ನ್ಯಾನೋ ಕಥೆಗಳು · ಶೇಮ್ ಶೇಮ್ ಸೌಮ್ಯಾ ..

ಶೇಮ್ ಶೇಮ್ ಸೌಮ್ಯಾ ..

ಸೌಮ್ಯ ಎನ್ ಎಂಬ ಹೆಸರಿನವಳು ನನ್ನ “ನೆನಪಿನ ಸಂಚಿ “ಯಿಂದ ಕದ್ದು ಕನ್ನಡ ಪ್ರಭದಲ್ಲಿ ಪ್ರಕಟಿಸಿರುವ ನ್ಯಾನೋ ಕತೆಗಳು ..

ದಿನಾಂಕ 27 ಡಿಸೆಂಬರ್ 2012 ಕನ್ನಡ ಪ್ರಭ -ಅನೇಕ – ಬೈ-ಟು ಕಾಫಿಯ 18 ನೇ ಪುಟದಲ್ಲಿ ಸಣ್ ಸ್ಟೋರಿ ವಿಭಾಗದಲ್ಲಿ:-

San-kategalu

ದಿನಾಂಕ 31 ಡಿಸೆಂಬರ್ 2012 ಕನ್ನಡ ಪ್ರಭ -ಅನೇಕ – ಬೈ-ಟು ಕಾಫಿಯ 18 ನೇ ಪುಟದಲ್ಲಿ ‘ವೇದಿಕೆ’ ವಿಭಾಗದಲ್ಲಿ:-

My Nano-stories

ಶೇಮ್ ಶೇಮ್ ಸೌಮ್ಯಾ ..
ಶೇಮ್ ಶೇಮ್ ……..!


Leave a Comment

ಕಟ್ ' ಕತೆಗಳು -3 · ಕಟ್ ಕತೆಗಳು

ಕಟ್ ‘ ಕತೆಗಳು -3

painting8
1. ಮುದ್ದಿನ ಮಗಳು ಚಿನ್ನದ ಕಾಲ್ಗೆಜ್ಜೆಗಾಗಿ ಹಠ ಹಿಡಿದು ಎರಡು ದಿನ ಊಟ ಬಿಟ್ಟಿದ್ದಳು , ತಂದೆ ಮಾರನೆ ದಿನ ಕಾಲಿಲ್ಲದ ಹುಡುಗಿಯನ್ನು ಅವಳ ಮುಂದೆ ತಂದು ನಿಲ್ಲಿಸಿದ್ದೆ ತಡ, ಮಗಳ ಉಪವಾಸಕ್ಕೆ ಬ್ರೇಕ್ ಬಿತ್ತು.

2. ದೊಡ್ದಾಸ್ಪತ್ರೆ ‘ಮಣಿಪಾಲ್ ‘ಗೆ ಚಿಕಿತ್ಸೆಗಾಗಿ ಹೋದವನು ಅವರು ಸರಿಯಾಗಿ ಚಿಕತ್ಸೆ ಕೊಡದೆ “ಮನಿ ಪೋಲ್” ಮಾಡಿದ್ದಾರೆ ಅಂತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.

3 . ಮುಖ ಮನಸ್ಸಿನ ಕನ್ನಡಿ ಎಂದವಳು ಉಸುರಿದಾಗ ತನ್ನ ಮನಸ್ಸಿನಲ್ಲಿರುವುದು ಅವಳಿಗೆ ಗೊತ್ತಾಗಬಹುದೇನೋ ಅಂತ ಕಸಿವಿಸಿಗೊಂಡ ಆತ ಮುಖದಲ್ಲಿ ಭಾವ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಆಕೆಗೆ ವಿಚಿತ್ರವಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ.

4. ಆ ಘಟನೆಯನ್ನು ಮರೆಯಬೇಕೆಂದು ಗಂಟಲು ಪೂರ್ತಿ ಕುಡಿದ. ಈಗ ಮರೆಯಬೇಕಿದ್ದ ಆ ಘಟನೆ ನೆನಪಾಗದೆ ಚಡಪಡಿಸುತ್ತಿದ್ದಾನೆ.

5. ನೀನಿಲ್ಲದೆ ಬದುಕಲಾರೆ ಅಂತಿದ್ದ ಹುಡುಗನನ್ನು ‘ಇನ್ನೂ ಬದುಕಿದ್ದೀಯಾ..?’ ಅಂತ ಕುಟುಕಿದಳು . “ನಾನು ಬದುಕುತ್ತಿಲ್ಲ” ಎಂದಷ್ಟೇ ಆತ ಉತ್ತರಿಸಿದ.

6. ಜನುಮ ಕೊಟ್ಟು , ಸಾಕಿ ಸಲುಹಿದ ಅಮ್ಮನಿಗಿಂತ “ಅವಳು” ಇಷ್ಟವಾದ ಅವನ ವಿಕೃತಿಗೆ ಕೊನೆಗೆ ಅವನೊಂದು ಹೆಸರಿಟ್ಟ . “ನಿಸ್ವಾರ್ಥ ಪ್ರೀತಿ”

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ನ್ಯಾನೋ ಕಥೆಗಳು

ಭಕ್ತಿ ಮತ್ತು ಇತರೆ ನ್ಯಾನೋ ಕತೆಗಳು

6
ದತ್ತು
ಮಕ್ಕಳಿಲ್ಲದ ದಂಪತಿಗಳು ಮಗುವನ್ನು ದತ್ತು ಪಡೆಯಲು ಅನಾಥಾಲಯಕ್ಕೆ ಬಂದಿದ್ದರು. ಅವರು ತಂದಿದ್ದ ಪತ್ರಗಳನ್ನೆಲ್ಲ ಪರಿಶೀಲಿಸಿದ ಅಲ್ಲಿನ ಫಾದರ್ ‘ನಿಮಗೆ ಮಕ್ಕಳೇ ಆಗುವುದಿಲ್ಲವೆಂದು ಸಾಬೀತು ಪಡಿಸುವ ಸರ್ಟಿಫಿಕೇಟ್ ಇಲ್ಲದೆ ನಿಮಗೆ ಮಗುವನ್ನು ಕೊಡಲಾಗದು’ ಅಂತ ಹೇಳಿದರು. ಅವಳು ಅವನ ಮುಖ ನೋಡುವಷ್ಟರಲ್ಲಿ ಅವನು ಇಲ್ಲೂ ತಲೆ ತಗ್ಗಿಸಿದ್ದ.

ಜಾಹೀರಾತು
ಗುಟ್ಕಾ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸಲು, ಗಂಟಲು ಕ್ಯಾನ್ಸರಿಂದ ಸತ್ತ ಯುವಕನ ಫೋಟೋ ಇರುವ ಜಾಹೀರಾತು ಫಲಕವನ್ನು ನಗರದ ಬಸ್ ಸ್ಟಾಪಿನಲ್ಲಿ ಸ್ಥಾಪಿಸಿದ್ದರು. ಅದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಆ ಯುವಕನ ತಂದೆಯ ಪಾಲಿಗೆ ಅವರ ಮಗ ಪ್ರತೀ ದಿನ ಸಾಯುತ್ತಿದ್ದ.

ಭಕ್ತಿ
ಮದುವೆಯಾಗಿ ವರ್ಷಗಳಾದರೂ ಮಗುವಾಗದ್ದರಿಂದ ಅವಳು ಗಂಡನ ಜೊತೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವ ಹರಕೆ ಹೊತ್ತಿದ್ದಳು. ಗಂಡ ದೇವಸ್ಥಾನಕ್ಕೆ ಹೊರಡಲು ಒಪ್ಪದಿದ್ದಾಗ ಆಕೆ ಆತನನ್ನು ದೂಶಿಸತೊಡಗಿದಳು.
“ದೇವರ ಮೇಲೆ ಭಯ ಭಕ್ತಿ ಇದ್ದರೆ ತಾನೇ ದೇವಸ್ಥಾನ, ಪೂಜೆ. ನೀವು ನಾಸ್ತಿಕರು, ಆ ದೇವರ ಮೇಲೆ ನಿಮಗೆ ಸ್ವಲ್ಪನೂ ಭಕ್ತಿ ಇಲ್ಲ”. “ಹೌದು ..ನಮ್ಮ ಕಾರ್ಯ ಸಾಧನೆಗೆ ದೇವರಲ್ಲಿ ಕರಾರು ಮಾಡುವಂಥಹ ಭಕ್ತಿ ನನ್ನಲ್ಲಿಲ್ಲ” . ಆತನೆಂದ.

ಸಾವು
ಪ್ರೀತಿಸಿ ದೂರವಾಗಿದ್ದ ಅವಳು ಅಚಾನಕ್ಕಾಗಿ ಸಿಕ್ಕಿದವಳೇ “ಜೀವಂತವಾಗಿದ್ದೀಯಾ ..?” ಅಂತ ಕೇಳಬೇಕೆಂದುಕೊಂಡ . ತಟ್ಟನೆ ಅವನಿಗೆ ನೆನಪಾಯ್ತು .. ಸತ್ತದ್ದು ಅವನೇ ಎಂದು ..ಅವಳ ಹೃದಯದಲ್ಲಿ.

ಅಣಕ
ಜೀವನಲ್ಲಿ ಜುಗುಪ್ಸೆಗೊಂಡ ಅವನು ಕೊನೆಗೊಂದು ದಿನ ಮನೆ, ಹೆಂಡತಿ ಮತ್ತು ತನ್ನೆರಡು ಪುಟ್ಟ ಮಕ್ಕಳನ್ನು ತೊರೆದು ದೂರದ ಹಿಮಾಲಯಕ್ಕೆ ಹೊರಟಿದ್ದ. ದಾರಿಯಲ್ಲಿ ಆಲದ ಮರದ ಪುಟ್ಟ ಗೂಡಿನಲ್ಲಿದ್ದ ಹಕ್ಕಿಯೊಂದು ತನ್ನ ಮರಿಗಳ ಬಾಯಿಗೆ ತುತ್ತನ್ನಿಕ್ಕುವುದನ್ನು ನೋಡಿದ ಅವನಿಗದು ತನ್ನನ್ನು ಅಣಕಿಸಿದಂತೆ ಕಂಡಿತು.

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕಟ್ ಕತೆಗಳು

ಕಟ್ ‘ ಕತೆಗಳು -2

images

1. ಈಗಷ್ಟೇ ಮದುವೆಯಾಗಿದ್ದೀವಿ, ಇನ್ನೊಂದಿಷ್ಟು ಕಾಲ ಹೋಗಲಿ ಅಂತ ಮೊದಲನೆಯ ಮಗುವನ್ನು ಗರ್ಭಪಾತ ಮಾಡಿದ್ದರು. ಈಗಷ್ಟೇ ಹೊಸ ಮನೆ ಕಟ್ಟಿಸಿದ್ದೀವಿ, ಈ ಸಾಲ ಗೀಲ ಎಲ್ಲ ಮುಗೀಲಿ ಆಮೇಲೆ ಸಾಕು ಮಗು ಅಂತ ಎರಡನೆಯ ಮಗುವನ್ನೂ ಗರ್ಭಪಾತ ಮಾಡಿದರು. ಅದೇಕೋ ಆಮೇಲೆ ಅವಳ ಮುಟ್ಟು ನಿಲ್ಲಲೇ ಇಲ್ಲ.

2. ಈ ಜಮಾನ ನಿಮ್ಮಂತಹ ನವಯುವಕರದು..” ಎಂದವರು ಮತ್ತೊಂದು ಕಡೆ “ಈ ಕಾಲ ಬಹಳ ಕೆಟ್ಟಿದೆ ” ಅಂದರು… ಕೊನೆಗೆ ಕಾಲವನ್ನು ಕೆಡಿಸಿದ ಅಪರಾಧವನ್ನೂ ಯುವಕರ ತಲೆಮೇಲೆ ಹಾಕಿ ನಿರಾಳವಾದರು.

3. ‘ಪ್ರೀತಿ’ ಎಂಬ ವಿಷಯದಲ್ಲಿ ನಡೆದ ಸಣ್ಣ ಕತಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವನು ಬರೆದದ್ದು ಇಷ್ಟೇ “ಪ್ರೀತಿ ಅಂದರೆ ನಾನು-ನನ್ನವಳು”.

4. ತನ್ನ ಮುಖದಲ್ಲಿ ಮೊಡವೆಯಿಂದ ಉಂಟಾದ ಕಲೆಯಿಂದ ಬೇಸರಗೊಂಡಿದ್ದ ಅವಳನ್ನು “ಆ ಚಂದಮಾಮನಲ್ಲೂ ಕಲೆಯಿಲ್ಲವೇ..?” ಅಂತ ಮುದ್ದಾಗಿ ಅವನು ಕೇಳಿದ್ದೇ ತಡ, ಅವಳ ಮುಖದಲ್ಲಿ ಮತ್ತದೇ ಹಳೆಯ ಪ್ರಸನ್ನತೆ ಮೂಡಿತು.

5. ಗಾಂಧೀ ಜಯಂತಿಯ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ನಡೆಸಿದ ಗಾಂಧಿ ಛದ್ಮ ವೇಷ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ದುಡ್ಡಿನಿಂದ ಕುಡಿದು ತೂರಾಡುತ್ತಿದ್ದ ನಮ್ಮ ಕುಮಾರಣ್ಣನನ್ನು ಸ್ನೇಹಿತರು ಮಧ್ಯ ರಾತ್ರಿ ಸೇಫ್ ಆಗಿ ಮನೆಗೆ ತಲುಪಿಸಿದ್ದಾರಂತೆ.

6. ಒಂದಷ್ಟು ಕೊಲೆ, ದರೋಡೆ, ಬಾಂಬ್ ಸ್ಪೋಟ, ರೇಪ್ ಸುದ್ದಿಗಳು ಇರದಿದ್ದರೆ ಆ ಸಂಪಾದಕನಿಗೆ ತನ್ನ ಪತ್ರಿಕೆ ಪೇಲವ ಅಂತ ಅನ್ನಿಸ್ತಿತ್ತು.

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕಟ್ ಕತೆಗಳು

ಕಟ್ ‘ ಕತೆಗಳು

1. “ಇಲ್ಲಿಗೆ ಎಲ್ಲ ಮುಗಿಯಿತು. ಇನ್ಯಾವತ್ತೂ ನಿನ್ನ ವಿಷಯಕ್ಕೆ ಬರಲ್ಲ .. ಇನ್ಯಾವತ್ತೂ ನಿನ್ನ ಮುಖ ನೋಡಲ್ಲ” ಅಂತ ಹೇಳಿ ರೋಷದಿಂದ ಹೊರಟು ಬಂದ ಅವನು ಕಣ್ಣುಗಳಲ್ಲಿ ಅವಳನ್ನು ತುಂಬಿಕೊಂಡಿದ್ದನು.

2. ಆ ಹುಡುಗನಿಗೆ ತಾನು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ಬೇಜಾರು ಪಕ್ಕದ ಮನೆಯ ವಿದ್ಯಾಳಿಗೆ ಡಿಸ್ಟಿಂಕ್ಷನ್ ಬಂದಿದೆ ಅಂತ ಕೇಳಿದಾಗ ದೂರವಾಗಿತ್ತು.

3. ಮರಿ ಮೀನುಗಳು ತಾಯಲ್ಲಿ ಕೇಳಿತು, “ನಾನು ನೀರಲ್ಲೇ ಏಕೆ ಬದುಕಬೇಕು..? ನೆಲದ ಮೇಲೆ ಬದುಕಲಾಗದೆ..?” ತಾಯಿ ಮೀನು ಹೇಳಿತು.. ಮರೀ.. ನೀರು FISHಗೆ.. ನೆಲ “SELFISH”ಗೆ..!

4. ಹಣ, ಅಂತಸ್ತಿನ ಹಿಂದೆ ಬಿದ್ದ ಅವನು ವರ್ಷಗಳ ನಂತರ ವಿದೇಶದಿಂದ ಮನೆಗೆ ಬಂದಿದ್ದ. ಹಾಲುಗಲ್ಲದ ತನ್ನ ಮಗು ಅವನನ್ನು ನೋಡಿದವನೇ ತೊದಲುತ್ತ ಪ್ರಶ್ನಿಸಿದ, “ಇದು ಯಾರಮ್ಮಾ ..? ”

5. ದಿನಾ ದೇವಸ್ಥಾನಕ್ಕೆ ಹೋಗಿ ಊರವರಿಂದ “ತುಂಬಾ ಒಳ್ಳೆಯ ಹುಡುಗಿ” ಅಂತ ಸರ್ಟಿಫಿಕೇಟ್ ಪಡೆದ ವಿಶಾಲಮ್ಮನ ಮಗಳು ಮದುವೆಯ ಮುಂಚಿನ ರಾತ್ರಿ ಪೂಜಾರಿ ಜೊತೆ ಓಡಿಹೊದಳು.

6. ಎಂದೂ ತಮ್ಮೊಳಗೆ ನಡೆಯುತ್ತಿದ್ದ ಕಲಹದಿಂದ ಬೇಸತ್ತು ಅವರು ಡೈವೋರ್ಸ್ ಪಡೆದಿದ್ದರು. ಈಗ ಬೋರ್ಡಿಂಗ್ ಸ್ಕೂಲಲ್ಲಿ ಕಲಿಯುತ್ತಿರುವ ಮಗನ ಬೇಸಿಗೆ ರಜೆಗೆ ಯಾರ ಮನೆಯಲ್ಲಿರಬೇಕೆಂಬ ವಿಚಾರದಲ್ಲಿ ಮತ್ತೆ ಕಲಹ ನಡೆಯುತ್ತಾ ಇದೆ.

7. ಕೊನೆಯ ಬಾರಿಗೆ ನಂಗೆ “ಐ ಲವ್ ಯೂ” ಅಂದದ್ದು ಯಾವಾಗ? ಅಂತ ಅವಳು ಕೇಳಿದ್ದೆ ತಡ, ಆತ ಎಂದಿನಂತೆ ಕಿಸೆಯಲ್ಲಿದ್ದ ಚಾಕೊಲೇಟನ್ನು ಅವಳಿಗೆ ಕೊಟ್ಟ..ಅವಳು ಅದನ್ನು ಚಪ್ಪರಿಸುತ್ತಾ ನುಸು ನಾಚಿಕೊಂಡಳು!!!!!!

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು

ZSDEMAU EC001
ಹೊಸತು
ಯಾವತ್ತೂ ಹೊಸತನವನ್ನು ಇಷ್ಟಪಡುತ್ತಿದ್ದ ಅವನು ಹೊಸದಾಗಿ ಬಂಗಲೆಯನ್ನು ಕಟ್ಟಿದ. ಅದರಲ್ಲಿ ಎಲ್ಲಾ ವಸ್ತುಗಳೂ ಹೊಸತಾಗಿದ್ದವು. ಹಳೆ ಮನೆಯ ಸಾಮಾಗ್ರಿಗಳನ್ನೆಲ್ಲವನ್ನೂ ಹಳೆಯದು ಎಂಬ ಕಾರಣಕ್ಕೆ ಅಲ್ಲೇ ಬಿಟ್ಟಿದ್ದ. ಕೊನೆಗೆ ಹೆಂಡತಿಯ ಅಣತಿಯಂತೆ ವಯಸ್ಸಾದ ತಾಯಿಯನ್ನೂ ವೃದ್ಧಾಶ್ರಮಕ್ಕೆ ಸೇರಿಸಿದ.

ಧರ್ಮ
“ಧರ್ಮಗಳು ಮನುಷ್ಯರನ್ನು ಒಗ್ಗೂಡಿಸಲೇ ಹೊರತು ಬೇರ್ಪಡಿಸುವುದಕ್ಕಲ್ಲ” ಅಂತ ಭಾಷಣ ಮಾಡಿದ ಧರ್ಮ ಗುರುಗಳು ಅನ್ಯ ಜಾತಿಯವನನ್ನು ಪ್ರೀತಿಸಿದ ತನ್ನ ಮಗಳನ್ನು “ಮರ್ಯಾದ ಹತ್ಯೆ” ಮಾಡಿದ ತಪ್ಪಿಗೆ ಜೀವಿತಾವಧಿ ಜೈಲು ಶಿಕ್ಷೆ ಅನುಭವಿಸಿತ್ತಿದಾನೆ.

ನೆನಪು
ಒಂದನೇ ತರಗತಿಯಲ್ಲಿದ್ದಾಗ ತನ್ನ ಶಾಲೆಯಲ್ಲಿ ಮೊದಲ ಬಾರಿಗೆ ಏರ್ಪಡಿಸಿದ್ದ ಚಲನ ಚಿತ್ರ ಪ್ರದರ್ಶನ ನೋಡುತ್ತಿದ್ದ ಹುಡುಗನನ್ನು ತಂದೆ ತೀರಿ ಹೋಗಿದ್ದಾರೆ ಅಂತ ಎಳೆದುಕೊಂಡು ಹೋಗಿದ್ದರು. ಈಗ ಯುವಕನಾದ ಆತನಿಗೆ ಸತ್ತ ತಂದೆಯ ಮುಖಕ್ಕಿಂತ ಅರ್ಧ ನೋಡಿದ ಆ ಚಿತ್ರವೇ ಹೆಚ್ಚು ನೆನಪಾಗುತ್ತಿತ್ತು.

ಕಲೆ
ಅವನೊಬ್ಬ ಸಾಧ್ವಿ. ಬದುಕುವ ಕಲೆಯನ್ನು ಬೋಧಿಸುತ್ತಿದ್ದ.. ದೇಶ ವಿದೇಶದಲ್ಲಿ ಸಾವಿರಾರು ಶಿಷ್ಯಗಣವನ್ನೂ ಹೊಂದಿದ್ದ. ಕೊನೆಗೊಮ್ಮೆ ಆತ ಸತ್ತ. ಅಂದ ಹಾಗೆ ಸಾವು ಸಹಜವಲ್ಲಂತೆ.. ಆತ್ಮಹತ್ಯೆಯಂತೆ..!

ಪ್ರೀತಿ
ಪ್ರೀತಿಯೆಂದರೆ ಬೆಸುಗೆ, ಬಂಧ, ಬಂಧನ, ಅದೇ ಬದುಕು ಅಂತಿದ್ದ ಪ್ರೇಮಿಯೊಬ್ಬ ಅಕಾಲ ಮರಣವನ್ನಪ್ಪಿದ. ಅಂದ ಹಾಗೆ ಅವನು ಪ್ರೇಯಸಿ ಕೈ ಕೊಟ್ಟಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡದ್ದಂತೆ.

ಭಾಗ್ಯ
ಮದುವೆಯ ಮುಂಚಿನ ದಿನ ಓಡಿ ಹೋದ ಮಗಳನ್ನು ನೆನಪಿಸಿ ಕಂಬನಿ ಮಿಡಿಯುತ್ತಿದ್ದ ತಾಯಿಗೆ, ಇಷ್ಟಪಟ್ಟವನೊಂದಿಗೆ ಬಾಳಲಾಗದ ತನ್ನ ಬಾಳು ಒಮ್ಮೆಲೇ ನೆನಪಾಗಿ ತನಗೆ ಸಿಗದ ಭಾಗ್ಯ ಮಗಳಿಗೆ ದೊರೆಯಿತೆಂದು ಮರುಕ್ಷಣದಿಂದ ಸಂತೋಷಪಟ್ಟಳಂತೆ..!


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕ್ಕಿಸಿ