಿ ಮೀನು ಹಿಡಿದು ಬಾಟಲಿಯಲ್ಲಿ ಹಾಕಿ ರಾತ್ರಿಯಿಡೀ ಅದನ್ನು ನೋಡುವಾಗ ಹತ್ತಿರ ಬಂದು ಮುಗುಳ್ನಕ್ಕು ತಲೆ ನೇವರಿಸಿ ನಿಯಾಳಿಸಬೇಕು. ಗುಮ್ಮನ ನೋಡಿ ಹೆದರಿ ಅಳಬೇಕು, ಆಗ ನೀ ‘ಅಲ್ಲಿ ಎನೂ ಇಲ್ಲ ರಾಜ.. ‘ ಅಂತೇಳಿ ಮಡಿಲಲ್ಲಿ ಬರಸೆಳೆದು ಅಪ್ಪಿ ಮುದ್ದಾಡುವ ಸವಿಯನ್ನು ಅನುಭವಿಸಬೆಕು. ನಿನ್ನ ಹತ್ತಿರ ಮಲಗಲು ಇಲ್ಲದ ಹೊಟ್ಟೆನೋವು, ತಲೆನೋವಿನ ನೆಪ ಹುಡುಕಬೇಕು. ಕರೆಂಟಿಲ್ಲದ ರಾತ್ರಿ ನಿನ್ನ ಕತೆ ಕೇಳಬೇಕು. ನಿನ್ನ ಲಾಲಿಹಾಡಿಗೆ ತಲೆದೂಗಿ ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ನಿದ್ರಿಸಬೇಕು….

ನನ್ನ ಕೋಪಕ್ಕೆ ನೀ ಮಣಿಯುವಾಗ, ನನ್ನ ಆಸೆಗಳಿಗೆ, ಬಯಕೆಗಳಿಗೆ ನೀರೆರೆಯುವಾಗ, ನನ್ನ ಅಂತರಂಗದ ಕತ್ತಲ ಕೋಣೆಗೆ ದೀಪ ಹಚ್ಚುವಾಗ, ನಿನ್ನೆಲ್ಲ ಕನಸುಗಳ ಮಧ್ಯೆ ನನ್ನ ಕನಸುಗಳನ್ನೂ ಸಲಹುವಾಗ, ಅದಕ್ಕಾಗಿ ತುಡಿಯುವಾಗ, ನನ್ನೆಲ್ಲಾ ನೋವನ್ನೂ, ನಲಿವನ್ನೂ ನಿನ್ನದೇ ಅಂತ ಮಡಿಲೊಡ್ಡಿ ಸಂತೈಸುವಾಗ ನಿನ್ನಲ್ಲಿ ತಾಯಿಯನ್ನು ಕಾಣುತ್ತೇನೆ..
ಏ ರೂಹಿ…!
ನೀ ತಾಯಿಯಾಗುವಾಗೆಲ್ಲ ನಾ ಮಗುವಾಗುತ್ತೇನೆ.

~ಹುಸೇನಿ

Leave a comment