ಅಮ್ಮಂದಿರ ಕಥೆ · ನ್ಯಾನೋ ಕಥೆಗಳು · ಸಣ್ಣ ಕತೆ

ಅಮ್ಮಂದಿರ ಕಥೆ

mothers-love-julie-reyes
೧)
ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು ಬರಲಿರುವ ರಂಜಾನ್ ತಿಂಗಳ ಊಟದ ಬಗ್ಗೆ ತುಂಬಾ ಗೊಂದಲವಿತ್ತು. ರಂಜಾನ್ ತಿಂಗಳಲ್ಲಿ ಬೆಳ್ಳಂ ಬೆಳಿಗ್ಗೆ ೪ ಗಂಟೆಗೆ ಎದ್ದು ಅತ್ತಾಳ(ಸಹರಿ) ಊಟ ಮಾಡ್ಬೇಕು. ಹೊರಗಡೆಯಿಂದ ರಾತ್ರಿಯೇ ತಂದಿದುವ ಯೋಜನೆ ನಮ್ಮದಾಗಿತ್ತಾದರೂ ನಮ್ಮೊಳಗೆ ಅಸಮಾಧಾನವಿತ್ತು.

ನಮ್ಮ ರೂಮಿನ ಪಕ್ಕದ ರೂಮಲ್ಲಿ ಒಬ್ಬರು ಮಲಯಾಳಿ ಚೇಚ್ಚಿ(ಅಕ್ಕ) ಅವರ ಗಂಡನೊಂದಿಗೆ ವಾಸವಗಿದ್ದರು. ತುಂಬಾ ಸೌಮ್ಯ ಸ್ವಭಾವದ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದು. ರಂಜಾನ್ ತಿಂಗಳ ಆರಂಭಕ್ಕೆ ಇನ್ನೇನು 2 ದಿನ ಇರುವಾಗ ಮಾತಿನ ಮದ್ಯೆ ನನ್ನ ಗೆಳೆಯ ಅತ್ತಾಳದ ಕಷ್ಟವನ್ನು ಅವರೊಂದಿಗೆ ಹಂಚಿಕೊಂಡಿದ್ದ. ಕೇರಳದ ತ್ರಿಶೂರಿನವರಾಗಿದ್ದ ಅವರ ನೆರೆಹೊರೆಯವರೆಲ್ಲರೂ ಮುಸ್ಲಿಮರೇ ಆಗಿದ್ದರಿಂದ ರಂಜಾನ್ ತಿಂಗಳ ಬಗ್ಗೆ ಅವರು ಚೆನ್ನಾಗಿ ಬಲ್ಲವರಾಗಿದ್ದರು. ಒಂದು ತಿಂಗಳ ನಮ್ಮ ಊಟದ ಸಂಪೂರ್ಣ ಜವಾಬ್ದಾರಿ ಅವರು ವಹಿಸಿಕೊಂಡರು. ರಾತ್ರಿ 11ರ ವೇಳೆಗೆ ಸಹರಿಯ ಊಟ ತಯಾರಾಗಿ ಬರುತ್ತಿತ್ತು. ಮನೆಯಿಂದ ದೂರವಿದ್ದು ತಾಯಿಯನ್ನು ಪ್ರತೀಕ್ಷಣ ಮಿಸ್ ಮಾಡ್ಕೊತ್ತಿದ್ದ ನಾನು ಅವರಲ್ಲಿ ಮತ್ತೊಬ್ಬಳು ತಾಯಿಯನ್ನು ಕಾಣುತ್ತಿದ್ದೆ.

೨)
ಅದೇ ಲಾಡ್ಜಲ್ಲಿ ತಂಗುತ್ತಿದ್ದ ಕಾಲ. ಅದೊಂದು ದಿನ ಭಾನುವಾರದ ಊಟ ಕೈ ಕೊಟ್ಟಿತು. ರಾತ್ರಿ ೨ ಗಂಟೆಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಜೊತೆಗೆ ಫುಡ್ ಪೋಯ್ಸನ್ ಸೈಡ್ ಎಫೆಕ್ಟ್ಸ್. ಬೆಳಗಿನವರೆಗೂ ನಾನುಭವಿಸಿದ ‘ಯಾತನೆ’ ಅಷ್ಟಿಷ್ಟಲ್ಲ. ಹೇಗೋ ಬೆಳಗಾಯ್ತು. ರೂಂ ಮೇಟ್ ಅಂತೂ ಎದ್ದವನೇ ಆಫೀಸಿಗೆ ಹೋದ.

ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಪಕ್ಕದ ರೂಮಿನಲ್ಲಿ ಸಮೀಪದ Hosmat ಆಸ್ಪತ್ರೆಗೆ ಟ್ರೀಟ್ಮೆಂಟ್ಗೆ ಪಶ್ಚಿಮ ಬಂಗಾಳದಿಂದ ಒಬ್ರು ಆಂಟಿ ಅವರ ಮಗಳೊಂದಿಗೆ ಬಂದಿದ್ರು. ೧೩ ವರ್ಷದ ಮಗಳಿಗೆ ಏನೋ ಆಪರೇಶನ್ ಅಗೊದಿತ್ತು. ಅವರು ಈ ಮೊದಲು ನಮ್ಮ ಲಾಡ್ಜಿಗೆ ಬಂದಿದ್ರಿಂದ ಅವರ ಪರಿಚಯ ಇತ್ತು. ಅವರಿಗೋ ಬೆಂಗಾಲಿ ಬಿಟ್ರೆ ಬೇರೆ ಯಾವ ಭಾಷೆನೂ ಬರುತ್ತಿರಲಿಲ್ಲ. ಆದರು ಮಾತನಾಡಿಸೋರು. ನನ್ನ ಅವಸ್ತೆಯನ್ನು ಕಂಡು ಮರುಗಿದ ಅವರು ಅದೇನೋ ಬೆಂಗಾಲಿ ಶೈಲಿಯ ಲಘು ಆಹಾರವನ್ನು ಅವತ್ತು ಮೂರು ಹೊತ್ತು ಮಾಡಿಕೊಟ್ರು. ಅಲ್ಲದೆ ಆಗಾಗ ನನ್ನ ರೂಮಿಗೆ ಬಂದು ಹೋಗುತ್ತಿದ್ದರು. ಎಲ್ಲಿಯ ಬಂಗಾಳ ಎಲ್ಲಿಯ ಕರ್ನಾಟಕ !, ಪರಸ್ಪರ ಮಾತನಾಡಲಾಗದೆ ಇದ್ದರು ಅವರು ನನ್ನನ್ನು ನೋಡಿಕೊಂಡ ರೀತಿ… ಜೀವನದಲ್ಲಿ ಮರೆಯುವ ಹಾಗಿಲ್ಲ. ತಾಯಿ ಮಗನ ಸಂಭಂದವೊಂದು ಅಲ್ಲಿ ಮೂಡಿತ್ತು, ಅಲ್ಲ.. ಅವತ್ತಿನ ಪಾಲಿಗೆ ನನ್ನ ತಾಯಿಯೇ ನನ್ನ ಬಳಿ ಇದ್ದರು.

೩)
ನಾನು ತಿರುವನಂತಪುರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಜ್ವರ ಬಂದು ಮನೆಯಲ್ಲಿದ್ದವನು ಸುಧಾರಿಸಿಕೊಂಡು ಮತ್ತೆ ಹೊರಟು ನಿಂತು ಕಾಸರಗೋಡಿನಿಂದ ತಿರುವನಂತಪುರಕ್ಕೆ ಟ್ರೈನ್ ಹತ್ತಿದ್ದೆ. ರಾತ್ರಿಗೆ ಬೇಕಾದ ಆಹಾರ, ನೀರು ಎಲ್ಲವೂ ನನ್ನ ಬಳಿಯಿತ್ತು. ಟ್ರೈನ್ ಹತ್ತಿ ಕೂತು ಸ್ವಲ್ಪ ಸಮಯದಲ್ಲೇ ನಿದ್ದೆ ಆವರಿಸಿತ್ತು. ಎದ್ದು ನೋಡುವಾಗ ಮದ್ಯ ರಾತ್ರಿ!. ಎದ್ದು ಮುಖ ತೊಳೆದು ಬಂದು ಪಾರ್ಸೆಲ್ ಬಿಚ್ಚಿ ಊಟ ಮಾಡತೊಡಗಿದೆ. ಮಧ್ಯೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ನೀರಿನ ಬಾಟಲಿಗಾಗಿ ತಡಕಾದುವಷ್ಟರಲ್ಲಿ ತಿಳಿಯಿತು ಬಾಟಲಿಯನ್ನು ಯಾರೋ ಎಗರಿಸಿದ್ದಾರೆಂದು.. ಬಿಕ್ಕಳಿಗೆ ಜೋರಾಯಿತು. ಬಿಕ್ಕುತ್ತಲೇ ಪಕ್ಕದ ಸೀಟಲ್ಲಿದ್ದ ಮಲಯಾಳಿ ಅಂಕಲ್ ಹತ್ರ ವಾಟರ್ ಬಾಟಲ್ ನೋಡಿದ್ದೀರಾ ಎಂದು ವಿಚಾರಿಸಿದೆ. ನೋಡಿಲ್ಲ ಎಂದವರು ಸುಮ್ಮನಾಗುವಷ್ಟರಲ್ಲಿ ಅವರ ಹೆಂಡತಿ ತನ್ನ ಬ್ಯಾಗಿಂದ ನೀರಿನ ಬಾಟ್ಲಿ ತೆಗೆದು ಕೊಟ್ರು, ನೀರು ಕುಡಿದು ಕೆಮ್ಮುವಾಗ ತಲೆ ಮಧ್ಯೆಗೆ ಕೈಯ್ಯಿಂದ ಒತ್ತಿ ನೇವರಿಸಿದರು. ಸುಧಾರಿಸಿಕೊಂಡು ನಾನು ಅವನ ಮುಖವನ್ನು ದಿಟ್ಟಿಸಿದೆ. ಅಮ್ಮ ನನ್ನ ಮುಂದೆ ನಿಂತಿದ್ದರು.

ಹುಸೇನಿ ~

Leave a comment