ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 41

blood_penl

ತನ್ನ ಅಪ್ಪನನ್ನು ಬಲಿತೆಗೆದುಕೊಂಡ
ಯುದ್ಧದ ವಿಜಯಗಾಥೆಯ
ಪರೀಕ್ಷೆಯಲ್ಲಿ ಮಗ ವಿವರಿಸುತ್ತಿದ್ದಾನೆ;
ಕೆಂಪಡರಿದ ಹಾಳೆ ಮೇಲೆ ಪೆನ್ನು
ರಕ್ತವನ್ನು ಕಾರಿದೆ..
~

ಅಮೃತ ಶಿಲೆಗಳ ತುಂಬಾ
ಉಳಿ ಕೈಗಳ ರಕ್ತವಾರ್ಜಿಸಿ
ಕೆತ್ತಿದವನ ರಕುತ ಅಡರಿ ಹಿಂಗಿದೆ;
‘ತಾಜ್ ಮಹಲ್’
ಪ್ರೇಮ ಸೌಧ ಎಂದಾಗ
ಉಘೇ ಉಘೇ ಎಂದರು ಜನ..

~

ಅಲ್ಲಿ ವಿವಿಧ ಧರ್ಮಗಳ
ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನಕ್ಕೆ
ವೇದಿಕೆ ಸಿದ್ಧವಾಗುತ್ತಿತ್ತು;
ನಮ್ಮೂರಿನ
ತೋಟದ ಪಕ್ಕ ತೋಡಿನಲ್ಲಿ
ನಾನು, ರಮೇಶ, ಜೋನ್ ಎಲ್ಲರೂ
ಹುಟ್ಟುಡುಗೆಯಲ್ಲಿ ಈಜಾಡಿ ಸಂಭ್ರಮಿಸಿದೆವು..

~

ಹುಟ್ಟಿನೊಂದಿಗೇ
ಜೊತೆಯಾದ ಸಾವು;
ಒಂಟಿ ಎಂಬುದು ಇಲ್ಲಿ ಬರಿ ಭ್ರಮೆ
ಅಷ್ಟೇ..

ಹುಸೇನಿ ~

Leave a comment

ಅನಾಥ ಶವಗಳು... · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 40

nenapina-hani

ಈ ತೀರದಲೆಗಳಿಗೂ ನಿನ್ನದೇ
ಖಯಾಲಿ,
ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ
ಮುದ್ದಿಸಿ ಮುಗುಳ್ನಗುತ್ತದೆ ..~

ಅಪ್ಪಿಬಿಡು ಒಮ್ಮೆ
ಈ ಲೋಕವೇ ನನ್ನೊಳ ಮೂಡುವಂತೆ;
ಪ್ರತಿ ಅಣುರೇಣು
ಛಿದ್ರಗೊಂಡು
ಬ್ರಹ್ಮಾಂಡ ಮರುಹುಟ್ಟು ಪಡೆವಂತೆ …

~

ಇಷ್ಟಿಷ್ಟೇ ಕಾಪಿಟ್ಟ
ನಿನ್ನ ನೆನಪಿನ ಓಜಸ್ಸ ಒಟ್ಟು ಮಾಡಿ
ಚಂದಮಾಮನಿಗೆ ಕಡ ಕೊಟ್ಟಿದ್ದೇನೆ
ಹುಡುಗಿ,
ಸಂಶಯವಿದ್ದರೆ ನಿನ್ನ
ಮನೆಯಂಗಳದ ಅಕಾಶವ ನೋಡು….

~

ಮತ್ತೆ ನೀರವ ಮುಸ್ಸಂಜೆ,
ಆಕಾಶದಲ್ಲೇ ಉಳಿದ ಮೋಡದ ತುಂಡು,
ಖಾಲಿ ಬೆರೆಳ ಸಂಧಿ,
ಚಂದ್ರನಿಗೆ ಪ್ರೀತಿ ಕಲಿಸಬೇಕು
ಬಂದುಬಿಡೇ

ಹುಸೇನಿ ~

Leave a comment