ಮಕ್ಕಳ ದಿನ

ಮಕ್ಕಳ ದಿನ

child

ಗಣಿಯೊಳಗಿನ ಧೂಳಿನಲ್ಲಿ
ಭೋರ್ಗರೆವ ಜಲ್ಲಿ ಕ್ರಶರ್ಗಳ ನಡುವೆ
ತಮ್ಮದೇ ಭವಿಷ್ಯವನ್ನು ಕುಟ್ಟಿ ಪುಡಿಗೆಯ್ಯುವ
ಚರ್ಮ ಕಿತ್ತ ಕೈಯ ಹುಡುಗರೇ, ಕೈ ತೊಳೆದು
ಬನ್ನಿ .. ಇಂದು ನಿಮಗೆ ಸಂಭ್ರಮದ ದಿನ

ಹಾದಿ,ಬೀದಿ, ಹೆದ್ದಾರಿಯ ವರ್ತುಲ
ಸಿಗ್ನಲಿನಲ್ಲಿ ಕಂಡ ಕಂಡವರಿಗೆ
ಕೈ ಚಾಚುವ ಚಿಂದಿ ಬಟ್ಟೆಯ
ಮಕ್ಕಳೇ , ಹೊಸ ದಿರಿಸಿನಲ್ಲಿ
ಬನ್ನಿ.. ಇಂದು ನಿಮಗೆ ಸಂಭ್ರಮದ ದಿನ

ರಾಜಧಾನಿಯ ಪಬ್ಬು, ಬಾರುಗಳ
ಅಡುಗೆ ಕೋಣೆಯೊಳಗಿನ, ಬೀದಿ ಬದಿಯ
ಹೋಟೆಲಿನ ಮುಸುರೆ ತಿಕ್ಕುವ, ರಾತ್ರಿ-
ಕಂಡವನ ಕಾಮಕ್ಕೆ ಆಹಾರವಾಗುವ
ಪರ್ದೇಸಿ ಮಕ್ಕಳೇ, ಮೈಗಿಷ್ಟು ನೀರು ಹಾಯಿಸಿ
ಬನ್ನಿ.. ಇಂದು ನಿಮಗೆ ಸಂಭ್ರಮದ ದಿನ

ಬಹುಮಹಡಿ ಅಪಾರ್ಟ್ಮೆಂಟಿನ
ಮಧ್ಯ ರಾತ್ರಿಯ ಗುಂಡು-ತುಂಡುಗಳ
ಪಾರ್ಟಿಯ ಅಳಿದುಳಿದ ಎಂಜಲೆಲೆ
ಮೇಲೆ ಮುಗಿದು ಬಿದ್ದು ಹಸಿವಾರಿಸುವ
ಮಧ್ಯರಾತ್ರಿಯ ಮಕ್ಕಳೇ.. ಚಿಂದಿ ಆಯುವ-
ಗೋಣಿಯನ್ನು ಬದಿಗಿಟ್ಟು
ಬನ್ನಿ.. ಇಂದು ನಿಮಗೆ ಸಂಭ್ರಮದ ದಿನ

ಅಲ್ಲಿ ದೊಡ್ಡವರೆಲ್ಲಾ ಸೇರಿ
“ಮಕ್ಕಳ ದಿನಾಚರಣೆ”
ಆಚರಿಸುತ್ತಾರಂತೆ, ನಮ್ಮಗಳ
ಭವಿಷ್ಯಕ್ಕೆ ಶುಭ ಹಾರೈಸುತ್ತಾರಂತೆ,
ಅದೇ ಖುಷಿಯಲ್ಲಿ ಪುಕ್ಕಟೆಯಾಗಿ ಸಿಹಿ ತಿಂಡಿ
ಹಂಚುತ್ತಾರಂತೆ.. ಬನ್ನಿ ಹೊರಡೋಣ.

ಮಕ್ಕಳ ದಿನಾಚರಣೆ ಎಂಬುದು ಕೇವಲ ಸಾಂಕೇತಿಕ/ತೋರಿಕೆಯ ಆಚರಣೆ ಆಗಬಾರದು. ನಮ್ಮ ಸುತ್ತ ಮುತ್ತಲೆಲ್ಲಾ ಅದೆಷ್ಟೋ ಕಂದಮ್ಮಗಳು ಯಾವುದೇ ಕಂದ-ಬಾಹುಗಳ ಗುಲಾಮಿತನದಲ್ಲಿ ಬದುಕು ಕಂಡಿವೆ. ಅವರನ್ನು ರಕ್ಷಿಸುವ,ಪರಿಪಾಲಿಸುವ, ಅವರ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜದ ಕಣ್ಣಿಗೆ ಕುರುಡಾಗುವುದು ಬೇಡ.. ಎಲೆ ಕುಸುಮಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
_ಹುಸೇನಿ

Leave a comment