ತೊರೆಯ ತೀರದ ನೆನಪುಗಳು

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..


kagaj-1

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.

kagaj-2



ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.

kagaj-3

ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು…
ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ…
ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ…
ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”

ಹುಸೇನಿ ~

Leave a comment

One thought on “ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

Leave a comment