ಕಂದನೆದೆಯಿಂದ · ವೆಲ್ಕಮ್ ಟು ಬ್ಲಾಗ್ ಲೋಕ ಶಾಫಿ..

ವೆಲ್ಕಮ್ ಟು ಬ್ಲಾಗ್ ಲೋಕ ಶಾಫಿ..

ಈ ಡಬ್ಬಾ ನನ್ ಮಗ ಶಾಫಿಗೆ ಬ್ಲಾಗ್ ಮಾಡಿ ಕೊಡ್ತೀನಿ ಅಂತದ್ದು ವಾರ ಆಯಿತು. ಹೆಸರು ಕೊಡೋ, ಟ್ಯಾಗ್ ಲೈನ್ ಏನ್ಬೇಕು ಬ್ಲಾಗ್ ಅಡ್ರೆಸ್ಸ್ ಎನ್ಬೇಕೋ ಅಂತ ಕೇಳಿದ್ರೆ.. ಅದೆಲ್ಲಾ ಗೊತ್ತಾಗಲ್ಲ, ಏನ್ಬೇಕು ನೀನೆ ಮಾಡ್ಕೋ ಅಂತ ಹೇಳಿದ್ದ. ನನ್ ಹಾಳು ತಲೆಗೆ ಯಾವುದೊಂದು ಹೆಸರೂ ಹೊಳೆಯದೆ ಸುಮ್ನಿದ್ದೆ. ನಿನ್ನೆ ರಾತ್ರಿ ೧೨ ಗಂಟೆಗೆ ಏನೋ ಜ್ಞಾನೋದಯ ಆದಂಗೆ ಬಂದು ಈಗ್ಲೇ ಬ್ಲಾಗ್ ಬೇಕು ಅಂದ. ಸರಿ ಆಗ್ಲಿ ಅಂತ ಬ್ಲಾಗ್ ಕ್ರಿಯೇಟ್ ಮಾಡಕ್ಕೆ ಕೂತ್ಕೊಂಡೆ. ನಂತರ ನನ್ನ ಪಾಡು ಶೋಪ್ಪಿನ್ಗೆ ಹೆಂಡತೀನ ಕರ್ಕೊಂಡು ಹೋದ ಗಂಡನದ್ದು. ಮೊದ್ಲು ಒಂದು ಬ್ಲಾಗ್ ಅಡ್ರೆಸ್ ಹಾಕ್ದೆ, ಅದು ಬೇಡ ಅಂತ ಅದರ ಬದಲಾವಣೆ ಶುರು ಆಯ್ತು, ನಂತರ ಬ್ಲಾಗ್ ಹೆಸರು, ಚೇಂಜ್ ಮಾಡಿ ಮಾಡಿ ಕೊನೆಗೊಂದಕ್ಕೆ ಒಪ್ಕೊಂಡ. ಆಮೇಲೆ ಟ್ಯಾಗ್ ಲೈನು, ಎಲ್ಲ ಮುಗಿದು ಆದ್ಮೇಲೆ ಬ್ಲಾಗ್ ಡಿಸೈನ್ ಟೆಂಪ್ಲೆಟ್ , ನನ್ ಫೇವರೀಟ್ ಬಣ್ಣ ನೀಲಿ ಮತ್ತು ಬಿಳಿ, ಅದರಲ್ಲೇ ಬೇಕು ಅಂತ ನೂರೈವತ್ತು ಸಲ ಟೆಂಪ್ಲೆಟ್ ಚೇಂಜ್ ಮಾಡಿಸ್ದ, ಕೊನೆಗೆ ಮೊತ್ತ ಮೊದಲು ಹಾಕಿದ್ದ ಟೆಂಪ್ಲೆಟ್ ಆಗ್ಬೋದು ಅಂದಾಗ ಮಗ್ನಿಗೆ ಬೂಟ್ಕಾಲಲ್ಲಿ ಒದೀಬೇಕು ಅನ್ನಿಸ್ತು !.

kanda

ಏನೇ ಇರ್ಲಿ, ಕನ್ನಡ ಅಕ್ಷರ ಲೋಕಕ್ಕೆ ಹೊಸದೊಂದು ಬ್ಲಾಗನ್ನು ನಿನ್ನೆ ಪರಿಚಯಿಸಿದ್ದೇವೆ. ಈತನ ಕವನಗಳು ನೀವು ಖಂಡಿತಾ ಓದಿರ್ತೀರ, ಪದಗಳ ಚಮತ್ಕಾರ ಚೆನ್ನಾಗಿ ಅರಗಿಸಿಕೊಂಡ ಭರವಸೆಯ ಪುಟ್ಟ ಕವಿ ಇವನು. ಕೀರ್ತಿಯ ಉತ್ತುಂಗ ಎರುವುದರಲ್ಲಿ ಸಂಶಯ ಇಲ್ಲ. ಈ ಬ್ಲಾಗನ್ನು ಲಾಲಿಸಿ ಪಾಲಿಸುವ ಜವಾಬ್ದಾರಿಯನ್ನು ನಿಮ್ಮ ಹೆಗಲಿಗೆ ಹಾಕ್ತಾ ಇದ್ದೇನೆ. ಕಂದ ಎಂಬ ಕಾವ್ಯನಾಮ ಇಟ್ಕೊಂಡಿರುವ ಇವನ ಅಂಕೆಯಿಲ್ಲದ ಭಾವದೊರತೆಗೆ ನಾವಿಟ್ಟ ಹೆಸರು “ಕಂದನೆದೆಯಿಂದ”. ಕನ್ನಡ ಬ್ಲಾಗ್ ಪ್ರಪಂಚದಲ್ಲಿ ಮಿನುಗು ತಾರೆಯಾಗಲಿ ಇವನ ಬ್ಲಾಗ್ , ಈ ಕನ್ನಡದ ಕಂದನಿಗೆ ಶುಭ ಹಾರೈಕೆಗಳು.

http://kandanedeyinda.blogspot.in/

Leave a comment

ಫಕೀರನ ವಿರಹದ ಹಾಡುಗಳು · ಹುಸೇನಿ ಪದ್ಯಗಳು - 17 · ಹುಸೇನಿ_ಪದ್ಯಗಳು

ಫಕೀರನ ವಿರಹದ ಹಾಡುಗಳು (ಹುಸೇನಿ ಪದ್ಯಗಳು – 17)

light-in-the-dark
1)
ಮಿಲನಕ್ಕೆ ಸಾಂಗತ್ಯ ಬೇಕಿಲ್ಲ ಗೆಳತೀ,
ನಿನ್ನ ರಾತ್ರಿ ನೀ ನೆನಪಾದ ಘಳಿಗೆ
ಕೆನ್ನೆಗೆ ಜಾರಿ ಬಿದ್ದ ಕಣ್ಣೀರ ಹನಿಯಲ್ಲಿ
ನಿನ್ನ ಬೆಚ್ಚಗಿನ ಸ್ಪರ್ಶದನುಭೂತಿಯಿತ್ತು.

2)
ದೂರದಲ್ಲಿ ಕಂಡ ಬೆಳಕನ್ನು
ನೀ ಹಿಂಬಾಲಿಸಿದೆ.
ಇಲ್ಲಿ ಉಳಿದದ್ದು ಬರಿ ಕತ್ತಲು,
ಮತ್ತೊಂದಿಷ್ಟು ಕವಿತೆಗಳು.

3)
ತಪಸ್ಸು ಕೂತು ವರ ಕೇಳಿ
ನಿನ್ನ ಪಡೆದರೂ, ನಿನ್ನ ಪ್ರೀತಿಯ
ಪಡೆಯಲಾಗಲಿಲ್ಲ.
ವರವಾಗಿ ನಿನ್ನ ಪ್ರೀತಿಯನ್ನೇ ಕೇಳಬೇಕಿತ್ತು !

4)
ಇಷ್ಟಿಷ್ಟೇ ಆವರಿಸುವ ನಿನ್ನ
ಪ್ರೀತಿ,
ಒಮ್ಮೆಲೇ ಎರಗಿ ಇಲ್ಲವಾಗಿಸುವ
ಕಾಲನಿಗಿಂತ ಅಪಾಯಕಾರಿ ಎಂಬುದು
ನಾನು ಕಂಡುಕೊಂಡ ಪರಮ ಸತ್ಯ
ನಿಮ್ಮ ಕಥೆ ಏನೋ ?

Leave a comment

ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ · ವಾಸ್ತವ ಸಂಚಿ

ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ

induian muslim

“ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ ದೇಶಕ್ಕಾಗಿ ಪ್ರಾಣ ಕೊಡುತ್ತಾರೆ “. ನಮ್ಮ ಘನವೆತ್ತ ಪ್ರಧಾನ ಮಂತ್ರಿಯ ಉಚ್ಚಿಷ್ಠ ಉವಾಚವಿದು. ನಮ್ಮ ಪ್ರಧಾನಿಯಿಂದ ಇಂಥದ್ದೊಂದು ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಂದೊದಗಿದ್ದು ಭಾರತೀಯ ಮುಸ್ಲಿಮನ ಪಾಲಿಗೆ ಬಹು ನೋವಿನ ಸಂಗತಿ.

ಭಯೋತ್ಪಾದಕ, ಮೂಲಭೂತವಾದಿ, ದೇಶದ್ರೋಹಿ, ಹೇಗೆಲ್ಲಾ ಹೀಗಳೆದು ಸಮಾಜದ ಮುಖ್ಯವಾಹಿನಿಯಿಂದ ಒಂದಿಷ್ಟು ಅಂತರ ಕಾಯುವಂತೆ ಮಾಡಿ, ಹುಟ್ಟಿ ಬಿದ್ದ ಮಣ್ಣಿನಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸಿದರೂ, ಸ್ವತಂತ್ರಾ ನಂತರ ಬಂದೊದಗಿದ ಕೋಮುಗಲಭೆಯ ಕಂಟಕಗಳು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಹಿಂದುಳಿದು ‘ನವ ದಲಿತರು’ ಎಂದು ಕರೆಯಲ್ಪಟ್ಟರೂ ಭಾರತೀಯ ಮುಸ್ಲಿಂ ತನ್ನೆಲ್ಲ ನೋವನ್ನು ಸಮಯದ ಭೂ ಗರ್ಭದಲಿ ಅರಗಿಸಿಕೊಂಡು ಮುನ್ನಡೆಯುತ್ತಿದ್ದಾನೆ.

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್, ಹೈದರಾಲಿ, ಮೌಲಾನಾ ಶೌಕತ್ ಅಲಿ, ಖಾನ್ ಅಬ್ದುಲ್ ಗಫಾರ್ ಖಾನ್, ಡಾ।ಮಗ್ಫೂರ್ ಅಹ್ಮದ್ ಅಜಾಝಿ, ಮೌಲಾನಾ ಮಂಝುರ್ ಅಹ್ಸನ್ ಅಜಾಝಿ, ಅಲಿ ಆಸೀಫ್,ಮೊಹಮ್ಮದ್ ಜೌಹರ್,ಅಲಿ ಇನಾಯತ್, ಶಹೀದ್ ಫೀರ್ ಅಲಿ, ವಲಯತ್ ಅಲಿ, ಅಲಿ ವಾರಿಸ್, ಅಬ್ದುಲ್ ಖಯ್ಯೂಮ್ ಅನ್ಸಾರಿ, ಮೌಲಾನಾ ಅಬ್ದುಲ್ ಕಲಾಂ ಅಝಾದ್, ಹಕೀಮ್ ಅಜ್ಮಲ್ ಖಾನ್, ಅಶ್ಫಾಕುಲ್ಲಾಹ್ ಖಾನ್, ಬೇಗಮ್ ಹಜ್ರತ್ ಮಹಲ್,ಮೌಲಾನಾ ಹುಸೈನ್ ಅಹ್ಮದ್, ರಫಿ ಅಹ್ಮದ್ ಕಿದ್ವಾಯಿ ಹಾಗು ಇನ್ನು ಹಲವಾರು ಮುಸ್ಲಿಂ ಧಾರ್ಮಿಕ ಮತ್ತು ಸಾಮುದಾಯಿಕ ನಾಯಕರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಮುಖ್ಯ ಭೂಮಿಕೆಯಲ್ಲಿದ್ದರು. ಇವರ ದೇಶ ಪ್ರೇಮವು ಪ್ರಶ್ನಾತೀತವಾಗಿರುವಗಲೇ, ಪ್ರಸ್ತುತ ಭಾರತೀಯ ಮುಸ್ಲಿಮರು ದೇಶ ಪ್ರೇಮವನ್ನು,ದೇಶನಿಷ್ಠೆಯನ್ನು ಪ್ರತೀ ದಿನ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾನೆ.

ಅಷ್ಟಕ್ಕೂ ಮುಸ್ಲಿಮರ ದೇಶಪ್ರೇಮವು ಪ್ರಧಾನಿಯಿಂದ ಸ್ಪಷ್ಟನೆ ದೊರೆಯಬೇಕಾದ ಮಟ್ಟಕ್ಕೆ ಪ್ರಶ್ನಾರ್ಹವಾಗಿಸಿದವರು ಯಾರು.. ?.

1947ರಲ್ಲಿ ಭಾರತಕ್ಕೆ ಸ್ವಾತಂತ್ರ ದೊರೆತಾಗ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಲಾಯಿತು. ಆಗ ಪಾಕಿಸ್ತಾನ ತನ್ನನ್ನೊಂದು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿದ ಕಾರಣಕ್ಕಾಗಿ ಭಾರತವನ್ನು ಒಂದು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಹಿಂದೂ ರಾಷ್ಟ್ರವಾದಿಗಳು ಒತ್ತಾಯಿಸಿದ್ದರೂ ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿ ರೂಪುಗೊಂಡಿತು. ಆದರೂ ಕೆಲವು ಶಕ್ತಿಗಳಿಂದ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯಿತು, ಈಗಲೂ ನಡೆಯುತ್ತಿದೆ.
ಇತಿಹಾಸವನ್ನು ತಿರುಚಿಯೂ, ಇಸ್ಲಾಮಿನ ಬಗ್ಗೆ ತಪ್ಪು ಭಾವನೆ ಹರಡಿಯೂ, ಬಹುಸಂಖ್ಯಾತರಲ್ಲಿ ಅಸುರಕ್ಷಿತೆ ಭಾವನೇ ಮೂಡಿಸಿಯೂ, ಯಾರೋ ಉಂಡ ಮನೆಗೆ ಬಗೆಯುವ ಕ್ರಿಮಿಗಳು ದೇಶದ್ರೋಹದ ಕೆಲಸ ಮಾಡಿದಾಗ ಅದನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟುವಂಥ ಕೆಲಸದ ಮೂಲಕವೂ ಅವರು ಮುಸ್ಲಿಮರನ್ನು ಮುಖ್ಯಧಾರೆಯಲ್ಲಿ ಸಂಶಯದ ನೆರಳಿನಿಂದ ಬದುಕುವಂತೆ ಮಾಡಿದ್ದಾರೆ. ಇವರೊಂದಿಗೆ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಕೈ ಜೋಡಿಸಿದಾಗ ಕೆಲಸ ತುಂಬಾ ಸುಲಭವಾಯ್ತು. ‘ಶಂಕಿತ ಉಗ್ರಗಾಮಿ’ಗಳು ಎಂಬ ಬರಹದಡಿ ಪ್ರತೀ ಮುಸ್ಲಿಂ ಯುವಕನನ್ನು , ಅದರಲ್ಲೂ ಟೋಪಿ ಹಾಕುವ, ಗಡ್ಡ ಬಿಡುವ ಮುಸ್ಲಿಮರನ್ನು ಸಂಶಯದ ನೋಟದಿಂದ ನೋಡುವಂತೆ ಮಾಡಲಾಯಿತು. ವಿದೇಶಕ್ಕೆ ಹೋಗುವ ಮುಸ್ಲಿಮನ ಬ್ಯಾಗಲ್ಲಿರುವ ಇಲೆಕ್ಟ್ರಾನಿಕ್ ವಸ್ತುಗಳು ಬಾಂಬ್ ಗಳಾದವು. ಕ್ಷಣಾರ್ದದಲ್ಲಿ ಅವನನ್ನು ಅಂತರಾಷ್ಟ್ರೀಯ ಭಯೋತ್ಪಾದನೆ ಗುಂಪಿನೊಂದಿಗೆ ತಳುಕು ಹಾಕಿ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುವಂತ ಪರಿಪಾಠ ಆರಂಭವಾಯ್ತು.

ಪ್ರಧಾನಿಯ ಹೇಳಿಕೆಯ ಹಿಂದಿನ ಮರ್ಮವೇನು ?.
ಮೋದಿಯ ಸಂಪುಟ ಅಸ್ತಿತ್ವಕ್ಕೆ ಕೂಡಲೇ ವಕ್ಫ್ ಮಂತ್ರಿಗಳು ಮುಸ್ಲಿಮರು ಅಲ್ಪಸಂಖ್ಯಾತರಲ್ಲ ಹೇಳಿಕೆ ನೀಡಿದ್ದರು.ಅದು ವಿವಾದವೂ ಆಯಿತು. ನಂತರದ ದಿನಗಳಲ್ಲಿಯೂ ಮುಸ್ಲಿಂ ತುಷ್ಟೀಕರಣ ನಡೆಯಿತು. ಮುಸ್ಲಿಮರ ಕಲ್ಯಾಣದಲ್ಲಿ ವಕ್ಫ್ ಇಲಾಖೆಯ ಪಾತ್ರವನ್ನು ಗೌಣಗೊಳಿಸಿ ಮತ್ತು ಹಿಂದಿನ ಯುಪಿಎ ಸರಕಾರದ ಧೋರಣೆಗಳನ್ನು ತಿರಸ್ಕರಿಸಿ ಈ ಇಲಾಖೆಯನ್ನು ಪುನರ್ರೂಪಿಸುವ ನಿರ್ಧಾರದ ಹಿಂದಿನ ಉದ್ದೇಶ ಶುದ್ದಿ ಕೂಡ ಪ್ರಶ್ನಾರ್ಹವಾಗಿದೆ. ಮೋದಿ ಸಂಪುಟದ ಸಚಿವರುಗಳೇ ಮದರಸಾ ಭಯೋತ್ಪಾದನೆ, ಲವ್ ಜಿಹಾದ್ ಮುಂತಾದ ಅಸ್ತಿತ್ವವೇ ಇಲ್ಲದ ವಿಚಾರಗಳನ್ನೆತ್ತಿ ಮುಸ್ಲಿಮರ ಸಂವೇದನೆಯನ್ನು ಕೆಣಕಿದರು. ಇಷ್ಟೆಲ್ಲಾ ಆದ ನಂತರ ಈ ಬಂದ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಮುಖಭಂಗ. ಇವೆಲ್ಲದರ ಭಾಗವಾಗಿ ಮುಸ್ಲಿಂ ಓಲೈಕೆ ಮೋದಿಯವರಿಗೆ ಅತ್ಯವಶ್ಯಕವಾಗಿ ಕಂಡುಬಂದಿದೆ. ರಾಜಕೀಯ ಪಂಡಿತ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಶಿಸಲ್ಪಟ್ಟ ಮೋದಿಯವರಿಂದ ಇಂಥದ್ದೊಂದು ಅಣಿ ಮುತ್ತು ಉದುರಿದರೆ ಅದರ ಹಿಂದಿನ ರಾಜಕೀಯ ಅಜೆಂಡಾವನ್ನು ಗಮನಿಸಬೇಕಾಗುತ್ತದೆ. ಕಾರಣ ಮೋದಿಯವರ ರಾಜಕೀಯ ಜೀವನವೇ ಹಾಗಿದೆ.

ಏನೇ ಇರಲಿ, ದೇಶ ಪ್ರೇಮವನ್ನು ಧಾರ್ಮಿಕ ನಂಬಿಕೆಯ ಭಾಗವಾಗಿ ಮದರಸದಲ್ಲಿ ಕಲಿಯುವ ಮುಸ್ಲಿಮರಿಗೆ ಖಂಡಿತಾ ದೇಶ ಪ್ರೇಮದ ಸರ್ಟಿಫಿಕೇಟ್ ಅಗತ್ಯತೆ ಇಲ್ಲ. ಬದಲಿಗೆ ನಮಗೆ ಮಾಡಬೇಕಿರುವುದು ಸಾಮಾಜಿಕ ಹಕ್ಕು. ದೇಶದ ಮೂಲೆಯಲ್ಲಿ ವಿಚಾರನಾಧೀನ ಕೈದಿಗಳಲ್ಲಿ ಶೇಕಡಾ 60 ಮಂದಿ ಮುಸ್ಲಿಮರಿದ್ದಾರೆ. ಗುಜರಾತ್‍ನಲ್ಲಿ ಶೇ. 10 ರಷ್ಟಿರುವ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. 22 ಮಂದಿ ಅಲ್ಲಿನ ಜೈಲಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇದು ಶೇ. 46, ಉತ್ತರ ಪ್ರದೇಶದಲ್ಲಿ ಇವರ ಸಂಖ್ಯೆ ಶೇ. 21. ಮಾನವ ಹಕ್ಕುಗಳನ್ನು ನಿಷೇಧಿಸಲ್ಪಟ್ಟ ಇವರಿಗೆ ನ್ಯಾಯದ ಬೆಳಕನ್ನು ನೀಡಬೇಕು. ಮುಸ್ಲಿಮರನ್ನು ಎರಡನೇ ದರ್ಜೆಗೆ ತಳ್ಳುವ ಪ್ರತಿಯೊಂದು ಶಕ್ತಿಯನ್ನು ಮಟ್ಟ ಹಾಕಬೇಕು. ಕೋಮುಗಲಭೆಗಳಲ್ಲಿ ಎಲ್ಲವನ್ನುಕಳೆದುಕೊಂಡ ಅದೆಷ್ಟೋ ಅಮಾಯಕ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸಬೇಕು. ಸಾಚಾರ್ ಸಮಿತಿಯು ಮುಸ್ಲಿಮರನ್ನು “ಅಧುನಿಕ ಹರಿಜನರು” ಎಂದು ವ್ಯಾಖ್ಯಾನಿಸಿದ್ದರೆ, ಅವರ ಜೀವನ ಮಟ್ಟ ಎಷ್ಟು ಬರ್ಬರವಾಗಿದೆ ಎಂದು ಊಹಿಸಿಕೊಳ್ಳಬಹುದು. ಆ ವರದಿಯಲ್ಲಿ ತಿಳಿಸಿದ ಪ್ಯಾಕೇಜ್ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಆಡಳಿತಾವಧಿಯಲ್ಲಿ ಮುಸ್ಲಿಮರಿಗೆ ಸುರಕ್ಷತೆಯ ಭಾವನೆಯಲ್ಲಿ ಮೂಡಿಸಬೇಕು.

ದೇಶದ ಅಖಂಡತೆಯು ಈ ದೇಶದ ಧಾರ್ಮಿಕ ಸಾಮರಸ್ಯತೆಯನ್ನೂ ಅವಲಂಬಿಸಿದೆ. ಮೋದಿಯವರು ಈ ನಿಟ್ಟಿನಲ್ಲಿ ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧರ್ಮದ ಹಂಗಿನ ಪಾಲುದಾರಿಕೆಯಿಲ್ಲದ ಜಾತ್ಯತೀತ ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಬೇಕು. ಅವರಿಗೆ ಶುಭ ಹಾರೈಸೋಣ.
ಜೈ ಹಿಂದ್ !

ಮುಹಮ್ಮದ್ ಹುಸೈನ್

ಈ ಲೇಖನ ವಿಶ್ವ ಕನ್ನಡಿಗರ ನ್ಯೂಸ್ ನಲ್ಲಿ ಪ್ರಕಟವಾಗಿದೆ. ಓದಲು ಇಲ್ಲಿ ಕ್ಲಿಕ್ಕಿಸಿ

Leave a comment

ಒಂದು ಹನಿ · ನೆನಪಿನ ಹನಿ · ಸಾಫ್ಟ್ವೇರ್ ಇಂಜಿನಿಯರ್

ಸಾಫ್ಟ್ವೇರ್ ಇಂಜಿನಿಯರ್

‘ನನ್ನ ಮಗ MNC ಕಂಪನಿಯಲ್ಲಿ
ಸಾಫ್ಟ್ವೇರ್ ಇಂಜಿನಿಯರ್’
ಅಪ್ಪ ಮಗನ ಮೇಲಿನ
ಅಭಿಮಾನ ಮೆರೆಯುವ ಹೊತ್ತಿಗೆ
ಮಗ ತನ್ನ ಕ್ಯಾಬೀನ್ ಡೆಸ್ಕಲ್ಲಿ
ಆಂಟಿ ಸ್ಟ್ರೆಸ್ ಮಾತ್ರೆ ಹುಡುಕ್ತಿದ್ದ.

ಚಿಗುರುವ ಚಿಗುರ ಚಿವುಟದಿರಿ...!

ಚಿಗುರುವ ಚಿಗುರ ಚಿವುಟದಿರಿ…!

save-the-girl-child_CQPMv_3868
ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು 1994ರಿಂದ ನಿಷೇಧಿಸಲಾಗಿದೆ. ಆದರೂ ವಾರ್ಷಿಕ 50 ಲಕ್ಷ ಭ್ರೂಣ ಹತ್ಯೆ ಅಧಿಕೃತವಾಗಿ ಪತ್ತೆಯಾಗುತ್ತಿದೆ. ಅನಧಿಕೃತವಾಗಿ ಈ ಸಂಖ್ಯೆ ಅದೆಷ್ಟು ಕೋಟಿ ದಾಟಬಹುದೋ ?. ಆರೋಗ್ಯ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹೆಣ್ಣು ಕುಲಕ್ಕೆ ಸಹಕಾರ ನೀಡುವ ಬದಲು ಮಾರಕವಾಗಿ ಪರಿಣಮಿಸಿದೆ. ತಾಯಿ ಗರ್ಭದಲ್ಲಿರುವಾಗಲೇ ಸ್ಕ್ಯಾನಿಂಗ್ ಮೂಲಕ ಮಗು ಯಾವುದು ಎಂದು ತಿಳಿದು, ಹೆಣ್ಣಾಗಿದ್ದರೆ ಭ್ರೂಣದಲ್ಲೇ ಹತ್ಯೆ ಮಾಡುವ ಪ್ರಸಂಗಗಳು ನಡೆಯುತ್ತಲೇ ಇವೆ.

ಹೆಣ್ಣು ಭ್ರೂಣ ಹತ್ಯೆಗೆ ಹಲವು ಕಾರಣಗಳನ್ನು ಊಹಿಸಬಹುದಾಗಿದೆ. ಮೊತ್ತ ಮೊದಲಾಗಿ ವರದಕ್ಷಿಣೆ, ಹೆಣ್ಣು ಮಕ್ಕಳಿಂದ ಪ್ರಯೋಜನ ಇಲ್ಲವೆಂಬ ವೈಯುಕ್ತಿಕ ಸ್ವಾರ್ಥ ಕಾರಣ, ಅವರನ್ನು ಬೆಳೆಸಲು ಇರುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು, ಗಂಡು ಮಕ್ಕಳು ಮಾತ್ರ ತಮಗೆ ಹಾಗೂ ತಮ್ಮ ಪಿತೃಗಳಿಗೆ ಮೋಕ್ಷ ದೊರಕಿಸಿ ಕೊಡುತ್ತಾರೆ ಎಂಬ ಧಾರ್ಮಿಕ ನಂಬಿಕೆ . ಗಂಡು ಮಗುವಾದರೆ ಆಸ್ತಿ ಕುಟುಂಬದಲ್ಲಿಯೇ ಉಳಿಯುತ್ತದೆ ಎಂಬ ವ್ಯಾವಹಾರಿಕ ಕಾರಣ. ತಾನು ಅನುಭವಿಸಿದ ನರಕ ಸದೃಶ ಜೀವನ ನನ್ನ ಮಗಳು ಅನುಭವಿಸಬಾರದೆಂಬ ಕಾರಣವೂ ಸೇರಿದರೆ ಅದು ನಮ್ಮ ಸಮಾಜದ ಕ್ರೌರ್ಯ ಕಾರಣ.

ತೀರ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ೧೦೦೦ ಪುರುಷರಿಗೆ ಕೇವಲ ೯೩೦ ಮಹಿಳೆಯರು ಇದ್ದಾರೆ. ಅಲ್ಲದೆ ಅದು ಮುಂದಿನ ವರ್ಷಗಳಲ್ಲಿ ಇನ್ನೂ ಕಡಿಮೆ ಆಗುವ ಸಾಧ್ಯತೆಗಳಿವೆ. ಆ ಕಾರಣಗಳಿಂದಲೇ ನಿನ್ನೆ ಸುಪ್ರೀಮ್ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡುಕೊಂಡಿದೆ. “ನಿಯಮ ರೂಪಿಸುವ ನೀವು, ಅದನ್ನುಜಾರಿಗೆ ತರುವಲ್ಲಿ ಕಾಳಜಿ ವಹಿಸುತ್ತಿಲ್ಲ, ಸಂಬಂದಿಸಿದ ಸಂಘ, ಸಂಸ್ಥೆ, ಇಲಾಖೆಗಳು ಕಾರ್ಯಶೂನ್ಯವಾಗಿದೆ ” ಎಂದು ಪೀಠವು ಶಕ್ತ ಭಾಷೆಯಲ್ಲಿ ಎಚ್ಚರಿಕೆ ನೀಡಿದೆ.

ಏನೇ ಇರಲಿ, ಈ ಅಮಾನವೀಯ ಸಾಮಾಜಿಕ ಪಿಡುಗನ್ನು ತೊಲಗಿಸಲು ಮೊದಲು ಆಗಬೇಕಾದುದು ಮನುಷ್ಯ ಮನಸ್ಸುಗಳ ಸಂಸ್ಕರಣೆ. ಮಹಿಳೆಯನ್ನು ಸಮಾಜದ “ಹೊರೆ” ಎಂದುಕೊಳ್ಳುವವರಿಗೆ ಹೆಣ್ಣಿಲ್ಲದ ಸಮಾಜದ ಪರಿಕಲ್ಪನೆಯನ್ನು ಮನದಟ್ಟು ಮಾಡಿಸಬೇಕು. ಸರಕಾರವು ಕೂಡ ಮಹಿಳೆಯರಿಗೆ ಹೆಚ್ಚು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಅಲ್ಲದೆ ಭ್ರೂಣ ಹತ್ಯೆಯನ್ನು ತಡೆಗಟ್ಟುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಚಿಗುರುವ ಚಿಗುರ ಚಿವುಟದಿರಿ,
ಬೆಳೆದು ಹೆಮ್ಮರವಾಗಿ
ನೆರಳಾದೀತು, ಗಾಳಿ,
ಬೆಳಕಾದೀತು.. !

Leave a comment

ಹನಿ ಕಥನ

ಹನಿ ಕಥನ

ಯುದ್ಧ ಬೇಕು ಯುದ್ದ ಬೇಕು
ಅಟ್ಟಹಾಸಗೈದವನ ಮಗ ಅಮೆರಿಕಾದಲ್ಲಿ
ಸಾಫ್ಟ್ವೇರ್ ಇಂಜಿನಿಯರ್;
ಶಾಂತಿ, ಶಾಂತಿ, ಯುದ್ದ ಬೇಡ
ಗೋಗರೆಯುತ್ತಿದ್ದವನ ಮಗ
ಗಡಿ ಕಾಯುವ ಯೋಧ..

__

ವೃದ್ದಾಶ್ರಮ ಸೇರಿರುವ ರಾಯರು
ಹೊತ್ತು ಕಳೆಯಲು
“ಪೋಷಕರ ಪೋಷಣೆ ಮಕ್ಕಳ ಕರ್ತವ್ಯ”
ವಿಷಯದ ಮೇಲೆ ಹೊಸ ತಲೆಮಾರಿನ ಯುವಕರಿಗೆ
ಆದರ್ಶ ಪಾಠ ಹೇಳಿಕೊಡುತ್ತಿದ್ದಾರೆ.

__

“ಯತ್ರ ನಾರ್ಯಸ್ತು ಪೂಜ್ಯಂತೆ,
ರಮಂತೆ ತತ್ರ ದೇವತಾ” ಎಂದು
ಮೊನ್ನೆ ಪ್ರವಚನ ಕೊಟ್ಟ ಅಧ್ಯಾತ್ಮಿಕ
ಗುರುವನ್ನು , ನಿನ್ನೆ ಅತ್ಯಾಚಾರ
ಪ್ರಕರಣದಲ್ಲಿ ಬಂದಿಸಲಾಗಿದೆ.

Add Comments