ಅವನು ಘೋರಿಯಲ್ಲಿ ..!

ಅವನು ಘೋರಿಯಲ್ಲಿ ..!

ಕೆಲವು ಹೂವುಗಳು ಅವಳ ಮೇಲೆ ಬಿದ್ದವು..
ಕೆಲವು ಅವನ ಮೇಲೆಯೂ..
ಆದರೆ..ಒಂದೇ ವ್ಯತ್ಯಾಸ,
ಅವಳು ಮಧುಮಂಚದಲ್ಲಿ,
ಅವನು ಘೋರಿಯಲ್ಲಿ ..!
ಹನಿಗಳು ಮಾತ್ರ..!

ಹನಿಗಳು ಮಾತ್ರ..!

ಅವಳಲ್ಲಿ ಹೇಳಲು ಉಳಿದು ಹೋದ
ಮಾತುಗಳನ್ನು ಮೌನವು ಎರವಲು
ಪಡೆದಾಗ,
ನನ್ನಲ್ಲಿ ಉಳಿದದ್ದು
ಕಣ್ಣು ಕೂಡ ಕೈ ಬಿಟ್ಟ
ಹನಿಗಳು ಮಾತ್ರ..!
ತೀರಗಳ ನಡುವಿನ ದೂರ..

ತೀರಗಳ ನಡುವಿನ ದೂರ..

ನಮ್ಮ ನಡುವೆ ಅಲೆಯೆಬ್ಬಿಸುವುದು
ಪ್ರೀತಿಯ ಸಮುದ್ರವೆಂದು ಅವಳು
ಗೊಣಗುಟ್ಟಿದಾಗ ನಾನು
ಭಯಭೀತನಾದೆ..!
ತೀರಗಳ ನಡುವಿನ ಅಂತರ ನೆನೆದು..!
ಕನಸ್ಸಲ್ಲಿ ಮಾತ್ರ

ಕನಸ್ಸಲ್ಲಿ ಮಾತ್ರ..!


                                   ಕನಸು ಅಂದರೇನು
                                   ಕೇಳಿದ್ದೆ ನಾನು
                                   ಇಂದು ಕಣ್ಣು ಮುಚ್ಚಲು ನಿನ್ನ ಮನಸ್ಸಲ್ಲಿ
                                   ಮೂಡುವ ಮೊಗ
                                   ನಾಳೆ ನಿನ್ನ ಕನಸು ಎಂದಿದ್ದಳು ಅವಳು
                                   ನಿಜ..!
                                   ಇಂದು ಅವಳು ನನ್ನವಳು!
                                   ಕೇವಲ ಕನಸ್ಸಲ್ಲಿ ಮಾತ್ರ..!

ನನಗೆ ಅರಿವಿಲ್ಲವೆಂದು..

ನನಗೆ ಅರಿವಿಲ್ಲವೆಂದು..

ಸಾಯಂ ಸಂದ್ಯೆಯ ಏಕಾಂತತೆಯಲ್ಲಿ
ಅವಳು ಕೇಳಿದಳು…
ಇನ್ನೆಷ್ಟು ಕಾಲ ನನ್ನ ಪ್ರೀತಿಸುವೆ ಎಂದು..

ಸಲ್ಲದ ಮೌನವ ಮುರಿದು ಮೊಗೆದೆ
ನನ್ನ ಮರಣ ದಿನ ನನಗರಿವಿಲ್ಲವೆಂದು …!

ಕಣ್ಣೀರಾಗಿ ಜನಿಸುವೆ..

ಕಣ್ಣೀರಾಗಿ ಜನಿಸುವೆ..

ಗೆಳತೀ,
ಇನ್ನೂ ಒಂದು ಜನ್ಮವಿರುವುದಾದರೆ
ನಿನ್ನ ಕಣ್ಣೀರಾಗಿ ಜನಿಸುವೆ
ಕಾರಣ
ನಿನ್ನ ಮನಸ್ಸಿನ ಅಣತಿಯಂತೆ
ಕಣ್ಣಲ್ಲಿ ಜನಿಸಿ
ಮೃದು ಕೆನ್ನೆಯ ಸವರಿ
ನಿನ್ನ ಮಡಿಲಲ್ಲಿ ಬಿದ್ದು ಸಾಯಬಹುದಲ್ಲವೇ ?
ಹೇಗೆ ತಾನೇ ಪ್ರೀತಿಸಲಿ ?

ಹೇಗೆ ತಾನೇ ಪ್ರೀತಿಸಲಿ ?


ನಿನಗಾಗಿ ನಾನು ಮೀಸಲಿಟ್ಟದ್ದು ನನ್ನ ಜೀವನವಾಗಿತ್ತು..
ನಮ್ಮ ಭೇಟಿಯಲ್ಲೂ, ಪತ್ರದಲ್ಲೂ, ಮಧ್ಯ ರಾತ್ರಿಯ ಹೊತ್ತಿನ ಮೊಬೈಲ್ ಚಾಟಿಂಗ್ನಲ್ಲೂ, ‘ನೀನು ನನಗೆ ಇಷ್ಟ ಕಣೋ..’ ಅಂತ ಪ್ರತೀ ಬಾರಿ ನೀನು ಹೇಳಿದಾಗಳೆಲ್ಲ, ಹೃದಯಾಂತರಾಳದಿಂದ ಅದಕ್ಕೆ ಉತ್ತರವಾಗಿ ನಾನು ನಿನ್ನ ಕೈಯಲ್ಲಿತ್ತದ್ದು ನನ್ನ ಜೀವನವಾಗಿತ್ತು. ನಿನ್ನೊಂದಿಗಿನ ಬಣ್ಣದ ಬದುಕನ್ನು ಕನಸಾಗಿ ಕಂಡು ನನಸಾಗುವ ದಿನವ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನನ್ನ ಜೀವನ!. ಆ ಜೀವದ ಉಸಿರಾಗಿದ್ದೆ ನೀನು, ಬಯಕೆಯಾಗಿದ್ದೆ, ಜೀವ ಚೈತನ್ಯವೂ, ಜೀವ ಸ್ಪಂದನವೂ ನೀನೇ ಆಗಿದ್ದೆ.

ಕನಸುಗಳ ಕಡಲಾಳದಿಂದ ಪ್ರಣಯದ ಮುತ್ತನ್ನು ಹುಡುಕಿ ಹೊರಟ ನನ್ನ ಪಯಣದಲ್ಲಿ ಮನುಷ್ಯ ಮನಸ್ಸುಗಳು ಇಂದು ಸುರಿದ ಮಳೆಗೆ ತಲೆ ಎತ್ತಿ ಮತ್ತೆ ಇಲ್ಲದಾಗುವ ಅಣಬೆಯಂತೆ ಎಂದು ಕಲಿಸಿಕೊಟ್ಟು ಭಯಾನಕವಾದ ಏಕಾಂತತೆಗೆ ನೀನು ನನ್ನನ್ನು ತಳ್ಳಿ ಬಿಟ್ಟು ಹೋದಾಗ ನಷ್ಟ ಕನಸುಗಳನ್ನು ನೆನೆದು, ಕಳೆದು ಹೋದ ನನ್ನ ಜೀವನವನ್ನು ನೆನೆದು, ನಿನ್ನನ್ನು ನೆನೆದು ನಾನು ತುಂಬಾ ಅತ್ತಿದ್ದೇನೆ.
ಕಳೆದುಹೋದುದನ್ನೆಲ್ಲಾ ಒಂದು ಹಗಲು ಕನಸಂತೆ ಮರೆಯುವ ವೇಳೆಯೂ, ಉಕ್ಕಿ ಬರುವ ಕೋಪದಿಂದ ಕೈಗೆಟುಕುವ ವಸ್ತುಗಳನ್ನೆಲ್ಲ ಎತ್ತಿ ಎಸೆಯುವ ವೇಳೆಯೂ, ನಾನು ನಿನ್ನ ಕೈಯಲ್ಲಿತ್ತ ನನ್ನ ಜೀವನವೂ ಕೆಳಗೆ ಬಿದ್ದು ಹೋಯಿತು ಎಂದು ನಿನಗೆ ಗೊತ್ತಾಯಿತೋ ? ಅಲ್ಲ, ಗೊತ್ತಿದ್ದೂ ಗೊತ್ತಿಲ್ಲದಂತೆ ಭಾವಾಭಿನಯವೋ?
ಅದೇನೆ ಆಗಿದ್ದರೂ ಚದುರಿದ ಕನಸಿನೊಂದಿಗೆ ನಾಳೆಯೆಂಬ ಬಯಕೆ ಇಲ್ಲದ ದಿನಗಳಲ್ಲಿ ಎದೆ ಬಡಿತವಿಲ್ಲದ ಜಡ ದೇಹದೊಂದಿಗೆ ಬದುಕಬೇಕಾದ ನನಗಿಂದು ಸಾಯಲು ಭಯವಿಲ್ಲ .

ಇರುವುದೊಂದೇ ಭಯ !!

ನೀನು ಇನ್ನು ಮತ್ಯಾರನ್ನೋ ಪ್ರೀತಿಸಲು ನಾನು ಕಳೆದುಕೊಳ್ಳುವುದು ನನ್ನ ಆತ್ಮವನ್ನಾಗಿದೆ. ಅದು ಕೂಡ ನನ್ನ ಜೊತೆಯಿಲ್ಲದಿದ್ದರೆ, ಮೊದಲ ಮಳೆಗೆ ಪುಳಕಿತಗೊಂಡ ಮಗುವಂತೆ ಜಗಮರೆತು ಹಾಡಿ ನಲಿಯುವ ನಿನ್ನ ಬಾನಂಗಳದ ಮೇಘಗಳ ಸೆರಗಲಿ ನಿಂತು ನಾನು ಹೇಗೆ ತಾನೆ ನೋಡಲಿ?
ಹೇಗೆ ತಾನೇ ಪ್ರೀತಿಸಲಿ ?