ಹುಸೇನಿ ಪದ್ಯಗಳು – 39 · ಹುಸೇನಿ_ಪದ್ಯಗಳು

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ;
ಕೇರಿಯ ಅನಾಥ ಹುಡುಗ
ಕಾಯುತ್ತಿದ್ದಾನೆ,
ಹಸಿವಾಗದಿರಲು ಔಷಧಿ ಬೇಕಂತೆ..

ಅಲ್ಲಿ ಅವರು
ಶಾಂತಿ ಸ್ಥಾಪನೆಗಾಗಿ
ಯುದ್ಧ ನಿರತರಾಗಿದ್ದಾರೆ;

ಒಡೆದ ಗಾಜು
ಮರು-ಜೋಡಿಸಲಾರದಂತೆ;
ಮತ್ತೆ ಬದುಕು ?

ಎಲ್ಲವನ್ನೂ ಸಹಿಸಬಲ್ಲೆ;
ಜಗದಗಲ ಹರಡಿದ ಶೂನ್ಯತೆ ಒಂದನು
ಬಿಟ್ಟು


ಅವಸರಬೇಡ,
ಸಾವು
ನಿನ್ನ ಪಾದಕ್ಕಂಟಿದ ಚಪ್ಪಲಿ;

ಹಾಳೂರಿನ
ಹಾದಿಯಲ್ಲೊಂದು
ಮದುವೆ ದಿಬ್ಬಣಕೆ
ಎದುರಾದ ಶವಯಾತ್ರೆ;
ಮುದಿಯನೊಬ್ಬ ಗೊಂದಲದಲ್ಲಿದ್ದಾನೆ

ಸ್ವಗತಗಳಲಿ
ಸಾಂತ್ವನವಿದೆ;
ಹೊರಸಾಯುವ
ಪದಗಳಿಗಿಂತ,
ಇರಿದ ನಿನ್ನೆಗಿಂತ, ಸಾವ ಕರೆವ ನಾಳೆಗಿಂತ..

ಹುಸೇನಿ ~

ಹೇಗಿದೆ ಹೇಳಿ

ಜೀವದ ಗೆಳೆಯನ ಹುಟ್ಟುಹಬ್ಬದ ಸಂದೇಶ · ತೊರೆಯ ತೀರದ ನೆನಪುಗಳು

ಜೀವದ ಗೆಳೆಯನ ಹುಟ್ಟುಹಬ್ಬದ ಸಂದೇಶ

ಅಂದ ಹಾಗೆ ಇಂದು ನಾ ಅತ್ತಾಗ ಅಮ್ಮ ನಕ್ಕ ಒಂದೇ ಒಂದು ದಿನ .. ನಾನು ಹುಟ್ಟಿದ ದಿನ .. ಎಂದಿನಂತೆ ಸೋಂಬೇರಿಯಾಗಿ ೮ ಗಂಟೆಗೆ ಎದ್ದು ನಿದ್ದೆಗಣ್ಣಲ್ಲಿ ಮೊಬೈಲ್ ಎತ್ತಿದ ನಂಗೆ ಅನೂಹ್ಯ ಅನುಭೂತಿಯನ್ನು ಕೊಟ್ಟ ಜೀವದ ಗೆಳೆಯನ ಹೃದಯದ ಮಾತುಗಳಿವು.. ನೀವೂ ಓದಿ ….

ಹುಸೇನ್..
ಬಾಲ್ಯದಲ್ಲೇ ನನ್ನ ಹೃದಯವ
ಗೆದ್ದವನು.
ಸ್ನೇಹಕ್ಕೆ ಹೊಸ ಅರ್ಥವ ನೀಡಿದ
ಶ್ರೇಷ್ಠನಿವನು.
ವಿಭಿನ್ನವಾದ ನನ್ನ ಇವನ ಗೆಳೆತನಕ್ಕೆ
ಸರಿಸಾಟಿ ಯಾರೆಂದು ನಾ
ತಿಳಿಯೆನು.

ಹೌದು ನಮ್ಮ ಗೆಳೆತನದಲ್ಲಿ ಪ್ರೀತಿ ಇದೆ, ಕೋಪವಿದೆ, ಹಾಸ್ಯವಿದೆ, ಭಾವುಕತೆ ಇದೆ. ಗೆಳೆತನದ ಮಧ್ಯೆ ಬಿರುಕು ಬಿಟ್ಟಿದ್ದು ಇದೆ, ಮತ್ತೆ ಮೊದಲಿಗಿಂತ ಹತ್ತಿರವಾಗಿದ್ದು ಇದೆ.
ನನ್ನ ನೆನಪಿನ ಪ್ರಕಾರ ನಮ್ಮಿಬ್ಬರ ಸ್ನೇಹ ಎರಡನೇ ತರಗತಿಯಿಂದಲೇ ಶುರುವಾಗಿದ್ದು. ಅಂದಿನಿಂದಲೇ ಅವನಿಗೆ ನನ್ನಲ್ಲಿ ಅದೇನು ಪ್ರೀತಯೋ ಆ ದೇವನೊಬ್ಬನೇ ಬಲ್ಲ. ಅಂದು ಶಾಲೆಗೆ ಬರುವಾಗ ಪ್ರತಿದಿನವೂ ಅಂಗಡಿಯಲ್ಲಿ ಅಪ್ಪ ಇಲ್ಲದ ಸಮಯವನ್ನು ನೋಡಿ ನನಗೆಂದೇ ನಾಲ್ಕಾರು ಚಾಕಲೇಟುಗಳನ್ನು ತೆಗೆದುಕೊಂಡು ಬಂದು ಯಾರೂ ಕಾಣದ ಹಾಗೆ ನನಗೆ ಕೊಡುತ್ತಿದ್ದ. ಶಾಲಾ ರಜಾ ದಿನಗಳಲ್ಲಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಚಿಲ್ಲರೆ ದುಡ್ಡನ್ನು ಕೈ ಬಿಟ್ಟರೆ ಕೆಳಗೆ ಜಾರಿ ಬೀಳುವ ಚಡ್ಡಿಯ ಕಿಸೆಯಲ್ಲಿ ಹಾಕಿಕೊಂಡು, ಅಂಗಡಿಗೆ ಹೋಗುವ ದಾರಿ ಮಧ್ಯೆ ಸಿಗುವ ನನ್ನ ಮನೆಗೆ ಬಂದು ನನ್ನನ್ನೂ ಅಂಗಡಿಗೆ ಕರೆದುಕೊಂಡು ಹೋಗಿ ಅವನಿಷ್ಟದ ಮಿಲ್ಕ್ ಪೌಡರ್ ಪ್ಯಾಕೆಟ್ ಖರೀದಿಸಿ ನಂಗೂ ತಿನ್ನಿಸ್ತಿದ್ದ. ಅದೇನಾಯ್ತೋ ಗೊತ್ತಿಲ್ಲ, ಐದನೆಯ ತರಗತಿಯಲ್ಲಿರುವಾಗ ಕ್ರಿಕೆಟ್ ಆಟವಾಡುತ್ತಿದ್ದಾಗ ಒಂದು ಬ್ಯಾಟ್ ವಿಷಯವಾಗಿ ಗಲಾಟೆ ಮಾಡಿ ಕ್ರಿಕೆಟ್ ಮೈದಾನದಿಂದ ಮುಖ ತಿರುಗಿಸಿ ನಡೆದವರು ಮತ್ತೆ ಒಂದಾಗೋಕೆ ಬರೋಬ್ಬರಿ ಏಳು ವರ್ಷಗಳ ಕಾಲ ಕಾಯಬೇಕಾಯಿತು. ಹಾಗಂತ ಅಷ್ಟೊಂದು ದ್ವೇಷ ನಮ್ಮ ನಡುವೆ ಇತ್ತು ಅಂತ ನೀವು ತಿಳಿದುಕೊಂಡರೆ ಅದು ತಪ್ಪು, ಇಬ್ಬರಿಗೂ ಮಾತನಾಡಬೇಕೆನ್ನುವ ಆಸೆ ಬೆಟ್ಟದಷ್ಟಿದ್ದರು ಕೂಡ “ಅವನು” ಮೊದಲು ಮಾತನಾಡಿಸಲೆಂಬ ಸಣ್ಣ ಸ್ವಾರ್ಥವೊಂದು ನಮ್ಮಿಬ್ಬರಲ್ಲೂ ಇತ್ತು.

ವರ್ಷಗಳು ಉರುಳಿದವು, ನಾನು ಕೆಲಸಕ್ಕೆಂದು ಬೆಂಗಳೂರು ಹೋಗಿ ಸೆಟ್ಲ್ ಆದೆ. ನಾವಿಬ್ಬರೂ ಮತ್ತೆ ಒಂದಾಗಲೆಂದಲೇನೋ ಗೊತ್ತಿಲ್ಲ, ಸೃಷ್ಟಿಕರ್ತನ ನಿರ್ಧಾರದಂತೆ ಇವನೂ ಕೂಡ ಸೆಕೆಂಡ್ ಪಿಯುಸಿ ಮುಗಿಸಿ ಮುಂದಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಬಿಟ್ಟ.
ಅದೊಂದು ದಿನ ನನ್ನನ್ನು ಹುಡುಕಿಕೊಂಡು ನಾನಿರುವಲ್ಲಿಗೆ ಮತ್ತೊಬ್ಬ ಗೆಳೆಯ ಹಕೀಮನೊಂದಿಗೆ ದೂರದಿಂದ ಬರುತ್ತಿರುವುದನ್ನು ಗಮನಿಸಿದ ನನಗೆ ಇದೇನು ಕನಸಾ ಅಲ್ಲ ನನಸಾ ಅನ್ನುವಂತೆ ಮಾಡಿಸಿದ್ದು ಸುಳ್ಳಲ್ಲ. ಅನಿರೀಕ್ಷಿತವಾಗಿ ನೇರ ನನ್ನ ಮುಂದೆ ಬಂದು ನಿಂತು ಕೈ ಕೊಟ್ಟು “ಅಸ್ಸಲಾಮು ಅಲೈಕುಮ್” ಅಂದಾಗ ಗೊತ್ತಿಲ್ಲದೆ ನನ್ನ ಕಣ್ಣುಗಳು ತುಂಬಿ ಹೋಗಿತ್ತು, ನಮ್ಮಿಬ್ಬರ ಕಣ್ಣುಗಳು ಪರಸ್ಪರ ಏನೋ ಹೇಳುತ್ತಿತ್ತು, ಭಾವನೆಗಳನ್ನು ಹೊರ ಹಾಕಿ ಏನಾದರೂ ಮಾತನಾಡುವ ಅಂದರೆ ಇಬ್ಬರಿಗೂ ಮಾತುಗಳು ಹೊರಡ್ತಾ ಇರಲಿಲ್ಲ.

ಅದೇನೋ ಹೇಳ್ತಾರಲ್ಲ ಸಂಬಂಧಗಳು ಮತ್ತು ಕನ್ನಡಿ ಬಿರುಕು ಬಿಟ್ಟರೆ ಮೊದಲಿನ ಹಾಗೆ ಜೋಡಿಸಲು ಸಾಧ್ಯವಿಲ್ಲ ಅಂತ.. ಇದು ನಮ್ಮ ಗೆಳತನಕ್ಕೆ ತಧ್ವಿರುದ್ದವಾಗಿತ್ತು. ಮತ್ತೆ ಜೊತೆಯಾದ ನಮ್ಮ ಗೆಳೆತನ ಮೊದಲಿಗಿಂತಲೂ ಗಟ್ಟಿಯಾಗಿ ಸಾಗಿತ್ತು. ಅಷ್ಟರಲ್ಲೇ ನಾವಿಬ್ಬರೂ ಪ್ರೀತಿಯೆಂಬ ಮಾಯಾ ಲೋಕದಲ್ಲಿ ತೇಲುತ್ತಿದ್ದೆವು. ನನ್ನ ಪ್ರೀತಿ ಕೈಕೊಟ್ಟಾಗ ನನ್ನ ನೋವಿನಲ್ಲಿ ಜೋತೆಯಾಗುತ್ತಿದ್ದ, ಅವನ ಹುಡುಗಿ ಏನಾದರೂ ಗಿಫ್ಟ್ ಕಳಿಸಿಕೊಟ್ಟರೆ ನಾನಿರುವಲ್ಲಿಗೆ ಬಂದು ನನ್ನ ಮುಂದೆಯೇ ಅದನ್ನು ತೆರೆದು ನೋಡದಿದ್ದರೆ ಅವನಿಗೆ ಸಮಾಧಾನ ಆಗುತ್ತಿರಲಿಲ್ಲ, ಆಲಿಚ್ಚನ ಅಂಗಡಿ ಮುಂದೆ ತಮಾಷೆಗೆ ನನ್ನ ಪ್ಯಾಂಟ್ ಎಳೆದಾಗ ಪ್ಯಾಂಟ್ ಕೆಳಗಡೆ ಜಾರಿ ನಾಲ್ಕು ಜನರ ಮುಂದೆ ನನ್ನನ್ನು ಪೇಚಾಟಕ್ಕೆ ಸಿಲುಕಿಸಿದ್ದ, ನಾನು ಮೊದಲ ಬಾರಿಗೆ ಸೌದಿಯಿಂದ ಊರಿಗೆ ಹೊರಟಾಗ ನನ್ನನ್ನು ಸ್ವೀಕರಿಸಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಕೆಲವೇ ಗಂಟೆಗಳ ಮೊದಲು ತನ್ನ ಬೆಲೆಬಾಳುವ ಮೊಬೈಲ್ ಕಳೆದು ಹೋಗಿದ್ದರು ಕೂಡ, ಊರಿಗೆ ಬರುವ ಸಂಭ್ರಮದಲ್ಲಿರುವ ನನಗೆ ನಿರಾಸೆ ಮಾಡಬಾರದೆಂದು ತನ್ನ ನೋವನ್ನು ನನಗೆ ತೋರಿಸದೆ ಮೊಬೈಲ್ ಕಳೆದುಕೊಂಡ ವಿಷಯವನ್ನು ಮುಚ್ಚಿಟ್ಟಿದ್ದ, ಬದುಕಿನ ದಾರಿಯಲ್ಲಿ ಎಡವಿ ಬೀಳದಂತೆ ನನ್ನನ್ನು ಎಚ್ಚರಿಸುತ್ತಾನೆ, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ನನ್ನೊಂದಿಗೆ ಚರ್ಚಿಸುತ್ತಾನೆ, ಒಂಟಿತನ ಕಾಡುವಾಗ ಅವನಿಗೆ ಕಾಲ್ ಮಾಡಿ ಗಂಟೆಗಟ್ಟಲೆ ಮಾತಾಡುತ್ತೇನೆ.. ಹೀಗೇ ನಮ್ಮ ಗೆಳೆತನದ ಕುರಿತು ಬರೆಯುತ್ತಾ ಹೋದರೆ ಅದೊಂದು ಮುಗಿಯದ ಅದ್ಯಾಯ. ನಮ್ಮ ಈ ಸ್ನೇಹವು ನಿರಂತರವಾಗಿ ಹೀಗೆ ಸಾಗಲಿ ಎಂದು ನಿಮ್ಮೆಲ್ಲರ ಪ್ರಾರ್ಥನೆ ನಮ್ಮ ಮೇಲೆ ಇರಲಿ.

ಇಂದು ಹುಸೇನಿಯ ಹುಟ್ಟಿದ ದಿನ, ನಮ್ಮ ಬಾಲ್ಯದ ನೆನಪುಗಳೆಂಬ ಮುತ್ತಿನ ಹಾರವನ್ನೇ ಉಡುಗೊರೆಯಾಗಿ ನೀಡಿ ಅವನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ. ಅವನು ಧೀರ್ಘ ಕಾಲ ಖುಷಿ ಖುಷಿಯಾಗಿ ಬಾಳಲಿ ಎಂಬ ಪ್ರಾರ್ಥನೆ ಸದಾ ಇದೆ.

ಇಂತೀ ನಿನ್ನ ಜೀವದ ಗೆಳೆಯ
ಎಸ್ಸಾರ್ಜೆ ಮಾಡನ್ನೂರ್

Leave a comment

ಒಂದಷ್ಟು (ಅ)ಭಾವಗಳು -೧ · ಕಾಡುವ ಹನಿಗಳು · ಹುಸೇನಿ_ಪದ್ಯಗಳು

ಒಂದಷ್ಟು (ಅ)ಭಾವಗಳು -೧

1)
ನೀ ಗಾಢ ಮೌನಕ್ಕೆ ಜಾರಿದಾಗೆಲ್ಲ
ನನ್ನನ್ನು ಹಾಡುವಂತೆ ಭಾಸವಾಗುತ್ತದೆ;

2)
ಮನುಷ್ಯ ಕೋಟೆ ಕಟ್ಟಿ ಮುಂಬಾಗಿಲನ್ನೂ ಮುಚ್ಚಿ ನಿಶ್ಚಿಂತೆಯಿಂದಿದ್ದ,
ಗೋಡೆ-ಬಾಗಿಲಿನ ಹಂಗಿಲ್ಲದ ಸಾವು ಮನುಷ್ಯನ ಸೋಲಾಗಿಯೇ ಉಳಿಯಿತು;

3)
ಅಬ್ಬರದ ಬೆಳಕಿನ ಹಿಂದೆಬಿದ್ದ ಜಗತ್ತು ಕತ್ತಲೆಗೂ ಬೆಳಕನ್ನು ತೊಡಿಸಿತು,
ನಿನ್ನೊಳಗಿದ್ದ ಹಣತೆಯೊಂದು ಜಗದ ಕುಹುಕಕ್ಕಂಜಿ ಅಸುನೀಗಿತು;

4)
ಕೃತಕ ಬೆಳಕಿನ ಅಬ್ಬರಕೆ ಹೆದರಿದವನ ಕತ್ತಲು ಬಾಚಿ ತಬ್ಬಿಕೊಂಡಿತು,
ಕತ್ತಲು ಕತ್ತಲಲ್ಲ ಆತ್ಮದೊಡಲ ಬೆಳಕು..

ಹುಸೇನಿ ~

Leave a comment