ಬಿಂದು · ಬಿಡಿ ಭಾವಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು · Kannada Love letters

ಗತ ಸಾಲುಗಳು – ೧

ಹೆಸರೇ ಸೂಚಿಸುವಂತೆ ಇದು ಎಂದೋ ಬರೆದು ಮರೆತು ಹೋದ ಸಾಲುಗಳು. I’m grateful to Facebook Memories for reminding me of these lines.

Written on April 28, 2014

ಕನಸಿನೆಣ್ಣೆ ತುಂಬಿ
ತುಳುಕಿದೆ,
ಬಾಳ ದೀಪಬೆಳಗಲಿಲ್ಲ….

~

ಇರಲಿ ನಿನ್ನ ಮೊಗದಲ್ಲೊಂದು
ಮುಗುಳ್ನಗು,
ನಕಲಿಯಾದರೂ,
ನನ್ನ ಮುಖವಾಡದಂತೆ …

~

ಆ ಸಮುದ್ರ ತಟ
ಇಂದೂ
ಬಾಯಾರಿಯೇ
ಇತ್ತು

ಹುಸೇನಿ ~

ಕನ್ನಡ ಪ್ರೇಮ ಕವನಗಳು · ಕನ್ನಡ ಪ್ರೇಮಕವನ · ಕನ್ನಡಿ ಕವಿತೆಗಳು‬ · ಕವನಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು

ವಿಸ್ಮಯ

೧.
ಈಗೀಗ
ನೀನೆಂದರೆ,
ಬರೆದು ಖಾಲಿಯಾದ ಶಬ್ದ,
ಅಲ್ಲೇ ಉಳಿದು ಬಿಡುವ ಎದೆಯ ನಿಟ್ಟುಸಿರು,
ಮತ್ತು
ತೀರದ ಮರಳು ಅಳಿಸಿಟ್ಟ ಹೆಸರು…

೨.
ನೀ
ತೊರೆದು ಹೋದ ಹಾದಿಯ
ಹಸಿರು, ಮತ್ತೆ ಬಂಜರಾಗಿಯೇ
ಉಳಿದ ನನ್ನೆದೆ ಗೂಡು
ಕಾಲದ
ವಿಸ್ಮಯವಲ್ಲದೆ ಮತ್ತೇನು … ?

೩.
ನದಿ-ಸಾಗರಕ್ಕೆ
ಪ್ರೇಮದ ಉಪಮೆ ಕೊಟ್ಟವರೇ ಕೇಳಿ,
ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ..

~ ಹುಸೇನಿ

ಇನ್ನಷ್ಟು ಓದಿಗೆ…

Ammana kavana · ಅಂಬೆಗಾಲು · ಕನ್ನಡ ಕವನಗಳು · ಕನ್ನಡ ಕವಿತೆಗಳು · ಕನ್ನಡಿ ಕವಿತೆಗಳು‬ · ಕವನ · ಕವನಗಳು · ಬಿಂದು · ಹುಸೇನಿ_ಪದ್ಯಗಳು

Kannada Kavanagalu – ಕನ್ನಡ ಕವನಗಳು

ಅಂಬೆಗಾಲು

ಒಲವು ಬಲಿತು ಕೂಸಾದ
ಜೀವಕ್ಕಿಂದು ತೊದಲ ಅಂಬೆಗಾಲು;
ದಿನ ಎಣಿದು ಮನ ಕುಣಿದು
ಅಪ್ಪನ ಆಕಾಶ ತುಂಬಾ ಅಲೆ ಸೆಳೆವ ಕಡಲು!

~ ಹುಸೇನಿ

ಹುಸೇನಿ ಪದ್ಯಗಳು – 42 · ಹುಸೇನಿ_ಪದ್ಯಗಳು

ಕನ್ನಡ ಕವನಗಳು -Kannada Kavanagalu

ಹುಸೇನಿ ಪದ್ಯಗಳು – 42

೧.
ಸತ್ತು ಬಿದ್ದವನೊಡನೆ
ಕೊಂದವನೂ ಅಸುನೀಗಿದ್ದಾನೆ;
ಯುದ್ಧ ಮಾತ್ರವಿಲ್ಲಿ ಚಿರಸ್ಥಾಯೀ ..

೨.
ಒಂದೊಂದು ಕಾಳು ಅಕ್ಕಿಯ
ಮೇಲೂ ತಿನ್ನುವವನ ಹೆಸರಂತೆ
ಹೆಸರೇ ಇಲ್ಲದವನಿಗೆ ಯಾವ ಕಾಳು?

೩.
ಮೋಕ್ಷದ ವ್ಯಸನಕ್ಕೆ
ಹಿಮಾಲಯ ಜಾಡು ಹಿಡಿದವರೆಷ್ಟು?
ನನ್ನೂರಿನ ಕೆಸರಲ್ಲಿ ಅರಳಿದ
ಕಮಲಗಳೆಷ್ಟು ?

೪.
ಒಂದು, ಇನ್ನೊಂದು, ಮಗದೊಂದು
ಚಿಟ್ಟೆ;
ಈ ದೀಪದ ಹಸಿವು ನೀಗುವುದೆಂದು?

೫.
ಪುನರ್ಜನ್ಮದ ರಹಸ್ಯ ಹುಡುಕಿ
ಹೊರಟವನೇ ಒಮ್ಮೆ ಸಿಗು
ನನಗೊಂದು ಹೆಣ್ಣುಮಗು ಹುಟ್ಟಿದ ಕಥೆ ಹೇಳಬೇಕು..

~ ಹುಸೇನಿ

Leave a comment
ಕನ್ನಡಿ · ಬಿಡಿ ಭಾವಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು · Hanigavana · Honey'ಗವನ · kannada haiku

Kannada kavanagalu

ಕನ್ನಡಿ

೧)
ಈಗ ನಾ ನೋಡಿ ಬಂದ
ಕನ್ನಡಿಯ ಬಿಂಬ
ಇನ್ನು ಅಲ್ಲೇ ಇರಬಹುದಾ ?

೨)
ಒಡೆದು ಚೆಲ್ಲಿ ಬಿದ್ದ
ಕನ್ನಡಿಯೊಳಗೆ
ನನ್ನ ಹಲವು ಮುಖವಾಡಗಳು..

೩)
ನಗುಮೊಗವ ತೋರಿದ
ನೀನು, ಒಡಲಿನ
ತಪನೆಯ ಅಡಗಿಸಿದೆ..
ಕನ್ನಡಿಯೇ.. ನೀನು ಅರೆಪಾರಕ…?

೪)
ಹಿಂದೆಲ್ಲ ಕನ್ನಡಿಯನ್ನು
ಅತಿ ಇಷ್ಟ ಪಡುತ್ತಿದ್ದವಳು
ಈಗೀಗ ದ್ವೇಷಿಸುತ್ತಿದ್ದಾಳೆ..

೫)
ಜಗವರಿತವನಿಗೆ
ಸ್ವಂತ ಮುಖ ತೋರಿದ್ದು
ಕನ್ನಡಿ..

೬)
ಅವಳ ‘ಮುಖಗಳು’
ಇನ್ನೂ ಕನ್ನಡಿಯ
ಎಣಿಕೆಗೆ ಸಿಗಲಿಲ್ಲ

ಹುಸೇನಿ ~

ಅಮ್ಮಂದಿರ ಕಥೆ · ಅಮ್ಮಾ.. · ಅವಳು · ಕಾಡುವ ಹನಿಗಳು · ನೆನಪಿನ ಹನಿ · ಹುಸೇನಿ_ಪದ್ಯಗಳು

ಅವಳು …

ಚಿತ್ರ ಕೃಪೆ : ಹಾರಿಸ್ ಖಾನ್

೧.
ಬಹುಮಹಡಿ ಮನೆಯಲ್ಲಿ
ಕಾಲಿಗೊಂದು ಕಾಲಾಳು,
ಕೋಣೆಗೊಂದು ಸೀಸಿ ಕ್ಯಾಮರಾ
ಅವಳು ಬಿಕ್ಕುವುದು ಮಾತ್ರ
ಗೋಡೆಗಷ್ಟೇ ತಿಳಿಯುತ್ತದೆ.

೨.
ಸೂರ್ಯ ಸರಿದರೂ ಮನೆ ಮುಟ್ಟದ
ಮಗಳು;
ಜಾಗರಣದ ಜಗತ್ತಿನಲ್ಲಿ ಅವಳಿಗೆ
ಸೂರ್ಯನ ಮೇಲೆ ಮುನಿಸು.

೩.
ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;
ಉಸಿರು ನಿಲ್ಲಿಸಿ
ತೊಟ್ಟಿಲಿನ ಉಸಿರನ್ನು ಆಲಿಸಿ
ನಿಟ್ಟುಸಿರಿಟ್ಟಳು ಅವಳು …

ನೆನಪಿನ ಹನಿ · ಹುಸೇನಿ_ಪದ್ಯಗಳು

ಅಪೂರ್ಣ ಸಾಲುಗಳು .. 1

ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …
ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 🙂

1.
ಮೋಡ ಮುಸುಕಿದ ಅರ್ಧ ಚಂದಿರ, ಮೈಚಾಚಿ ಮಲಗಿದ ರಸ್ತೆ, ಕರಿಮೋಡದಂಚಿನ ಮಿಂಚಿನಸೆಲೆ, ನಸುಕಿನಲ್ಲಿ ಬಿರಿಯಲಣಿಯಾಗುತ್ತಿರುವ ನೈದಿಲೆ ಮತ್ತು ಮೆಲ್ಲುಸಿರಿನ ಪಿಸುಮಾತಿನ ಜೊತೆ ನೀನು, ಎದೆಯ ತಿದಿಯಲ್ಲಿ ಗರ್ಭಗಟ್ಟಿದ ಕನಸುಗಳು ಈ ರಾತ್ರಿಯ ವಿಶೇಷಗಳು..

2.
ಹಲವು ರಾತ್ರಿಗಳು ನಿನ್ನ ರೂಪ ಪಡೆದು ದೇದೀಪ್ಯಮಾನವಾಗಿ ಹೊಳೆಯುತ್ತದೆ.. ಆ ರಾತ್ರಿಗಳಲ್ಲಿ ಹೊಸ ಹಾಡು, ಹೊಸ ಚೈತನ್ಯ, ಹೊಸ ಹಂಬಲಗಳೊಂದಿಗೆ ನನ್ನದು ಮರು ಹುಟ್ಟು…

3.
ಸಂಜೆಯಾಗುತ್ತದೆ
ಅವಳಂತಹದ್ದೇ ಸಂಜೆ
ಸಂಜೆಯಿಂದ ಅವಳ
ಅವಳಿಂದ ಸಂಜೆಯ
ಬೇರ್ಪಡಿಸುವ ಆಟಕ್ಕಿಳಿದವನಿಗೆ
ಎದೆ ಬಯಲಿನಲ್ಲಿ
ಇಬ್ಬನಿ ನಲಿಯುವ
ಮುಂಜಾನೆ ದೊರೆಯುತ್ತದೆ.
ಮತ್ತೆ ಸಂಜೆಯಾಗುವವರೆಗೂ
ಮುಗುಳ್ನಗಿಸುವ ಮುಂಜಾವು ದೊರೆಯುತ್ತದೆ.

4.
ಯಾ ರೂಹಿ…
ನೀನು ಅನಂತ ಗೋಲ;
ಅಖಂಡ ರಾಶಿ ತಾರೆಗಳ,ಕಾಯಗಳ,
ಗ್ರಹಗಳ ತುಂಬಿಕೊಂಡು
ನನ್ನೆದೆ ಬಾಂದಳದಿ ನಿಗೂಢವಾಗಿ
ಮಿನುಗುತ್ತಿದ್ದಾನೆ

5.
…..ಕೆಲವು ಬಂಧಗಳು ಹಾಗೆಯೇ ಅಲ್ಲೆಲ್ಲೋ ಮೀಟಿದ ತಂತಿಯ ನಾದದಿಂದ ಹೊಮ್ಮಿದ ರಾಗಕ್ಕೆ ಇಲ್ಲೆಲ್ಲೋ ಒಂದು ಹೃದಯ ತಲೆದೂಗುತ್ತದೆ. ಅಲ್ಲೆಲ್ಲೋ ಕಾಪಿಟ್ಟ ಮೋಡ ಇಲ್ಲಿ ಹನಿಯುತ್ತದೆ,ಮುಂಜಾನೆಯೊಂದು ಶುಭ ಹಾರೈಕೆ, ಮುಸ್ಸಂಜೆಯಲ್ಲೊಂದಿಷ್ಟು ಹರಟೆಗಳು, ರಾತ್ರಿಯ ನಿಶೀತತೆಯಲ್ಲಿ ಅಂತರಾಳದ ತಪನೆಗೊಂದಿಷ್ಟು ತಂಪುಕೊಡುವ ಮಾತುಕತೆಗಳು,ಇಷ್ಟಗಳನ್ನೂ ಕಷ್ಟಗಳನ್ನು ಹರವಿಕೊಂಡು ಬದುಕಿನ ಅರ್ಥ ಕಂಡುಕೊಳ್ಳುವ ಪ್ರಯತ್ನಗಳು. ಇಹದ ಭವ ಬಂಧಗಳಾಚೆಗಿನ ಖಾಲಿ ಅವಕಾಶದಲ್ಲಿ ಮೂಡುವ ಆತ್ಮೀಯತೆ ಅದು. ಮನಸ್ಸಿಂದ ಮನಸ್ಸಿಗೆ ನಿಸ್ತಂತು ಸಂವಹನ ಅದು. ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬಸಿದು ಕೊಡುವ ಈ ಆತ್ಮೀಯತೆಗೆ ಮಿಗಿಲಾದ್ದು ಇಲ್ಲಿ ಇರುವುದಾದರೂ ಏನು… ?

~ಹುಸೇನಿ

ಹುಸೇನಿ_ಪದ್ಯಗಳು

English To Kannada Translation

ಸಂತ

ನೀರು ಕಾಣದ ನರಪೇತಲ ಶರೀರ,
ಮುಗುಳ್ನಕ್ಕು ಶತಮಾನಗಳು
ಕಳೆದಿರಬಹುದು,
ಸೂರ್ಯೋದಯಕ್ಕಿಂತಲೇ
ಮುಂಚೆ ಅವನು ಖಾಲಿ ತೂತು ಜೋಳಿಗೆಯೇರಿಸಿ
ಹೊರಡುತ್ತಾನೆ..
ಜಗತ್ತಿನ ಪಾಲಿಗವನು
ಆಯ್ದು ತಿನ್ನುವ ಕೊಳಕ;
ನನ್ನ ಪಾಲಿಗೆ
ಅಪರಿಚಿತ ಸಂತ…

೨)

ಅಲ್ಲಿ ಭಾರೀ ಭೂಕಂಪದ
ಅವಶೇಷದಡಿ ಎಲ್ಲರೂ
ತಮ್ಮ ತಮ್ಮ ವಸ್ತುಗಳ ಹುಡುಕುತ್ತಿದ್ದಾರೆ;
ಸಂತನೂ ಹುಡುಕುತ್ತಿದ್ದಾನೆ,
ರಾತ್ರಿ ಮಲಗುವ ಮುನ್ನ
ಆರಿಸಿಟ್ಟ ಹಣತೆಯ ಬೆಳಕ ..

~ಹುಸೇನಿ

ಹುಸೇನಿ ಪದ್ಯಗಳು – 42 · ಹುಸೇನಿ_ಪದ್ಯಗಳು

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]


ಇಲ್ಲಿ ಎಲ್ಲವೂ ಸಹಜ,
ಇಳಿಸಂಜೆಯಲ್ಲಿ
ಮಣಗುಡುವ ನಿನ್ನ ನೆನಪುಗಳನು
ಬಿಟ್ಟು..

~

ಒಂದಿಷ್ಟು ಪ್ರೀತಿ ಬೀಜಗಳಿವೆ
ನಿನ್ನ ಮನದ ಮಣ್ಣ
ಹದ ಮಾಡಿಕೋ;

~

ಎಲ್ಲಾದಕ್ಕೂ ಕಾರಣ ಹೇಳಲಾಗದು;
ವಸಂತ ಕಾಲದಲ್ಲಿ ಭೂಮಿ
ಮರುಹುಟ್ಟು ಪಡೆಯುವುದು
ಪ್ರಕೃತಿ ನಿಯಮ ..

~

ಮನಸು ತೆರೆದುಕೋ;
ಸಹ್ಯಕೆ ಮುನಿಸು ತೋರುವ
ತಿರುವುಗಳಾಚೆ
ತುಂಬಾ ಖಾಲಿ ಅವಕಾಶ..

~

ಸುಲಭಗೊಳಿಸು;
ಸೋಲು,ಗೆಲುವುಗಳೆರಡೂ
ನಿನ್ನದೇ

~

ಸ್ತ್ರೀ ಪುರುಷನ ರಕ್ಷಣೆಯಲ್ಲಿ ಎಂದ
ಧರ್ಮ ಪಂಡಿತ
ಅವಳ ಬರಿ ನಿಟ್ಟುಸಿರ
ಕಾವಿಗೇ ಬೆಚ್ಚುವನು;

ಹುಸೇನಿ ~

ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 41

blood_penl

ತನ್ನ ಅಪ್ಪನನ್ನು ಬಲಿತೆಗೆದುಕೊಂಡ
ಯುದ್ಧದ ವಿಜಯಗಾಥೆಯ
ಪರೀಕ್ಷೆಯಲ್ಲಿ ಮಗ ವಿವರಿಸುತ್ತಿದ್ದಾನೆ;
ಕೆಂಪಡರಿದ ಹಾಳೆ ಮೇಲೆ ಪೆನ್ನು
ರಕ್ತವನ್ನು ಕಾರಿದೆ..
~

ಅಮೃತ ಶಿಲೆಗಳ ತುಂಬಾ
ಉಳಿ ಕೈಗಳ ರಕ್ತವಾರ್ಜಿಸಿ
ಕೆತ್ತಿದವನ ರಕುತ ಅಡರಿ ಹಿಂಗಿದೆ;
‘ತಾಜ್ ಮಹಲ್’
ಪ್ರೇಮ ಸೌಧ ಎಂದಾಗ
ಉಘೇ ಉಘೇ ಎಂದರು ಜನ..

~

ಅಲ್ಲಿ ವಿವಿಧ ಧರ್ಮಗಳ
ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನಕ್ಕೆ
ವೇದಿಕೆ ಸಿದ್ಧವಾಗುತ್ತಿತ್ತು;
ನಮ್ಮೂರಿನ
ತೋಟದ ಪಕ್ಕ ತೋಡಿನಲ್ಲಿ
ನಾನು, ರಮೇಶ, ಜೋನ್ ಎಲ್ಲರೂ
ಹುಟ್ಟುಡುಗೆಯಲ್ಲಿ ಈಜಾಡಿ ಸಂಭ್ರಮಿಸಿದೆವು..

~

ಹುಟ್ಟಿನೊಂದಿಗೇ
ಜೊತೆಯಾದ ಸಾವು;
ಒಂಟಿ ಎಂಬುದು ಇಲ್ಲಿ ಬರಿ ಭ್ರಮೆ
ಅಷ್ಟೇ..

ಹುಸೇನಿ ~

Leave a comment