ನ್ಯಾನೋ ಕಥೆಗಳು · ಶೂನ್ಯ ಮತ್ತಿತರ ನ್ಯಾನೋ ಕತೆಗಳು

ಶೂನ್ಯ ಮತ್ತಿತರ ನ್ಯಾನೋ ಕತೆಗಳು

ni
ಶೂನ್ಯ
ಆತ ಹೆಂಡತಿಯ ಅಣತಿಯಂತೆ ತುಂಬು ಕುಟುಂಬದಿಂದ ದೂರವಾಗಿ ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದ . ಮಧ್ಯ ರಾತ್ರಿ ತಂದೆ ಕಾಣೆಯಾಗಿದ್ದಾರೆಂದು ತಮ್ಮನ ಫೋನ್ ಬಂದಿತ್ತು . ಫೋನ್ ಇಟ್ಟವನೇ “ನಾನೇನು ಮಾಡಲಿ ದೇವರೇ..?” ಎಂದು ದಿಗ್ಭ್ರಮೆಗೊಂಡು ತನ್ನಂತಾನೆ ಪ್ರಶ್ನಿಸಿಕೊಂಡ.
“ಸದ್ಯ ಲೈಟ್ ಆಫ್ ಮಾಡಿ… ಅಷ್ಟು ಸಾಕು !” ಹೆಂಡತಿ ನಿದ್ದೆಗಣ್ಣಲ್ಲಿ ಚಾಟಿ ಬೀಸಿದಳು.
ಬೆಳಿಗ್ಗೆ ಅವಳಿಗೆ ತನ್ನ ತಂದೆ ತೀರಿ ಹೋದರೆಂದು ಫೋನ್ ಬಂದಿತ್ತು. ಮಲಗಿದ್ದ ಗಂಡನನ್ನು ಎದ್ದೇಳಿಸಲು ಸಾದ್ಯವಾಗದೆ ಶೂನ್ಯ ಭಾವದಿಂದ ಅವನನ್ನು ದಿಟ್ಟಿಸುತ್ತಾ ನಿಂತಳು .

ಮೋಸ
ಬಹುಮತದಿಂದ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯ ೧ ರೂ ಗೆ ಅಕ್ಕಿ ಕೊಟ್ಟು ಇದು ನನ್ನ ಮತ್ತು ನನ್ನ ಪಕ್ಷದ ಕೊಡುಗೆಯೆಂದು ಅಕ್ಕಿ ಮೂಟೆ ಮೇಲೆ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯನ್ನು ಅಚ್ಚು ಹಾಕಿಸಿದರು.
ಅದೇ ಮುಖ್ಯಮಂತ್ರಿಯ ಆಡಳಿತ ಕಾಲದಲ್ಲಿ ಬೆಲೆಯೇರಿಕೆಯ ಬಿಸಿಯಿಂದ ಸಾಲಗಾರನಾದ ರೈತನ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತು.
ಇದು ಕೂಡ ಅದೇ ಮುಖ್ಯಮಂತ್ರಿಯ ಮತ್ತವರ ಪಕ್ಷದ ಕೊಡುಗೆಯಾಗಿದ್ದರೂ ಅವರ ಶವ ಪೆಟ್ಟಿಗೆಯ ಮೇಲೆ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯ ಅಚ್ಚು ಹಾಕಿಸಿರಲಿಲ್ಲ.

ವಾರ್ತೆ
“ಹದಿನಾರರ ತರುಣಿಯ ಮೇಲೆ ಗ್ಯಾಂಗ್ ರೇಪ್” ಎಂಬ ತಲೆ ಬರಹದಲ್ಲಿ ಹದಿ ಹರೆಯದ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಸುದ್ದಿಯನ್ನು ವರ್ಣರಂಜಿತವಾಗಿ ಪ್ರಕಟಿಸಿ ದೊಡ್ಡ ವಾರ್ತೆಯಾಗಿಸಿದ ಆ ಪರ್ತಕರ್ತ ಅಕ್ಷರದಲ್ಲೇ ಆಕೆಯನ್ನು ಮತ್ತೊಮ್ಮೆ ಅತ್ಯಚಾರಗೈದಿದ್ದ ಸುದ್ದಿ ವಾರ್ತೆಯಾಗಲೇ ಇಲ್ಲ.

ಪೂಜನೀಯ
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತ:” ನಮ್ಮ ದೇಶ ಮಹಿಳೆಯರಿಗೆ ಕೊಟ್ಟ ಪೂಜನೀಯ ಸ್ಥಾನವನ್ನು ಹೆಮ್ಮೆಯಿಂದ ಆ ಸ್ವಾಮೀಜಿ ನೆರೆದ ದೇಶ ವಿದೇಶದಿಂದ ಬಂದ ಸಭಿಕರೆದುರು ಪ್ರವಚಿಸುತ್ತಿದ್ದರು.
“ಜಲ ಪ್ರಳಯ : ಸಂಕಷ್ಟದಲ್ಲಿ ಸಿಲುಕಿದ ತಾಯಿ ಮಗಳ ಮೇಲೆ ಅತ್ಯಾಚಾರ ಮತ್ತು ಕೊಲೆ” ಮರುದಿನ ಪತ್ರಿಕೆಯ ಮುಖಪುಟದಲ್ಲಿ ಸುದ್ದಿಯೊಂದು ದೊಡ್ಡ ಅಕ್ಷರದಲ್ಲಿ ಪ್ರಕಟವಾಗಿತ್ತು.

ಸೇವೆ
ನಗರದ ಹೃದಯ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಮಾಡಿದ ಸ್ವಾಮೀಜಿ ಉತ್ತಮ “ಸೇವೆ” ನೀಡುವಂತೆ ಹಾರೈಸಿದರು.
ನೆರೆದ ಸಭಿಕರಲ್ಲಿ ಇಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತು.

(ನ್ಯಾನೋ ಕತೆಯನ್ನು ದಯವಿಟ್ಟು ನಿಲ್ಲಿಸಬೇಡಿ ಅಂತ ಹಲವಾರು ಗೆಳೆಯರು ಕೋರಿಕೊಂಡಿದ್ದರು .. ಗೆಳೆಯರೇ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ )

ಪ್ರತಿಕ್ರಿಯಿಸಿ