ಕಾಡುವ ಹನಿಗಳು · ನೀನೆಂದರೆ.. · ನೆನಪಿನ ಹನಿ · ಮನಸಿನ ಹಾ(ಪಾ)ಡು

ಕನ್ನಡ ಕವನಗಳು – ಕನ್ನಡ ಪ್ರೇಮ ಕವನಗಳು – Kannada Kavanagalu – Kannada Love Poems

ನೀನೆಂದರೆ..

shadow and girl

ನೀನೆಂದರೆ..

ಕಾದು ಕಾವಲಿಯಾದ ಮನಸಿಗೆ
ಹೊಂಗೆ ತಂಪು
ಇರುಳ ಕರಾಳತೆಯಲ್ಲಿ
ಕಳೆದು ಹೋಗುವ
ಕನಸು..!

ನೀನೆಂದರೆ..

ಕಲ್ಪನೆ, ಪರಿಕಲ್ಪನೆ
ಬದಲಾವಣೆ!
ನಾಳೆಯ ನಿರೀಕ್ಷೆ,
ಪ್ರತೀಕ್ಷೆ !

ನೀನೆಂದರೆ..

ಮುಂಗುರುಳು ಮುಂಜಾನೆಯ
ಮಂಜ ಹನಿ,
ಕೇಳಿದಷ್ಟೂ ಕೇಳಬೇಕೆನಿಸುವ
ಕಹಾನಿ!

ನೀನೆಂದರೆ..

ನನ್ನೊಳಗಿನ ತುಮುಲ,
ಹೊಯ್ದಾಟ!
ತನ್ನ ಅಸ್ತಿತ್ವಕ್ಕಾಗಿ
ಮಾತಿನ ಮೊರೆ ಹೋದ
ಪರಾವಲಂಬಿ ಮೌನ !

ನೀನೆಂದರೆ..

ಭರವಸೆಯ ಆಲಿಂಗನ,
ಕಣ್ಣೋಟದ
ಸಿಹಿ ಚುಂಬನ…!
ಒಂಟಿ ಕತ್ತಲ ಏಕಾಂಗಿತನ..

ಮತ್ತೆ ನನ್ನೀ
ಜೀವನ..!


ಹೇಗಿದೆ ಹೇಳಿ

ಕಾಡುವ ಹನಿಗಳು -೧೦ · ಹುಸೇನಿ ಪದ್ಯಗಳು – 12 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 12

images (1)

೧.
ನನ್ನ ನಿನ್ನ ನಂಟು
ಬಿಲ್ಲು-ಬಾಣದಂತಂದೆ ನೀನು;
ಗಮ್ಯ ಸೇರಲು ಬಾಣ
ಬಿಲ್ಲನ್ನು ತೊರೆಯಲೇಬೇಕು..
೨.
ಇಲ್ಲಿರುವುದು ಬರೀ
ಛಾಯೆ;
ನನ್ನೊಳಗೆ ಪದವಾಗದೆ
ಉಳಿದದ್ದು ಕವಿತೆ..
೩.
ನಿನ್ನೆಯೊಳಗಿನ ನೀನು
ನನ್ನ ಇಂದನ್ನು ನುಂಗಿದೆ;
ಕಾಡಬೇಡ ಹೀಗೆ,
ನಗುವ ನಾಳೆಯನು
ನಾ ನೋಡಬೇಕಿದೆ..

೪.
ಕಂಡ ಕನಸು ಮಾಸಿ
ಹೋಗಬಹುದು;
ಕಾದು ಕುಳಿತ
ಮನಸ್ಸಿನ ನೋವು..?


Leave a Comment

ಕನ್ನಡ ಬ್ಲಾಗಲ್ಲಿ ನೋಡಲ್ಲಿ ಇಲ್ಲಿ ಕ್ಲಿಕ್ಕಿಸಿ
nano-mecchuge

ನ್ಯಾನೋ ಕಥೆಗಳು

ಧರ್ಮ ಮತ್ತು ಇತರೆ ನ್ಯಾನೋ ಕತೆಗಳು

flat,550x550,075,f
ಧರ್ಮ
ಅದೊಂದು ಊರು. ಸ್ವಯಂ ಘೋಷಿತ ಧರ್ಮ ರಕ್ಷಕರು ಅಕ್ರಮ ಗೋವು ಸಾಗಾಟವನ್ನು ತಡೆಯಲು ಆ ರಾತ್ರಿ ಕಾದು ಕುಳಿತು ಕೊನೆಗೊಂದು ಗೋವನ್ನು ಸಾಗಿಸುತ್ತಿದ್ದ ವಾಹನವನ್ನು ಹಿಡಿದು ಅದರಲ್ಲಿದ್ದವರಿಗೆ ಬಡಿದು ಧರ್ಮ ರಕ್ಷಣೆ ಮಾಡಿದರೆಂದು ಬೀಗಿದರು.
ಅದೇ ಊರಲ್ಲಿದ್ದ ಆಸ್ಪತ್ರೆಯಲ್ಲಿ ಅದೇ ರಾತ್ರಿ ಎರಡು ಭ್ರೂಣಗಳ ಹತ್ಯೆಯಾಯ್ತು. ಜೊತೆಗೆ ಮನುಷ್ಯ ಧರ್ಮವೂ.

ಅಭಿಪ್ರಾಯ
ಕೈಗೊಂದಿಷ್ಟು ಚೈನು, ಕಿವಿಯಲ್ಲಿ ಟಿಕ್ಕಿ, ಸೊಂಟದಿಂದ ಕೆಳಗೆ ಜಾರಿಬಿದ್ದ ಪ್ಯಾಂಟ್’ನ ಮೇಲ್ಭಾಗದಲ್ಲಿ ಪ್ರದರ್ಶನಕ್ಕಿಟ್ಟಂತೆ ಕಾಣುತ್ತಿದ್ದ ಒಳ ಉಡುಪು, ಆಕಾಶಕ್ಕೆ ಬಾಣ ಬಿಟ್ಟಂತೆ ಕೂದಲು ಬಿಟ್ಟಿದ್ದ ‘ನಮ್ಮತನ’ ಕಳೆದುಕೊಂಡ ನಮ್ಮ ದೇಶದ ಮುಂದಿನ ಭವಿಷ್ಯವಾದ ಯುವಕನೊಬ್ಬ ಅಂಗಡಿಯೊಂದಕ್ಕೆ ಹೊಕ್ಕವನೇ ದಿನ ಪತ್ರಿಕೆಯನ್ನು ಕೈಗೆತ್ತಿ ಓದಲು ಶುರುವಿಟ್ಟ.
“ಅಪ್ರಾಪ್ತೆಯ ಮೇಲೆ ಶೌಚಾಲಯದಲ್ಲಿ ಅತ್ಯಾಚಾರ” ಎಂಬ ತಲೆಬರಹ ಓದಿದವನೇ ರೊಚ್ಚಿಗೆದ್ದ..”ಛೆ! ಶೌಚಾಲಯದಲ್ಲಾ..?” ಅಲ್ಲಿದ್ದವರೆಲ್ಲ ಅವನನ್ನು ದುರುಗುಟ್ಟಿದಾಗ ಅವನು ತನ್ನ ಹೇಳಿಕೆಯನ್ನು ಬದಲಾಯಿಸಿದ.
“ಛೆ! ಪಾಪಿಗಳು ವಯಸ್ಸಿಗೆ ಬರದ ಹುಡುಗಿಯನ್ನೂ ಬಿಟ್ಟಿಲ್ಲ…!”

ಪರೀಕ್ಷೆ
ಅವನದು ಮೇರು ವ್ಯಕ್ತಿತ್ವ. ಅವನ ಯೋಚನೆಗಳು ಆಕಾಶದಷ್ಟು ದೊಡ್ಡಗಾಗಿದ್ದವು. ಅವನ ಹೃದಯ ಕಡಲಷ್ಟು ವಿಶಾಲವಾಗಿತ್ತು. ಅವನ ಭಾವನೆಗಳಿಗೆ ರೆಕ್ಕೆ ಪುಕ್ಕಗಳಿದ್ದವು. ಪ್ರಪಂಚದ ಆಗು ಹೋಗುಗಳ ಸ್ಪಷ್ಟ ಮಾಹಿತಿ ಅವನಲ್ಲಿತ್ತು. ಇಷ್ಟೆಲ್ಲಾ ಆಗಿದ್ದರೂ ಆ ಕೂಗು ಅವನನ್ನು ಬೆಚ್ಚು ಬೀಳಿಸಿತು.
“ಹೇಯ್ .. ಓದ್ಲಿಕ್ಕೆ ಕೂತ್ಕೊಂಕು ಅದೇನು ಬಾಯಿ ಬಿಟ್ಕೊಂಡು ಯೋಚನೆ ಮಾಡ್ತಿದ್ದೀಯ..? ನಾಳೆ ಪರೀಕ್ಷೆ ಅಂತ ಗೊತ್ತಿಲ್ವಾ ..?!”

ಬೆರಳು
“ಥೂ ದರಿದ್ರವಾಸಿ.. ಬದುಕೋ ಯೋಗ್ಯತೆ ಇಲ್ಲ ನಿಂಗೆ.. ಭೂಮಿಗೆ ಭಾರವಾಗಿ ಬದುಕೋದಕ್ಕಿಂಥ ಸಾಯುವುದು ಲೇಸು”. ಆತ ಒಂದು ಬೆರಳನ್ನು ಅವನೆಡೆಗೆ ತೋರಿಸಿ ಬಾಯಿಗೆ ಬಂದಂತೆ ಬೈತಿದ್ದ.
ಅವನ ಉಳಿದ ಮೂರು ಬೆರಳುಗಳು ಅವನನ್ನೇ ತೋರಿಸುತ್ತಿತ್ತು.


Leave a Comment