ಬ್ಲೂ ವೇವ್ಸ್ : ನಿಕ್ಷೇಪ -2014

ಎಲೆಮರೆಯ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್-ನ ಮೊದಲ ಹೆಜ್ಜೆ ‘ನಿಕ್ಷೇಪ -2014’ ಈ ಸಾಹಿತ್ಯ ಸ್ಪರ್ಧೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ದಿಸೆಯಲ್ಲಿ ಟೀಂ ಬ್ಲೂ ವೇವ್ಸ್ ಯಶಸ್ವಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತು.

IMG_0301

ಬ್ಲೂ ವೇವ್ಸ್-ಗೆ ಭೇಟಿ ಕೊಡಲು : ಇಲ್ಲಿ ಕ್ಲಿಕ್ಕಿಸಿ

ಮಾತು…ಮೌನ..

after-the-rain1

ಮಾತು…
ನೀಲನಭದಿ ಮಡುಗಟ್ಟಿ
ಹಾರಿ ಹರಡಿ, ಗುಡುಗು ಸಿಡಿಲಿಗೆ
ಭೂಮಿಗೆರಗಿದ ವರ್ಷಧಾರೆ,

ಮೌನ..
ಮಳೆ ನ೦ತರದ ಖಾಲಿ ಅಂಬರ
ತೊಳೆದ ಮುತ್ತಿನ೦ಥಾ ಭುವಿಗೆ
ಪವಡಿಸುವ ಸೂರ್ಯೋಜಸ್ಸಿನ ಸಿ೦ಗಾರ
ಮತ್ತೆ ಅಲ್ಲಲ್ಲೇ ತೇಲುತ್ತಾ
ದಟ್ಟೈಸುವ ಬಾನು..

_ಹುಸೇನಿ

Leave a comment

ಹುಸೇನಿ ಪದ್ಯಗಳು – 26

meeting-point

ಅನುಕ್ಷಣ ಧೇನಿಸಿ
ಕೊನೆಗೆ ಕಡಲನ್ನು ಸೇರಿದ
ಆ ನದಿನೀರಿಗಿಂದು ಅಸ್ತಿತ್ವವೇ –
ಇಲ್ಲ.

ತುಂಬಿ ತುಳುಕುವ ಕಡಲಿನ
– ಮತ್ತೆ ಮತ್ತೆ
ನದಿಗಳ ತನ್ನತ್ತಲೇ
ಸೆಳೆವ ಅತಿಮೋಹದ ಹೆಸರೇನು ?

ನಿನಗೆ ಗೊತ್ತೇನು ಹುಡುಗಿ..?
ನಿನ್ನ ಆ ಅಮಿತ ಆನಂದ
ನನ್ನೊಳಗೆ ಓಜಸ್ಸಾಗಿ ಮೂಡಿದ್ದು..
ನನ್ನ ಇರುಳ ದಾರಿಗೆ ದೀವಟಿಗೆಯಾದದ್ದು..

ಕತ್ತಲಲ್ಲಿ ಕುಳಿತಿದ್ದೆ
ಕಾಡುವ ನೆರಳೆಲ್ಲಿ.. ?
ಜನ್ಮಾಂತರದ ಬಂಧವೆಂದಿದ್ದೆ
ಜತೆಯಾಗಿ ನೀನೆಲ್ಲಿ.. ?
ಹಾಂ…
ನೆನಪಾಯಿತೀಗ ನೀನೊಮ್ಮೆ ಉಸುರಿದ್ದು
‘ನಾ ನಿನ್ನ ಛಾಯೆ ‘_ಹುಸೇನಿ

Leave a comment

ಹುಸೇನಿ ಪದ್ಯಗಳು – 25

street

೧)
ಪಯಸ್ವಿನಿ ತೀರ ಬಾಯ್ದೆರೆದುಕೊಂಡಿತ್ತು
ನೀ ಕೊಟ್ಟ ನೋವಿನಲ್ಲೊಂದಿಷ್ಟನ್ನು
ಹರವಿ ಕೊಟ್ಟೆ,
ತೀರದ ಬಿಕ್ಕಳಿಕೆ ದಿಗಿಲು ಹುಟ್ಟಿಸಿತು.
೨)
ಎತ್ತಣದ ಮಾಮರ, ಎತ್ತಣದ ಕೋಗಿಲೆ
ಎತ್ತಣಿಂದೆತ್ತ ಸಂಭಂದ
ಎಂದು ಬರೆದವರು ದಕ್ಷಿಣದವ,
ಹಾಡಿದ್ದು ಉತ್ತರದವ
ಆಲಿಸ್ತಾ ಇರುವವನು ಪಶ್ಚಿಮದವ.

೩)
ನೀರವ ಕತ್ತಲಿಗೆ ಅಬ್ಬರದ ಬೆಳಕಿನ ಗೀಳು
ಅಲ್ಲಲ್ಲಿ ಹೊಳೆಯುತ್ತಿದೆ
ನನ್ನ ಕತ್ತಲ ಕವಿತೆಗಳು ಬೆಳಕಿನ
ಕುಹುಕಕ್ಕಂಜಿ ಒಳಗೆ ಸತ್ತು ಬಿದ್ದಿವೆ.

೪)
ಈ ಜಗ ಅಕ್ಷಯ ಪಾತ್ರೆ ಎಂದರು
ನಂಗೆ ಕಳೆದು ಹೋಗುವ ಭಯ
ನಾಳೆಯಿಂದ ಏನಾದರೂ ಹುಡುಕಾಟ
ಶುರು ಮಾಡಬೇಕು.

_ಹುಸೇನಿ

ಹುಸೇನಿ ಪದ್ಯಗಳು – 24

lamp

೧)
ಗೆಳೆಯನೊಬ್ಬನ ಒಡಲೊಳಗಿನ
ಹಸಿ ಹಸಿ ನೋವು
ಕವಿತೆಯಾಗಿ ಬರುತ್ತದೆ;
ಓದಿದವರು ಭಲೇ ಭಲೇ
ಅಂತ ಬೆನ್ನು ತಟ್ಟುತ್ತಿದ್ದಾರೆ..
೨)
ನನಗ್ಯಾರೂ ಇಲ್ಲವೆಂದು
ಆಕಾಶದೆಡೆಗೆ ದೃಷ್ಟಿಯಿಟ್ಟೆ
ಅಗಣಿತ ತಾರೆಗಳು ಕೈಬೀಸಿದವು.
ಅಪ್ಪ ನೆನಪಾದ,
ಅಪ್ಪ ಅಂದರೆ ಆಕಾಶ..

೩)
ಕವಿತೆಯನ್ನು ಮಾರಿಕೊಂಡವನು
ಮತ್ತಷ್ಟು ಬಡವನಾದ,
ಹಂಚಿಕೊಂಡವನು
ಮತ್ತಷ್ಟು ಶ್ರೀಮಂತ !

೪)
ಬತ್ತಿ ಸುಟ್ಟು ಹೋಯಿತು
ಎಣ್ಣೆಯೂ ಕರಗಿತು
ಹರಡಿದ್ದ ಬೆಳಕು ಮಾತ್ರ
ಸತ್ಯ..

_ಹುಸೇನಿ

ಹುಸೇನಿ ಪದ್ಯಗಳು – 23

kaalgejje

೧)
ಸಪ್ತ ಸಾಗರದಾಚೆ ಖಾಲಿ
ಅವಕಾಶವೊಂದಿದೆ,
ಹೋಗಿ ಬನ್ನಿ ಕವಿತೆಗಳೇ..
ಅವಳ ಕಾಲ್ಗೆಜ್ಜೆ ಮಣಿಗಳಿಗೆ ಕಟ್ಟಿದ್ದ ಕನಸುಗಳು
ಉದುರಿ ಬಿದ್ದಿದೆಯಂತೆ ಈ ತೀರದಲಿ,
ಹುಡುಕಬೇಕು ನಾನು..
೨)
ಆ ವಿಷ ವರ್ತುಲದಲಿ ಮತ್ತೆ
ಗೆದ್ದಿಲುಗಳು ಹುಟ್ಟಿಕೊಂಡಿವೆ,
ನಿನ್ನ ನೆರೆಳಿನ ನಿಶಾನಿಯಿನ್ನೂ
ಹಸಿರಾಗಿಯೇ ಇದೆ,
ನನ್ನೆದೆಯೊಳಗಿರುವಂತೆ!
೩)
ನಿನ್ನೆಯ ಚುಮು ಚುಮು ಚಳಿಗೆ
ಮೈಯೊಡ್ಡಿದೆ, ಎದೆಯಾಕಾಶ-
ದಲ್ಲೊಂದು ಗುಡುಗಿನ ಸದ್ದು.
ಹೂತಿಟ್ಟ ಕನಸು ಚೀರಿಕೊಂಡಿರಬಹುದು!

೪)
ನಿನ್ನ ಅಬ್ಬರದ ಮಾತಿನ ನಡುವಿನ
ಕ್ಷಣದ ಮೌನವಷ್ಟನ್ನೇ ತುಂಬಿಕೊಂಡೆ.
ಅದೇನೋ ಪಿಸುಗುಟ್ಟಿದವು..
ಮೌನದ ಭಾಷ್ಯ ಬಲ್ಲವರು ಯಾರೋ ?

೫)
ಮಳೆಯಾಗು;
ನೆನೆದು ಬಿಡುತ್ತೇನೆ..
ಹನಿ ನೀರಿನ ನಿರೀಕ್ಷೆಯಿದೆ
ಬಿರಿದ ಮಣ್ಣೊಳಗು,ನನ್ನೆದೆಯೊಳಗೂ..

_ಹುಸೇನಿ

Leave a comment

ಹುಸೇನಿ ಪದ್ಯಗಳು – 22

goobe

೧)
ಇಲ್ಲೆಲ್ಲೋ ಕಳಕೊಂಡ ನಿನನ್ನು
ನೆನಪಿನ ನಶೆಯಲ್ಲಿ ಹುಡುಕುತ್ತೇನೆ,
ಅಮಲೇರಿದಾಗ ಕಣ್ಣಂಚಲಿ
ಮೂಡುತ್ತೀಯ ನೀನು,
ಹನಿಯಾಗಿ..
೨)
ನಿನ್ನೆ ನಿನ್ನ ನೆನಪನ್ನೆಲ್ಲಾ
ತೇಲಿ ಬಿಟ್ಟ ತೊರೆಯಿಂದ
ಮೊಗೆದು ನೀರು ಕುಡಿದವರೆಲ್ಲಾ ಇಂದು
ತೂರಾಡುತ್ತಿದ್ದಾರೆ,ಚೀರಾಡುತ್ತಿದ್ದಾರೆ;
ಮೊನ್ನೆ ಅವರು ನನ್ನ ಹುಚ್ಚ ಅಂತ ಹಂಗಿಸಿದ್ದರು..
೩)
ಒಂದೊಮ್ಮೆ ನೆನಪಿನ ನಶೆ
ಪರಿಧಿ ದಾಟುತ್ತದೆ, ಸುತ್ತಲೆಲ್ಲಾ ಬರೀ ಶೂನ್ಯ,
ದೂರದಲ್ಲಿ ಒದರುವ ಗೂಬೆ,
ಯಾಕೆಂದೊಮ್ಮೆ ನನಗೆ ನಾನೇ
ಕೇಳಿಕೊಳ್ಳುತ್ತೇನೆ, ಪ್ರಶ್ನೆಗೆ ಹುಟ್ಟಿ
ಸಾಯುವ ಸಮಯವದು…_ಹುಸೇನಿ

Leave a comment

ಹುಸೇನಿ ಪದ್ಯಗಳು – 21

nakshatra
೧)
ಆ ನೋಟದಲ್ಲೇ ನೀ
ಹರಡಿಟ್ಟ ಮೋಡದ ಚೂರು
ಮಧ್ಯ ರಾತ್ರಿ ಹನಿಯಾಗುತ್ತದೆ;
ಅದನಾಯ್ದು ಕವಿತೆ ಕಟ್ಟುವ ಸಂಭ್ರಮ ನನಗೆ..

೨)
ನೀ ತೊರೆದು ಹೋದ ಹಾದಿಗುಂಟ
ಸಾಲು ನಕ್ಷತ್ರಗಳ ಕಾವಲುಂಟು;
ದಾರಿಯುದ್ದಕ್ಕೂ ಇನ್ನೊಂದಿಷ್ಟಿರುಳು ಉಳಿದಿದೆ,
ಬಹುಶಃ ನೀನು ಬಿಟ್ಟು ಹೋದ ನೆನಪುಗಳದ್ದಾಗಿರಬೇಕು..

೩)
ಅಪರಾತ್ರಿ ನೀನು ನೆನಪಾಗುತ್ತೀಯ;
ಹೊರಗಡೆ ಜೋರು ಮಳೆ, ಈಗೀಗ
ಯಾಕೋ ಮಳೆಯೂ ಎದೆಯೊಳಗಿಳಿಯುವುದಿಲ್ಲ;
ಒಡಲೊಳಗಿನ ತಪನೆಯ ತಂಪಿಗೆ ಕಣ್ಣೀರೇ ಬೇಕಂತೆ..

_ಹುಸೇನಿ

Leave a comment

ಹುಸೇನಿ ಪದ್ಯಗಳು – 20

panjarada-hakki

೧)
ಜಗತ್ತಿನ ಮತ್ತೆಲ್ಲಾ ಕ್ಷಣಿಕ-
ಉನ್ಮಾದಗಳಂತೆ
ನನ್ನೊಳಗಿನ ಮೌನಕ್ಕೂ ಹುಚ್ಚು ಗೀಳು.
ತನ್ನ ಅಸ್ತಿತ್ವಕ್ಕಾಗಿ
ಮಾತಿನ ಮೊರೆ ಹೋಗಿ
ಪರಾವಲಂಬಿಯಾಗಿ ಅಸುನೀಗುತ್ತದೆ.

೨)
ನಾನು ಮತ್ತೆ ಕಳೆದು ಹೋಗುತ್ತಿದ್ದೇನೆ
ಯಾವುದೋ ಮರೀಚಿಕೆ-
ಮಾಯೆಯೊಳಗಲ್ಲ
ನೀನೆಂಬ ಅರೆ ನಿರ್ವಾತದೊಳಗೆ;
ಜೇಡರ ಬಲೆಗೆ ಬಿದ್ದ ಚಿಟ್ಟೆಯಂತೆ ಬದುಕು..

೩)
ಹೃದಯವ ಅಡವಿಟ್ಟು
ಪ್ರೀತಿಯ ಖರೀದಿಗೆ ಹೊರಟವನು
ನಿರಾಸೆಯಿಂದ ಮರಳಿದ್ದಾನೆ,
ಹೃದಯವಿಲ್ಲದವನಿಗೆ
ಪ್ರೀತಿ ಸಿಗಲಾರದಂತೆ..

೪)
ಅವನು
ಸ್ವತಂತ್ರ ಬದುಕಿನ ಕಥೆ ಹೇಳಿ
ಮುಗಿಸಿದ ನಂತರ
ಅವಳಿಗೆ ಅವನಲ್ಲಿ ಪ್ರೀತಿ ಅಂಕುರಿಸಿತು
ಮದುವೆಯ ನಂತರ ತಿಳಿಯಿತು
ಅವನ ಮನೆತುಂಬಾ ಪಂಜರದ ಗಿಳಿಗಳು..

_ಹುಸೇನಿ

Leave a comment

Blog at WordPress.com.

Up ↑

%d bloggers like this: