ಏ ರೂಹಿ...! ನೀ ತಾಯಿಯಾಗುವಾಗೆಲ್ಲ... · ತೊರೆಯ ತೀರದ ನೆನಪುಗಳು · ಯಾ ರೂಹಿ ....

ಏ ರೂಹಿ…! ನೀ ತಾಯಿಯಾಗುವಾಗೆಲ್ಲ…

Huseni

…. ನೀನು ಮಗುವಾಗ್ತಾ ಇದ್ದೀಯಾ …
…. ನೀನು ತಾಯಿಯಾದಂತೆಲ್ಲಾ ನಾನು ಮಗುವಾಗುತ್ತಿದ್ದೇನೆ…

ಹೌದು.. ನೀನು ಮಮತೆಯ ಮಡಿಲಾದಂತೆಲ್ಲಾ ನಾನು ಮಗುವಾಗುತ್ತೇನೆ… ಮತ್ತೆ ಮತ್ತೆ.. ಹಾಗೆ ಮಗುವಾದಾಗೆಲ್ಲ ನನ್ನ ಮಗುತನ ಸುಮ್ಮನೆ ಗರಿ ಬಿಚ್ಚುತ್ತದೆ.. ಮಗುತನದಲ್ಲೇ ಏನೇನೋ ಹುಚ್ಚು ಆಸೆಗಳು..
ಪೆಪ್ಪರ್ಮೆಂಟಿಗೆ ಸೋಗುಹಾಕಿ ಅತ್ತು ಕರೆದು ರಚ್ಚೆ ಹಿಡಿದು ಇಷ್ಟಗಲ ಬೊಚ್ಚು ಬಾಯಲ್ಲಿ ಆಆ ಅಂತ ಅಳಬೇಕು. ಬೆಳಿಗ್ಗೆ ನಿನ್ನ ಕೂಗನ್ನು ಲೆಕ್ಕಿಸದೆ ಹಾಗೆ ಮಲಗಬೇಕು, ನೀ ಮೂರು ಬಾರಿ ಎಬ್ಬಿಸಿ ಹೋದರು ಅಲುಗಾಡದೆ ರಗ್ಗು ಹೊದ್ದು ಮತ್ತೆ ಮಲಗಬೇಕು, ಆಮೇಲೆ ಕೋಪದಲ್ಲೇ ನೀ ಬಂದು ದಿಂಬನ್ನೂ ರಗ್ಗನ್ನೂ ಬಲವಂತವಾಗಿ ಬಿಸಾಕಿ ನನ್ನನ್ನು ಹೆಗಲ ಮೇಲೆ ಎತ್ಕೊಂಡು ಬಾತ್ರೂಮಲ್ಲಿ ಇಳಿಸಿ ಬ್ರಶ್ಶಿಗೆ ಪೇಸ್ಟ್ ಹಾಕಿ ಬಾಯಿಗೆ ತುರುಕಿ ಹೋಗಿ ಒಂದೈದು ನಿಮಿಷದ ನಂತರ ಬಂದು ನೋಡುವಾಗ ಹಾಗೆಯೆ ಬಾಯಲ್ಲಿ ಬ್ರಶ್ಶಿಟ್ಟು ಕೂತಲ್ಲೇ ನಿದ್ದೆ ಮಾಡಬೇಕು.. ಆಮೇಲೆ ನಿನ್ನ ಕೈಯಾರೆ ಹಲ್ಲುಜ್ಜಿಸಬೇಕು. ಹೊಟ್ಟೆನೋವೆಂಬ ಸುಳ್ಳು ನೆಪ ಹೇಳಿ ಶಾಲೆಗೇ ಚಕ್ಕರ್ ಹಾಕಬೇಕು. ಆಮೇಲೆ ಕಹಿ ಕಷಾಯದೊಂದಿಗೆ ನೀ ಬಂದಾಗ ಶರ್ಟು ಎತ್ತಿ ಹೊಟ್ಟೆ ನೋವೇ ಇಲ್ಲ ನೋಡು ಅಂತ ಮುಗುಮ್ಮಾಗಿ ಸಾಗ ಹಾಕಬೇಕು. ನೀ ತಟ್ಟೆಯಲ್ಲಿ ಊಟ ಹಿಡಿದು ಬಂದಾಗೆಲ್ಲ ನಿನ್ನ ಕೈಗೆ ಸಿಗದೇ ಓಡಿಹೋಗಬೇಕು, ನೀ ಅಟ್ಟಾಡಿಸಿ ಬಾಯಿಗೆ ತುರುಕುವ ಅನ್ನವನ್ನೆಲ್ಲ ಅರ್ಧ ತಿಂದು ಅರ್ಧ ಪಿಚಕ್ಕನೆ ಉಗುಳಿ ನಿನ್ನ ಬಟ್ಟೆಯನ್ನೆಲ್ಲ ಕೊಳೆಯಾಗಿಸಬೇಕು. ಬಾಗಿಲ ಸಂಧಿಯಲ್ಲಿ ಅಡಗಿ ನೀ ಒಳ ಬರುವಾಗ ಬ್ಹೋ ಅಂತ ನಿನ್ನ ಹೆದರಿಸಬೇಕು. ಅಟ್ಟದಲ್ಲಿ ಅಡಗಿ ಕೂತು ನೀ ಹೆದರಿ ಹುಡುಕುವ ಪರಿಯ ನೋಡಬೇಕು. ನೀನು ಮನೆಕೆಲಸದಿಂದ ದಣಿವಾದಾಗ ಬಣ್ಣದ ಕಾಗದವನ್ನು ನೀರಲ್ಲಿ ಹಾಕಿ ಬಾಟಲಿಯಲ್ಲಿ ತುಂಬಿಸಿ ಬಣ್ಣ ಬಣ್ಣದ ಶರಬತ್ತು ನಿನಗೆ ಕೊಡಬೇಕು. ಭಾನುವಾರದ ದಿನ ಹಬ್ಬದ ಕುಶಿಯಲ್ಲಿ ನಿನ್ನ ಜೊತೆ ಜೊತೆಗೇ ಇರಬೇಕು. ನೀ ತೆಂಗಿನ ಕಾಯಿ ಒಡೆಯುವಾಗ ಅದರ ನೀರಿಗೆ ಓಡಿ ಬರಬೇಕು. ಆ ಕಾಯಿಯನ್ನು ತುರಿದ ಮೊದಲ ಭಾಗವನ್ನೆತ್ತಿ ಬಾಯಿಗಿಡಬೇಕು. ಕೋಳಿ ಸಾರಿನ ದಿನ ನಿನ್ನ ಜೊತೆ ಅಡುಗೆಮನೆಯಲ್ಲೇ ಗಿರಕಿ ಹೊಡೆಯಬೇಕು. ಒಲೆಯಿಂದಲೇ ಒಂದು ಚಿಕ್ಕ ತುಂಡು ಎತ್ತಿ ನೀ ಕೊಟ್ಟಾಗ ಅದನ್ನು ತಿಂದು ಕೈಯನ್ನೂ ಚಪ್ಪರಿಸಬೇಕು. ಗೆಳೆಯರೊಂದಿಗೆ ಜಗಳ ಮಾಡ್ಕೊಂಡು ಇದ್ದ ಎರಡು ಬಿಳಿ ಅಂಗಿಯಲ್ಲಿ ಒಂದನ್ನು ಹರಿದು ಬಂದು ಪೆಚ್ಚು ಮೋರೆ ಹಾಕಿ ನಿಲ್ಲಬೇಕು. ನೀನದನ್ನ ನೋಡಿ ಸಿಟ್ಟಿನಿಂದ ಕಣ್ಣು ಕೆಂಪು ಮಾಡುವುದನ್ನು ನೋಡಬೇಕು. ಮಳೆಗಾಲದಲ್ಲಿ ದಾರಿಯಲ್ಲಿರುವ ಹೊಂಡಗಳ ಕೆಸರನ್ನು ಬೆನ್ನುವರೆಗೂ ಮೆತ್ತಿಸಿಕೊಂಡು ಬರಬೇಕು. ಹಾಗೆ ಬರುವಾಗೆಲ್ಲ ನನಗೂ ಮಳೆಗೂ ಬಯ್ಯುತ್ತಾ ಸೆರಗಿನಲ್ಲೆ ತಲೆ ಒರೆಸಬೇಕು. ಹುಳ ತಿಂದ ಕಾಲಿಗೆ ನಿನ್ನ ಕಯ್ಯಾರೆ ಸೀಮೆ ಎಣ್ಣೆ ಹಚ್ಚಬೇಕು. ಸಂಜೆ ಸ್ನಾನಕ್ಕೆ ನೀ ಕರೆವಾಗೆಲ್ಲ ಭೂಮಿಗೆ ಬೇರು ಬಿಟ್ಟವನಂತೆ ಕದಲದೆ ಕೂರಬೇಕು, ಕಾದು ಸುಸ್ತಾಗಿ ನೀ ನನ್ನನ್ನೆತ್ತಿ ಬಚ್ಚಲು ಮನೆಗೆ ಓಡುವಾಗ ಕೊಸರಿ ತೊಳಲಾಡಿ ಜಾರಿ ಬಿದ್ದು ಎದ್ದು ಓಡಿಹೊಗಬೇಕು. ಮಳೆಗಾಲಕ್ಕೆ ನೀ ಮಾಡಿಟ್ಟ ಹಲಸಿನ ಪಪ್ಪಡಕ್ಕಾಗಿ ಅದು ಮುಗಿಯುವವರೆಗೂ ಕಾಡಿಸಬೇಕು. ಆಟವಾಡುವಾಗ ಕಾಲು ಗುದ್ದಿ ತೋರು ಬೆರಳಿನ ಉಗುರು ಕಿತ್ತು ಹೋಗಿ, ಅದು ಒಣಗುವ ಮೊದಲೇ ಮತ್ತೊಮ್ಮೆ ಇನ್ನೊಂದು ಕಾಲಿಗೆ ಗಾಯ ಮಾಡ್ಕೊಂಡು ನಿನ್ನ ಹತ್ರ ಬೈಸ್ಕೋಬೇಕು. ರಾತ್ರಿ ಗುಡುಗಿಗೆ ನಿನ್ನ ಮಡಿಲೊಳಗೆ ಬಚ್ಚಿಟ್ಟುಕೊಳ್ಳಬೇಕು. ಆ ತೊರೆಯಲ್ಲಿ ನೀ ಬಟ್ಟೆ ಒಗೆಯುವಾಗ, ನಿನ್ನ ಸೀರೆಯಲ್ಲಿ ಮೀನು ಹಿಡಿದು ಬಾಟಲಿಯಲ್ಲಿ ಹಾಕಿ ರಾತ್ರಿಯಿಡೀ ಅದನ್ನು ನೋಡುವಾಗ ಹತ್ತಿರ ಬಂದು ಮುಗುಳ್ನಕ್ಕು ತಲೆ ನೇವರಿಸಿ ನಿಯಾಳಿಸಬೇಕು. ಗುಮ್ಮನ ನೋಡಿ ಹೆದರಿ ಅಳಬೇಕು, ಆಗ ನೀ ‘ಅಲ್ಲಿ ಎನೂ ಇಲ್ಲ ರಾಜ.. ‘ ಅಂತೇಳಿ ಮಡಿಲಲ್ಲಿ ಬರಸೆಳೆದು ಅಪ್ಪಿ ಮುದ್ದಾಡುವ ಸವಿಯನ್ನು ಅನುಭವಿಸಬೆಕು. ನಿನ್ನ ಹತ್ತಿರ ಮಲಗಲು ಇಲ್ಲದ ಹೊಟ್ಟೆನೋವು, ತಲೆನೋವಿನ ನೆಪ ಹುಡುಕಬೇಕು. ಕರೆಂಟಿಲ್ಲದ ರಾತ್ರಿ ನಿನ್ನ ಕತೆ ಕೇಳಬೇಕು. ನಿನ್ನ ಲಾಲಿಹಾಡಿಗೆ ತಲೆದೂಗಿ ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ನಿದ್ರಿಸಬೇಕು….

ನನ್ನ ಕೋಪಕ್ಕೆ ನೀ ಮಣಿಯುವಾಗ, ನನ್ನ ಆಸೆಗಳಿಗೆ, ಬಯಕೆಗಳಿಗೆ ನೀರೆರೆಯುವಾಗ, ನನ್ನ ಅಂತರಂಗದ ಕತ್ತಲ ಕೋಣೆಗೆ ದೀಪ ಹಚ್ಚುವಾಗ, ನಿನ್ನೆಲ್ಲ ಕನಸುಗಳ ಮಧ್ಯೆ ನನ್ನ ಕನಸುಗಳನ್ನೂ ಸಲಹುವಾಗ, ಅದಕ್ಕಾಗಿ ತುಡಿಯುವಾಗ, ನನ್ನೆಲ್ಲಾ ನೋವನ್ನೂ, ನಲಿವನ್ನೂ ನಿನ್ನದೇ ಅಂತ ಮಡಿಲೊಡ್ಡಿ ಸಂತೈಸುವಾಗ ನಿನ್ನಲ್ಲಿ ತಾಯಿಯನ್ನು ಕಾಣುತ್ತೇನೆ..
ಏ ರೂಹಿ…!
ನೀ ತಾಯಿಯಾಗುವಾಗೆಲ್ಲ ನಾ ಮಗುವಾಗುತ್ತೇನೆ.

~ಹುಸೇನಿ

Leave a comment