ಬಿಂದು · ಬಿಡಿ ಭಾವಗಳು · ಬಿರಿಯದ ಮೊಗ್ಗು · ಹುಸೇನಿ_ಪದ್ಯಗಳು · Kannada Love letters

ಗತ ಸಾಲುಗಳು – ೧

ಹೆಸರೇ ಸೂಚಿಸುವಂತೆ ಇದು ಎಂದೋ ಬರೆದು ಮರೆತು ಹೋದ ಸಾಲುಗಳು. I’m grateful to Facebook Memories for reminding me of these lines.

Written on April 28, 2014

ಕನಸಿನೆಣ್ಣೆ ತುಂಬಿ
ತುಳುಕಿದೆ,
ಬಾಳ ದೀಪಬೆಳಗಲಿಲ್ಲ….

~

ಇರಲಿ ನಿನ್ನ ಮೊಗದಲ್ಲೊಂದು
ಮುಗುಳ್ನಗು,
ನಕಲಿಯಾದರೂ,
ನನ್ನ ಮುಖವಾಡದಂತೆ …

~

ಆ ಸಮುದ್ರ ತಟ
ಇಂದೂ
ಬಾಯಾರಿಯೇ
ಇತ್ತು

ಹುಸೇನಿ ~

ಕಾಡುವ ಹನಿಗಳು · ತೊರೆಯ ತೀರದ ನೆನಪುಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ · ಹುಸೇನಿ_ಪದ್ಯಗಳು

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ

kavana

Leave a comment

ಹುಸೇನಿ ಪದ್ಯಗಳು – 38 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 38

alone_beach_nenapina sanchi

೧)
ನಿನ್ನೆಲ್ಲಾ ನೆನಪ ಗುಡ್ಡ ಹಾಕಿ
ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ
ಹೊಗೆ ಶ್ವಾಸದಲ್ಲಿ ಲೀನವಾಯ್ತು,
ನಾಳೆಯ ನನ್ನ ಉಸಿರಿಗೆ
ನಿನ್ನ ಗಂಧವಿರಬಹುದಾ .. ?

೨)
ನೀನಿಲ್ಲದೇ ಆ ತೀರ ಮೌನವಾಗಿತ್ತು.
ಮರಳನ್ನು ಮಾತನಾಡಿಸ ಹೊರಟೆ,
ಅವು ಶತಮಾನಗಳ
ನೀರಡಿಕೆಯಿಂದ ಬಳಲಿತ್ತು.

೩)
ನಿನ್ನ ಬದಲು ಆ ಕ್ಷಣದ
ನಿನ್ನ ಸ್ನಿಗ್ಧ ನಗುವಷ್ಟನ್ನೇ ತುಂಬಿಕೊಂಡೆ.
ಈ ಬದುಕು ಕಳೆಯಲು
ಅಷ್ಟೇ ಸಾಕೆನಿಸಿತು.

೪)
ಸಾವಿನ ಮನೆಯಲ್ಲಿ
ಅಗರಬತ್ತಿಯ ಸುವಾಸನೆ
ಮಂಕಾಗಿದ್ದ ಮುಖಗಳಲ್ಲಿ
ನವ ಚೈತನ್ಯ ತುಂಬುತ್ತಿದೆ..

ಹುಸೇನಿ ~

ಬಿರಿಯದ ಮೊಗ್ಗು · ಬಿರಿಯದ ಮೊಗ್ಗು - 16

ಬಿರಿಯದ ಮೊಗ್ಗು – 16

ಆ ಮುರಿದ ಕೊಳಲು, ಒಡೆದ ತಂತಿ
ಗೋರಿಯೊಳಗಿನ ಕನಸು, ಆ ತೀರದಲ್ಲಿ
ಇಂಗಿದ ಕಣ್ಣ ಹನಿ ..
ಕಳೆದ ನಿನ್ನೆ, ಇನ್ನೂ ಬಾರದ ನಾಳೆ,
ನಿನ್ನ ನೆನಪು ಕೈಬೀಸಿ ಕರೆದಾಗೆಲ್ಲ
ನೀರಾಗಿ, ನದಿಯಾಗಿ ಹರಿಯುತ್ತದೆ ನಿನ್ನೆಡೆಗೆಯೇ,
ಬದುಕಿನ ಎಲ್ಲ ಜಂಜಡವ ಮರೆತು..

ಹುಸೇನಿ ~

ಹುಸೇನಿ ಪದ್ಯಗಳು – 37 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 37

nenapinasanchi-manwoman

ಅಬ್ಬರದ ಭಾಷಣದಿಂದ
ದೇಶದ ದಿಶೆ ಬದಲಿಸಬಹುದು
ಹಸಿವಿಗೆ ಅನ್ನವೇ ಬೇಕು ..

ಅವನು ಮಸೀದಿಯೊಳಗೆ,
ಇವನು ಮಂದಿರದೊಳಗೆ,
ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ
ಬೇಡುತ್ತಲೇ ಇದ್ದರು..
— 

ಮಗ ಬೈಕಿನ ಮೊದಲನೇ
ರೈಡಿಗೆ ಕೂಗಿ ಕರೆಯುತ್ತಿದ್ದ;
ಅಪ್ಪ ಅದರ ಸಾಲದ ಮೊದಲಿನ
ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;


ಮೊದಲ ರಾತ್ರಿಯ ಮರುದಿನ
ಈರುಳ್ಳಿಯ ಒಂದೊಂದೇ
ಸಿಪ್ಪೆ ತೆಗೆಯುತ್ತಿದ್ದ ಹುಡುಗಿ
ಒಳಗೊಳಗೇ ಲಜ್ಜೆಯಿಂದ ಕಂಪಿಸುತ್ತಿದ್ದಳು;


ಬಟ್ಟೆ ತೊಟ್ಟು ಸಭ್ಯ
ಎನಿಸಿಕೊಂಡ ಮನುಷ್ಯನ
ಪರಮಾನಂದಗಳು
ಬೆತ್ತಲೆ ದೇಹವನ್ನು ಬೇಡುತ್ತದೆ;

ಹುಸೇನಿ ~

Leave a comment

ಕಾಡುವ ಹನಿಗಳು · ಗೆಳೆಯಾ

ಗೆಳೆಯಾ..

BF

ಭವಿತವ್ಯದ ಕವಲಿನಲಿ
ತುಂಬು ತಮವಿದೆ
ಬೆಳಕಾಗಿ ಬರಿ ನಿನ್ನನ್ನಷ್ಟೇ
ತುಂಬಿಕೊಂಡಿದ್ದೇನೆ ಗೆಳೆಯಾ…
ನೀನೊಂದು ಕಂದೀಲು
ಆವರಿಸಿದಂತೆಲ್ಲಾ ನನ್ನನ್ನು ನಾನೆ
ಕಾಣುತ್ತಿದ್ದೇನೆ…

‪#‎ಆತ್ಮೀಯ_ಗೆಳೆಯನಿಗೆ‬

Leave a comment

ಹುಸೇನಿ ಪದ್ಯಗಳು - 34 · ಹುಸೇನಿ_ಪದ್ಯಗಳು

ಈ ಕಪ್ಪಿಟ್ಟ ವಿಶಾಲ ಬಾನು.. (ಹುಸೇನಿ ಪದ್ಯಗಳು – 34)

kiss11)
ಈ ಕಪ್ಪಿಟ್ಟ ವಿಶಾಲ ಬಾನು
ಅಲ್ಲಲ್ಲಿ ಹೊಳೆಯುವ ಒಂದೆರಡು ಚುಕ್ಕಿಗಳು,
ನೀನು; ಮತ್ತು ಹುಡುಗ ಬುದ್ದಿಯ ನಾನು;
ರಾತ್ರಿ ಮುಗಿಯದ ಆಟಕ್ಕೆ ಬೇಕಿನ್ನೇನು?!

2)

ಎಲ್ಲವೂ ಸುಳ್ಳು; ಈ ಭೂಮಿ
ಈ ಬಾನು ಮಂಡಲ
ನಿನ್ನ ಕಂಡೊಡನೆ ತೆರೆದುಕೊಳ್ಳುವ
ಹೃದಯ ಮತ್ತು
ಸುಮ್ಮನೆ ತುಂಬಿಕೊಳ್ಳುವ ಆನಂದವಷ್ಟೇ ದಿಟ!

kiss2

3)

ಆ ನನ್ನ ತುಂಟ ಹಠ, ಬಿಂಕ-ಬಿನ್ನಾಣ
ಹುಸಿಕೋಪ-ಸಿಡುಕು ಎಲ್ಲ ತೋರಿ ಬಳಿಕ
ಲಜ್ಜೆ ಕಳಚಿ ನೀ ಕೊಟ್ಟ ಮುತ್ತು;
ನಿನ್ನ ನೆನಪನ್ನು ಕೊಲ್ಲುತ್ತಾ ಕಳೆದ ಈ ಸಂಜೆ
ಮತ್ತು ಹನಿಯದೆ
ಅಕಾಶದಲ್ಲೇ ಉಳಿದ ತುಂಡು ಮೋಡ..

4)
ನನ್ನ ಬೆರಳ ತುದಿಯ ಮಿಂಚು
ನಿನ್ನ ಕಿಬ್ಬೊಟ್ಟೆಯ ಕಾವು
ಉಸುಕನ್ನು ಹೊದ್ದು ಮಲಗಿದ್ದ ಕಿನಾರೆ
ಅರೆಗತ್ತಲಿನ ಪಿಸುಮಾತುಗಳ ನಂತರ ಇಬ್ಬರೂ
ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೋ… ?

ಹುಸೇನಿ ~

Leave a comment

ಬಿಂದು · ಬಿಂದು – 10 · Best Kannada Whatsapp Status

Best Kannada Whatsapp Status – ಕನ್ನಡ ಸ್ಟೇಟಸ್

ಬಿಂದು – 10

೧)
ಮನುಷ್ಯ ತಾನೇ ಸೃಷ್ಟಿಸಿದ ಕರ್ಕಶಕ್ಕೆ ಕಿವಿ ಮುಚ್ಚಿದ್ದ,
ಯಾರೂ ಕೇಳದ ರಾಗಕೆ ಎಲೆಯೊಂದು ತಲೆದೂಗುತ್ತಿತ್ತು..

೨)
ಮನುಷ್ಯ ತನ್ನೆಲ್ಲ ವಿಜ್ಞಾನವನ್ನು ಬಳಸಿ ಚಂದಿರ ಲೋಕಕ್ಕೆ ಹೋದ;
ತಿಂಗಳ ರಾತ್ರಿ ಕೊಳದೊಳಗಿಂದ ಚಂದಿರ ಕಿಸಕ್ಕನೆ ಅವರ ನೋಡಿ ನಗುತ್ತಿದ್ದ..

ಹುಸೇನಿ ~

"ಹನಿ" ಮತ್ತು "ಮುತ್ತು"ಗಳು · ಹುಸೇನಿ ಪದ್ಯಗಳು - 31 · ಹುಸೇನಿ_ಪದ್ಯಗಳು

“ಹನಿ” ಮತ್ತು “ಮುತ್ತು”ಗಳು (ಹುಸೇನಿ ಪದ್ಯಗಳು – 31)

dewDrop

ಕವಿತೆಯಾಗದ ನನ್ನ
“ಹನಿ”ಗಳು ನಿನ್ನೊಡಲು
ಸೇರಿದಾಗ ಮುತ್ತಾಗುವ
ಗುಟ್ಟೇನು ಗೆಳತೀ … ?

ಸಾಗರಕ್ಕೆ ಬಿದ್ದ “ಹನಿ”
ಅಸ್ತಿತ್ವ ಕಳಕೊಂಡಿತು.
ಹೂವಿನ ಎಸಳ ಮೇಲೆ
ಬಿದ್ದವು, ಮುತ್ತಾಗಿ ಹೊಳೆಯಿತು.

ನಿನ್ನ ನೆನಪುಗಳ
ಪೋಣಿಸಿ ಬರೆದ
“ಹನಿ”ಯ ನೀ ಮೆಚ್ಚಿ ಮುತ್ತಿಟ್ಟೆ
ನೋಡು, ಅದಕ್ಕೀಗ ವಯ್ಯಾರ…!

~ಹುಸೇನಿ

ಹುಸೇನಿ ಪದ್ಯಗಳು - 20 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 20

panjarada-hakki

೧)
ಜಗತ್ತಿನ ಮತ್ತೆಲ್ಲಾ ಕ್ಷಣಿಕ-
ಉನ್ಮಾದಗಳಂತೆ
ನನ್ನೊಳಗಿನ ಮೌನಕ್ಕೂ ಹುಚ್ಚು ಗೀಳು.
ತನ್ನ ಅಸ್ತಿತ್ವಕ್ಕಾಗಿ
ಮಾತಿನ ಮೊರೆ ಹೋಗಿ
ಪರಾವಲಂಬಿಯಾಗಿ ಅಸುನೀಗುತ್ತದೆ.

೨)
ನಾನು ಮತ್ತೆ ಕಳೆದು ಹೋಗುತ್ತಿದ್ದೇನೆ
ಯಾವುದೋ ಮರೀಚಿಕೆ-
ಮಾಯೆಯೊಳಗಲ್ಲ
ನೀನೆಂಬ ಅರೆ ನಿರ್ವಾತದೊಳಗೆ;
ಜೇಡರ ಬಲೆಗೆ ಬಿದ್ದ ಚಿಟ್ಟೆಯಂತೆ ಬದುಕು..

೩)
ಹೃದಯವ ಅಡವಿಟ್ಟು
ಪ್ರೀತಿಯ ಖರೀದಿಗೆ ಹೊರಟವನು
ನಿರಾಸೆಯಿಂದ ಮರಳಿದ್ದಾನೆ,
ಹೃದಯವಿಲ್ಲದವನಿಗೆ
ಪ್ರೀತಿ ಸಿಗಲಾರದಂತೆ..

೪)
ಅವನು
ಸ್ವತಂತ್ರ ಬದುಕಿನ ಕಥೆ ಹೇಳಿ
ಮುಗಿಸಿದ ನಂತರ
ಅವಳಿಗೆ ಅವನಲ್ಲಿ ಪ್ರೀತಿ ಅಂಕುರಿಸಿತು
ಮದುವೆಯ ನಂತರ ತಿಳಿಯಿತು
ಅವನ ಮನೆತುಂಬಾ ಪಂಜರದ ಗಿಳಿಗಳು..

_ಹುಸೇನಿ

Leave a comment