ದುರ್ಮರಣ ಮತ್ತಿತರ ನ್ಯಾನೋ ಕತೆಗಳು · ನ್ಯಾನೋ ಕಥೆಗಳು

ದುರ್ಮರಣ ಮತ್ತಿತರ ನ್ಯಾನೋ ಕತೆಗಳು

school bus seat

ದುರ್ಮರಣ
ಬಸ್ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿದ್ದು ಪೇಪರಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅವರ ಹೆತ್ತವರ ಕನಸುಗಳು ಮತ್ತು ನಿರೀಕ್ಷೆಗಳು ಅವರೊಂದಿಗೆ ದುರ್ಮರಣ ಹೊಂದಿದ್ದು ಸುದ್ದಿಯಾಗಲೇ ಇಲ್ಲ…

ಕೊಲ್ಲು
ಹದಿಹರೆಯದ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದ ಪಾಪಿಗೆ ಗಲ್ಲು ಶಿಕ್ಷೆ ನೀಡಿ ಕೊಲ್ಲಲಾಯಿತು. ಆ ಯುವತಿಯ ತಂದೆಗೆ ಈ ಸುದ್ದಿಯನ್ನು ತಿಳಿಸಲು ಹೋದವನು ಮಾತಿನ ನಡುವೆ ಕೇಳಿದರು. “ಆತನನ್ನು ಕೊಂದಿದ್ದು ನಿಮಗೆ ಸಮಾಧಾನ ನೀಡಿರಬೇಕಲ್ವಾ ..?”
“ಅವನನ್ನು ಪ್ರತೀ ದಿನ, ಪ್ರತೀ ಕ್ಷಣ ಮನಸ್ಸಿನಲ್ಲಿ ಕೊಂದು ಹಾಕುತ್ತಾ ಸಮಾಧಾನಪಟ್ಟಿದ್ದೆ”. ನಿಟ್ಟುಸಿರು ಬಿಡುತ್ತಾ ಯುವತಿಯ ತಂದೆ ಉತ್ತರಿಸಿದ.

ಪ್ರೀತಿ
“ಕಡು ಬಡತನದಲ್ಲಿ ತನ್ನೆಲ್ಲ ಸಂತೋಷವನ್ನು ಬಲಿ ಕೊಟ್ಟು, ತನ್ನದೆಲ್ಲವನ್ನೂ ನನಗಾಗಿ ಮುಡಿಪಿಟ್ಟು ನನ್ನನ್ನು ಸಾಕಿ, ಸಲುಹಿ ವಿದ್ಯಾವಂತೆಯನ್ನಾಗಿ ಮಾಡಿದ ನನ್ನ ತಾಯಿಯನ್ನು ತೊರೆದು ನಾನು ನಿನ್ನ ಜೊತೆ ಬರೆಲಾರೆ” ಆತನ ಮುಂದೆ ಆಕೆ ಗೊಗರೆಯುವಾಗ ಅವನಿಗೆ ನಿಜವಾದ ಪ್ರೀತಿ ಯಾವುದೆಂದು ಅರಿವಾಯಿತು.

ಮೌಢ್ಯ
“ಆ ಜನಾಂಗ ಕೆಟ್ಟ ಮೌಢ್ಯಗಳಿಂದ ತುಂಬಿ ಕೆಟ್ಟು ಹೋಗಿದೆ. ಯಾರೋ ತಿಂದು ಬಿಟ್ಟು ಹೋದ ಎಂಜಲೆಲೆಯ ಮೇಲೆ ಉರುಳಿ ಹರಕೆ ತೀರಿಸುತ್ತಾರಂತೆ. ಇವರನ್ನು ಇಂತಹ ಮೌಢ್ಯಗಳಿಂದ ಮೇಲೆತ್ತುವ ಕಾರ್ಯ ಈ ಕೂಡಲೇ ಆಗಬೇಕು” ಸ್ವಯಂ ಘೋಷಿತ ಆ ಬುದ್ದಿಜೀವಿ ಒಂದು ಜನಾಂಗದ ಮೇಲೆ ತನ್ನ ಪ್ರೀತಿ ಪ್ರದರ್ಶಿಸುತ್ತಿದ್ದ. ವಿಪರ್ಯಾಸವೆಂದರೆ ತಾವು ಬಿಟ್ಟು ಹೋದ ಎಂಜಲೆಲೆಯ ಮೇಲೆ ಉರುಳುತ್ತಾರೆಂದು ಗೊತ್ತಿದ್ದೂ ಎಂಜಲೆಲೆಯನ್ನು ಬಿಟ್ಟು ಹೋಗುತ್ತಿದ್ದವರ ಮೌಢ್ಯದ ಬಗ್ಗೆ ಆತ ಜಾಣ ಮೌನವಹಿಸಿದ್ದ.


Leave a Comment

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು

lathi_charge_2
ಹರಾಜು
ಡೆಲ್ಲಿಯ ರಾಜಬೀದಿಗಳಲ್ಲಿ ಮುಂದಿನ ವಾರ ನಡೆಯುವ ಜಗತ್ತಿನ ಅತ್ಯಂತ ಬೆಳೆಬಾಳುವ ವಸ್ತುಗಳ ಹರಾಜಿನ ಬಗ್ಗೆ ಅಲ್ಲಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಸ್ಥಾಪಿಸಲಾಗಿತ್ತು. ಅದನ್ನು ನೋಡುತ್ತಿದ್ದ ಹಿರಿಯರೊಬ್ಬರು ನಿಟ್ಟುಸಿರು ಬಿಡುತ್ತಾ ಹೇಳಿದರು .
“ಅತ್ಯಂತ ಬೆಲೆಬಾಳುವ ವಸ್ತು ಕಳೆದ ವಾರವೇ ಹರಾಜಾಗಿದೆ… ಹೆಣ್ಣಿನ ಮಾನಕ್ಕಿಂತ ಬೆಲೆಬಾಳುವ ಅದು ಯಾವ ವಸ್ತುವನ್ನು ಹರಾಜಿಗಿಡುತ್ತಾರೋ …?”

ಫ್ಲಾಟ್
“ಅಲ್ಲಿ ಸ್ವಿಮ್ಮಿಂಗ್ ಪೂಲ್ ಇಲ್ಲ , ಜಿಮ್ ಇಲ್ಲ, ಮಸಾಜ್ ಸೆಂಟರ್ ಇಲ್ಲ, ಟೆನಿಸ್ ಗ್ರೌಂಡ್ ಇಲ್ಲ . ಆ ಅಪಾರ್ಟ್ಮೆಂಟಲ್ಲಿ ನಮಗೆ ಫ್ಲಾಟ್ ಬೇಡ..” ಹೊಸ ಮನೆಯ ಖರೀದಿಯ ಸನ್ನಾಹದಲ್ಲಿದ್ದ ಗಂಡನಲ್ಲಿ ಹೆಂಡತಿ ಜಗಳ ಕಾಯುತ್ತಿದ್ದಳು.
ಸೋರುತ್ತಿರುವ ಶೀಟ್ ಮಾಡು, ಮುರಿದಿರುವ ಬಾಗಿಲು, ಜರಿದಿರುವ ಗೋಡೆ , ಹೊಟ್ಟೆಗೆ ಅನ್ನವಿಲ್ಲದ ತನ್ನ ಬಾಲ್ಯಕಾಲ ಆತನ ಕಣ್ಣಮುಂದೆ ಬಂದು ಅಣಕವಾಡುತ್ತಾ ನಿಂತಿತು.

ಯೋಜನೆ
ಯುವಕರ ಭವಿಷ್ಯವನ್ನು ಉತ್ತಮಗೊಳಿಸುವ ಪದ್ದತಿಯನ್ನು ನಮ್ಮ ಸರಕಾರ ಹಾಕಿಕೊಂಡಿದೆ ಅಂತ ಭಾಷಣ ಬಿಗಿದಿದ್ದ ಆ ಸಚಿವ ನ್ಯಾಯ ಕೇಳಿ ಬೀದಿಗಿಳಿದ ಯುವಕರ ಮೇಲೆ ಲಾಟಿ ಚಾರ್ಜ್ಗೆ ಆದೇಶ ಕೊಟ್ಟ .
ಕೊನೆಗೆ ಸತ್ತ ಯುವಕರಿಗೆ 10 ಲಕ್ಷ ಪರಿಹಾರ ಘೋಸಿಸಿ ತಾನು ಕೊಟ್ಟ ಮಾತನ್ನು ಪಾಲಿಸಿದ್ದೇನೆ ಅಂತ ಬೀಗಿದ.

ಸಾವು
ಬಾಡಿಗೆ ಹಂತಕನಿಗೆ ಗಲ್ಲು ಶಿಕ್ಷೆಯ ತೀರ್ಪು ಕೊಡಲಾಯ್ತು .ಆತ ಯಾವುದೇ ಅಳುಕಿಲ್ಲದೆ ಅದನ್ನ ಸ್ವೀಕರಿಸಿದ. ಅವನನ್ನು ಕರೆದುಕೊಂಡು ಹೋಗುತ್ತಿದ್ದ ಪೇದೆ ಆಶ್ಚರ್ಯದಿಂದ ಕೇಳಿದ “ನಿನಗೆ ಹೆದರಿಕೆ ಇಲ್ಲವೇ …?”
“ನಾನು ಎಷ್ಟು ಮಂದಿಯನ್ನು ಕೊಂದಿದ್ದೀನೋ ಅಷ್ಟು ಬಾರಿ ಅವರೊಂದಿಗೆ ನಾನೂ ಸತ್ತಿದ್ದೇನೆ. ಇನ್ನೊಮ್ಮೆ ಸಾಯಲು ನಾನೇಕೆ ಭಯಪಡಲಿ…?” ಆತನ ಮಾತಲ್ಲೂ ಎಳ್ಳಷ್ಟು ಅಳುಕಿರಲಿಲ್ಲ.


Leave a Comment