ಫಕೀರನ ವಿರಹದ ಹಾಡುಗಳು · ಹುಸೇನಿ ಪದ್ಯಗಳು - 17 · ಹುಸೇನಿ_ಪದ್ಯಗಳು

ಫಕೀರನ ವಿರಹದ ಹಾಡುಗಳು (ಹುಸೇನಿ ಪದ್ಯಗಳು – 17)

light-in-the-dark
1)
ಮಿಲನಕ್ಕೆ ಸಾಂಗತ್ಯ ಬೇಕಿಲ್ಲ ಗೆಳತೀ,
ನಿನ್ನ ರಾತ್ರಿ ನೀ ನೆನಪಾದ ಘಳಿಗೆ
ಕೆನ್ನೆಗೆ ಜಾರಿ ಬಿದ್ದ ಕಣ್ಣೀರ ಹನಿಯಲ್ಲಿ
ನಿನ್ನ ಬೆಚ್ಚಗಿನ ಸ್ಪರ್ಶದನುಭೂತಿಯಿತ್ತು.

2)
ದೂರದಲ್ಲಿ ಕಂಡ ಬೆಳಕನ್ನು
ನೀ ಹಿಂಬಾಲಿಸಿದೆ.
ಇಲ್ಲಿ ಉಳಿದದ್ದು ಬರಿ ಕತ್ತಲು,
ಮತ್ತೊಂದಿಷ್ಟು ಕವಿತೆಗಳು.

3)
ತಪಸ್ಸು ಕೂತು ವರ ಕೇಳಿ
ನಿನ್ನ ಪಡೆದರೂ, ನಿನ್ನ ಪ್ರೀತಿಯ
ಪಡೆಯಲಾಗಲಿಲ್ಲ.
ವರವಾಗಿ ನಿನ್ನ ಪ್ರೀತಿಯನ್ನೇ ಕೇಳಬೇಕಿತ್ತು !

4)
ಇಷ್ಟಿಷ್ಟೇ ಆವರಿಸುವ ನಿನ್ನ
ಪ್ರೀತಿ,
ಒಮ್ಮೆಲೇ ಎರಗಿ ಇಲ್ಲವಾಗಿಸುವ
ಕಾಲನಿಗಿಂತ ಅಪಾಯಕಾರಿ ಎಂಬುದು
ನಾನು ಕಂಡುಕೊಂಡ ಪರಮ ಸತ್ಯ
ನಿಮ್ಮ ಕಥೆ ಏನೋ ?

Leave a comment