ಪ್ರತೀ ಸಂಜೆ...! · ಮತ್ತೆ ಸಂಜೆಯಾಗುತ್ತಿದೆ.. · ಯಾ ರೂಹಿ .... · ರೂಹೀ

kannada Love Letter – kannada Quotes

ಪ್ರತೀ ಸಂಜೆ…!

ಹೇಯ್ ಹುಡುಗಿ.. !
ಈ ಕೊಳದ ದಂಡೆಯಲ್ಲಿ ಇಂದೂ ಕಾದು ಕುಳಿತಿದ್ದೇನೆ. ಎದೆಯ ನೋವು ನಲಿವು,ಆರ್ದ್ರತೆ, ಸಂತಸ, ಸಂಭ್ರಮವನ್ನೆಲ್ಲ ನಿನ್ನಲ್ಲಿ ಹರವಿ ಈ ಕ್ಷಣ ‘ಜೀವಿಸಲು’ಕಾಯುವ ಘಳಿಗೆ ಇದು.ಕೈಯೊಳಗೆ ಕೈ ಪೋಣಿಸಿ ಬೆರಳುಗಳ ಮಧ್ಯದ ಖಾಲಿತನವನ್ನೂ ತುಂಬುವ ಆ ಹೊತ್ತನ್ನು ನೆನೆಯುವಾಗೆಲ್ಲ ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಖುಶಿ ಪಡುತ್ತಿದೆ. ಆ ಕ್ಷಣ….ಆ ಕ್ಷಣಗಳಷ್ಟೇ ನಾನು ಜೀವಿಸುತ್ತೇನೆ. ಈ ಅಲ್ಪನ ಮನಸಿನ ಒಳ ಪದರದ ಅಂಚಂಚಲ್ಲು ಅಳಿಸಲಾಗದ ಭಾವದುಂಧುಬಿ ತುಂಬುವ ಅಮೂರ್ತ ಕ್ಷಣವದು. ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ನಾ ಕಾತರಿಸಿಹೆನು. ಅಲ್ಲೇ ಆ ನಿನ್ನ ಕಣ್ಣ ಕೊಳದಲ್ಲಿ ಇಳಿದು ಬಿಡುವಾಸೆ. ಮತ್ತೊಮ್ಮೆಯೂ ಮೆಲೇರಲಾಗದಂತೆ.. ನಿನ್ನ ಆರ್ದ್ರ ನೋಟದಂಚಲಿ ಮೂಡುವ ಮಂದಸ್ಮಿಥ ನನ್ನೊಳಗೆ ತುಂಬುವ ಸ್ಥಾಯೀ ಭಾವ ನನ್ನ ಜೀವಧಾತು.. ಆ ಒಂದು ಕಿರು ನಗೆ ನನ್ನೊಳಗೆ ಮುತ್ತಾಗಿ ಹೊಳೆಯುವಾಗೆಲ್ಲ ನನ್ನನ್ನೇ ನಾನು ಕಂಡುಕೊಳ್ಳುತ್ತೇನೆ… ಹೀಗೆ ನಿನ್ನ ಕಾಯುತ್ತಾ ಕಾಯುತ್ತಾ ವಿಷಣ್ಣ ಭಾವದ ಶೃಂಗದಲ್ಲಿ ಕುಳಿತು ನನ್ನೊಂದಿಗೆ ನನ್ನ ಸ್ವಗತ ಸಾಗುತ್ತದೆ… ಪ್ರತೀ ಸಂಜೆ…!

~ಹುಸೇನಿ

ರೂಹೀ · ರೂಹೀ -3

ರೂಹೀ -3

a-rainbow_and_flower-802407

ಮಳೆ-ಬಿಸಿಲು ಸೇರಿ
ಕಾಮನಬಿಲ್ಲು ಮೂಡುವ ಪರಿಗೆ
ಅಚ್ಚರಿಗೊಳ್ಳುತ್ತೇನೆ;
ನಾ ಸಿಕ್ಕ ಘಳಿಗೆ
ನಿನದೊಂದು ಮುಗುಳ್ನಗುವಿಗೇ
ಹೂವಿನ ಮೊಗ್ಗೊಂದು ಬಿರಿದು
ನನ್ನೆದೆ ಬಾಂದಳದಿ ಚಿತ್ರೋಧ್ಯಾನ ಧೇನಿಸುತ್ತದೆ…
ಮಳೆಬಿಲ್ಲೂ ಅಲ್ಲಿ ಸೋಲುತ್ತದೆ..

~ ಹುಸೇನಿ

Leave a comment

ರೂಹೀ · ರೂಹೀ -2

ರೂಹೀ -2

fire-nenapinasanchi

ಒಡೆದ
ಎದೆಗೂಡಿನ ಚೂರುಗಳು..
ಆರಿಸಲೂ ಆಗದೇ ಚಡಪಡಿಸುತ್ತಾ ಸದ್ದಿಲ್ಲದೆ
ದಿಟ್ಟಿಸುತ್ತಿದ್ದೇನೆ ವಿವಶನಾಗಿ..

ಮತ್ತೆ ಜೋಡಿಸಬೇಕು… ಈ ಸಜೀವ ಒಡಪಿನಲ್ಲಿ
ಅಸಹನೀಯ ನೋವಿದೆ..
ಅಲ್ಲಿ ನೀನು.. ಇಲ್ಲಿ ನಾನು, ಮಧ್ಯೆಗಿನ ಬೆಂಕಿಯ ದಾಟಿ
ನಿನ್ನ ಕರಗಳನ್ನೊಮ್ಮೆ ಚಾಚಿಬಿಡು ರೂಹೀ..
ರುಧಿರ ಹೆಪ್ಪಾಗುವ ಮುನ್ನವೇ…

ನನ್ನ ಸೇರುವ ಅತಿ ಮೋಹದಲಿ ಬೆಂಕಿಕುಂಡಕ್ಕೆ
ನೆಗೆದು ನೀ ಮೈ ಸುಟ್ಟಿದ್ದೆ ಬಂತು;
ಉರಿಯ ತಾಳಲಾರದೆ ನೀರಿನಾಳಕ್ಕೆ ಧುಮುಕಿ
ಮತ್ತೆ ಏಳುವಾಗಿನ ನಿರೀಕ್ಷೆಯೇ ಬಾಳು…

… ನಾನಿನ್ನೂ ನಿರೀಕ್ಷೆಯನ್ನು ನುಂಗಿ ಬದುಕುತ್ತೇನೆ;
ಸಾಂತ್ವನಕ್ಕೆ ವಿರಹವನ್ನೇ ತಬ್ಬಿಕೊಂಡಿದ್ದೇನೆ…
ನೀ ಬೆಂಕಿಯಾ ದಾಟಿ ಬರುವ ದಿನದಿಂದ
ಮತ್ತೆ ಬದುಕಿಗೆ ಜೀವ ತುಂಬುತ್ತೇನೆ….

~ಹುಸೇನಿ

Leave a comment

ಕಾಡುವ ಹನಿಗಳು · ನೆನಪಿನ ಹನಿ · ರೂಹೀ · ರೂಹೀ -1 · ಹುಸೇನಿ_ಪದ್ಯಗಳು

ರೂಹೀ -1

seed3

ಬೀಜವೊಂದು ಮೊಳಕೆ-
ಯೊಡೆದು ಮರವಾಗಿ ಹಬ್ಬುವುದು
ನೋಡಿ ಮೂಕವಿಸ್ಮಿತನಾಗುತ್ತೇನೆ;
ಅಪರಾತ್ರಿಯಲ್ಲೊಮ್ಮೆ ನೀನು ನೆನಪಾಗುತೀಯ ..
ಹೂತಿಟ್ಟ ಕನಸೊಂದು ಕೆದರಿ ಗರ್ಭಕಟ್ಟಿ
ಟಿಸಿಲೊಡೆದು ಬದುಕಿನ ಹಾದಿ ತೋರಿಸುತ್ತದೆ;
ಬೀಜ-ಮೊಳಕೆ ವಿಜ್ಞಾನವೂ ಅಲ್ಲಿ ಸೋಲುತ್ತದೆ..

~ಹುಸೇನಿ

Leave a comment