ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ · ವಾಸ್ತವ ಸಂಚಿ

ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ

induian muslim

“ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ ದೇಶಕ್ಕಾಗಿ ಪ್ರಾಣ ಕೊಡುತ್ತಾರೆ “. ನಮ್ಮ ಘನವೆತ್ತ ಪ್ರಧಾನ ಮಂತ್ರಿಯ ಉಚ್ಚಿಷ್ಠ ಉವಾಚವಿದು. ನಮ್ಮ ಪ್ರಧಾನಿಯಿಂದ ಇಂಥದ್ದೊಂದು ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಂದೊದಗಿದ್ದು ಭಾರತೀಯ ಮುಸ್ಲಿಮನ ಪಾಲಿಗೆ ಬಹು ನೋವಿನ ಸಂಗತಿ.

ಭಯೋತ್ಪಾದಕ, ಮೂಲಭೂತವಾದಿ, ದೇಶದ್ರೋಹಿ, ಹೇಗೆಲ್ಲಾ ಹೀಗಳೆದು ಸಮಾಜದ ಮುಖ್ಯವಾಹಿನಿಯಿಂದ ಒಂದಿಷ್ಟು ಅಂತರ ಕಾಯುವಂತೆ ಮಾಡಿ, ಹುಟ್ಟಿ ಬಿದ್ದ ಮಣ್ಣಿನಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸಿದರೂ, ಸ್ವತಂತ್ರಾ ನಂತರ ಬಂದೊದಗಿದ ಕೋಮುಗಲಭೆಯ ಕಂಟಕಗಳು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಹಿಂದುಳಿದು ‘ನವ ದಲಿತರು’ ಎಂದು ಕರೆಯಲ್ಪಟ್ಟರೂ ಭಾರತೀಯ ಮುಸ್ಲಿಂ ತನ್ನೆಲ್ಲ ನೋವನ್ನು ಸಮಯದ ಭೂ ಗರ್ಭದಲಿ ಅರಗಿಸಿಕೊಂಡು ಮುನ್ನಡೆಯುತ್ತಿದ್ದಾನೆ.

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್, ಹೈದರಾಲಿ, ಮೌಲಾನಾ ಶೌಕತ್ ಅಲಿ, ಖಾನ್ ಅಬ್ದುಲ್ ಗಫಾರ್ ಖಾನ್, ಡಾ।ಮಗ್ಫೂರ್ ಅಹ್ಮದ್ ಅಜಾಝಿ, ಮೌಲಾನಾ ಮಂಝುರ್ ಅಹ್ಸನ್ ಅಜಾಝಿ, ಅಲಿ ಆಸೀಫ್,ಮೊಹಮ್ಮದ್ ಜೌಹರ್,ಅಲಿ ಇನಾಯತ್, ಶಹೀದ್ ಫೀರ್ ಅಲಿ, ವಲಯತ್ ಅಲಿ, ಅಲಿ ವಾರಿಸ್, ಅಬ್ದುಲ್ ಖಯ್ಯೂಮ್ ಅನ್ಸಾರಿ, ಮೌಲಾನಾ ಅಬ್ದುಲ್ ಕಲಾಂ ಅಝಾದ್, ಹಕೀಮ್ ಅಜ್ಮಲ್ ಖಾನ್, ಅಶ್ಫಾಕುಲ್ಲಾಹ್ ಖಾನ್, ಬೇಗಮ್ ಹಜ್ರತ್ ಮಹಲ್,ಮೌಲಾನಾ ಹುಸೈನ್ ಅಹ್ಮದ್, ರಫಿ ಅಹ್ಮದ್ ಕಿದ್ವಾಯಿ ಹಾಗು ಇನ್ನು ಹಲವಾರು ಮುಸ್ಲಿಂ ಧಾರ್ಮಿಕ ಮತ್ತು ಸಾಮುದಾಯಿಕ ನಾಯಕರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಮುಖ್ಯ ಭೂಮಿಕೆಯಲ್ಲಿದ್ದರು. ಇವರ ದೇಶ ಪ್ರೇಮವು ಪ್ರಶ್ನಾತೀತವಾಗಿರುವಗಲೇ, ಪ್ರಸ್ತುತ ಭಾರತೀಯ ಮುಸ್ಲಿಮರು ದೇಶ ಪ್ರೇಮವನ್ನು,ದೇಶನಿಷ್ಠೆಯನ್ನು ಪ್ರತೀ ದಿನ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾನೆ.

ಅಷ್ಟಕ್ಕೂ ಮುಸ್ಲಿಮರ ದೇಶಪ್ರೇಮವು ಪ್ರಧಾನಿಯಿಂದ ಸ್ಪಷ್ಟನೆ ದೊರೆಯಬೇಕಾದ ಮಟ್ಟಕ್ಕೆ ಪ್ರಶ್ನಾರ್ಹವಾಗಿಸಿದವರು ಯಾರು.. ?.

1947ರಲ್ಲಿ ಭಾರತಕ್ಕೆ ಸ್ವಾತಂತ್ರ ದೊರೆತಾಗ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಲಾಯಿತು. ಆಗ ಪಾಕಿಸ್ತಾನ ತನ್ನನ್ನೊಂದು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿದ ಕಾರಣಕ್ಕಾಗಿ ಭಾರತವನ್ನು ಒಂದು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಹಿಂದೂ ರಾಷ್ಟ್ರವಾದಿಗಳು ಒತ್ತಾಯಿಸಿದ್ದರೂ ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿ ರೂಪುಗೊಂಡಿತು. ಆದರೂ ಕೆಲವು ಶಕ್ತಿಗಳಿಂದ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯಿತು, ಈಗಲೂ ನಡೆಯುತ್ತಿದೆ.
ಇತಿಹಾಸವನ್ನು ತಿರುಚಿಯೂ, ಇಸ್ಲಾಮಿನ ಬಗ್ಗೆ ತಪ್ಪು ಭಾವನೆ ಹರಡಿಯೂ, ಬಹುಸಂಖ್ಯಾತರಲ್ಲಿ ಅಸುರಕ್ಷಿತೆ ಭಾವನೇ ಮೂಡಿಸಿಯೂ, ಯಾರೋ ಉಂಡ ಮನೆಗೆ ಬಗೆಯುವ ಕ್ರಿಮಿಗಳು ದೇಶದ್ರೋಹದ ಕೆಲಸ ಮಾಡಿದಾಗ ಅದನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟುವಂಥ ಕೆಲಸದ ಮೂಲಕವೂ ಅವರು ಮುಸ್ಲಿಮರನ್ನು ಮುಖ್ಯಧಾರೆಯಲ್ಲಿ ಸಂಶಯದ ನೆರಳಿನಿಂದ ಬದುಕುವಂತೆ ಮಾಡಿದ್ದಾರೆ. ಇವರೊಂದಿಗೆ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಕೈ ಜೋಡಿಸಿದಾಗ ಕೆಲಸ ತುಂಬಾ ಸುಲಭವಾಯ್ತು. ‘ಶಂಕಿತ ಉಗ್ರಗಾಮಿ’ಗಳು ಎಂಬ ಬರಹದಡಿ ಪ್ರತೀ ಮುಸ್ಲಿಂ ಯುವಕನನ್ನು , ಅದರಲ್ಲೂ ಟೋಪಿ ಹಾಕುವ, ಗಡ್ಡ ಬಿಡುವ ಮುಸ್ಲಿಮರನ್ನು ಸಂಶಯದ ನೋಟದಿಂದ ನೋಡುವಂತೆ ಮಾಡಲಾಯಿತು. ವಿದೇಶಕ್ಕೆ ಹೋಗುವ ಮುಸ್ಲಿಮನ ಬ್ಯಾಗಲ್ಲಿರುವ ಇಲೆಕ್ಟ್ರಾನಿಕ್ ವಸ್ತುಗಳು ಬಾಂಬ್ ಗಳಾದವು. ಕ್ಷಣಾರ್ದದಲ್ಲಿ ಅವನನ್ನು ಅಂತರಾಷ್ಟ್ರೀಯ ಭಯೋತ್ಪಾದನೆ ಗುಂಪಿನೊಂದಿಗೆ ತಳುಕು ಹಾಕಿ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುವಂತ ಪರಿಪಾಠ ಆರಂಭವಾಯ್ತು.

ಪ್ರಧಾನಿಯ ಹೇಳಿಕೆಯ ಹಿಂದಿನ ಮರ್ಮವೇನು ?.
ಮೋದಿಯ ಸಂಪುಟ ಅಸ್ತಿತ್ವಕ್ಕೆ ಕೂಡಲೇ ವಕ್ಫ್ ಮಂತ್ರಿಗಳು ಮುಸ್ಲಿಮರು ಅಲ್ಪಸಂಖ್ಯಾತರಲ್ಲ ಹೇಳಿಕೆ ನೀಡಿದ್ದರು.ಅದು ವಿವಾದವೂ ಆಯಿತು. ನಂತರದ ದಿನಗಳಲ್ಲಿಯೂ ಮುಸ್ಲಿಂ ತುಷ್ಟೀಕರಣ ನಡೆಯಿತು. ಮುಸ್ಲಿಮರ ಕಲ್ಯಾಣದಲ್ಲಿ ವಕ್ಫ್ ಇಲಾಖೆಯ ಪಾತ್ರವನ್ನು ಗೌಣಗೊಳಿಸಿ ಮತ್ತು ಹಿಂದಿನ ಯುಪಿಎ ಸರಕಾರದ ಧೋರಣೆಗಳನ್ನು ತಿರಸ್ಕರಿಸಿ ಈ ಇಲಾಖೆಯನ್ನು ಪುನರ್ರೂಪಿಸುವ ನಿರ್ಧಾರದ ಹಿಂದಿನ ಉದ್ದೇಶ ಶುದ್ದಿ ಕೂಡ ಪ್ರಶ್ನಾರ್ಹವಾಗಿದೆ. ಮೋದಿ ಸಂಪುಟದ ಸಚಿವರುಗಳೇ ಮದರಸಾ ಭಯೋತ್ಪಾದನೆ, ಲವ್ ಜಿಹಾದ್ ಮುಂತಾದ ಅಸ್ತಿತ್ವವೇ ಇಲ್ಲದ ವಿಚಾರಗಳನ್ನೆತ್ತಿ ಮುಸ್ಲಿಮರ ಸಂವೇದನೆಯನ್ನು ಕೆಣಕಿದರು. ಇಷ್ಟೆಲ್ಲಾ ಆದ ನಂತರ ಈ ಬಂದ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಮುಖಭಂಗ. ಇವೆಲ್ಲದರ ಭಾಗವಾಗಿ ಮುಸ್ಲಿಂ ಓಲೈಕೆ ಮೋದಿಯವರಿಗೆ ಅತ್ಯವಶ್ಯಕವಾಗಿ ಕಂಡುಬಂದಿದೆ. ರಾಜಕೀಯ ಪಂಡಿತ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಶಿಸಲ್ಪಟ್ಟ ಮೋದಿಯವರಿಂದ ಇಂಥದ್ದೊಂದು ಅಣಿ ಮುತ್ತು ಉದುರಿದರೆ ಅದರ ಹಿಂದಿನ ರಾಜಕೀಯ ಅಜೆಂಡಾವನ್ನು ಗಮನಿಸಬೇಕಾಗುತ್ತದೆ. ಕಾರಣ ಮೋದಿಯವರ ರಾಜಕೀಯ ಜೀವನವೇ ಹಾಗಿದೆ.

ಏನೇ ಇರಲಿ, ದೇಶ ಪ್ರೇಮವನ್ನು ಧಾರ್ಮಿಕ ನಂಬಿಕೆಯ ಭಾಗವಾಗಿ ಮದರಸದಲ್ಲಿ ಕಲಿಯುವ ಮುಸ್ಲಿಮರಿಗೆ ಖಂಡಿತಾ ದೇಶ ಪ್ರೇಮದ ಸರ್ಟಿಫಿಕೇಟ್ ಅಗತ್ಯತೆ ಇಲ್ಲ. ಬದಲಿಗೆ ನಮಗೆ ಮಾಡಬೇಕಿರುವುದು ಸಾಮಾಜಿಕ ಹಕ್ಕು. ದೇಶದ ಮೂಲೆಯಲ್ಲಿ ವಿಚಾರನಾಧೀನ ಕೈದಿಗಳಲ್ಲಿ ಶೇಕಡಾ 60 ಮಂದಿ ಮುಸ್ಲಿಮರಿದ್ದಾರೆ. ಗುಜರಾತ್‍ನಲ್ಲಿ ಶೇ. 10 ರಷ್ಟಿರುವ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. 22 ಮಂದಿ ಅಲ್ಲಿನ ಜೈಲಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇದು ಶೇ. 46, ಉತ್ತರ ಪ್ರದೇಶದಲ್ಲಿ ಇವರ ಸಂಖ್ಯೆ ಶೇ. 21. ಮಾನವ ಹಕ್ಕುಗಳನ್ನು ನಿಷೇಧಿಸಲ್ಪಟ್ಟ ಇವರಿಗೆ ನ್ಯಾಯದ ಬೆಳಕನ್ನು ನೀಡಬೇಕು. ಮುಸ್ಲಿಮರನ್ನು ಎರಡನೇ ದರ್ಜೆಗೆ ತಳ್ಳುವ ಪ್ರತಿಯೊಂದು ಶಕ್ತಿಯನ್ನು ಮಟ್ಟ ಹಾಕಬೇಕು. ಕೋಮುಗಲಭೆಗಳಲ್ಲಿ ಎಲ್ಲವನ್ನುಕಳೆದುಕೊಂಡ ಅದೆಷ್ಟೋ ಅಮಾಯಕ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸಬೇಕು. ಸಾಚಾರ್ ಸಮಿತಿಯು ಮುಸ್ಲಿಮರನ್ನು “ಅಧುನಿಕ ಹರಿಜನರು” ಎಂದು ವ್ಯಾಖ್ಯಾನಿಸಿದ್ದರೆ, ಅವರ ಜೀವನ ಮಟ್ಟ ಎಷ್ಟು ಬರ್ಬರವಾಗಿದೆ ಎಂದು ಊಹಿಸಿಕೊಳ್ಳಬಹುದು. ಆ ವರದಿಯಲ್ಲಿ ತಿಳಿಸಿದ ಪ್ಯಾಕೇಜ್ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಆಡಳಿತಾವಧಿಯಲ್ಲಿ ಮುಸ್ಲಿಮರಿಗೆ ಸುರಕ್ಷತೆಯ ಭಾವನೆಯಲ್ಲಿ ಮೂಡಿಸಬೇಕು.

ದೇಶದ ಅಖಂಡತೆಯು ಈ ದೇಶದ ಧಾರ್ಮಿಕ ಸಾಮರಸ್ಯತೆಯನ್ನೂ ಅವಲಂಬಿಸಿದೆ. ಮೋದಿಯವರು ಈ ನಿಟ್ಟಿನಲ್ಲಿ ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧರ್ಮದ ಹಂಗಿನ ಪಾಲುದಾರಿಕೆಯಿಲ್ಲದ ಜಾತ್ಯತೀತ ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಬೇಕು. ಅವರಿಗೆ ಶುಭ ಹಾರೈಸೋಣ.
ಜೈ ಹಿಂದ್ !

ಮುಹಮ್ಮದ್ ಹುಸೈನ್

ಈ ಲೇಖನ ವಿಶ್ವ ಕನ್ನಡಿಗರ ನ್ಯೂಸ್ ನಲ್ಲಿ ಪ್ರಕಟವಾಗಿದೆ. ಓದಲು ಇಲ್ಲಿ ಕ್ಲಿಕ್ಕಿಸಿ

Leave a comment