ಬಾಗಿಲು · ಸಣ್ಣ ಕತೆ

ಬಾಗಿಲು

door
ಮದುವೆಯ ಮೊದಲ ರಾತ್ರಿ ಗಂಡ ಹೆಂಡತಿ ಒಂದು ಪಂದ್ಯ ಕಟ್ಟಿದರು. ಬೆಳಗ್ಗಿನ ತನಕ ಯಾರಿಗೂ ಬಾಗಿಲು ತೆರೆಯಬಾರದು ಎಂದಾಗಿತ್ತು ಆ ಪಂದ್ಯ.ಮೊದಲು ಗಂಡಿನ ಅಪ್ಪ ಅಮ್ಮ ಅವರನ್ನು ನೋಡಲು ಬಂದರು. ಅವನು ಮತ್ತು ಅವಳು ಇಬ್ಬರೂ ಬಾಗಿಲಿನ ಹಿಂದಿದ್ದರು, ಬಂದದ್ದು ಅವನ ಅಪ್ಪ ಎಂದು ತಿಳಿದಾಕ್ಷಣ ಪರಸ್ಪರ ಮುಖ ನೋಡಿಕೊಂಡರು. ಅವನಿಗೆ ಬಾಗಿಲು ತೆರೆಯಬೇಕೆಂದನಿಸಿತಾದರೂ, ಎಲ್ಲಿ ಸೋತು ಹೋಗುತ್ತೇನೋ ಅಂದುಕೊಂಡು ಸುಮ್ಮನಾದ. ಅವನ ಅಪ್ಪ ಅಮ್ಮ ಕಾದು ಇನ್ನೂ ಬಾಗಿಲು ತೆರೆಯದಿರುವುದನ್ನು ಕಂಡು ಮರಳಿ ಹೋದರು. ಸ್ವಲ್ಪ ಸಮಯದ ಬಳಿಕ ಹೆಣ್ಣಿನ ಹೆತ್ತವರು ಬಂದು ಬಾಗಿಲು ತಟ್ಟಿದರು. ಇಬ್ಬರೂ ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಬಾಗಿಲ ಬಡಿತ ಅವಳಿಗೆ ಅಸಹನೀಯವಾಗತೊಡಗಿತು. ಏನೋ ನೆನಪಾಗಿ ದುಃಖ ಉಮ್ಮಳಿಸಿ ಬಂತು.. ನನ್ನಿಂದ ಇದು ಸಾಧ್ಯವಿಲ್ಲ.. ನನ್ನ ಹೆತ್ತವರಿಗೆ ನೋವು ಕೊಡಲಾರೆ ಎಂದವಳೇ ಬಾಗಿಲು ತೆರೆದಳು. ಆ ಕ್ಷಣ ಅವನು ಏನೂ ಮಾತನಾಡದೆ ಸುಮ್ಮನಾದನು.
ವರ್ಷಗಳು ಉರುಳಿತು, ಅವರಿಗೀಗ 4 ಗಂಡು ಮತ್ತು 1 ಹೆಣ್ಣು ಮಗಳು. ಅವನು ದಿನಗಳ ಹಿಂದೆ ಹುಟ್ಟಿದ ಮಗಳಿಗೆ ಅದ್ದೂರಿಯಾಗಿ ಪಾರ್ಟೀ ಆಯೋಜಿಸಿದನು. ಕುಟುಂಬದ ಪ್ರತಿ ಸದಸ್ಯನಿಗೂ ಆಮಂತ್ರಣವಿತ್ತು. ಅದೇ ರಾತ್ರಿ ಅದೇನೋ ಕನವರಿಸುತ್ತಿದ್ದ ಅವನಲ್ಲಿ ಅವಳು ಇದುವರೆಗೂ ಯಾವ ಮಕ್ಕಳಿಗೂ ಮಾಡದ ಇಷ್ಟು ದೊಡ್ಡ ಪಾರ್ಟೀ ಈಗ ಮಾಡಲು ಕಾರಣವನ್ನು ಕೇಳಿದಳು.. ಅವನು ಮುಗುಳ್ನಗುತ್ತಾ ಉತ್ತರಿಸಿದ..
“ಇವಳು ಮಾತ್ರ ನನಗಾಗಿ ಬಾಗಿಲು ತೆರೆಯುತ್ತಾಳೆ”

_ಹುಸೇನಿ
ಮೂಲ: ಅಂತರ್ಜಾಲ

Leave a comment