ನೆನಪಿನ ಗಣಿಗಾರಿಕೆಗೆ ಒಂದು ವರ್ಷ ........! · ನೆನಪಿನ ಸಂಚಿ

ನೆನಪಿನ ಗಣಿಗಾರಿಕೆಗೆ ಒಂದು ವರ್ಷ ……..!

ನನ್ನ “ನೆನಪಿನ ಸಂಚಿ”ಗೆ ಮೊದಲ ವರ್ಷದ ಸಂಭ್ರಮ .. ಇವತ್ತಿಗೆ ಸರಿಯಾಗಿ ನಾನು ಬ್ಲಾಗ್ ಬರೆಯಲಾರಂಭಿಸಿ ಒಂದು ವರ್ಷವಾಯ್ತು…! ಅಂಬೆಗಾಲಿಕ್ಕುವ ಮಗುವಿನಂತೆ ನನ್ನ ಸಂತಸವೂ ಅವರ್ಣನೀಯ..!. ಡೈರಿಯ ಒಳಗೆ ಮಾತ್ರ ಗೀಚಿಡುತ್ತಿದ್ದ ನನ್ನ ಅಸಂಬದ್ದ ಸಾಲುಗಳು ಈಗ ನೆನಪಿನ ಸಂಚಿಯೊಳಗೆ ಕಮ್ಮಗೆ ಕುಳಿತಿವೆ. ನಾನೇನು ದೊಡ್ಡ ಬರಹಗಾರನಲ್ಲ.. ನನ್ನ ತುಮುಲಗಳು , ಮನದೊಳಗೆ ಹುದುಗಿರುವ ಭಾವನೆಗಳನ್ನು ಅಕ್ಷರ ಮೂಲಕ ಹರಿಯ ಬಿಡುತ್ತೇನೆ ಅಷ್ಟೇ.. ಕ್ಲಿಷ್ಟಕರವಾದ ಅಕ್ಷರ ಜೋಡನೆ ನನ್ನಿಂದ ಅಸಾಧ್ಯ, ಸರಳ ಹಾಗೂ ಸಹಜವಾದ ಭಾಷಾಬಳಕೆಯ ಮೂಲಕ ಪ್ರಭಾವಕಾರಿಯಾಗಿ ನನ್ನ ರಚನೆಗಳನ್ನು ನಿಮ್ಮ ಮುಂದಿಡುವುದಕ್ಕೇ ನನ್ನ ಮೊದಲ ಆದ್ಯತೆ.
ಮೆಟ್ರೋ ನಗರದ ಈ ದುಸ್ತರ ಬದುಕಿನ ಮದ್ಯೆ ಒಂದಿಷ್ಟು ಸಮಾಧಾನ ಕೊಟ್ಟದ್ದು ಈ “ನೆನಪಿನ ಸಂಚಿ”. ಆ ಕಾರಣಕ್ಕೇನೆ ಇದನ್ನು ಹೃದಯಕ್ಕೆ ತುಂಬಾ ಹತ್ತಿರ ಇಟ್ಟಿದ್ದೇನೆ.. ನನ್ನ ರಚನೆಗಳನ್ನು ಪ್ರಭುದ್ದ , ಅಪ್ರಬುದ್ದ ಎಂಬ ತಾರ್ಕಿಕ ಚೌಕಟ್ಟು ನೀಡದೆ ಮನಸ್ಸಿನಲ್ಲಿ ಮೂಡುವ ಹುಚ್ಚು ಹುಚ್ಚು ಆಲೋಚನೆಗಳನ್ನು ಹಾಗೇ ಅಕ್ಷರದ ತೇಪೆ ಹಚ್ಚಿ ನಿಮ್ಮ ಮುಂದಿಟ್ಟಿದ್ದೇನೆ.. ಅವಕ್ಕೀಗ ಮೊದಲ ವರ್ಷದ ಸಂಭ್ರಮ..!

nenapinasanchi

ಒಂದು ವರ್ಷದೊಳಗೆ ನನ್ನ ಬ್ಲಾಗ್ ಪೋಸ್ಟ್ ಸಂಖ್ಯೆ 120 ದಾಟಿದ್ದರೆ ಅದಕ್ಕೆ ಓದುಗರಾದ ನೀವು ಕಾರಣ, ನನ್ನ ತುಮುಲಗಳನ್ನು ಅಕ್ಷರೀಕರಿಸಿದ ಪ್ರತಿ ಸಾರಿಯೂ ನೀವು ಭೇಟಿ ಕೊಟ್ಟು , ಮೆಚ್ಚಿ ಹೋಗಿದ್ದೀರಿ. ನನ್ನ ಅಸಂಬದ್ದ ‘ಕೊರೆತಗಳು ‘ ನಿಮಗೆ ಎಷ್ಟರಮಟ್ಟಿಗೆ ಇಷ್ಟವಾಯ್ತು ಆ ದೇವರೇ ಬಲ್ಲ..!. ‘ಇಷ್ಟವಾದರೆ ಮೆಚ್ಚುವ , ಆಗದಿದ್ದರೆ ಚುಚ್ಚುವ ಅಧಿಕಾರವನ್ನು ನಿಮಗೆ ಈ ಮೊದಲೇ ಕೊಟ್ಟಿದೇನೆ…!’. ನಿಮ್ಮ ಅಭೂತಪೂರ್ವ ಬೆಂಬಲದಿಂದ 1 ವರ್ಷ ಹಿನ್ನಿಡುವ ನನ್ನ ಬ್ಲಾಗ್ ಗೆ ಸಿಕ್ಕ ಹಿಟ್ಸ್ 12000 ದಾಟಿದೆ. ಕನ್ನಡ ಬ್ಲಾಗ್’ಗಳ ಅಂಕಿ ಅಂಶಗಳನ್ನು ಗಣನೆಗೆ ತೆಗೆದು ಕೊಂಡರೆ ಇದೊಂದು ದೊಡ್ಡ ಸಾಧನೆಯೇ ಸರಿ. ಅಷ್ಟು ಮಾತ್ರಕ್ಕೆ ನನ್ನ ಬರವಣಿಗೆಗಳು ಹಬ್ಬಿದೆಯಲ್ಲ ಎಂಬುದು ನನ್ನನ್ನು ಸಂತಸದ ನೀಲಾಗಸ ಸಿಗುವಂತೆ ಮಾಡಿದೆ.

ನನ್ನ ಈ ಸಂಭ್ರಮಕ್ಕೆ ಮೂಲ ಕಾರಣವಾದ “ಕನ್ನಡ ಬ್ಲಾಗ್” ಫೇಸ್ ಬುಕ್ ಗುಂಪಿಗೆ ಮೊತ್ತ ಮೊದಲಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಕಾರಣ ನನ್ನ ಬರವಣಿಗೆಗೆ ಪ್ರೇರಕ ಶಕ್ತಿಯೇ ಅದು. ನೋಟ್ ಬುಕ್ಕಿನ ಕೊನೆಯ ಹಾಳೆಗಳಲ್ಲಿ, ಡೈರಿಯ ಯಾವುದೊ ಮೂಲೆಯಲ್ಲಿ ಹರಕು ಹಾಕಿಟ್ಟಿದ್ದ ಸಾಲುಗಳನ್ನು “ನೆನಪಿನ ಸಂಚಿ “ಯ ಗೋಡೆ ಮೇಲೆ ತೂಗು ಹಾಕಲು ಕಾರಣವಾಗಿದ್ದೇ “ಕನ್ನಡ ಬ್ಲಾಗ್”. ಪ್ರಾರಂಭದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಶ್ರೀಯುತ ರವಿ ಮೂರ್ನಾಡ್ರವರು, ಅಬ್ದುಲ್ ಸತ್ತಾರ್ ಕೊಡಗು, ಮೋಹನ್ ವಿ ಕೊಳ್ಳೆಗಾಲ, ರವಿ ತಿರುಮಲೈ ಸರ್, ನಟರಾಜಣ್ಣ, ಪ್ರಸಾದ್ ವಿ ಮೂರ್ತಿ, ಪುಷ್ಪರಾಜ್ ಚೌಟ, ಪ್ರಮೋದ್ ಪಮ್ಮಿ ಮತ್ತು ಪ್ರತ್ಯಕ್ಷವಾಗಿ , ಪರೋಕ್ಷವಾಗಿ ಸಹಾಯ ಮಾಡಿದ ನನ್ನ ಫೇಸ್ ಬುಕ್ ಗೆಳೆಯರಿಗೆ , ಬ್ಲಾಗ್ ಚಂದಾದಾರರಿಗೆ ಒಂದೇ ಮಾತಿನಲ್ಲಿ ಹೃದಯಸ್ಪರ್ಶಿ ಧನ್ಯವಾದ ಹೇಳಲು ಇಚ್ಚಿಸುತ್ತೇನೆ. ನಿಮ್ಮ ಬೆಂಬಲ ಇಲ್ಲದಿದ್ದರೆ ಈ ಸಾಧನೆ ನನ್ನಿಂದ ಎಂದೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಈ “ನೆನಪಿನ ಸಂಚಿ” ಆತ್ಮೀಯರು ಎನಿಸಿಕೊಂಡ ಹಲವಾರು ಗೆಳೆಯರನ್ನು ಕೊಟ್ಟಿದೆ. ಪ್ರತೀ ರಚನೆಗೂ ಇಷ್ಟವಾದರೆ ಬೆನ್ನು ತಟ್ಟುವ , ತಪ್ಪಿದ್ದರೆ ತಿದ್ದುವ ಸಹೃದಯಿ ಸನ್ಮಿತ್ರರನ್ನು ಕೊಟ್ಟಿದೆ ಅದಕ್ಕಿಂತ ದೊಡ್ಡದಾಗಿ ನನಗಿನ್ನೇನು ಬೇಕು …?

ಕಳೆದ ಒಂದು ವರ್ಷದಲ್ಲಿ ಕಲಿತದ್ದು ಬಹಳ, ಮುಂಬರುವ ವರ್ಷಗಳಲ್ಲಿ ಕಲಿಯಬೇಕಾದುದು , ಸಾಧಿಸಬೇಕಾದುದು ಬಹಳಷ್ಟಿದೆ. ಮೆಟ್ರೋ ಬದುಕು ಅದೆಷ್ಟೇ ದುರ್ಭರವಾದರೂ ನಿಯಮಿತವಾಗಿ ಬ್ಲಾಗನ್ನು ಅಪ್ಡೇಟ್ ಮಾಡುವ ಪಣತೊಟ್ಟಿದ್ದೇನೆ… ಜೊತೆಗೆ ಬ್ಲಾಗ್’ಗೆ ಹೊಸ ರೂಪ ಕೊಡುವ ಸನ್ನಾಹದಲ್ಲಿದ್ದೇನೆ. ಎಲ್ಲದಕ್ಕೂ ಸ್ಪೂರ್ತಿಯ ಚಿಲುಮೆಯಾದ ನಿಮ್ಮ ಪ್ರೀತಿ, ಅಭಿಮಾನ , ಹಾರೈಕೆ ಹೀಗೆ ಎಂದೂ ಇರಲಿ..
ಎಂದಿಗೂ ನಿಮ್ಮವನೇ,
ಹುಸೇನ್


Leave a Comment

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ