ಹುಸೇನಿ ಪದ್ಯಗಳು - 34 · ಹುಸೇನಿ_ಪದ್ಯಗಳು

ಈ ಕಪ್ಪಿಟ್ಟ ವಿಶಾಲ ಬಾನು.. (ಹುಸೇನಿ ಪದ್ಯಗಳು – 34)

kiss11)
ಈ ಕಪ್ಪಿಟ್ಟ ವಿಶಾಲ ಬಾನು
ಅಲ್ಲಲ್ಲಿ ಹೊಳೆಯುವ ಒಂದೆರಡು ಚುಕ್ಕಿಗಳು,
ನೀನು; ಮತ್ತು ಹುಡುಗ ಬುದ್ದಿಯ ನಾನು;
ರಾತ್ರಿ ಮುಗಿಯದ ಆಟಕ್ಕೆ ಬೇಕಿನ್ನೇನು?!

2)

ಎಲ್ಲವೂ ಸುಳ್ಳು; ಈ ಭೂಮಿ
ಈ ಬಾನು ಮಂಡಲ
ನಿನ್ನ ಕಂಡೊಡನೆ ತೆರೆದುಕೊಳ್ಳುವ
ಹೃದಯ ಮತ್ತು
ಸುಮ್ಮನೆ ತುಂಬಿಕೊಳ್ಳುವ ಆನಂದವಷ್ಟೇ ದಿಟ!

kiss2

3)

ಆ ನನ್ನ ತುಂಟ ಹಠ, ಬಿಂಕ-ಬಿನ್ನಾಣ
ಹುಸಿಕೋಪ-ಸಿಡುಕು ಎಲ್ಲ ತೋರಿ ಬಳಿಕ
ಲಜ್ಜೆ ಕಳಚಿ ನೀ ಕೊಟ್ಟ ಮುತ್ತು;
ನಿನ್ನ ನೆನಪನ್ನು ಕೊಲ್ಲುತ್ತಾ ಕಳೆದ ಈ ಸಂಜೆ
ಮತ್ತು ಹನಿಯದೆ
ಅಕಾಶದಲ್ಲೇ ಉಳಿದ ತುಂಡು ಮೋಡ..

4)
ನನ್ನ ಬೆರಳ ತುದಿಯ ಮಿಂಚು
ನಿನ್ನ ಕಿಬ್ಬೊಟ್ಟೆಯ ಕಾವು
ಉಸುಕನ್ನು ಹೊದ್ದು ಮಲಗಿದ್ದ ಕಿನಾರೆ
ಅರೆಗತ್ತಲಿನ ಪಿಸುಮಾತುಗಳ ನಂತರ ಇಬ್ಬರೂ
ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೋ… ?

ಹುಸೇನಿ ~

Leave a comment

ತೊರೆಯ ತೀರದ ನೆನಪುಗಳು · ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ.. · ಸಣ್ಣ ಕತೆ · ಹುಸೇನಿ ಬರಹಗಳು

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

kagaj-1

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.
kagaj-2
ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. kagaj-3 ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.

ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು…
ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ…
ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ…
ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”

ಹುಸೇನಿ ~

Leave a comment

ಮತ್ತೆ ಸಂಜೆಯಾಗುತ್ತಿದೆ.. · ಸಂಜೆ ಕಳೆದು ಕತ್ತಲಾಗುತ್ತಿದೆ ..

ಸಂಜೆ ಕಳೆದು ಕತ್ತಲಾಗುತ್ತಿದೆ …

sanje-1
ಮತ್ತೆ ಕತ್ತಲಾಗಿದೆ..
ನೆನಹುಗಳು ಬೆತ್ತಲಾಗಬಹುದು…

ಹೌದು .. ಪಡುವಣ ಅಂಬರ ಹೊಂಬಣ್ಣವನ್ನು ಪಡೆದು ಜಗಮಗಿಸುತ್ತಿದೆ. ಇನ್ನೇನು ಕತ್ತಲಾಗುವ ಹೊತ್ತು.. ನೆರಳೂ ಜೊತೆಯಿರದ ಕತ್ತಲು!
ನಿನಗಿನ್ನೂ ನೆನಪಿರಬಹುದು.. “ನಾನಿನ್ನ ನೆರಳು ಕಣೋ.. ” ಎಂದು ಪೆಚ್ಚಾಗಿ ನೀನುಲಿದ ಆ ಸಂಧ್ಯಾ ತೀರ.. ನೇಸರ ತೋಯಿಸಿದ ಹೊಂಬಣ್ಣದ ಮರಳಿನಲ್ಲಿ ನಿನ್ನ ಹೆಸರಿನೊಂದಿಗೆ ನನ್ನ ಹೆಸರನ್ನು ತಾಳೆಹಾಕಿ ನೀನಂದು ಸಂಭ್ರಮಪಟ್ಟಿದ್ದ ನೆನಪು! ಇರಲಿ ಬಿಡು.. ಕತ್ತಲೆಂದರೆ ‘ನೆರಳು’ ಅಸ್ತಿತ್ವ ಕಳೆದುಕೊಳ್ಳುವ ಸಮಯ ತಾನೆ..

ಸೌ ದರ್ದ್ ಹೇ , ಸೌ ರಾಹತೇ
ಸಬ್ ಮಿಲಾ ದಿಲ್ ನಶೀ
ಎಕ್ ತೂಹೀ ನಹೀ… !

ಈ ದೂರದೂರಿನ ಸಂಜೆಯೂ ಕೆಲವೊಮ್ಮೆ ಮಂಕಾಗಿ ಬಿಡುತ್ತದೆ. ಊರಿನ ಹಳದಿಗೆಂಪು ಹರವಿ ಬಾನಿನೂರಿನಲ್ಲಿ ಚಿತ್ತಾರ ಹೊಯ್ಯುವ, ಬಾನತುಂಬಾ ಕತ್ತು ಹೊರಳಿಸುವ ಕೀಲುಗುದುರೆಯ ಆಕಾರಗಳ ಕೆಂಬಣ್ಣ ಮೇಘಗಳು.. ಪಟಪಟನೆ ರೆಕ್ಕೆ ಬಿಚ್ಚಿ ಚೀರಿ ಹಾರುವ ಹಕ್ಕಿಯ ಹಿಂಡು, ದಿನಚರಿಯನ್ನು ಮುಗಿಸಿ ಬರುವ ಜನರ ಜೊತೆಗೇ ಹೆಜ್ಜೆಯಿಡುವ ಹಸುಗಳ ಹಿಂಡು.. ಶಾಲೆಯ ಹಾದಿಯಲ್ಲಿ ಸಂಭ್ರಮ ಮೈಗೆತ್ತಿಕೊಂಡು ಓಡೋಡಿ ಬರುವ ಪುಟ್ಟ ಪುಟ್ಟ ಮಕ್ಕಳು,ಹೊಂಡಗಳ ನಡುವೆ ಅಲ್ಲಲ್ಲಿ ಡಾಮರಿನ ಪಳೆಯುಳಿಕೆ ಕಾಣುವ ರಸ್ತೆಯಲ್ಲಿ ಧೂಳೆಬ್ಬಿಸುತ್ತಾ ಬರುವ ಬಸ್ಸುಗಳು, ಕರ್ತನೆಡೆಗೆ ಬಾಗುವಂತೆ ಮೆದುಗಾಳಿಗೆ ತಲೆದೂಗುವ ಪೈರುಗಳು.. .. ಆಹಾ ನಮ್ಮೂರಿನ ಸೊಬಗೇ ಅಂಥದ್ದು… ಅದನ್ನು ಆಸ್ವಾದಿಸಿ ನಡೆಯುವುದೆಂದರೆ ಕೋಟಿ ಬಣ್ಣದ ಕಲ್ಪನೆಯಲ್ಲಿ ರಾಗವೊಂದನ್ನು ಕಟ್ಟಿ ಎದೆ ಬಿರಿಯುವಂತೆ ಹಾಡುವುದು!.

ಯೇ ಶೆಹರೇ ತಮನ್ನಾ ಅಮೀರೊಂಕಿ ದುನಿಯಾ
ಏ ಖುದ್ಗರ್ಝ್ಹ್ ಔರ್ ಬೆಝಮೀರೋಂಕಿ ದುನಿಯಾ
ಯಹಾನ್ ಸುಖ್ ಮುಜೆ ದೋ ಜಹಾನ್ ಕ ಮಿಲಾ ಹೈ
ಮೇರಾ ಗಾವೋ ಜಾನೆ ಕಹಾ ಖೊ ಗಯಾ ಹೈ

ಅದೆಷ್ಟು ಕಾಲವಾಯಿತು!. ಸಂಜೆಯ ಜಿಟಿಪಿಟಿ ಮಳೆಗೆ ಊರಿನ ದಾರಿಯ ಪ್ರತೀ ಕವಲಿನ ಮಣ್ಣಿನ ಗಂಧವನ್ನು ಆಘ್ರಾಣಿಸಿ, ಎದೆಬಿರಿಯುವ ರಾಗಕೆ ಹುಚ್ಚೆದ್ದು ಕುಣಿದು ಸಂಭ್ರಮಪಟ್ಟು ಅದೆಷ್ಟು ಕಾಲ ಸರಿದು ಹೋಯಿತು. ಒಂದು ಹಿಡಿ ಒಲವು, ಒಂದು ಹಿತವಾದ ಕವಿತೆ… ಬದುಕು ಇನ್ನೂ ಬೇಯಬೇಕಿದೆ, ಬಾಡಿದ ಹೂವಿನಿಂದ ಎಸಳು ಉದುರುವಂತೆ ಒಂದೊಂದೇ ಕನಸನ್ನೂ ಅವಳ ಸಿಗದ ಪ್ರೀತಿಯ ಹೆಸರಿನಲ್ಲಿ ಸಮಾಧಿ ಮಾಡುವಾಗ ನನಗೆ ನಷ್ಟವಾದದ್ದು ‘ನಾನು’ ಅಲ್ಲವೇ ?

ದಿಲ್-ಇ-ನಾದಾನ್ ತುಜೆ ಹುವಾ ಕ್ಯಾ ಹೈ?
ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ ?
ಹಮ್ಕೋ ಉನ್ಸೇ ವಫಾ ಕಿ ಹೈ ಉಮೀದ್
ಜೋ ನಹೀ ಜಾನತೇ ವಫಾ ಕ್ಯಾ ಹೈ ?

ಮನಸ್ಸು ತಾಳ ತಪ್ಪಿದಾಗ ಅಪರಿಮಿತವಾಗಿ ಚಡಪಡಿಸುತ್ತದೆ. ಕೆಲವೊಮ್ಮೆ ಹೀಗೆ ಯೋಚಿಸುವುದು ಕೂಡ ತಪ್ಪೆನಿಸುತ್ತದೆ. ಭೂತದ ಗೋರಿಯನ್ನು ಬಗೆದು ಬೇತಾಳವನ್ನು ಹೊರುವುದು ನನ್ನೊಳಗಿನ ಸೂಕ್ಷ್ಮತೆಯ ಸೋಲೆನಿಸುತ್ತದೆ. ಕಳಕೊಂಡದ್ದು ಬೃಹದಾಕಾರವಾಗಿ ಕಣ್ಣೆದುರಿಗೆ ನಿಲ್ಲುವಾಗ ಪಡೆದುಕೊಂಡದ್ದು ಅಣಕವಾಡುತ್ತದೆ. ಆ ದಿನಗಳು.. ಯಾರೂ ಸಾಗದ ಹಾದಿಯಲ್ಲಿ ಪಯಣ ಆರಂಭಿಸಿ ಯಾರೂ ಮುಟ್ಟದ ಗುರಿಯೊಂದನ್ನು ನಾನು ತಲುಪಿದ್ದೆ. ಮಿಕ್ಕೆಲ್ಲರೂ ಬದುಕಿನ ಪಾಠವನ್ನು ಉರು ಹೊಡೆಯುವ ಹೊತ್ತಿಗೆ ನಾನು ನನ್ನದೇ ಆದ ಅಸ್ಮಿತೆ ಪಡೆದುಕೊಂಡಿದ್ದೆ.. ಹೀಗೆ ಬದುಕಿನೊಂದಿಗಿನ ಅವಿನಾಭಾವತೆಯನ್ನು ದಾರಿಯುದ್ದಕ್ಕೂ ಕಾಪಿಟ್ಟು ಇಂದಿನ ನಾನಾದೆ.

ನೆನಪುಗಳು ಹೀಗೆ, ಅಕ್ಷಯ ಸಂಚಿಯದು..ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು… ಇನ್ನೇನು ಪೂರ್ಣವಾಗಿ ಕತ್ತಲಾವರಿಸುವ ಸಮಯ .. ತೀರ ತುಂಬಾ ನಿಯಾನ್ ದೀಪಗಳು ಹೊಳೆಯಳು ಶುರುವಿಟ್ಟಿದೆ.

ಕತ್ತಲೆಂದರೆ ನಿರಾಳತೆ. ಸದ್ದೆಲ್ಲ ಅಡಗಿ, ಮೌನ ಮೊದಲಾಗಿ ಮನಸು ಖಾಲಿ ಖಾಲಿ.. ಕತ್ತಲೆಂದರೆ ಕಾಯುವಿಕೆ ಕೂಡ.. ಹೊರಬಾಗಿಲ ಹಾಕದೆ ಮಕ್ಕಳಿಗಾಗಿ ಕಾಯುವ ಅಮ್ಮಂದಿರು, .. ಮತ್ತು ಅಲೆಯ ನಿಯ್ಯತ್ತಿನೊಂದಿಗೆ ಮತ್ತೆ ಮತ್ತೆ ತೀರದಲಿ ಪ್ರೇಮಿಗಾಗಿ ಕಾಯುವ ಹುಡುಗರು, ಥೇಟ್ ನನ್ನಂತೆ!.

ಯೇ ಶಾಮ್ ಮಸ್ತಾನಿ .. ಮಧ್ಹೋಶ್ ಕಿಯ ಜಾಯೇ
ಮುಜೆ ಡೋರ್ ಕೊಯಿ ಕೀಂಚೆ ತೇರೆ ಔರ್ ಲಿಯೆ ಜಾಯೇ ..

ಹುಸೇನಿ ~

Leave a comment

ಅಮ್ಮಂದಿರ ಕಥೆ · ನ್ಯಾನೋ ಕಥೆಗಳು · ಸಣ್ಣ ಕತೆ

ಅಮ್ಮಂದಿರ ಕಥೆ

mothers-love-julie-reyes
೧)
ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು ಬರಲಿರುವ ರಂಜಾನ್ ತಿಂಗಳ ಊಟದ ಬಗ್ಗೆ ತುಂಬಾ ಗೊಂದಲವಿತ್ತು. ರಂಜಾನ್ ತಿಂಗಳಲ್ಲಿ ಬೆಳ್ಳಂ ಬೆಳಿಗ್ಗೆ ೪ ಗಂಟೆಗೆ ಎದ್ದು ಅತ್ತಾಳ(ಸಹರಿ) ಊಟ ಮಾಡ್ಬೇಕು. ಹೊರಗಡೆಯಿಂದ ರಾತ್ರಿಯೇ ತಂದಿದುವ ಯೋಜನೆ ನಮ್ಮದಾಗಿತ್ತಾದರೂ ನಮ್ಮೊಳಗೆ ಅಸಮಾಧಾನವಿತ್ತು.

ನಮ್ಮ ರೂಮಿನ ಪಕ್ಕದ ರೂಮಲ್ಲಿ ಒಬ್ಬರು ಮಲಯಾಳಿ ಚೇಚ್ಚಿ(ಅಕ್ಕ) ಅವರ ಗಂಡನೊಂದಿಗೆ ವಾಸವಗಿದ್ದರು. ತುಂಬಾ ಸೌಮ್ಯ ಸ್ವಭಾವದ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದು. ರಂಜಾನ್ ತಿಂಗಳ ಆರಂಭಕ್ಕೆ ಇನ್ನೇನು 2 ದಿನ ಇರುವಾಗ ಮಾತಿನ ಮದ್ಯೆ ನನ್ನ ಗೆಳೆಯ ಅತ್ತಾಳದ ಕಷ್ಟವನ್ನು ಅವರೊಂದಿಗೆ ಹಂಚಿಕೊಂಡಿದ್ದ. ಕೇರಳದ ತ್ರಿಶೂರಿನವರಾಗಿದ್ದ ಅವರ ನೆರೆಹೊರೆಯವರೆಲ್ಲರೂ ಮುಸ್ಲಿಮರೇ ಆಗಿದ್ದರಿಂದ ರಂಜಾನ್ ತಿಂಗಳ ಬಗ್ಗೆ ಅವರು ಚೆನ್ನಾಗಿ ಬಲ್ಲವರಾಗಿದ್ದರು. ಒಂದು ತಿಂಗಳ ನಮ್ಮ ಊಟದ ಸಂಪೂರ್ಣ ಜವಾಬ್ದಾರಿ ಅವರು ವಹಿಸಿಕೊಂಡರು. ರಾತ್ರಿ 11ರ ವೇಳೆಗೆ ಸಹರಿಯ ಊಟ ತಯಾರಾಗಿ ಬರುತ್ತಿತ್ತು. ಮನೆಯಿಂದ ದೂರವಿದ್ದು ತಾಯಿಯನ್ನು ಪ್ರತೀಕ್ಷಣ ಮಿಸ್ ಮಾಡ್ಕೊತ್ತಿದ್ದ ನಾನು ಅವರಲ್ಲಿ ಮತ್ತೊಬ್ಬಳು ತಾಯಿಯನ್ನು ಕಾಣುತ್ತಿದ್ದೆ.

೨)
ಅದೇ ಲಾಡ್ಜಲ್ಲಿ ತಂಗುತ್ತಿದ್ದ ಕಾಲ. ಅದೊಂದು ದಿನ ಭಾನುವಾರದ ಊಟ ಕೈ ಕೊಟ್ಟಿತು. ರಾತ್ರಿ ೨ ಗಂಟೆಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಜೊತೆಗೆ ಫುಡ್ ಪೋಯ್ಸನ್ ಸೈಡ್ ಎಫೆಕ್ಟ್ಸ್. ಬೆಳಗಿನವರೆಗೂ ನಾನುಭವಿಸಿದ ‘ಯಾತನೆ’ ಅಷ್ಟಿಷ್ಟಲ್ಲ. ಹೇಗೋ ಬೆಳಗಾಯ್ತು. ರೂಂ ಮೇಟ್ ಅಂತೂ ಎದ್ದವನೇ ಆಫೀಸಿಗೆ ಹೋದ.

ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಪಕ್ಕದ ರೂಮಿನಲ್ಲಿ ಸಮೀಪದ Hosmat ಆಸ್ಪತ್ರೆಗೆ ಟ್ರೀಟ್ಮೆಂಟ್ಗೆ ಪಶ್ಚಿಮ ಬಂಗಾಳದಿಂದ ಒಬ್ರು ಆಂಟಿ ಅವರ ಮಗಳೊಂದಿಗೆ ಬಂದಿದ್ರು. ೧೩ ವರ್ಷದ ಮಗಳಿಗೆ ಏನೋ ಆಪರೇಶನ್ ಅಗೊದಿತ್ತು. ಅವರು ಈ ಮೊದಲು ನಮ್ಮ ಲಾಡ್ಜಿಗೆ ಬಂದಿದ್ರಿಂದ ಅವರ ಪರಿಚಯ ಇತ್ತು. ಅವರಿಗೋ ಬೆಂಗಾಲಿ ಬಿಟ್ರೆ ಬೇರೆ ಯಾವ ಭಾಷೆನೂ ಬರುತ್ತಿರಲಿಲ್ಲ. ಆದರು ಮಾತನಾಡಿಸೋರು. ನನ್ನ ಅವಸ್ತೆಯನ್ನು ಕಂಡು ಮರುಗಿದ ಅವರು ಅದೇನೋ ಬೆಂಗಾಲಿ ಶೈಲಿಯ ಲಘು ಆಹಾರವನ್ನು ಅವತ್ತು ಮೂರು ಹೊತ್ತು ಮಾಡಿಕೊಟ್ರು. ಅಲ್ಲದೆ ಆಗಾಗ ನನ್ನ ರೂಮಿಗೆ ಬಂದು ಹೋಗುತ್ತಿದ್ದರು. ಎಲ್ಲಿಯ ಬಂಗಾಳ ಎಲ್ಲಿಯ ಕರ್ನಾಟಕ !, ಪರಸ್ಪರ ಮಾತನಾಡಲಾಗದೆ ಇದ್ದರು ಅವರು ನನ್ನನ್ನು ನೋಡಿಕೊಂಡ ರೀತಿ… ಜೀವನದಲ್ಲಿ ಮರೆಯುವ ಹಾಗಿಲ್ಲ. ತಾಯಿ ಮಗನ ಸಂಭಂದವೊಂದು ಅಲ್ಲಿ ಮೂಡಿತ್ತು, ಅಲ್ಲ.. ಅವತ್ತಿನ ಪಾಲಿಗೆ ನನ್ನ ತಾಯಿಯೇ ನನ್ನ ಬಳಿ ಇದ್ದರು.

೩)
ನಾನು ತಿರುವನಂತಪುರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಜ್ವರ ಬಂದು ಮನೆಯಲ್ಲಿದ್ದವನು ಸುಧಾರಿಸಿಕೊಂಡು ಮತ್ತೆ ಹೊರಟು ನಿಂತು ಕಾಸರಗೋಡಿನಿಂದ ತಿರುವನಂತಪುರಕ್ಕೆ ಟ್ರೈನ್ ಹತ್ತಿದ್ದೆ. ರಾತ್ರಿಗೆ ಬೇಕಾದ ಆಹಾರ, ನೀರು ಎಲ್ಲವೂ ನನ್ನ ಬಳಿಯಿತ್ತು. ಟ್ರೈನ್ ಹತ್ತಿ ಕೂತು ಸ್ವಲ್ಪ ಸಮಯದಲ್ಲೇ ನಿದ್ದೆ ಆವರಿಸಿತ್ತು. ಎದ್ದು ನೋಡುವಾಗ ಮದ್ಯ ರಾತ್ರಿ!. ಎದ್ದು ಮುಖ ತೊಳೆದು ಬಂದು ಪಾರ್ಸೆಲ್ ಬಿಚ್ಚಿ ಊಟ ಮಾಡತೊಡಗಿದೆ. ಮಧ್ಯೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ನೀರಿನ ಬಾಟಲಿಗಾಗಿ ತಡಕಾದುವಷ್ಟರಲ್ಲಿ ತಿಳಿಯಿತು ಬಾಟಲಿಯನ್ನು ಯಾರೋ ಎಗರಿಸಿದ್ದಾರೆಂದು.. ಬಿಕ್ಕಳಿಗೆ ಜೋರಾಯಿತು. ಬಿಕ್ಕುತ್ತಲೇ ಪಕ್ಕದ ಸೀಟಲ್ಲಿದ್ದ ಮಲಯಾಳಿ ಅಂಕಲ್ ಹತ್ರ ವಾಟರ್ ಬಾಟಲ್ ನೋಡಿದ್ದೀರಾ ಎಂದು ವಿಚಾರಿಸಿದೆ. ನೋಡಿಲ್ಲ ಎಂದವರು ಸುಮ್ಮನಾಗುವಷ್ಟರಲ್ಲಿ ಅವರ ಹೆಂಡತಿ ತನ್ನ ಬ್ಯಾಗಿಂದ ನೀರಿನ ಬಾಟ್ಲಿ ತೆಗೆದು ಕೊಟ್ರು, ನೀರು ಕುಡಿದು ಕೆಮ್ಮುವಾಗ ತಲೆ ಮಧ್ಯೆಗೆ ಕೈಯ್ಯಿಂದ ಒತ್ತಿ ನೇವರಿಸಿದರು. ಸುಧಾರಿಸಿಕೊಂಡು ನಾನು ಅವನ ಮುಖವನ್ನು ದಿಟ್ಟಿಸಿದೆ. ಅಮ್ಮ ನನ್ನ ಮುಂದೆ ನಿಂತಿದ್ದರು.

ಹುಸೇನಿ ~

Leave a comment

ಹುಸೇನಿ ಪದ್ಯಗಳು - 33 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 33

nenapina-sanchi-1

೧)
ಈಗೀಗ ನಿನ್ನ ನೆನಪುಗಳು
ದೀರ್ಘ ನಿಟ್ಟುಸಿರು
ಮತ್ತು
ಕಣ್ಣಂಚಲಿ ಮೂಡುವ
ಹನಿಗಳು;
ಅಷ್ಟೇ..

೨)
ನೀನು ಹೊರಟು
ಆ ತಿರುವಿನಂಚಿನಿಂದ
ಮತ್ತೆ ತಿರುಗಿ
ನೋಡಬಾರದಿತ್ತು;
ನನ್ನ ವಾಸ್ತವ ಮತ್ತು ಭವಿಷ್ಯ
ಎರಡೂ ಗೋಜಲು ನೋಡು ..

೩)
ಪತಂಗದ ಕನಲಿಕೆ
ದೀಪದ ತಟಸ್ಥ ಭಾವ
ಪ್ರೇಮದ ಇನ್ನೊಂದು ಮುಖ ?

೪)
ಆ ಮುಸ್ಸಂಜೆಯಲ್ಲಿ ಕವಲುದಾರಿಯೊಂದು ವಿದಾಯಕ್ಕೆ ಸಾಕ್ಷಿಯಾಗಿತ್ತು
ಅವಳು ಸ್ಥಬ್ದವಾಗಿದ್ದಳು;
ಅವನು ನಡೆಯುತ್ತಲೇ ಇದ್ದ;
ಮೌನದ ತುದಿಯಲ್ಲಿ ಕವಿತೆಯೊಂದು ಜೀಕುತ್ತಿತ್ತು..

೫)
ಮತ್ತದೇ ನಿಯ್ಯತ್ತಿನ
ಪೊರೆ;
ಕಳಚಿದಷ್ಟೂ ಕವಲು;

ಹುಸೇನಿ ~

Leave a comment

ಬಿಂದು · ಬಿಂದು – 13

ಬಿಂದು – 13

ನೀನೊಲಿಯದ ರಾತ್ರಿಗಳಲ್ಲಿ
ಪದಗಳಿಗೆ ನಿಲುಕದೆ
ಗೋಜಲಾಗುವ ಕವಿತೆಗಳು
ಅಕ್ಷಿಪಟಲದ ತುದಿಯಲ್ಲಿ
ಮಿಂಚಾಗಿ ಹೊಳೆಯುತ್ತದೆ …

ಹುಸೇನಿ~

Leave a comment

ಬಿಂದು · ಬಿಂದು – 12 · Kannad peoems · kannada love quote;s

KANNADA LOVE QUOTES & POEMS

hug-nenapinasanchi

ಬಿಂದು – 12

ನಾನು ನಿನ್ನ ಎದೆಗವಿಚಿಕೊಂಡ
ಕ್ಷಣ, ದೂರದಲಿ
ಮುಳ್ಳು ಬೇಲಿಯನು
ಬಳ್ಳಿಯೊಂದು
ಮುಗ್ದವಾಗಿ ತಬ್ಬಿರುವುದು
ಗೋಚರಿಸಿತು …

ಹುಸೇನಿ ~

Leave a comment

ಕಾಡುವ ಹನಿಗಳು · ನೆನಪಿನ ಹನಿ · ಬಿರಿಯದ ಮೊಗ್ಗು · ಬಿರಿಯದ ಮೊಗ್ಗು - 15

ಬಿರಿಯದ ಮೊಗ್ಗು – 15

ಆ ಮೋಟು ಜಡೆ, ನಿಚ್ಚಳ
ಕಣ್ಣುಗಳು..
ನಿಷ್ಕರುಣಿ ಕಾಲ ಯಾವುದನ್ನು
ಮರೆಸುತ್ತಿಲ್ಲ..
ಎಣ್ಣೆ ತೀರಿದ ಬತ್ತಿಯ ಕಮಟು
ಇನ್ನೂ
ಗಾಳಿಯಿಂದ ಆರಿಲ್ಲ..

ಹುಸೇನಿ ~

Leave a comment