ಕಾಡುವ ಹನಿಗಳು · ಖಾಲಿ ಗೆರೆಯಲ್ಲಿ · ತೊರೆಯ ತೀರದ ನೆನಪುಗಳು · ಯಾ ರೂಹಿ .... · ಸಣ್ಣ ಕತೆ

ಖಾಲಿ ಗೆರೆಯಲ್ಲಿ….

line

…ಒಂದು ಪ್ರಶ್ನೆ, ಅದರ ಉತ್ತರದಲ್ಲಿ ಮೂಡಿದ ಮತ್ತೆರಡು ಪ್ರಶ್ನೆ, ಈಗ ಎಷ್ಟೆಂದರೆ ಒಳಗಿನ ದನಿಯೇ ಕೇಳದಷ್ಟು ಪ್ರಶ್ನೆಗಳ ಸಂತೆಗೂಡು, ಹೊರತೆಗೆದು ನಿರಾಳವಾಗಲಾರದ ವಿಕ್ಷಿಪ್ತ ಮನಸ್ಥಿತಿ, ಜೊತೆಗೂಡಿ ಮತ್ತಷ್ಟು ನಿರ್ಲಿಪ್ತತೆಗೆ ತಳ್ಳುವ ತಲ್ಲಣಗಳು, ದ್ವಂದ್ವಗಳು. ಉತ್ತರ ಕಂಡುಕೊಳ್ಳಲು ಪ್ರಯಾಣ ಆರಂಭಿಸಿ ದಿನಗಳೇ ಕಳೆಯಿತು. ಕಾಲವೇ ಎಲ್ಲದಕ್ಕೂ ಉತ್ತರ ಎಂದರು.. ಅಂಥದ್ದೊಂದು ಕಾಲಕ್ಕೆ ನಾನು ಕಾಯುತ್ತಿದ್ದೆ. ಬತ್ತಿದ ತೀರ ಮುಂಗಾರಿಗೆ ಕಾಯುವಂತೆ. ಪೊರೆ ಪೊರೆಗಳಾಗಿ ಸುತ್ತಿಕೊಂಡ ನನ್ನೆಲ್ಲಾ ಪ್ರಶ್ನೆಗಳನ್ನು ಹರವಿಟ್ಟು ಒಂದೊಂದೇ ಉತ್ತರವನ್ನು ತುಂಬಿಕೊಂಡು ಕೊನೆಗೆ ಶೂನ್ಯವಾಗುವ ಕಾಲದ ಅಧಮ್ಯ ಕಾತರಿಕೆಯದು. ಅಂಥದ್ದೊಂದು ಕಾಲ ಕೊನೆಗೂ ಆಗತವಾಯಿತು. ಆ ವಸಂತ ಕಾಲಕ್ಕೆ ನಿನ್ನ ಹೆಸರಿತ್ತು.

ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ.
ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ. ನನ್ನ ನೆನಪುಗಳು, ಭೂತಕಾಲದ ಅತಿರೇಕಗಳು ಜೀವಧಾತು ನಗುವನ್ನು ಕಸಿದುಕೊಳ್ಳದಂತೆ ಸಮದೂರ ಕಾಯ್ದುಕೊಂಡು ಹಸನ್ಮುಖಿಯಾಗಿ ಬದುಕುವ ಕಲೆಯನ್ನು ಪಡಕೊಳ್ಳುತ್ತಿದ್ದೇನೆ. ಕನಸುಗಳೊಂದಿಗಿನ ಬಡಿದಾಟದಲ್ಲಿ ನಾನೇ ಮೇಲುಗೈ ಹೊಂದಿದವನಂತೆ ಭಾಸವಾಗುತ್ತದೆ. ನನ್ನೊಳಗಿನ ದ್ವಂದ್ವಗಳ ಒಂದೊಂದೇ ಪೊರೆ ಕಳಚುತ್ತಾ ಸಾಗುತ್ತಿದ್ದೇನೆ…ಹಾಗೆ ಕಳಚುತ್ತಾ ಕಳಚುತ್ತಾ ಶೂನ್ಯತೆಯೆಡೆಗೆ ಹತ್ತಿರವಾಗುವಂತೆನಿಸುತಿದೆ ನನಗೆ. ಶೂನ್ಯದಲ್ಲಿ ಹುಟ್ಟಿದ ‘ನಾನು’ ಮತ್ತೆ ಶೂನ್ಯತೆಗೆ ತಲುಪುವಾಗಿನ ಅಮಿತ ಆನಂದ ಅವರ್ಣನೀಯ..

………. ಈ ಖಾಲಿ ಗೆರೆಯಲ್ಲಿ ಈ ಬಂಧಕ್ಕೊಂದು ಹೊಸ ಹೆಸರಿಡಬೇಕು ಅನ್ನಿಸಿದ ಮರುಕ್ಷಣ ಹೆಸರಿನ ಹಂಗನು ಮರೆತು ಈಗಷ್ಟೇ ಚಿಗುರೊಡೆದಿಡುವ ಈ ಸ್ನೇಹದ ಜೋಪಡಿಯಲ್ಲಿ ಈ ಬಂಧದ ಹಣತೆಯೊಂದನ್ನು ಹಚ್ಚಿಟ್ಟುಕೊಂಡು ನಮ್ಮಿಬ್ಬರ ಬದುಕಿನ ಕತ್ತಲೆಯನ್ನು ಪರಸ್ಪರ ಬೆಳಗೋಣ..ಅದರಲ್ಲೇ ಹೆಚ್ಚು ಅರ್ಥವಿದೆ ಅಂದೆನಿಸುತ್ತದೆ..
ಹೌದು.. ಮತ್ತೊಮ್ಮೆ ಹೇಳುತ್ತೆನೆ.. ನೀನೆಂದರೆ ಅಪ್ಪಟ ಜೀವ ಚೈತನ್ಯ, ನೀನಂದರೆ ಎಂದೂ ಬತ್ತದ/ಬತ್ತಬಾರದ ಜೀವಜಲ.. ನೀನಂದರೆ ನನ್ನೊಳಗೆ ಮನುಷ್ಯ ಭಾವ ತುಂಬಿಕೊಟ್ಟ ಆತ್ಮ ಸಾಂಗತ್ಯ.. … … ನೀನೆಂದರೆ… ನಾನೇ !!

~ಹುಸೇನಿ

Leave a comment

ಕಾಡುವ ಹನಿಗಳು · ನೆನಪಿನ ಹನಿ · ಯಾ ರೂಹಿ ....

ಯಾ ರೂಹಿ ….

Screenshot_2015-01-27-11-39-50

ಯಾ ರೂಹೀ
ಸಂಭಂದಗಳಿಗೆ ಅರ್ಥದ ಮೊದಲು
ಹೆಸರು ಹುಡುಕುವ ಲೋಕ-ಕ್ರಿಯೆಯಲ್ಲಿ
‘ಹುಚ್ಚರು’ ಅಂತನ್ನಿಸಿ ನಗುವ ಬಾ…!
_
ತೋಡಿನ ಮರಳು ಹೆಕ್ಕಿ
ತಟದಲ್ಲೊಂದು ಮನೆ ಮಾಡಿ
ಮನ್ನುಂಡೆ ಮಾಡಿ ಆಟ ಆಡಿದ್ದೆ;
ಅಂಥದ್ದೊಂದೇ ಮರಳ ತಟದಲ್ಲಿ
ನಿನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಪೋಣಿಸಿದಾಗ
ಕಾಲ ಬಸವಳಿದು ನನ್ನ ಕಾಲಡಿ ಬಿದ್ದಿದ್ದ..!
ಅದನೋಡಿ ನೀ ಕಚ್ಚಿ ತಿಂದ ಅರ್ಧ ಚಂದ್ರ ಮೋಡದ
ಮರೆ ಸೇರಿದ್ದು ಈರ್ಷ್ಯೆಯಿಂದಲ್ಲವೇ ರೂಹಿ…? 

_
ಯಾ ರೂಹಿ..
ಆ ಶರಧಿ ತೀರದಲ್ಲಿ ನಿನ್ನ ಹೆಸರು ಬರೆದಿದ್ದೆ ;
ಧಾವಂತದ ಅಲೆಗಳು ಅದನಳಿಸಿದವು;
ಇನ್ನು
ಎದೆ ಬಯಲೊಳಗೆ ಅಲೆಗಳೇಳುವುದಿಲ್ಲ.. !

_

ಯಾ ರೂಹಿ..
ನೀನು ಕನಸುಗಳ ರಭಸಕ್ಕೆ
ಎದೆಯೊಡ್ಡಿ ನಿಂತವನ
ಜೀವನ್ಮುಖಿ ಭಾವಕ್ಕೆ
ಆತ್ಮ ತುಂಬಿದವಳು…

~ಹುಸೇನಿ

Leave a comment