ನ್ಯಾನೋ ಕಥೆಗಳು

ಮಗದಷ್ಟು ನ್ಯಾನೋ ಕತೆಗಳು


ಕೊರತೆ
ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿ ಮರುಗುತ್ತಿದ್ದ ಅವನಲ್ಲಿ ಅದೊಮ್ಮೆ ಅವಳು ಕೇಳಿದಳು.. ನಿಮಗೇನಿದೆ ಇಲ್ಲಿ ಕೊರತೆ..? ಆತ ನಿಟ್ಟುಸಿರಿಡುತ್ತಾ ಉತ್ತರಿಸಿದ.. “ನಿನ್ನ ಪ್ರೀತಿ ಮತ್ತು ಅಕ್ಕರೆ”

ಅಮರ
ತನ್ನಿಂದ ಎಲ್ಲವನ್ನೂ ಕಲಿತು ಇನ್ನೂ ಆಶ್ರಮದಲ್ಲೇ ಉಳಿದಿದ್ದ ಶಿಷ್ಯನಲ್ಲಿ ಗುರುಗಳೊಮ್ಮೆ ಕೇಳಿದರು..’ಶಿಷ್ಯಾ.. ನಿನಗೆ ಸಾವಿನ ನಂತರವೂ ಬದುಕಬೇಡವೇ..?’ . ಆಶ್ಚರ್ಯಚಕಿತನಾದ ಶಿಷ್ಯ ಗುರುಗಳನ್ನೇ ದಿಟ್ಟಿಸುತ್ತ ಕೇಳಿದ.. “ಅದು ಹೇಗೆ ಸಾದ್ಯ ಗುರುಗಳೇ? ”
ಹೋಗಿ ನೀನು ಕಲಿತ ಪಾಠವನ್ನೆಲ್ಲ ಜನರಿಗೆ ಹಂಚು…ಅದು ನೀನು ಸತ್ತ ನಂತರವೂ ನಿನ್ನನ್ನು ಅವರೊಳಗೆ ಬದುಕಿಸುತ್ತದೆ.. ಗುರುಗಳು ಉತ್ತರಿಸಿದರು.

ಅಮ್ಮ
ಬಂಜೆಯೆಂದು ಊರವರಿಂದಲೂ ಕುಟುಂಬಿಕರಿಂದಲೂ ತಿರಸ್ಕೃತಳಾಗಿದ್ದ ಹೆಣ್ಣೊಬ್ಬಳು ಹೇಳಿದ ಕತೆ..
‘ಮೂರು ವರ್ಷಗಳ ಹಿಂದೆ ಅನಾಥಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡಿದ್ದೆ..ಆತ ಇಂದು ನನ್ನನ್ನು ”ಅಮ್ಮ” ಅಂತ ಕರೆದ.

ಭಕ್ತಿ
ಮಂದಿರದ ಮುಂದಿದ್ದ ಭಿಕ್ಷುಕರ ದಯನೀಯತೆ ಕಂಡು ಏನೂ ಕೊಡಲಾಗದ ಬಡವ ಶಿಷ್ಯನೊಬ್ಬ ತನ್ನ ಗುರುಗಳಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡ..’ ಗುರುಗಳೇ ಭಗವಂತ ಇಷ್ಟು ಒಳ್ಳೆ ಅರೋಗ್ಯ ಕೊಟ್ಟರೂ ನನ್ನಿಂದ ಅವರಿಗೇನು ಸಹಾಯ ಮಾಡಲಾಗಿಲ್ಲ.. .’ . ‘ಇರುವ ಸಾವಿರದಲ್ಲಿ ಹತ್ತನ್ನು ಭಿಕ್ಷುಕರ ತಟ್ಟೆಗೆ ಎಸೆದು ಭೀಗುವ ಭೀರುಗಳಿಗಿಂತ ಏನೂ ಕೊಡಲಾಗಲಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ..ಚಿಂತೆ ಮಾಡಬೇಡ ..’ ಗುರುಗಳು ಅವನನ್ನು ಸಮಾಧಾನಪಡಿಸಿದರು…

ವ್ಯಭಿಚಾರ
ಅವಳು ಎಂದಿನಂತೆ ಸೀರೆ ಉಟ್ಟು ಮಲ್ಲಿಗೆ ತೊಟ್ಟು ಬಸ್ ಸ್ಟ್ಯಾಂಡ್ ಬಳಿ ಗಿರಾಕಿಗಾಗಿ ಕಾಯುತ್ತಿದ್ದಳು. ‘ನನಗೆ ಅವಳನ್ನು ಅನುಭವಿಸಬೇಕು ಅನ್ನಿಸುತ್ತಿದೆ.. ಆದ್ರೆ ವ್ಯಭಿಚಾರ ತಪ್ಪು ಅಂತ ನನ್ನನ್ನು ಹತೋಟಿಗೆ ತರುತ್ತಿದ್ದೇನೆ ..’ ದೂರದಿಂದ ಅವಳನ್ನೇ ದಿಟ್ಟಿಸುತ್ತಾ ಅವನೆಂದ.. ಯಾವಾಗ ನಿನಗೆ ಅನ್ನಿಸಿತೋ ಆಗಲೇ ನೀನು ಅವಳನ್ನು ವ್ಯಭಿಚಾರ ಮಾಡಿ ಆಯಿತು.. ಪಕ್ಕದವ ಹೇಳಿದ.


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ನ್ಯಾನೋ ಕಥೆಗಳು

ಇನ್ನಷ್ಟು ನ್ಯಾನೋ ಕತೆಗಳು


ಸ್ಥಿತಿ-ಗತಿ
ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಸರ್ಕಾರದ ಕೊನೆಯ ಪ್ರಸ್ತಾಪನೆ ಹೊರ ಬಿತ್ತು “ಶೇಕಡಾ 90 ರಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ”.
ಕನ್ನಡ ಶಾಲೆಗಳ ಸ್ಥಿತಿ -ಗತಿಗಳ ಅಧ್ಯಯನಕ್ಕೆ ನೇಮಕವಾದ ಆಯೋಗದ ವರದಿ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಯ್ತು “ಶೇಕಡಾ 90 ರಷ್ಟು ಕನ್ನಡ ಶಾಲೆಗಳಿಗೆ ಬಾಗಿಲೇ ಇಲ್ಲ..!! ”

ಮಳೆ
ಥೂ ಈ ಹಾಳಾದ ಮಳೆ ಇಂದೇ ಬರಬೆಕಿತ್ತಾ ?… ತಾನು ಕಾತರತೆಯಿಂದ ಕಾಯುತ್ತಿದ್ದ ಕ್ರಿಕೆಟ್ ಪಂದ್ಯ ನಡೆಯದೆ ಹೋದುದಕ್ಕೆ ಬೇಸರಿಸುತ್ತ ಆತ ಗೊಣಗುಟ್ಟಿದ.. ದೂರದ ಹಳ್ಳಿಯೊಂದರಲ್ಲಿ ಮಳೆಗೆ ಕಾದು ಹೈರಾಣಾಗಿದ್ದ ರೈತರ ಸಂತಸ ಮುಗಿಲು ಮುಟ್ಟಿತ್ತು..

ತಪ್ಪು
ನಮ್ಮನ್ನು ಯಾರೂ ಅರ್ಥ ಮಾಡುತ್ತಿಲ್ಲ.. ಓಡಿ ಹೋಗಿ ಮದುವೆಯಾಗಿದ್ದೀವಿ.. ಅದರಲ್ಲೇನು ತಪ್ಪು ?? ತಂದೆ ತಾಯಿಯನ್ನು ಬಿಟ್ಟು ಓಡಿ ಹೋಗಿ ಮದುವೆಯಾದ ಹುಡುಗನೊಬ್ಬ ಗೆಳೆಯನಲ್ಲಿ ತನ್ನನ್ನು ತಾನೆ ಸಮರ್ಥಿಸುತ್ತಿದ್ದ.. ವರ್ಷಗಳುರುಳಿದವು.. ಅವನಿಗಿದ್ದ ಒಬ್ಬನೇ ಮಗ ತಂದೆಯ ಹಾದಿಯನ್ನೇ ತುಳಿದ..ಕಾಲ ಮೀರಿದ್ದರೂ ಈಗ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಯ್ತು…

ಹುಚ್ಚ
ಅವನೊಬ್ಬ ಅಮರ ಪ್ರೇಮಿ. ಅವಳ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾದುಕುಳಿತ.. ಅವನ ಮಾತಲ್ಲೂ ಅವಳೇ ಮೌನದಲ್ಲೂ ಅವಳೇ . ಅವಳಾಡಿ ಹೋದ ಮಾತನ್ನು ,ಹಾಡನ್ನೂ ಬಡಬಡಿಸುತ್ತಿದ್ದ.. ಜಗದ ಪಾಲಿಗೆ ಈಗ ಅವನೊಬ್ಬ ಹುಚ್ಚ.

ಥ್ಯಾಂಕ್ಸ್
ಆತ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಮಲ ಹೊರುವ ಕೆಲಸ ಮಾಡುತ್ತಿದ್ದ. ಸಂಜೆ ಮನೆಗೆ ಬಂದಾಗ ಆತನ ಮೊಗದಲ್ಲಿ ಅದೇನೋ ವಿಚಿತ್ರ ಸಂಭ್ರಮ. ಅವನ ಹೆಂಡತಿ ಕಾರಣ ಕೇಳಿದಳು. “ಇಂದು ರಾಜರಾಮರ ೪ ಅಂತಸ್ತಿನ ಮನೆಯಲ್ಲಿ ಕೆಲಸವಿತ್ತು ಕಣೇ, ಕೆಲಸ ಮುಗಿಸಿ ಬರುವಾಗ ಧಣಿಗಳು ದುಡ್ಡು ಕೊಟ್ಟರು , ಜೊತೆಗೆ ‘ಥ್ಯಾಂಕ್ಸ್’ ಎಂದರು.


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಹುಸೇನಿ ಪದ್ಯಗಳು - 6 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 6

ನಿನ್ನ ನೆನಪಿನಿಂದ
ಹುಟ್ಟಿದ ಈ
ಕವನ
ನಿನ್ನದೋ
ನನ್ನದೋ ..
ಗೊಂದಲವಿದೆ!
———
ನಿನ್ನ ಎದೆಯಾಳದ
ಹಂದರಕ್ಕೆ
ಈಜು ಬಾರದೆ
ಇಳಿದು
ದಿಕ್ಕಾಪಾಲಾದ
ನನ್ನ ಸ್ಥಿತಿಗೆ
ಪರಿಭ್ರಮಿಸುತ್ತೇನೆ…
ಕೆಲವೊಮ್ಮೆ
ಸಂಭ್ರಮಿಸುತ್ತೇನೆ..!
———
ನೀ ನನಗೆ
ನಷ್ಟವಾಗಬಹುದು ..
ಎಂದಲ್ಲ..
ನಾನಿನಗೆ
ನಷ್ಟವಾದರೆ
ನನ್ನಷ್ಟು ನಿನ್ನ
ಯಾರು ತಾನೇ
ಪ್ರೀತಿ ಮಾಡಿಯಾರು
ಎಂಬ ಭಯವಿದೆ….!
———
ನಿನ್ನೊಲುಮೆಯ
ರಾಗವನ್ನು
ಪದಗಳಲ್ಲಿ
ಕಟ್ಟಿ ಹಾಕುವ
ವ್ಯರ್ಥ ಪ್ರಯತ್ನ
ಈ ಕವನ
———
ನಿನ್ನ ಕಾಡುವ
ನೆನಪುಗಳಿಗೆ
ಲಗಾಮು ಹಾಕುವ
ಪ್ರಯತ್ನದಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ..
———


Leave a Comment