ಅನಾಥ ಶವಗಳು... · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 40

nenapina-hani

ಈ ತೀರದಲೆಗಳಿಗೂ ನಿನ್ನದೇ
ಖಯಾಲಿ,
ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ
ಮುದ್ದಿಸಿ ಮುಗುಳ್ನಗುತ್ತದೆ ..~

ಅಪ್ಪಿಬಿಡು ಒಮ್ಮೆ
ಈ ಲೋಕವೇ ನನ್ನೊಳ ಮೂಡುವಂತೆ;
ಪ್ರತಿ ಅಣುರೇಣು
ಛಿದ್ರಗೊಂಡು
ಬ್ರಹ್ಮಾಂಡ ಮರುಹುಟ್ಟು ಪಡೆವಂತೆ …

~

ಇಷ್ಟಿಷ್ಟೇ ಕಾಪಿಟ್ಟ
ನಿನ್ನ ನೆನಪಿನ ಓಜಸ್ಸ ಒಟ್ಟು ಮಾಡಿ
ಚಂದಮಾಮನಿಗೆ ಕಡ ಕೊಟ್ಟಿದ್ದೇನೆ
ಹುಡುಗಿ,
ಸಂಶಯವಿದ್ದರೆ ನಿನ್ನ
ಮನೆಯಂಗಳದ ಅಕಾಶವ ನೋಡು….

~

ಮತ್ತೆ ನೀರವ ಮುಸ್ಸಂಜೆ,
ಆಕಾಶದಲ್ಲೇ ಉಳಿದ ಮೋಡದ ತುಂಡು,
ಖಾಲಿ ಬೆರೆಳ ಸಂಧಿ,
ಚಂದ್ರನಿಗೆ ಪ್ರೀತಿ ಕಲಿಸಬೇಕು
ಬಂದುಬಿಡೇ

ಹುಸೇನಿ ~

Leave a comment

ಅನಾಥ ಶವಗಳು...

ಅನಾಥ ಶವಗಳು…

ಮನಸು ಮಾತಾಡುವುದ ನಿಲ್ಲಿಸಿಬಿಟ್ಟಿದೆ…
ಉಸಿರಾಟದಲ್ಲೂ ಜಾಗತೀಕರಣದ ಗಾಳಿ…
ಮನೆ ಬಾಗಿಲಲ್ಲೇ ಸಿಗುತ್ತವೆ
ವಿಶ್ವದರ್ಜೆಯ ಮುಖವಾಡಗಳು…

‘ಅಮ್ಮ’ – ‘ಮಮ್ಮಿ’ಯಾಗಿ ಹೆಣವೆನಿಸಿಕೊಂಡಳು
ತೊದಲು ನುಡಿಯಲ್ಲೂ ಮಣ್ಣಗಂಧವಿಲ್ಲ…

ತುಟಿ – ನಾಲಿಗೆಗಳಿಗೆ ದಿನವಿಡೀ ಬಿಡುವಿಲ್ಲ
ಕಿವಿ ಬಿಸಿಯಾಗಿ ಹೋಗಿದೆ
ಕುಣಿಯುತ್ತಿವೆ
ಭಾವಸೆಲೆಯಿಲ್ಲದ ಸಾವಿರಾರು ಒಣ ಶಬ್ದಗಳು…

ಹಸುಳೆಯ ಕೈಯಲ್ಲೂ ಗಣಕಯಂತ್ರ
ಬೆರಳುಗಳು ಮಾತಾಡುತ್ತವೆ ಅಜೀರ್ಣವಾಗುವಷ್ಟು
ಅಲ್ಲೂ ಕಡ ತಂದ ಸಂದೇಶಗಳದ್ದೇ ಮೇಲುಗೈ…

ಎಲ್ಲೋ ಯಾರೋ ಮಡಿದ ಸುದ್ದಿಗೆ
ಸಾಮಾಜಿಕ ಜಾಲತಾಣದಲ್ಲೊಂದು ತುಂಬ ನೋವಿನ (?)
ಗೋಡೆ ಬರಹ…
ವೃದ್ಧಾಶೃಮದಲ್ಲಿ ತನ್ನಮ್ಮ ನಿತ್ಯವೂ ಸಾಯುತಿರುವುದರೆಡೆಗೆ
ಜಾಣ ಮರೆವು…

ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ,
ಗಳಿಕೆ – ಹೂಡಿಕೆಗಳೇ ಬದುಕಾಗಿ ಹೋಗಿ,
ಜೀವಿಸುವ ಖುಷಿಯ ಕಳೆದುಕೊಂಡ
ವಿಶ್ವ ಮಾರುಕಟ್ಟೆಯಲ್ಲಿ
ಭಾವ – ಬಂಧಗಳೆಲ್ಲ
ಅನಾಥ ಶವಗಳು…

ಗೆಳೆಯ ಶ್ರೀವತ್ಸ ಕಂಚಿಮನೆ ರವರ ಈ ಕವಿತೆಯನ್ನು ಎರಡು ಬಾರಿ ಓದಿ ಮುಗಿಸಿದಾಗಳು ಸಾಕೆನಿಸದೆ ಮತ್ತೊಮ್ಮೆ ಓದಬೇಕೆನಿಸಿತು.. ಅದೇನೋ ಸೆಳೆಯುವ ಶಕ್ತಿಯಿತ್ತು ಈ ಕವಿತೆಗೆ. ಒಂದೊಂದು ಸಾಲುಗಳು ಮನದ ಒಳ ಹಂದರವನ್ನು ಹೊಕ್ಕವು. ಆಧುನಿಕತೆಯ ಸೊಗಡಿನಲ್ಲಿ ಅಪಮೌಲ್ಯಗೊಳ್ಳುತ್ತಿರುವ ಮಾನವ ಮೂಲ್ಯಗಳಿಗೆ, ಸಂಬಂಧಗಳಿಗೆ, ನಮ್ಮ ಸಂಸ್ಕೃತಿಗೆ ಹಿಡಿದ ಕನ್ನಡಿಯಂತಿತ್ತು ಈ ಕವಿತೆ.

ಹೌದು. ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ವ್ಯಾವಾಹಾರಿಕವಾಗಿ ನಾವು ಅದೆಷ್ಟು ಮುಂದುವರೆದಿದ್ದರೂ ನಮ್ಮೊಳಗಿನ ‘ಮಾನವ’ ‘ತನ್ನತನ’ವನ್ನು ಉಳಿಸಿಕೊಂಡಿಲ್ಲ. ಅವನಲ್ಲಿರಬೇಕಾದ ಮಾನವೀಯ ಗುಣಗ ಳು ಅಧಃ ಪತನದ ಹಾದಿ ಹಿಡಿದಿವೆ . ಸಂಬಂಧಗಳು ಅರ್ಥಕಳೆದುಕೊಂಡು ಮೂಲೆಗುಂಪಾಗಿದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಪಡೆದುದು, ಕಳೆದುಕೊಂಡದ್ದನ್ನು ಒಮ್ಮೆ ಆತ್ಮಾವಲೋಕನ ಮಾಡೋಣ. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ , ಆದರೆ ಸ್ಪೋಟಿಸುವ ಸ್ವಭಾವವು ಅದಕ್ಕಿವೆ. ನಮ್ಮ ರಸ್ತೆಗಳು ವಿಶಾಲವಾಗಿದೆ ಆದರೆ ನಮ್ಮ ದೃಷ್ಟಿಕೋನಗಳು ಸಂಕುಚಿತವಾಗಿವೆ. ನಮ್ಮ ಮನೆಗಳು ದೊಡ್ಡದಾಗುತ್ತಿವೆ , ಆದರೆ ಕುಟುಂಬ ಚಿಕ್ಕದಾಗುತ್ತಿವೆ. ಅಸಾಮಾನ್ಯ ವಿದ್ಯಾರ್ಹತೆ ಇದೆ , ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ. ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ. ಔಷಧಿಗಳು ಹೆಚ್ಚಾಗಿದೆ, ಆದರೆ ಆರೋಗ್ಯ ಕಡಿಮೆಯಾಗಿದೆ. ನಾವು ಹೆಚ್ಚು ಗಳಿಸುತ್ತೀವೆ, ಆದರೆ ಕಡಿಮೆ ನಗುತ್ತೇವೆ. ನಮ್ಮ ಆಸ್ತಿ ಪಾಸ್ತಿಯ ಬೆಲೆ ಏರಿದೆ , ನಮ್ಮ ಮೌಲ್ಯ ಕುಸಿದಿದೆ.ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತಿದ್ದೇವೆ , ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ.ನಾವು ಚಂದ್ರ ಲೋಕವನ್ನು ಮುಟ್ಟಿ ಬಂದಿದ್ದೇವೆ, ಕಂಪೌಂಡ್ ದಾಟಿ ನೆರೆ ಮನೆಯವರನ್ನು ಭೇಟಿಯಾಗಲು ಹೋಗಿಲ್ಲ. ನಾವು ಬಹಿರಂಗವಾಗಿ ಗೆಲ್ಲುತ್ತೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ. ಗಾಳಿಯನ್ನು ಶುದ್ದೀರಕಿಸುವ ವಿಧಾನವನ್ನು ಕಂಡು ಹಿಡಿದಿದ್ದೇವೆ, ಆದರೆ ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ. ಅಣುವನ್ನೂ ಖಂಡ ತುಂಡ ಮಾಡಿದ್ದೇವೆ, ಆದರೆ ನಮ್ಮ ಅಹಂ ಅಖಂಡವಾಗಿ ಉಳಿದಿದೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದ್ದೇವೆ, ಆದರೆ ನೈತಿಕತೆ ಕುಸಿದಿದೆ. ವಿಶ್ವ ಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದಾಡುತ್ತೇವೆ. ಗಂಡ ಹೆಂಡಿರ ದುಡಿಮೆ ಹೆಚ್ಚಾಗಿದೆ, ಆದರೆ ವಿಚ್ಚೇಧನಗಳೂ ಹೆಚ್ಚಾಗಿವೆ. ಹಸಿವು ಹೆಚ್ಚಿಸಲು , ಹಸಿವು ತಗ್ಗಿಸಲು , ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ , ದಪ್ಪಗಾಗಳು , ಸಣ್ಣಗಾಗಳು, ತೆಪ್ಪಗಿರಲೂ ಮಾತ್ರೆಗಳಿವೆ . ನಿದ್ದೆಗೂ , ನಿದ್ದೆಗೆಡಿಸುವುದಕ್ಕೂ, ಬದುಕುವುದಕ್ಕು , ಕೊನೆಗೆ ಸಾಯುವುದಕ್ಕೂ ಮಾತ್ರೆಗಳೇ ಬೇಕು …!

ಅಬ್ಬಾ… ಕಾಲದೊಂದಿಗೆ ನಾವೂ ಅದೆಷ್ಟು ಬದಲಾಗಿದ್ದೇವೆ ಅಲ್ವಾ ? ಗೆಳೆಯ ಶ್ರೀವತ್ಸ ಹೇಳಿದಂತೆ ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ, ಗಳಿಕೆ – ಹೂಡಿಕೆಗಳೇ ಬದುಕಾಗಿ ಹೋಗಿ, ಜೀವಿಸುವ ಖುಷಿಯ ಕಳೆದುಕೊಂಡ ವಿಶ್ವ ಮಾರುಕಟ್ಟೆಯಲ್ಲಿ ಭಾವ – ಬಂಧಗಳೆಲ್ಲ ಅನಾಥ ಶವಗಳು…


Leave a Comment

ಕನ್ನಡ ಬ್ಲಾಗ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.