ಹುಸೇನಿ ಪದ್ಯಗಳು – 42 · ಹುಸೇನಿ_ಪದ್ಯಗಳು

ಕನ್ನಡ ಕವನಗಳು -Kannada Kavanagalu

ಹುಸೇನಿ ಪದ್ಯಗಳು – 42

೧.
ಸತ್ತು ಬಿದ್ದವನೊಡನೆ
ಕೊಂದವನೂ ಅಸುನೀಗಿದ್ದಾನೆ;
ಯುದ್ಧ ಮಾತ್ರವಿಲ್ಲಿ ಚಿರಸ್ಥಾಯೀ ..

೨.
ಒಂದೊಂದು ಕಾಳು ಅಕ್ಕಿಯ
ಮೇಲೂ ತಿನ್ನುವವನ ಹೆಸರಂತೆ
ಹೆಸರೇ ಇಲ್ಲದವನಿಗೆ ಯಾವ ಕಾಳು?

೩.
ಮೋಕ್ಷದ ವ್ಯಸನಕ್ಕೆ
ಹಿಮಾಲಯ ಜಾಡು ಹಿಡಿದವರೆಷ್ಟು?
ನನ್ನೂರಿನ ಕೆಸರಲ್ಲಿ ಅರಳಿದ
ಕಮಲಗಳೆಷ್ಟು ?

೪.
ಒಂದು, ಇನ್ನೊಂದು, ಮಗದೊಂದು
ಚಿಟ್ಟೆ;
ಈ ದೀಪದ ಹಸಿವು ನೀಗುವುದೆಂದು?

೫.
ಪುನರ್ಜನ್ಮದ ರಹಸ್ಯ ಹುಡುಕಿ
ಹೊರಟವನೇ ಒಮ್ಮೆ ಸಿಗು
ನನಗೊಂದು ಹೆಣ್ಣುಮಗು ಹುಟ್ಟಿದ ಕಥೆ ಹೇಳಬೇಕು..

~ ಹುಸೇನಿ

Leave a comment
ಹುಸೇನಿ ಪದ್ಯಗಳು – 42 · ಹುಸೇನಿ_ಪದ್ಯಗಳು

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]


ಇಲ್ಲಿ ಎಲ್ಲವೂ ಸಹಜ,
ಇಳಿಸಂಜೆಯಲ್ಲಿ
ಮಣಗುಡುವ ನಿನ್ನ ನೆನಪುಗಳನು
ಬಿಟ್ಟು..

~

ಒಂದಿಷ್ಟು ಪ್ರೀತಿ ಬೀಜಗಳಿವೆ
ನಿನ್ನ ಮನದ ಮಣ್ಣ
ಹದ ಮಾಡಿಕೋ;

~

ಎಲ್ಲಾದಕ್ಕೂ ಕಾರಣ ಹೇಳಲಾಗದು;
ವಸಂತ ಕಾಲದಲ್ಲಿ ಭೂಮಿ
ಮರುಹುಟ್ಟು ಪಡೆಯುವುದು
ಪ್ರಕೃತಿ ನಿಯಮ ..

~

ಮನಸು ತೆರೆದುಕೋ;
ಸಹ್ಯಕೆ ಮುನಿಸು ತೋರುವ
ತಿರುವುಗಳಾಚೆ
ತುಂಬಾ ಖಾಲಿ ಅವಕಾಶ..

~

ಸುಲಭಗೊಳಿಸು;
ಸೋಲು,ಗೆಲುವುಗಳೆರಡೂ
ನಿನ್ನದೇ

~

ಸ್ತ್ರೀ ಪುರುಷನ ರಕ್ಷಣೆಯಲ್ಲಿ ಎಂದ
ಧರ್ಮ ಪಂಡಿತ
ಅವಳ ಬರಿ ನಿಟ್ಟುಸಿರ
ಕಾವಿಗೇ ಬೆಚ್ಚುವನು;

ಹುಸೇನಿ ~