ಹುಸೇನಿ ಪದ್ಯಗಳು - 5 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 5

ಆ ನಿನ್ನ ಬಿಚ್ಚು
ನಗುವಿನ ಹಿಂದೆ
ಅದೆಷ್ಟು
ಬತ್ತದ ಕಣ್ಣೀರು!
———-
ಚದುರಿದ ಕನಸೊಂದಿಗೆ
ಜೀವಿಸುವುದಕ್ಕಿಂತ
ಒಳಿತು
ಮರೆಯದ ನೆನಪುಗಳೊಂದಿಗೆ
ಸಾಯುವುದು ಅಲ್ಲವೇ ?
——–
ದೂರದಲ್ಲೆಲ್ಲೋ
ಕಂಡ ಬೆಳಕನ್ನು
ನೀನು
ಬೆಂಬತ್ತಿದಾಗ
ನನ್ನೊಳಗೆ ಬರೀ
ಕತ್ತಲು…
———
ನೀನು ನಿನ್ನ
ಪ್ರೀತಿಯನ್ನೆಲ್ಲ
ಮಾತಲ್ಲೇ ತೋರಿಸಿದೆ
ನಾನು
ನನ್ನ
ಜೀವನದಲ್ಲೂ…!!


Leave a Comment

ಹಿಂಬಾಲಿಸದೆ ಬಿಟ್ಟಿತೇ?

ಹಿಂಬಾಲಿಸದೆ ಬಿಟ್ಟಿತೇ?

ಇನ್ನು ನನ್ನ ಜೀವನ ದಾರಿಯಲ್ಲಿ
ನಿನ್ನ ಹೆಜ್ಜೆ ಗುರುತುಗಳು ಕಾಣದು!

ಆದರೆ
ನನ್ನ ಮನಸ್ಸಿನ ಹಾದಿಯಲ್ಲಿ
ಆಳಕ್ಕಿಳಿದು ಹೋದ ಕನಸುಗಳ
ನೋವು ..ನನ್ನನ್ನು
ಹಿಂಬಾಲಿಸದೆ
ಬಿಟ್ಟಿತೇ?


Leave a Comment

ನ್ಯಾನೋ ಕಥೆಗಳು

ಜಾಹೀರಾತು ಮತ್ತಿತರ ಕತೆಗಳು


ಜಾಹೀರಾತು
ಅವನ ಹಳೆಯ ಮನೆಯೆದುರಿಗಿದ್ದ ಬ್ಯಾಂಕ್ ಜಾಹೀರಾತು ಫಲಕದಲ್ಲಿ ತನ್ನ ನೆಚ್ಚಿನ ಸಿನಿಮಾ ನಟ ನಗುತ್ತ ನಿಂತಿದ್ದ . “ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಸದಾ ನಿಮ್ಮೊಂದಿಗೆ “ಎಂಬ ಒಕ್ಕಣೆಯೂ ಅಲ್ಲಿತ್ತು. ಅದನ್ನು ನೋಡಿದವನೇ ಖುಷಿಯಿಂದ ಅದೇ ಬ್ಯಾಕಿಂದ ಹೊಸ ಮನೆ ಕಟ್ಟಲು ‘ಮನೆಸಾಲ’ ಮಾಡಿದ. ವರ್ಷಗಳ ನಂತರ ಅವನಿಗೆ ಸಾಲ ಹಿಂದಿರುಗಿಸಲಾಗದೆ ಬ್ಯಾಂಕಿನವರು ಬಂದು ಮನೆ ಜಪ್ತಿ ಮಾಡಿ ಅವನನ್ನು ಹೊರಗಟ್ಟಿದರು.. ಉಮ್ಮಳಿಸಿ ಬರುವ ದುಃಖದಿಂದ ಆತ ಫಲಕವನ್ನೊಮ್ಮೆ ನೋಡಿದ.. ಅವನ ನೆಚ್ಚಿನ ನಟ ನಗುತ್ತ ನಿಂತಿದ್ದ..

ಕಾಡು ಮನುಷ್ಯ
ಆತ ಬಾಲ್ಯದಲ್ಲೇ ಮನೆಬಿಟ್ಟು ಕಾಡು ಸೇರಿ ಡಕಾಯಿತರ ಗುಂಪು ಸೇರಿದ್ದ. ಈಗ ಅವನೇ ಆ ಗುಂಪಿಗೆ ನಾಯಕ.. ಒಂದಿ ದಿನ ಕಾಡು ದಾರಿಯಿಂದ ವ್ಯಾಪಾರ ಮುಗಿಸಿ ಬರಿತ್ತಿದ್ದ ೩ ಜನರ ಗುಂಪನ್ನು ಕೊಂದು ಅವರಲ್ಲಿದ್ದ ಹಣವನ್ನೆಲ್ಲ ದೋಚಿದ..ಸಾಯುವ ವೇಳೆ ಅದರಲ್ಲಿದ್ದ ಮುದುಕನ ಆಕ್ರಂದನ ಆತನಲ್ಲಿ ಬದಲಾವಣೆಯನ್ನು ತಂದಿತ್ತು. ಆತ ಎಲ್ಲವನ್ನು ಬಿಟ್ಟು ಊರು ಕಡೆ ದಾರಿ ಹಿಡಿದ.. ಸಂತಸದಿಂದಲೇ ತನಗೆ ಮರೆತು ಹೋಗಿದ್ದ ತಂದೆ-ತಾಯಿಯ ಮುಖವನ್ನು ನೆನಪಿಗೆ ತರಲು ಪ್ರಯತ್ನಿಸುತ್ತಿದ್ದ..
ತಾಯಿಯನ್ನು ಕಂಡವನೇ ಕಾಲಿಗೆರಗಿ ಕ್ಷಮೆ ಕೇಳಿ ತನ್ನ ತಂದೆಯ ಬಗ್ಗೆ ವಿಚಾರಿಸಿದ.. ತಾಯಿ ಅಳುತ್ತ ನುಡಿದಳು..”ಮೊನ್ನೆ ಕಾಡು ದಾರಿಯಲ್ಲಿ ಬರುತ್ತಿದ್ದ ನಿಮ್ಮಪ್ಪನನ್ನು ಕಾಡು ಮನುಷ್ಯರು ಕೊಂದು ಹಾಕಿದ್ರು.. ”

ಮದುವೆ
ಮೂವರು ಸ್ನೇಹಿತರು ಕಾರಿನಲ್ಲಿ ಪ್ರವಾಸ ಹೊರಟಿದ್ದರು.. ಚಾಲಕ ವಾಯುವೇಗದಲ್ಲಿ ಕಾರನ್ನು ಓಡಿಸ ತೊಡಗಿದಾಗ ಒಬ್ಬಾತ ತಮಾಷೆಯಾಗಿ ಹೇಳಿದ “ಗುರೂ.. ಕಾರನ್ನು ಮೆಲ್ಲ ಓಡಿಸು .. ನನಗಿನ್ನೂ ‘ಮದುವೆ’ ಆಗಿಲ್ಲ “.. ಮತ್ತೊಬ್ಬ ಗಂಭೀರವಾಗಿ ಹೇಳಿದ “ಕಾರನ್ನು ಮೆಲ್ಲ ಓಡಿಸು… ನನಗೆ ‘ಮದುವೆ’ ಆಗಿದೆ “.

ಹೆಣ್ಣು
“ಅಪ್ಪಾ ಇದಿರಲಿ ಖರ್ಚಿಗೆ… ಅಣ್ಣ ಈ ವಾರನು ಬರದಿದ್ದರೆ .. ನೀನು ಇಲ್ಲೇ ಬಾ ..ಇಲ್ಲೇ ಇರೋಣ… ” ಮಗಳು ಕೊಟ್ಟ ದುಡ್ಡನ್ನು ಜೇಬಿಗಿಳಿಸುತ್ತ ಹೊರಟ ಆತನಿಗೆ “ಇಷ್ಟು ಕಷ್ಟಪಟ್ಟು ಹೆತ್ತಿದ್ದು ಹೆಣ್ಣನ್ನಾ….? ” ತಾನು ಹಿಂದೆ ಹೆಂಡತಿಗೆ ಕೇಳಿದ ಪ್ರಶ್ನೆ ಚೂರಿಯಾಗಿ ಎದೆಗೆ ತಿವಿಯುತ್ತಿತ್ತು …ಅವನರಿಯದೆ ಕಣ್ಣು ತೇವಗೊಂಡಿತ್ತು …

ಕೊಂದ ದಿನ
ಅಪ್ಪಾ..ಗಾಂಧೀ ತಾತನನ್ನು ಕೊಂದ ದಿವಸ ಯಾವುದಪ್ಪ ..? ಗೊತ್ತಿಲ್ಲ್ಲ ಮಗೂ ಇತ್ತೀಚಿಗಂತೂ ಪ್ರತೀದಿನ ಕೊಲ್ಲುತ್ತಿದ್ದೇವೆ.


Leave a Comment

ಕುರುಡ ಯಾರು ?

ಕುರುಡ ಯಾರು ?

ಅಂದು ಬೆಳಿಗ್ಗೆ ಎಂದಿಗಿಂತ ತುಸು ಬೇಗನೆ ಎದ್ದಿದ್ದೆ.. ಮನದಲ್ಲಿ ಒಂಥರಾ ಸಂಭ್ರಮದ ವಾತಾವರಣ..ಇಂದಿಗೆ ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷವಾಯ್ತು…ಖುಷಿ ಅದಕ್ಕಲ್ಲ! ಇವತ್ತು ಸಿಗುವ ಬೋನಸ್ ಮತ್ತು ಸಂಬಳದಲ್ಲಾಗುವ ಹೆಚ್ಚಳ…!
ಅದೊಂತರ ನನ್ನ ಪಾಲಿಗೆ ಡಬಲ್ ಧಮಾಕ.. ಅದಕ್ಕೆ ಮನಸ್ಸು ಹುಚ್ಚು ಕೋಡಿಯಾಗಿತ್ತು.. ಬೇಗನೆ ರೆಡಿಯಾಗಿ ಆಫೀಸಿಗೆ ಹೊರಟೆ.
ಬಸ್ಸಿನಿಂದ ಇಳಿದವನೇ ದರ ದರನೆ ಆಫೀಸಿನ ಕಡೆ ಹೆಜ್ಜೆ ಹಾಕಿದೆ. ಆಫೀಸಿಗೆ ಸೇರಿದ ಮೊದಲ ವಾರ ಮಾತ್ರ ಇಷ್ಟು ಬೇಗ ಬಂದಿರಬಹುದೇನೋ..? ಗೊತ್ತಿಲ್ಲ! ಮನಸ್ಸು ಸುಮ್ಮನಿರದೆ ಏನೇನೋ ಪರ್ಸಂಟೇಜ್ ಲೆಕ್ಕದಲ್ಲಿ calculation ಮಾಡುತ್ತಿತ್ತು!!
ಸಾರ್.. ಸಾರ್.. ಯಾರದೋ ಶಬ್ದ ನನ್ನ ಮನಸಿನ ಗುಣಾಕಾರ , ಭಾಗಾಕರಕ್ಕೆ ಭಂಗ ತಂದಿತ್ತು.. ಹಿಂದಿರುಗಿ ನೋಡಿದರೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕ ಅದೊಂದು ಚೀಟಿ ಹಿಡಿದು ಏನೋ ಕೇಳಕ್ಕೆ ಕೈ ಬೀಸಿ ಕರೆಯುತ್ತಿದ್ದ.
ಸಾರ್ … ಇಲ್ಲಿ ನಿರ್ಮಲ ಹೈ- ಸ್ಕೂಲ್ ಎಲ್ಲಿ ಬರುತ್ತೆ.. ಆತ ವಿನಮ್ರವಾಗಿ ಕೇಳಿದ.. ಹೌದು ಈ ಅಡ್ರೆಸ್ಸ್ ನಂಗೆ ಗೊತ್ತು… “ಇಲ್ಲಿಂದ .. ಸ್ಟ್ರೈಟ್ ಹೋಗಿ… ಲೆಫ್ಟ್ … ರೈಟ್…… ” ನಾನು ತಡಬಡಿಸಿದೆ.. ಮತ್ತೊಂದು ಸುತ್ತಿನ ನೆನಪು ಮಾಡಿಕೊಂಡು ಪ್ರಯತ್ನಿಸಿದೆ.. “ಸ್ಟ್ರೈಟ್ ಹೋಗಿ .. ಫಸ್ಟ್ ಲೆಫ್ಟ್ ….ಅಲ್ಲ .. ರೈಟ್…. ” ಛೆ ! ಅದ್ಯಾಕೋ ಆ ವಿಳಾಸ ಮನಸ್ಸಿಗೆ ಹತ್ತಲೇ ಇಲ್ಲ .. ಅಷ್ಟರಲ್ಲಿ ಆ ದಾರಿಯಲ್ಲಿ ಹಾದು ಬರುತ್ತಿದ್ದ ಕುರುಡನೊಬ್ಬ ನನ್ನ ಮಾತನ್ನು ಕೇಳಿಸಿದವನೇ ..”ಸಾರ್ .. ಮುಂದೆ ಸ್ಟ್ರೈಟ್ ಹೋಗಿ ಫಸ್ಟ್ ಲೆಫ್ಟ್ ತಗೊಳ್ಳಿ ಆಮೇಲೆ ರೈಟ್ ತಗೊಳ್ಳಿ.. ಅಲ್ಲೇ ಇದೆ ನಿರ್ಮಲ ಹೈ -ಸ್ಕೂಲ್ ! ”

ನನಗೆ ಬೆನ್ನಿಗೆ ಈಟಿಯಿಂದ ತಿವಿದ ಅನುಭವ. ಒಂದು ವರ್ಷದಿಂದ ಇದೇ ದಾರಿಯಲ್ಲಿ ಹೋಗುತ್ತಿದ್ದೇನೆ .. ಬರುತ್ತೇನೆ… ಆದರೂ ನನ್ನಿಂದ ಆ ವಿಳಾಸವನ್ನು ಹೇಳಲಾಗಲಿಲ್ಲ.. ಆದರೆ ಇವನು ಕುರುಡ… ಬರ ಬರನೆ ಹೇಳಿಬಿಟ್ಟ.. ಜಗದ ಪಾಲಿಗೆ ನಾನು ಕಣ್ಣಿದ್ದೂ ಕುರುಡನಾದೆ… ಒಂದು ವರ್ಷದಿಂದ ಹಾದು ಹೋಗುವ ದಾರಿಯ ಅಕ್ಕ ಪಕ್ಕವನ್ನು ಗುರುತಿಸುವಷ್ಟು ವಿವೇಚನೆ ಇಲ್ಲದ ನಾನು .. ವರ್ಷದ ಬೋನಸ್ ಗೆ ಅರ್ಹನೇ…ಮನಸ್ಸು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಲೇ ಇತ್ತು.. ಮನಸಿನ ಸಂಭ್ರಮವು ಮಾಸಿತ್ತು..
ಮುಂದಿನ ಪ್ರತಿಯೊಂದು ಹೆಜ್ಜೆಯೂ ನನಗೆ ಭಾರವಾಗುತ್ತಾ ಹೋಯಿತು..


Leave a Comment

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು


ದುಬಾರಿ ಕಸ
ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು…’ಇದರಲ್ಲೂ ಹಾಕುವ ಕಸವು ಅಷ್ಟೇ “ದುಬಾರಿಯದ್ದಾಗಿರಬೇಕು”…’ ಮತ್ತೊಬ್ಬ ಹೌದೆನ್ನುತ್ತ ತಲೆಯಾಡಿಸಿದ.. ಮರುದಿನ ಬೆಳಿಗ್ಗೆ ಕಸದೊಂದಿಗೆ ಆಗಷ್ಟೇ ಹುಟ್ಟಿದ ನವ ಜಾತ ಹೆಣ್ಣು ಮಗು ಸಿಕ್ಕಿತ್ತು.

ಹಣ

ಆತ ಮದುವೆಯಾಗಿ ೬ ತಿಂಗಳಾಗುವಷ್ಟರಲ್ಲಿ ಉದ್ಯೋಗ ಅರಸಿ ದುಬೈಗೆ ಹೊರಟ. ಕೈ ತುಂಬಾ ಸಂಬಳದ ಕೆಲಸವೊಂದು ಸಿಕ್ಕಿತ್ತು.. ಒಂದು ವರ್ಷದಲ್ಲೇ ತನ್ನದೇ ಆದ ಬಿಸಿನೆಸ್ ಆರಂಭಿಸಿದ. ನೋಡ ನೋಡುತ್ತಲೇ ಆತ ಕೊಟ್ಯಾದಿಪತಿಯಾದ .. ವರ್ಷಗಳ ನಂತರ ಕೈ ತುಂಬು ದುಡ್ದೊಂದಿಗೆ ಆತ ಆತ ಊರಿಗೆ ಹೊರಟಿದ್ದ . ತನ್ನ ಹೆಂಡತಿಯ ಜೊತೆಗಿದ್ದ ಹಾಲುಗಲ್ಲದ ಮಗು ಆತನ್ನು ನೋಡಿದವನೇ ಕೈ ತೋರಿಸಿ “ಇದ್ಯಾರಮ್ಮ ” ಅಂತ ಕೇಳಿದ.. ಆತನಿಗೆ ಮೊತ್ತ ಮೊದಲಾಗಿ ಹಣದ ಮೇಲೆ ಜಿಗುಪ್ಸೆ ಹುಟ್ಟಿತು.

ವಿಚಿತ್ರ
ಫೇಸ್ ಬುಕ್ ನಲ್ಲಿ ಸಿಕ್ಕ ಸಿಕ್ಕವರ ವಾಲ್ ಮೇಲೆ ಪೋಸ್ಟ್ ಮಾಡಿದ ಅವನು .. ತನ್ನ ಸ್ವಂತ ಮನೆಯ ಗೋಡೆ ಮೇಲೆ ತನ್ನ ಮಗ ಕರಿ ಹಲಗೆಯಿಂದ ಚಿತ್ರ ಗೀಚಿದ್ದನ್ನು ನೋಡಿ ಕೆಂಡಾಮಂಡಲನಾದ .

ನಂಬಿಕೆ
‘ನಂಬಿಕೆಯೇ ದಾಂಪತ್ಯದ ಬುನಾದಿ’. ಧರ್ಮ ಗುರುಗಳು ದಾಂಪತ್ಯದ ಬಗ್ಗೆ ಉಪನ್ಯಾಸ ನೀಡುತ್ತಾ ನುಡಿದರು . ಹೌದು .. ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆ.. ಸಭಿಕರಲ್ಲೊಬ್ಬ ಪಿಸುಗುಟ್ಟಿದ.

ವಿಪರ್ಯಾಸ
ಬೋಳು ತಲೆಯವ ತನಗಾಗಿ ಹೆಣ್ಣು ನೋಡಲು ಹೋಗಿ .. ಹುಡುಗಿಯ ಕೂದಲು ಉದ್ದವಿಲ್ಲವೆಂದು ತಿರಸ್ಕರಿಸಿ ಬಂದಿದ್ದ..


Leave a Comment

ಹುಸೇನಿ ಪದ್ಯಗಳು - 4 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 4

ನೀನಿಲ್ಲದೆ
ಬದುಕುವ
ಬವಣೆಯ
ನೆನೆದು ….
ಒಂಟಿತನ
ನೀಗಲು ನಿನ್ನ
ನೆನಪಿನ ಜೊತೆ
ಹೊರಟಿದ್ದೇನೆ..——–

ನಿನ್ನ ನೆನಪಿನ
ತನ್ಮಯತೆಯಿಂದ
ನನಗರಿಯದೆ
ಕಣ್ಣಿಂದ
ಜಾರಿಬಿದ್ದ
ಹನಿಯಲ್ಲೂ
ನಿನ್ನ ಸ್ಪರ್ಶದ
ಅನುಭೂತಿಯಿತ್ತು….!!

——–

ಹೃದಯವ ಅಡವಿಟ್ಟು
ಪ್ರೀತಿಯ ಖರೀದಿಗೆ
ಹೊರಟೆ..
ಆದರೆ..
ಈಗ ತಿಳಿಯಿತು..
ಹೃದಯವಿಲ್ಲದವನಿಗೆ
ಪ್ರೀತಿ
ಸಿಗಲಾರದೆಂದು…

———–

ಇನ್ನೂ ನಾನು
ಪ್ರೀತಿಸುತ್ತೇನೆ..
ನಿನ್ನನ್ನೋ..
ನೀ ಕೊಟ್ಟ
ಸಕ್ಕರೆ
ನೆನಪುಗಳನ್ನೋ..
ಗೊಂದಲವಿದೆ!


Leave a Comment

ನ್ಯಾನೋ ಕಥೆಗಳು

ತಾಯಿ – ಮಗ

ತನ್ನ ಮಗನು ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬಡ್ತಿ ಪಡೆದ ಖುಷಿಯಲ್ಲಿ ಆಕೆ ತನ್ನವರಿಗೆಲ್ಲರಿಗೂ ಸಿಹಿ ಹಂಚುತ್ತಿದ್ದಳು.. “ಎಲ್ಲರು ಒಳಗೆ ಬನ್ನಿ ವ್ಯಾಯಾಮದ ಸಮಯವಾಯ್ತು” ಆ ಕೂಡಲೇ ಒಳಗಿಂದ ಬಂಗ ಕೂಗಿಗೆ ಓಗೊಟ್ಟ ಅವರೆಲ್ಲರೂ ಎದ್ದು “ವೃದ್ದಾಶ್ರಮದ” ಒಳಹೊಕ್ಕರು.


Leave a Comment

ನ್ಯಾನೋ ಕಥೆಗಳು

ಗೊಂದಲ

ಈ ಇಳಿ ವಯಸ್ಸಿನಲ್ಲೂ ಅವರು ಕ್ರಿಕೆಟ್ ಅಭಿಮಾನಿ.. ಮಿಗಿಲಾಗಿ ತನ್ನ ಹುಟ್ಟೂರು ಬಗ್ಗೆ ತುಂಬು ಅಭಿಮಾನವನ್ನು ಹೊಂದಿದ್ದರು .. ಭಾರತ – ಪಾಕಿಸ್ತಾನ – ಬಾಂಗ್ಲಾದೇಶ ತ್ರಿಕೋಣ ಕ್ರಿಕೆಟ್ ಸರಣಿ ನಡೆಯುವ ವೇಳೆ ತಾನು ಯಾವ ದೇಶಕ್ಕೆ ಸಪೋರ್ಟ್ ಕೊಡಬೇಕೆಂಬ ವಿಚಾರದಲ್ಲಿ ಅವರಿಗೆ ಎಲ್ಲಿಲ್ಲದ ಗೊಂದಲ.
ಅವರು ಹುಟ್ಟೂರು ಸ್ವಾತಂತ್ರ ಪೂರ್ವದಲ್ಲಿ ಭಾರತದಲ್ಲಾದರೆ , ಅನಂತರ ಪಾಕಿಸ್ತಾನವಾಯ್ತು. ಈಗ ಅದು ಬಾಂಗ್ಲಾದೇಶದ ಒಂದು ಭಾಗ..!!


Leave a Comment

ನ್ಯಾನೋ ಕಥೆಗಳು

ಕ್ಷಮೆ

ಅಂಗಳದಲ್ಲಿ ಆಟವಾಡುತ್ತಿದ್ದ ತನ್ನ ಮುದ್ದು ಮಗಳು ಜೋರಾಗಿ ಎಸೆದ ಕಲ್ಲು ತಂದೆಯ ಹಣೆಗೆ ಬಡಿಯಿತು. “ಅಪ್ಪಾ… ಇದೊಂದು ಸಾರಿ ಕ್ಷಮಿಸಪ್ಪ…” ಹೆದರಿ ಅಳುತ್ತಿದ್ದ ಮಗಳ ಮುಗ್ದತನದ ಮಾತುಗನನ್ನು ಕೇಳಿ ಆತ ಗಲ್ಲವನ್ನು ಚಿವುಟುತ್ತ ಮಗಳನ್ನು ಕ್ಷಮಿಸಿದ್ದ . ವರ್ಷಗಳ ನಂತರ ಅದೇ ಮಗಳು ತಾನು ಪ್ರೀತಿಸಿದ ಹುಡುಗನ ಜೊತೆ ಯಾರಿಗೂ ತಿಳಿಯದಂತೆ ರಿಜಿಸ್ಟ್ರಾರ್ ಮದುವೆಯಾಗಿ ಅಪ್ಪನ ಬಳಿ ಬಂದಿದ್ದಳು. ಕೆಂಪಾದ ಅಪ್ಪನ ಮುಖ ನೋಡಿದವಳೇ ಅಳುತ್ತ ನುಡಿದಳು ” ಅಪ್ಪಾ… ಇದೊಂದು ಸಾರಿ ಕ್ಷಮಿಸಪ್ಪ.. “..
ಈ ಬಾರಿ ಅಪ್ಪ ಕ್ಷಮಿಸಲಿಲ್ಲ..


Leave a Comment

ನ್ಯಾನೋ ಕಥೆಗಳು

ಬೆನ್ನಲುಬು

ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು.


Leave a Comment