ಹುಸೇನಿ ಪದ್ಯಗಳು - 20 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 20

panjarada-hakki

೧)
ಜಗತ್ತಿನ ಮತ್ತೆಲ್ಲಾ ಕ್ಷಣಿಕ-
ಉನ್ಮಾದಗಳಂತೆ
ನನ್ನೊಳಗಿನ ಮೌನಕ್ಕೂ ಹುಚ್ಚು ಗೀಳು.
ತನ್ನ ಅಸ್ತಿತ್ವಕ್ಕಾಗಿ
ಮಾತಿನ ಮೊರೆ ಹೋಗಿ
ಪರಾವಲಂಬಿಯಾಗಿ ಅಸುನೀಗುತ್ತದೆ.

೨)
ನಾನು ಮತ್ತೆ ಕಳೆದು ಹೋಗುತ್ತಿದ್ದೇನೆ
ಯಾವುದೋ ಮರೀಚಿಕೆ-
ಮಾಯೆಯೊಳಗಲ್ಲ
ನೀನೆಂಬ ಅರೆ ನಿರ್ವಾತದೊಳಗೆ;
ಜೇಡರ ಬಲೆಗೆ ಬಿದ್ದ ಚಿಟ್ಟೆಯಂತೆ ಬದುಕು..

೩)
ಹೃದಯವ ಅಡವಿಟ್ಟು
ಪ್ರೀತಿಯ ಖರೀದಿಗೆ ಹೊರಟವನು
ನಿರಾಸೆಯಿಂದ ಮರಳಿದ್ದಾನೆ,
ಹೃದಯವಿಲ್ಲದವನಿಗೆ
ಪ್ರೀತಿ ಸಿಗಲಾರದಂತೆ..

೪)
ಅವನು
ಸ್ವತಂತ್ರ ಬದುಕಿನ ಕಥೆ ಹೇಳಿ
ಮುಗಿಸಿದ ನಂತರ
ಅವಳಿಗೆ ಅವನಲ್ಲಿ ಪ್ರೀತಿ ಅಂಕುರಿಸಿತು
ಮದುವೆಯ ನಂತರ ತಿಳಿಯಿತು
ಅವನ ಮನೆತುಂಬಾ ಪಂಜರದ ಗಿಳಿಗಳು..

_ಹುಸೇನಿ

Leave a comment