ಅಪೂರ್ಣ ಸಾಲುಗಳು .. 2 · Kannada barahagalu

ಅಪೂರ್ಣ ಸಾಲುಗಳು .. 2

ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …
ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ ನಂತರದ ಭಾವ-ಭಂಗತೆಯೋ ಕಾರಣವಾಗಿರಬಹುದಾದ ಈ ಅಪೂರ್ಣಸಾಲುಗಳಿಗೆ ಮುಕ್ತಿ ಕೊಡುತ್ತಿದ್ದೇನೆ 😂🙏

ಅಪೂರ್ಣ ಸಾಲುಗಳು -1 ನ್ನು ಈ ಲಿಂಕಿನಲ್ಲಿ ಓದಬಹುದು

[ಮೊದಲೇ ಹೇಳಿದಂತೆ ಇಲ್ಲಿರುವ ಒಂದೊಂದು ಬರಹಗಳು ಅಪೂರ್ಣ. ಆ ಕಾರಣಕ್ಕೆ ಇಲ್ಲಿನ ಭಾವಗಳೂ ಪೂರ್ಣವಾಗಿಲ್ಲವೆಂದು ಇನ್ನೊಮ್ಮೆ ನೆನಪಿಸುತ್ತೇನೆ]

೧.
ಇನ್ನು ಒಂದು ಜನ್ಮವಿರಬಹುದೇ…? ಇದ್ದರೆ ಒಂದು ಹೂವಿನ ಎಸಳುಗಳಾಗಿ ನಾವು ಹುಟ್ಟಬೇಕು.. ವಸಂತವು ನಮ್ಮನ್ನು ನೋಡಿ ಅಸೂಯೆಪಡಬೇಕು… ಕಾಲ ನಮ್ಮನ್ನು ನೋಡಿ ಮಂದಹಾಸ ಬೀರಬೇಕು.. ಒಂದು ದಿನ ಬಿಸಿಲ ಬೇಗೆಯಲ್ಲಿ
ನಾನು ಬಾಡಿ ಹೋಗಲು.. ನೆನಪಿಗಾಗಿ ನೀನು ಒಂದಿಷ್ಟು ಕಣ್ಣೀರು ಹರಿಸಬೇಕು.. ಅದಲ್ಲವೇ “ಪ್ರೀತಿ ಬಂಧನ “…

೨.
ಕನಸುತ್ತೇನೆ  .. ಸಂಭ್ರಮಿಸುತ್ತೇನೆ .. ಮತ್ತೆಲ್ಲದರ ಹಾಗೆ ನಿರಂತರತೆಯನ್ನು ಕಾಯ್ದುಕೊಳ್ಳದ ಬದುಕಿನ ಪ್ರತೀ ಮಜಲಿನೊಂದಿಗೆ ಅವಿನಾಭಾವತೆಯನ್ನು ಬೆಳೆಸಲು ಪ್ರಯತ್ನಿಸುತ್ತೇನೆ… ಬದುಕೆಂದರೆ ನಿರಂತರ ಚಲನೆಯಲ್ಲವೇ ? ಹೌದು .. ಗೋಚರಿಸದ ಇಲೆಕ್ಟ್ರಾನುಗಳು ತಮ್ಮ ಪರಮಾಣು ಬೀಜದ ಸುತ್ತ, ನಾವು ಇರುವ ಭೂಮಿಸೂರ್ಯನ ಸುತ್ತ, ಸೂರ್ಯ ತನ್ನ ಅಕ್ಷದ ಸುತ್ತ ಮತ್ತು ತನ್ನ ಪರಿವಾರ ಸಮೇತ ಬ್ರಹ್ಮಾಂಡ ಅಥವ ಗೆಲಕ್ಸಿಯ ಕೇಂದ್ರದ ಸುತ್ತ, ಪ್ರತೀ ಗೆಲಕ್ಸಿ ಇತರ ಗೆಲಕ್ಸಿಗಳಿಂದ ದೂರಕ್ಕೆ , ಹೀಗೆ ವಿಶ್ವದಲ್ಲಿ ಘಟಿಸುವ ಪ್ರತಿಯೊಂದರ ಬುನಾದಿಯಲ್ಲಿ ಇರುವ ವಿದ್ಯಮಾನವೇ ಚಲನೆ. ಅಂಥಹ ಚಲನೆಗಳ ಒಟ್ಟು ಮೊತ್ತ ಫಲಿತಾಂಶವೇ ಬದುಕು.

೩.
ಕಡುಗಪ್ಪು ತುಂಬಿದ
ನನ್ನ ಬಾಳಲ್ಲಿ,
ದೀವಟಿಗೆಯ ಹಿಡಿದು
ಬೆಳಕ ಚೆಲ್ಲಿದವಳು..
ಆ ಬೆಳಕಿಗೇ
ಮರುಳಾದೆನು..
ದೀಪದ ಕೆಳಗಿನ
ತಮವ ಅರಿಯದಾದೆನು..

ನಸುನಕ್ಕು ನನ್ನೆದೆಯ 
ಬಾಂದಳದ  ಶಶಿಯಾದಳು..
ಆ ಶಶಿಯ ನಿಶೆಗೆ 
ಮರುಳಾದೆನು 
ತಪ್ಪದೇ ಬರುವ 
ಅಮಾವಾಸ್ಯೆಯ
ತಿಳಿಯದಾದೆನು…
(ಪೇಲವತನಕ್ಕೆ ಕ್ಷಮೆಯಿರಲಿ 😄🙏 ತುಂಬಾ ಹಳೇದು )

೪.
ಮೋಹದ ನಿನ್ನ
ಹಸಿ ಕನಸುಗಳಿಗೆ
ಸಾಲುಗಳು ಕೂಡುವುದೇ ಇಲ್ಲ ರೂಹೀ

ಬಾ..
ಎದೆಗಿಳಿದು ಕವಿತೆಯಾಗಿಬಿಡು
ನಿನ್ನ ಸಾಲುಗಳ ಸಾಲಕ್ಕೆ
ನನ್ನ ಬದುಕ ಅಡವಿಟ್ಟುಬಿಡುತ್ತೇನೆ..

೫.
ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ.
ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ.

~ಹುಸೇನಿ