ಮನಸಿನ ಹಾ(ಪಾ)ಡು · ಶುಭವಾಗಲಿ ನಿನಗೀದಿನ..!

ಶುಭವಾಗಲಿ ನಿನಗೀದಿನ..!


                         ಸೂರ್ಯನ ಪ್ರೀತಿಗೆ ಸೋತು
                         ಅರಳಿನಿಂತ ಸೂರ್ಯಕಾಂತಿಯ ಘಮೆ..
                         ಜೊತೆಗೆ ಮಳೆ ಹನಿಯ ತುಂತುರು…
                         ಹಕ್ಕಿಗಳ ಕಲರವ..ಜಿಗಿ ಹುಳಗಳ ಝೇಂಕಾರ..
                         ಆಯಿತು ಹೊಸ ಕನಸುಗಳ ಶುಭೋದಯ…!

                         ಮತ್ತೆ ಬಂದಿದೆ ಹೊಸ ಚೈತನ್ಯದ ನವ ದಿನ
                         ಹೊಸ ಬಯಕೆ ಹೊಸ ಕನಸುಗಳ ನವ ಜೀವನ..!
                         ಮುಂಜಾನೆಯ ಸವಿಯಲಿ ಮುಪ್ಪೂ ಯವ್ವನ!
                         ಹೊರಡು ನೀನು,ಶುಭವಾಗಲಿ ನಿನಗೀದಿನ..!

                         ಕಂಡ ಕನಸುಗಳ ನನಸಾಗಿಸೋ ಛಲ
                         ನಿನ್ನೆಗಳು ಕೊಟ್ಟ ನೋವನು ಮರೆಯುವ ಬಲ
                         ಸಾಧನೆಯ ಹಾದಿಯಲಿ ಮುನ್ನೇರುವ ಹಂಬಲ
                         ಕೊಡಲಿ ಈ ಹೊಸ ದಿನದ ರಾಶಿ ಫಲ!

                         ಹೊಸ ಕನಸ ಹೊತ್ತು ಸೂರ್ಯ ಏರಿದ್ದಾನೆ ಮೂಡಣ..
                         ಸಾಧನೆಯ ಎವರೆಸ್ಟ್ ಏರಬೇಕು.. ತೊಡು ನೀ ಪಣ!
                         ಗುರಿಯತ್ತ ಸಾಗಲಿ ನಿನ್ನ ಮುಂದಿನ ಪಯಣ..
                         ಸೋಲಿದೆ.. ಆದರೆ ಗೆಲ್ಲಬೇಕಿದೆ.. ಅದುವೇ ಜೀವನ..!
                         ಹೊರಡು ನೀನು,ಶುಭವಾಗಲಿ ನಿನಗೀದಿನ..!

ಇನ್ನೂ ಪ್ರೀತಿಸುವುದಾದರೆ ...! · ನೆನಪಿನ ಹನಿ

ಇನ್ನೂ ಪ್ರೀತಿಸುವುದಾದರೆ …!

                  ಇನ್ನೂ ಪ್ರೀತಿಸುವುದಾದರೆ ನಾನು ಮರಣವನ್ನು ಪ್ರೀತಿಸುತ್ತೇನೆ…!!
                  ಕಾರಣ
                  ಅದೆಂದೂ ನನಗೆ ಮೋಸ ಮಾಡುವುದಿಲ್ಲ..
                  ಒಂದು ದಿನ ಅದು ನನ್ನ ಹುಡಿಕಿ ಬಂದೇ ಬರುವುದು..!
ಕನಸಲ್ಲಾದರೂ..! · ನೆನಪಿನ ಹನಿ

ಕನಸಲ್ಲಾದರೂ..!

                ಬೆಳಗಾಗುವ ತನಕ ಕಾದೆ… ನನ್ನ ಕನಸಿನಲ್ಲಿ ನಿನ್ನ ಕಾಣಲು…
                ಆದರೆ…
                ನಿನ್ನ ನೆನಪುಗಳು ನನ್ನ ಜತೆಗೂಡಿ..
                ಮಲಗುವುದ ಮರೆತು ಹೋದೆ..!
                ನನ್ನನ್ನೊಮ್ಮೆ ಏಕಾಂಗಿಯಾಗಿ ಬಿಟ್ಟು ಬಿಡು..
                ಕನಸಲ್ಲಾದರೂ ನಿನ್ನನ್ನೊಮ್ಮೆ ನಾನು ಕಾಣಬೇಕು…!
ಕೊನೆಯ ಬಾರಿಗೆ..! · ನೆನಪಿನ ಹನಿ

ಕೊನೆಯ ಬಾರಿಗೆ..!

ಎಂದೂ ಕಾಯುವ ದಾರಿಯಲಿ ಕೆಲವೊಮ್ಮೆ
ನನ್ನ ಕಾಣದಿರಲು ನೆನೆಪಿಸಿಕೋ ಎನ್ನುತ್ತಿದ್ದ
ಅವಳು ಕೊನೆಯ ಬಾರಿಗೆ ಕಂಡಾಗ ಹೇಳಿದ್ದು
ಮರೆತುಬಿಡು ಎಂದಾಗಿತ್ತು..!!
ಎಷ್ಟು ಪ್ರೀತಿಸುತ್ತೇನೆ ಎಂದು..

ಎಷ್ಟು ಪ್ರೀತಿಸುತ್ತೇನೆ ಎಂದು..!

ನಾನು ಕಂಡ ಕನಸಿಗೂ.. ಹರಿಸಿದ ಕಣ್ಣೀರಿಗೂ
ರೆಕ್ಕೆಗಳು ಇದ್ದಿದ್ದರೆ ಅವು ಹಾರಿಬಂದು…
ನಿನ್ನ ಬಳಿ ಸಾರಿ ಸಾರಿ ಹೇಳುತ್ತಿದ್ದವು…
ನಾನು ನಿನ್ನನು ಎಷ್ಟು ಪ್ರೀತಿಸುತ್ತೇನೆ ಎಂದು…!!

ನಾನು ನಿನಗಾಗಿ ಪರಿತಪಿಸಿ ಅಲೆದು
ಸವಕಲಾದ ದಾರಿಗಳು,ನಿಂತ ತೀರಗಳು..
ನನ್ನ ಹೆಜ್ಜೆ ಗುರುತ ಮಾಸದಿದ್ದರೆ
ಅವು ನಿನಗೆ ಸಾರಿ ಸಾರಿ ಹೇಳುತ್ತಿದ್ದವು
ನಾನು ನಿನ್ನನು ಎಷ್ಟು ಪ್ರೀತಿಸುತ್ತೇನೆ ಎಂದು…!!

ನಿನ್ನ ಹೆಸರ ಕೂಗಿ ಕಳೆದು ಹೋದ ಶಬ್ದಕೂ..
ನಿನ್ನ ಯೋಚನೆಯಲಿ ಮರುಗಿ ಬೆಂದು ಹೋದ ಹೃದಯಕೂ..
ಕೈ ಕಾಲು ಇದ್ದಿದ್ದರೆ…ನಿನ್ನ ಬಳಿ ಬಂದು
ಅವು ಸಾರಿ ಸಾರಿ ಹೇಳುತ್ತಿದ್ದವು…
ನಾನು ನಿನ್ನನು ಎಷ್ಟು ಪ್ರೀತಿಸುತ್ತೇನೆ ಎಂದು…!!

ನೀನಿಲ್ಲದ ಜಗತ್ತು..! · ನೆನಪಿನ ಹನಿ

ನೀನಿಲ್ಲದ ಜಗತ್ತು..!


              ನಿನ್ನ ಯೋಚಿಸಿ ನಾನೆಂದೂ ಮರುಗಲಾರೆ..
              ಆದರೆ…
              ನಿನ್ನ ನೆನಪುಗಳು ಮೂಡದ ಹೃದಯವ ನೀ ಕೊಡಬೇಕು..!

              ನೀ ಬರುವ ದಾರಿಯಲಿ ನಾನೆಂದೂ ಕಾಯಲಾರೆ…
              ಆದರೆ…
              ನಿನ್ನ ಪ್ರತಿಬಿಂಬ ಮೂಡದ ಕಣ್ಣ ನೀ ಕೊಡಬೇಕು..!

              ನಿನ್ನ ಬದುಕಲ್ಲಿ ಮತ್ತೆ ನಾನೆಂದೂ ಬರಲಾರೆ..
              ಆದರೆ…
              ನೀನಿಲ್ಲದ ಜಗತ್ತಿಗೆ ನನ್ನ ನೀ ಪರಿಚಯಿಸಬೇಕು..!

ನಿನ್ನ ಸ್ಪರ್ಶ...! · ನೆನಪಿನ ಹನಿ

ನಿನ್ನ ಸ್ಪರ್ಶ…!

ನಿನ್ನ ನೆನಪಿನ ತನ್ಮಯತೆಯಿಂದ
ನನಗರಿಯದೆ ಕಣ್ಣಿಂದ ಜಾರಿಬಿದ್ದ ಹನಿಯಲ್ಲೂ
ನಿನ್ನ ಸ್ಪರ್ಶದ ಅನುಭೂತಿಯಿತ್ತು….!!

ನೆನಪಿನ ಹನಿ · ಮೌನವಾದೆ...!

ಮೌನವಾದೆ…!

ನನ್ನನ್ನು ಎಷ್ಟು ಪ್ರೀತಿಸ್ತೀಯ ಅಂತ ಅವಳು ಕೇಳಿದಾಗ
ನಾನು ಮತ್ತೆ ಮೌನವಾದೆ…!
ಕಾರಣ ಕೇವಲ ಮಾತಿನಲ್ಲಿ ನನ್ನ ಪ್ರೀತಿಯ ಹಿಡಿದಿಡಲಾಗದು
ಅಂತ ನನಗೆ ಅನಿಸಿತು……!

ಕಡಲು ಸೇರಿದ ಹನಿ...! · ನೆನಪಿನ ಹನಿ

ಕಡಲು ಸೇರಿದ ಹನಿ…!


              ನಿನ್ನ ನೆನಪಿನ ತನ್ಮಯತೆಯಿಂದ
              ಕಣ್ಣಿಂದ ಜಾರಿಬಿದ್ದ ಹನಿಯೊಂದು
              ತೀರದಲಿ ಬಿದ್ದು ಕಡಲು ಸೇರಿತು…
              ನೆನೆಯಲಾರೆ.. ನಿನ್ನ ಇನ್ನೆಂದಿಗೂ..
              ಆ ಹನಿಯ ನೀ ಹುಡುಕಿ ಕೊಟ್ಟರೆ….!

ನೆನಪಿನ ಹನಿ · ಸಬೂಬು…

ಸಬೂಬು…

ಅಂದು ನಾ ನಿನ್ನ ನೆರಳಂತೆ ಎಂದು ನೀ ಉಸುರಿದಾಗ
ತುಂಬಾ ಸಂತೋಷಪಟ್ಟೆ…
ಆದರೆ ಅದು ಇರುಳ ನೀರವತೆಯಲ್ಲಿ ಕಳೆದು ಹೋಗಲು
ನೀ ಕೊಟ್ಟ  ಸಬೂಬು ಎಂದು ತಿಳಿದಿರಲಿಲ್ಲ….!