ಹುಸೇನಿ ಪದ್ಯಗಳು - 27 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 27

bird mirror painting

1)
ಆ ಹೆದ್ದಾರಿ ಬದಿಯ ಪಾರ್ಕಿನ ಕಲ್ಲು-ಹಾಸಿನ
ಮೇಲೆ ಜಗದ ಪರಿವಿಲ್ಲದ ಜೋಡಿಯೊಂದು
ಪ್ರಣಯಾಟದಲ್ಲಿ ಮೈ ಮರೆತಿದೆ.
ಅವರನ್ನು ದಾಟಿ ಹೋದ ಆ ಮುದುಕನ
ಎದೆ-ಬಯಲೊಳಗೆ ಬಿರಿದ ಸಾವಿರ ಹೂವುಗಳು!
2)
ತನ್ನದೇ ಬಿಂಬವನ್ನು ಶತ್ರುವೆಂದುಕೊಂಡ ಹಕ್ಕಿ
ಕನ್ನಡಿಯನ್ನು ಕುಕ್ಕಿ ಕುಕ್ಕಿ ಪುಡಿಮಾಡಿತು
ಗಾಜಿನ ಚೂರಲ್ಲೆಲ್ಲ ಶತ್ರುಗಳ ಪಡೆಯನ್ನು
ಕಂಡದ್ದೇ ತಡ – ಬದುಕಿದೆಯಾ ಬಡ ಜೀವವೇ
ಎಂದು ಹಾರಿ ಹೋಯಿತು.
3)
ನಿನ್ನ ಕಣ್ರೆಪ್ಪೆಯಂತೆ ಕಾಪಾಡುತ್ತೇನೆ
ಅಂತ ಕವಿತೆ ಕಟ್ಟುತ್ತಿದ್ದವನ
ಕಣ್ಣಂಚಿನಲಿ ಕರಗುವ ನಿರಾಸೆಯ
ಹನಿಗಳಲಿ ಅವಳು ಜಿನುಗುತ್ತಿದ್ದಳು.

4)
ಬಂಜೆ ಎಂದು ಮೂದಲಿಸಿದರು ಜನ
“ನಾನೇ ನಿನ್ನ ಮಗು” ಅಂದವನೇ ಅವಳ
ಮಡಿಲ ಮೇಲೆ ಮಗುವಾದ, ಲೋಕದ
ಸಮಸ್ತ ತಾಯ್ತನ ಅವಳ ಎದೆಗರ್ಭವ ಹೊಕ್ಕಿತು…

_ಹುಸೇನಿ

Leave a comment