ಅಮ್ಮಂದಿರ ಕಥೆ · ಅಮ್ಮಾ.. · ಅವಳು · ಕಾಡುವ ಹನಿಗಳು · ನೆನಪಿನ ಹನಿ · ಹುಸೇನಿ_ಪದ್ಯಗಳು

ಅವಳು …

ಚಿತ್ರ ಕೃಪೆ : ಹಾರಿಸ್ ಖಾನ್

೧.
ಬಹುಮಹಡಿ ಮನೆಯಲ್ಲಿ
ಕಾಲಿಗೊಂದು ಕಾಲಾಳು,
ಕೋಣೆಗೊಂದು ಸೀಸಿ ಕ್ಯಾಮರಾ
ಅವಳು ಬಿಕ್ಕುವುದು ಮಾತ್ರ
ಗೋಡೆಗಷ್ಟೇ ತಿಳಿಯುತ್ತದೆ.

೨.
ಸೂರ್ಯ ಸರಿದರೂ ಮನೆ ಮುಟ್ಟದ
ಮಗಳು;
ಜಾಗರಣದ ಜಗತ್ತಿನಲ್ಲಿ ಅವಳಿಗೆ
ಸೂರ್ಯನ ಮೇಲೆ ಮುನಿಸು.

೩.
ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;
ಉಸಿರು ನಿಲ್ಲಿಸಿ
ತೊಟ್ಟಿಲಿನ ಉಸಿರನ್ನು ಆಲಿಸಿ
ನಿಟ್ಟುಸಿರಿಟ್ಟಳು ಅವಳು …

ಬಿಂದು · ಬಿಂದು-24

english to kannada

ಬಿಂದು-24


ಬದುಕಿಗಿಲ್ಲಿ ಸಾವಿನ ಹೆಸರು..
ಸಾವಿಗಿಲ್ಲಿ ಬದುಕಿನ ಹೆಸರು..
ಹುಟ್ಟು ಸಾವಿನ ಕವಲಿನಲಿ
ಕಂಗಾಲಾಗಿದ್ದೇನೆ ದೊರೆಯೇ
ಗಮ್ಯ ತೋರು; ಅನಂತತೆಯಲ್ಲಿ
ನಕ್ಷತ್ರವಾಗಿ ನಾನೂ ಹೊಳಯಬೇಕು…

~ ಹುಸೇನಿ

ನೆನಪಿನ ಹನಿ · ಹುಸೇನಿ_ಪದ್ಯಗಳು

ಅಪೂರ್ಣ ಸಾಲುಗಳು .. 1

ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …
ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 🙂

1.
ಮೋಡ ಮುಸುಕಿದ ಅರ್ಧ ಚಂದಿರ, ಮೈಚಾಚಿ ಮಲಗಿದ ರಸ್ತೆ, ಕರಿಮೋಡದಂಚಿನ ಮಿಂಚಿನಸೆಲೆ, ನಸುಕಿನಲ್ಲಿ ಬಿರಿಯಲಣಿಯಾಗುತ್ತಿರುವ ನೈದಿಲೆ ಮತ್ತು ಮೆಲ್ಲುಸಿರಿನ ಪಿಸುಮಾತಿನ ಜೊತೆ ನೀನು, ಎದೆಯ ತಿದಿಯಲ್ಲಿ ಗರ್ಭಗಟ್ಟಿದ ಕನಸುಗಳು ಈ ರಾತ್ರಿಯ ವಿಶೇಷಗಳು..

2.
ಹಲವು ರಾತ್ರಿಗಳು ನಿನ್ನ ರೂಪ ಪಡೆದು ದೇದೀಪ್ಯಮಾನವಾಗಿ ಹೊಳೆಯುತ್ತದೆ.. ಆ ರಾತ್ರಿಗಳಲ್ಲಿ ಹೊಸ ಹಾಡು, ಹೊಸ ಚೈತನ್ಯ, ಹೊಸ ಹಂಬಲಗಳೊಂದಿಗೆ ನನ್ನದು ಮರು ಹುಟ್ಟು…

3.
ಸಂಜೆಯಾಗುತ್ತದೆ
ಅವಳಂತಹದ್ದೇ ಸಂಜೆ
ಸಂಜೆಯಿಂದ ಅವಳ
ಅವಳಿಂದ ಸಂಜೆಯ
ಬೇರ್ಪಡಿಸುವ ಆಟಕ್ಕಿಳಿದವನಿಗೆ
ಎದೆ ಬಯಲಿನಲ್ಲಿ
ಇಬ್ಬನಿ ನಲಿಯುವ
ಮುಂಜಾನೆ ದೊರೆಯುತ್ತದೆ.
ಮತ್ತೆ ಸಂಜೆಯಾಗುವವರೆಗೂ
ಮುಗುಳ್ನಗಿಸುವ ಮುಂಜಾವು ದೊರೆಯುತ್ತದೆ.

4.
ಯಾ ರೂಹಿ…
ನೀನು ಅನಂತ ಗೋಲ;
ಅಖಂಡ ರಾಶಿ ತಾರೆಗಳ,ಕಾಯಗಳ,
ಗ್ರಹಗಳ ತುಂಬಿಕೊಂಡು
ನನ್ನೆದೆ ಬಾಂದಳದಿ ನಿಗೂಢವಾಗಿ
ಮಿನುಗುತ್ತಿದ್ದಾನೆ

5.
…..ಕೆಲವು ಬಂಧಗಳು ಹಾಗೆಯೇ ಅಲ್ಲೆಲ್ಲೋ ಮೀಟಿದ ತಂತಿಯ ನಾದದಿಂದ ಹೊಮ್ಮಿದ ರಾಗಕ್ಕೆ ಇಲ್ಲೆಲ್ಲೋ ಒಂದು ಹೃದಯ ತಲೆದೂಗುತ್ತದೆ. ಅಲ್ಲೆಲ್ಲೋ ಕಾಪಿಟ್ಟ ಮೋಡ ಇಲ್ಲಿ ಹನಿಯುತ್ತದೆ,ಮುಂಜಾನೆಯೊಂದು ಶುಭ ಹಾರೈಕೆ, ಮುಸ್ಸಂಜೆಯಲ್ಲೊಂದಿಷ್ಟು ಹರಟೆಗಳು, ರಾತ್ರಿಯ ನಿಶೀತತೆಯಲ್ಲಿ ಅಂತರಾಳದ ತಪನೆಗೊಂದಿಷ್ಟು ತಂಪುಕೊಡುವ ಮಾತುಕತೆಗಳು,ಇಷ್ಟಗಳನ್ನೂ ಕಷ್ಟಗಳನ್ನು ಹರವಿಕೊಂಡು ಬದುಕಿನ ಅರ್ಥ ಕಂಡುಕೊಳ್ಳುವ ಪ್ರಯತ್ನಗಳು. ಇಹದ ಭವ ಬಂಧಗಳಾಚೆಗಿನ ಖಾಲಿ ಅವಕಾಶದಲ್ಲಿ ಮೂಡುವ ಆತ್ಮೀಯತೆ ಅದು. ಮನಸ್ಸಿಂದ ಮನಸ್ಸಿಗೆ ನಿಸ್ತಂತು ಸಂವಹನ ಅದು. ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬಸಿದು ಕೊಡುವ ಈ ಆತ್ಮೀಯತೆಗೆ ಮಿಗಿಲಾದ್ದು ಇಲ್ಲಿ ಇರುವುದಾದರೂ ಏನು… ?

~ಹುಸೇನಿ