ಕಾಡುವ ಹನಿಗಳು · ನೆನಪಿನ ಹನಿ · ಹಗಲೇ ತಡಿ... · ಹುಸೇನಿ_ಪದ್ಯಗಳು

ಹಗಲೇ ತಡಿ…

hagalu

ಹಗಲೇ ತಡಿ, ಬೊಗಸೆ ಬೆಳಕನ್ನು
ತುಂಬಿಕೊಳ್ಳುತ್ತೇನೆ
ಬರುವ ಕತ್ತಲಿಗೆ ಕಣ್ಣೀರು ಕಾಣುವುದಿಲ್ಲ,
ಅವರು ನಾನು ಪರಮ ಸುಖಿ ಅಂತ
ಮಾತು ಶುರುವಿಟ್ಟಿದ್ದಾರಂತೆ…

~ಹುಸೇನಿ

Leave a comment

ನೀನು.. · ಮನಸಿನ ಹಾ(ಪಾ)ಡು · ಹುಸೇನಿ_ಪದ್ಯಗಳು

ನೀನು..

nenapinasanchi

ಕಡಲ ತಡಿ ನೀನು,
ಭೋರ್ಗರೆದು ಮೊರೆದು,
ಸಿಡಿದು, ಹಾಲ್ನೊರೆಗೆರೆದು,
ನಿನ್ನ ಭೇಟಿಯಲ್ಲಿ
ಶಾಂತ – ಅಲೆ ನಾನು..!

ಧರಿತ್ರಿ ನೀನು..
ನೀಲ ನಭದಿ ಕಪ್ಪಿಟ್ಟು
ಹಾರಿ ಹರಡಿ, ಗುಡುಗು ಸಿಡಿಲಿಗೆ
ಚದುರಿ ಹನಿಯಾಗಿ
ನಿನ್ನೊಳಗೆ ಲೀನ – ಮೇಘ ನಾನು..!

ಶರಧಿ ನೀನು..
ಕೆನೆದು ತೊನೆದು
ಧುಮ್ಮಿಕ್ಕಿ ಹರಿದು,
ನಿನ್ನ ಸೇರುವ ಅನವರತ
ಧಾವಂತದ- ನದಿ ನಾನು.. !

ತಾಯಿ ನೀನು…
ಪೆಪ್ಪರಮೆಂಟಿಗೆ ಸೋಗು ಹಾಕಿ
ಅತ್ತು ಕೂಗಿ ಕರೆದು, ರಚ್ಚೆಹಿಡಿದು
ನಿನ್ನ ಮಡಿಲ ಸಾರ್ಥಕ್ಯದಲ್ಲಿ
ಜಗ ಮರೆವ – ಮಗು ನಾನು…

~ಹುಸೇನಿ

Leave a comment

ರೂಹೀ · ರೂಹೀ -3

ರೂಹೀ -3

a-rainbow_and_flower-802407

ಮಳೆ-ಬಿಸಿಲು ಸೇರಿ
ಕಾಮನಬಿಲ್ಲು ಮೂಡುವ ಪರಿಗೆ
ಅಚ್ಚರಿಗೊಳ್ಳುತ್ತೇನೆ;
ನಾ ಸಿಕ್ಕ ಘಳಿಗೆ
ನಿನದೊಂದು ಮುಗುಳ್ನಗುವಿಗೇ
ಹೂವಿನ ಮೊಗ್ಗೊಂದು ಬಿರಿದು
ನನ್ನೆದೆ ಬಾಂದಳದಿ ಚಿತ್ರೋಧ್ಯಾನ ಧೇನಿಸುತ್ತದೆ…
ಮಳೆಬಿಲ್ಲೂ ಅಲ್ಲಿ ಸೋಲುತ್ತದೆ..

~ ಹುಸೇನಿ

Leave a comment

(ಹುಸೇನಿ ಪದ್ಯಗಳು - 30 · ನೀನು - ನಾನು · ಹುಸೇನಿ_ಪದ್ಯಗಳು

ನೀನು – ನಾನು (ಹುಸೇನಿ ಪದ್ಯಗಳು – 30)

೧)
‘ನೀನು’ ಎನ್ನುವಾಗ
ನನ್ನಿ೦ದ ನಿನ್ನ ಪ್ರತ್ಯೇಕಿಸುವ
ಪ್ರತಿಬಿಂಬವೊಂದು ಒಮ್ಮೆಲೇ
ಮೂಡಿ ಇಲ್ಲವಾಗುತ್ತದೆ; ಆ ಕ್ಷಣ
ಆತ್ಮವಿಲ್ಲದ ಜಡದಂತೆ ಸ್ಥಬ್ದ ನಾನು.. !

೨)
ಇಲ್ಲಿರುವುದೆಲ್ಲ ಬರಿ ಜಂಜಡಗಳೆಂಬ
ಸ್ಥಿತಪ್ರಜ್ಞೆಯಿಂದ ಸರ್ವಪರಿತ್ಯಾಗಿಯಾಗಲು
ಹೊರಡಲಣಿಯಾಗುತ್ತಿದ್ದೆ;
ನಾ ಗ್ರಹಿಸಲಾಗದ ದಿವ್ಯಗಾನಕೆ
ಆ ಮರದೆಲೆಗಳು ತಲೆದೂಗುತ್ತಿದ್ದವು..
ಮತ್ತೆ ಸ್ಥಬ್ದ ನಾನು !

~ಹುಸೇನಿ

Leave a comment

ರೂಹೀ · ರೂಹೀ -2

ರೂಹೀ -2

fire-nenapinasanchi

ಒಡೆದ
ಎದೆಗೂಡಿನ ಚೂರುಗಳು..
ಆರಿಸಲೂ ಆಗದೇ ಚಡಪಡಿಸುತ್ತಾ ಸದ್ದಿಲ್ಲದೆ
ದಿಟ್ಟಿಸುತ್ತಿದ್ದೇನೆ ವಿವಶನಾಗಿ..

ಮತ್ತೆ ಜೋಡಿಸಬೇಕು… ಈ ಸಜೀವ ಒಡಪಿನಲ್ಲಿ
ಅಸಹನೀಯ ನೋವಿದೆ..
ಅಲ್ಲಿ ನೀನು.. ಇಲ್ಲಿ ನಾನು, ಮಧ್ಯೆಗಿನ ಬೆಂಕಿಯ ದಾಟಿ
ನಿನ್ನ ಕರಗಳನ್ನೊಮ್ಮೆ ಚಾಚಿಬಿಡು ರೂಹೀ..
ರುಧಿರ ಹೆಪ್ಪಾಗುವ ಮುನ್ನವೇ…

ನನ್ನ ಸೇರುವ ಅತಿ ಮೋಹದಲಿ ಬೆಂಕಿಕುಂಡಕ್ಕೆ
ನೆಗೆದು ನೀ ಮೈ ಸುಟ್ಟಿದ್ದೆ ಬಂತು;
ಉರಿಯ ತಾಳಲಾರದೆ ನೀರಿನಾಳಕ್ಕೆ ಧುಮುಕಿ
ಮತ್ತೆ ಏಳುವಾಗಿನ ನಿರೀಕ್ಷೆಯೇ ಬಾಳು…

… ನಾನಿನ್ನೂ ನಿರೀಕ್ಷೆಯನ್ನು ನುಂಗಿ ಬದುಕುತ್ತೇನೆ;
ಸಾಂತ್ವನಕ್ಕೆ ವಿರಹವನ್ನೇ ತಬ್ಬಿಕೊಂಡಿದ್ದೇನೆ…
ನೀ ಬೆಂಕಿಯಾ ದಾಟಿ ಬರುವ ದಿನದಿಂದ
ಮತ್ತೆ ಬದುಕಿಗೆ ಜೀವ ತುಂಬುತ್ತೇನೆ….

~ಹುಸೇನಿ

Leave a comment

ಊರ ಗುಡ್ಡದ ಹಾದಿಯಲ್ಲಿ... · ತೊರೆಯ ತೀರದ ನೆನಪುಗಳು

ಊರ ಗುಡ್ಡದ ಹಾದಿಯಲ್ಲಿ…

children

… ಅಮ್ಮನ ಕೊನೆಯ ಕೋಪದ ಕೂಗಿಗೆ ಎದ್ದೇಳುವುದು.. ದಾರಿಯಲ್ಲಿ ಕಾಯುವ ಸಹಪಾಠಿಗಳು .. ಆಮೇಲೆ ಊರ ಗುಡ್ಡದ ಹಾದಿಯಲ್ಲಿ ನಾಗಾಲೋಟ.. ಸ್ಲೇಟಿನಲ್ಲಿ ಬರೆದ ಮೊದಲ ಅಕ್ಷರ.. ಚಿಕ್ಕ ಚಿಕ್ಕ ತಪ್ಪುಗಳನ್ನು ಸುಲಭವಾಗಿ ಮಾಯಿಸಿ ಬಿಡಬಹುದು ಎಂಬ ಪಾಠವನ್ನು ನಮಗೆಲ್ಲಾ ಕಲಿಸಿದ್ದು ಅದೇ ಸ್ಲೇಟು ಅಲ್ವಾ ?. ವರ್ಷದ ಎಷ್ಟು ಕಳೆದರೂ ಆ ಕಾಲುದಾರಿಗಳು, ಆಟದ ಅಂಗಳಗಳು ಮತ್ತೆ ಮತ್ತೆ ಕರೆಯುತ್ತಿದೆ, ಆಡಿ ನಲಿದ ಆ ತರಗತಿ ವಠಾರಗಳು, ಬೊಬ್ಬೆ ಹೊಡೆಯುತ್ತಿದ್ದ ತರಗತಿಗಳು ಅದೆಲ್ಲವನ್ನೂ ಅನುಭವಿಸಲು.. ಆ ಬೆಂಚಲ್ಲೊಮ್ಮೆ ಕುಳಿತುಕೊಳ್ಳಲು.. ಆ ನನ್ನೆಲ್ಲಾ ಪುಂಡ ಗೆಳೆಯರೊಂದಿಗೆ ಇನ್ನೂ ಒಂದು ಬಾಲ್ಯಕಾಲ ಸಿಗಬಹುದೇ….?!!!. ಮೊದಲ ಬಾರಿಗೆ ಪೆನ್ಸಿಲಿನಲ್ಲಿ, ಕೈವಾರದಲ್ಲಿ ಡೆಸ್ಕ್ ಮೇಲೆ ಗೀಚಿದ ನನ್ನ ಹೆಸರು ಇನ್ನೂ ಅಲ್ಲೇ ಇರಬಹುದಾ ?….

ಅಂದ ಹಾಗೆ 12 ಗಂಟೆಗೆ ಒಂದು ಇಂಟರ್ವ್ಯೂ ಇದೆ. ಓದಕ್ಕೆ ಅಂತ ಕೂತಿದ್ದೇನೆ. ಬೆಳ್ಳಂಬೆಳಿಗ್ಗೆ 16 ಮಿಸ್ ಕಾಲ್ ಮಾಡಿ ಎಬ್ಬಿಸಿದವಳ ಒತ್ತಾಯಕ್ಕೆ… 🙂
ಈ ಮೌಸು, ಕೀ ಬೋರ್ಡು, ಮೊನಿಟರೂ, ಜಾವ, ಯುನಿಕ್ಷ್.. ಕರ್ಮ ಕಾಂಡಕ್ಕಿಂತ ಹರಿದ ನೀಲಿ ಬಿಳಿ ಅಂಗಿ.. ಹರಕಲು ಜೋಳಿಗೆ ಬ್ಯಾಗು.. ಪಾದದ ಅಂಚಲಿ ಸವೆದ ಚಪ್ಪಲಿ.. ಅರ್ದಂಬರ್ದ ಮುಗಿಸುವ ಮನೆ-ಲೆಕ್ಕಗಲೇ ವಾಸಿ ಅಂತ ಅವಳಿಗೇನು ಗೊತ್ತು…

~ ಹುಸೇನಿ

Leave a comment