ಕೊಲ್ಲುತಿದೆ..

ಕೊಲ್ಲುತಿದೆ..

ನೀ ಕೊಟ್ಟ ನೋವನ್ನು
ಎದೆಯಾಳದಲ್ಲಿ
ಅಡಗಿಸಿದ್ದೆ..
ಅದು ನಿನ್ನ ಕೊನೆಯ
ಉಡುಗೊರೆಯೆಂದು
ಸಂಭ್ರಮಿಸಿದ್ದೆ..
ಈಗ ನೋಡು
ಅವು ಕೊಳೆತು
ಕೊಲ್ಲುತ್ತಿವೆ …


Leave a Comment

ಕಾಯುತ್ತಿದ್ದೇನೆ..!

ಕಾಯುತ್ತಿದ್ದೇನೆ ..

ಮೌನವೆಂಬ ಸಾಗರದ ಅಂಚಲಿ ನಿಂತು
ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು
ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ
ನೀನು ಕೇಳದೆ ಹೋದದ್ದೂ ಅದೇ…
ಆದರೂ ಕಾಯುತ್ತಿದ್ದೇನೆ ..
ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…
ನ್ಯಾನೋ ಕಥೆಗಳು

ಇನ್ನಷ್ಟು ನ್ಯಾನೋ ಕತೆಗಳು


ಕೋಮುವಾದ
ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ.
ಅದೊಂದು ದಿನ ಆತ ಎಲ್ಲೋ ಹೊರಡಲು ಅಣಿಯಾಗುತ್ತಿದ್ದಂತೆ ಮೊಬೈಲ್ ರಿಂಗಣಿಸಿತು.. ಅಣ್ಣಾ.. ಇಬ್ಬರನ್ನು ಪಾರ್ಕಿನಲ್ಲಿ ಹಿಡ್ಕೊಂದಿದ್ದೀವಿ .. ಹುಡುಗಿ ನಮ್ಮ ಜಾತಿ.. ಹುಡುಗ ಬೇರೆ ಜಾತಿ.. “ಬಿಡಬೇಡಿ.. ಅವರನ್ನ .. ಸರಿಯಾಗಿ ಬುದ್ದಿ ಕಲಿಸಿ ”
ಆತ ಫೋನಿಟ್ಟ . ಸಂಜೆ ಮನೆಗೆ ಬಂದಾಗ ಕಾಲೇಜಿಂದ ಬಂದ ತನ್ನ ಮಗಳ ಬೆನ್ನಲ್ಲಿ ಬಾಸುಂಡೆ ಎದ್ದಿತ್ತು.

ಶವಪೆಟ್ಟಿಗೆ
ಆತ ಶವಪೆಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. ಮಳೆಗಾಲದಲ್ಲಿ ಆತನ ವ್ಯವಹಾರ ಕುಸಿದಿತ್ತು. ಮಾತಿನ ನಡುವೆ “ಈ ಮಳೆಗಾಲದಲ್ಲಿ ಯಾರೂ ಸತ್ತಿಲ್ಲ” ಅಂತ ತನ್ನ ತನ್ನ ಗೆಳೆಯನಲ್ಲಿ ಅಳಲು ತೋಡಿಕೊಳ್ಳುವಷ್ಟರಲ್ಲಿ ‘ನಮ್ಮೂರಿಗೆ ಬರುತ್ತಿದ್ದ ಗವರ್ಮೆಂಟ್ ಬಸ್ಸು ಸೇತುವೆ ಕೆಳಗೆ ಬಿದ್ದು ಕೆಲವರು ಸತ್ರಂತೆ ‘ ಓಡಿ ಬಂದ ಅವನ ಸಹಾಯಕ ಏದುಸಿರು ಬಿಡುತ್ತ ಉಸುರಿದ. ಆತನಿಗೆ ಒಳಗೊಳಗೇ ಸಂಭ್ರಮ. ಕೂಡಲೇ ಕಾರ್ಯ ಪ್ರವೃತ್ತನಾದ. ಕೆಲ ಸಮಯದ ಬಳಿಕ ಮೊಬೈಲ್ ರಿಂಗಣಿಸಿತು.. “ರೀ.. ರೀ… ನಮ್ .. ನಮ್… ನಮ್ಮಗಳು ಬ.. ಬ ಬಸ್ಸು ಸೇ .. ಸೇ..ಸೇತುವೆ ” ಆತ ಫೋನಿಟ್ಟು ತನ್ನ ಮಗಳಿಗೆ ಸರಿ ಹೊಂದುವ ಶವಪೆಟ್ಟಿಗೆಯನ್ನು ಹುಡುಕಾಡ ತೊಡಗಿದ.

ದೂರ
ಆಗಷ್ಟೇ ಯಶಸ್ವಿಯಾಗಿ ಚಂದ್ರಯಾನ ಮುಗಿಸಿ ಬಂದ ಭಾರತೀಯ ಮೂಲದ ನಾಸಾ ವಿಜ್ಞಾನಿಯ ತಾಯಿಯನ್ನು ಮಾತನಾಡಿಸಲು ಪತ್ರಕರ್ತರು ಅವರ ಮನೆಗೆ ಬಂದಿದ್ದರು. “ನಿಮ್ಮ ಮಗ ಕೊನೆಯ ಬಾರಿಗೆ ನಿಮ್ಮನ್ನು ನೋಡಲು ಬಂದದ್ದು ಯಾವಾಗ ?” . ಮಾತಿನ ನಡುವೆ ತೂರಿ ಬಂದ ಪ್ರಶ್ನೆಗೆ ಉತ್ತರಿಸಲಾರದೆ ಆಕೆಗೆ ದುಃಖ ಒತ್ತರಿಸಿ ಬಂದಿತ್ತು. ಬಹುಶಃ ಚಂದ್ರ ಲೋಕಕ್ಕಿಂತ ತಾಯಿ ಮನೆ ಮಗನಿಗೆ ದೂರವಾಗಿದ್ದಿರಬೇಕು.

ಭಕ್ತಿ
ಇಬ್ಬರು ಗೆಳೆಯರಲ್ಲಿ ಒಬ್ಬ ಅಪ್ಪಟ ದೈವ ಭಕ್ತನಾಗಿದ್ದ. ಏನೇ ಕೆಲಸಕ್ಕೂ ದೇವರ ಮೊರೆ ಹೋಗುತ್ತಿದ್ದ. ಅವರಿಬ್ಬರೂ ಮಾವಿನ ಮರದ ಕೆಳಗಡೆಯಿಂದ ಹಾದು ಹೋಗಲು ಅದರ ಹಣ್ಣು ಅವರ ಕಣ್ಣು ಕುಕ್ಕಿತು. ದೈವ ಭಕ್ತ ಅಲ್ಲೇ ದೇವರಿಗೆ ಮೊರೆಯಿಟ್ಟ .”ಭಗವಂತಾ.. ಒಂದು ಹಣ್ಣನ್ನಾದರೂ ಬೀಳಿಸು…! ” ಮತ್ತೊಬ್ಬ ಕಲ್ಲೆತ್ತಿ ಎಸೆದ .. ಹಣ್ಣು ಬಿತ್ತು .. ಹಣ್ಣನ್ನು ಚಪ್ಪರಿಸುತ್ತ ಆತ ಗೆಳೆಯನನ್ನು ದಿಟ್ಟಿಸಿದ.. ಅವನು ಪ್ರಾರ್ಥಿಸುತ್ತಲೇ ಇದ್ದ.

ವಿಚಿತ್ರ
“ಸಹನೆಯನ್ನು ಬೆಳೆಸಿ ..ಹಿಂಸೆಯಿಂದ ಸಾಧಿಸುವುದೆನಿಲ್ಲ …” ಎಂದು ಟ್ವೀಟ್ ಮಾಡಿ ಶಾಂತಿದೂತನಾದ ಬಾಲಿವುಡ್ ನಾಯಕನೊಬ್ಬ .. ಮರುದಿನ ಪಾರ್ಟಿಯಲ್ಲಿ ಗೆಳತಿಯ ಗಂಡನಿಗೆ ಕಪಾಳಮೋಕ್ಷ ಮಾಡಿದ್ದ..!

ವಿಪರ್ಯಾಸ
ಆತ ಕಟ್ಟಾ ಬ್ರಹ್ಮಚಾರಿ.. ದಿನಕ್ಕೆ ನಾಲ್ಕು ಕಡೆ ಬ್ರಹ್ಮಚರ್ಯೆಯ ಬಗ್ಗೆ ಕ್ಯಾಂಪ್ ನಡೆಸಿ ಜನರನ್ನು ಸೆಳೆಯುತ್ತಿದ್ದ. ವಿಪರ್ಯಾಸವೆಂದರೆ ಆತನ ತಂದೆಯೂ ಅವನ ಹಾದಿ ಹಿಡಿದಿದ್ದರೆ ಇಂದು ಆತ ಇರುತ್ತಿರಲಿಲ್ಲ ಎಂಬುದನ್ನು ಮರೆತಿದ್ದ.

Leave a Comment