ಕಟ್ ' ಕತೆಗಳು -3 · ಕಟ್ ಕತೆಗಳು

ಕಟ್ ‘ ಕತೆಗಳು -3

painting8
1. ಮುದ್ದಿನ ಮಗಳು ಚಿನ್ನದ ಕಾಲ್ಗೆಜ್ಜೆಗಾಗಿ ಹಠ ಹಿಡಿದು ಎರಡು ದಿನ ಊಟ ಬಿಟ್ಟಿದ್ದಳು , ತಂದೆ ಮಾರನೆ ದಿನ ಕಾಲಿಲ್ಲದ ಹುಡುಗಿಯನ್ನು ಅವಳ ಮುಂದೆ ತಂದು ನಿಲ್ಲಿಸಿದ್ದೆ ತಡ, ಮಗಳ ಉಪವಾಸಕ್ಕೆ ಬ್ರೇಕ್ ಬಿತ್ತು.

2. ದೊಡ್ದಾಸ್ಪತ್ರೆ ‘ಮಣಿಪಾಲ್ ‘ಗೆ ಚಿಕಿತ್ಸೆಗಾಗಿ ಹೋದವನು ಅವರು ಸರಿಯಾಗಿ ಚಿಕತ್ಸೆ ಕೊಡದೆ “ಮನಿ ಪೋಲ್” ಮಾಡಿದ್ದಾರೆ ಅಂತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.

3 . ಮುಖ ಮನಸ್ಸಿನ ಕನ್ನಡಿ ಎಂದವಳು ಉಸುರಿದಾಗ ತನ್ನ ಮನಸ್ಸಿನಲ್ಲಿರುವುದು ಅವಳಿಗೆ ಗೊತ್ತಾಗಬಹುದೇನೋ ಅಂತ ಕಸಿವಿಸಿಗೊಂಡ ಆತ ಮುಖದಲ್ಲಿ ಭಾವ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಆಕೆಗೆ ವಿಚಿತ್ರವಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ.

4. ಆ ಘಟನೆಯನ್ನು ಮರೆಯಬೇಕೆಂದು ಗಂಟಲು ಪೂರ್ತಿ ಕುಡಿದ. ಈಗ ಮರೆಯಬೇಕಿದ್ದ ಆ ಘಟನೆ ನೆನಪಾಗದೆ ಚಡಪಡಿಸುತ್ತಿದ್ದಾನೆ.

5. ನೀನಿಲ್ಲದೆ ಬದುಕಲಾರೆ ಅಂತಿದ್ದ ಹುಡುಗನನ್ನು ‘ಇನ್ನೂ ಬದುಕಿದ್ದೀಯಾ..?’ ಅಂತ ಕುಟುಕಿದಳು . “ನಾನು ಬದುಕುತ್ತಿಲ್ಲ” ಎಂದಷ್ಟೇ ಆತ ಉತ್ತರಿಸಿದ.

6. ಜನುಮ ಕೊಟ್ಟು , ಸಾಕಿ ಸಲುಹಿದ ಅಮ್ಮನಿಗಿಂತ “ಅವಳು” ಇಷ್ಟವಾದ ಅವನ ವಿಕೃತಿಗೆ ಕೊನೆಗೆ ಅವನೊಂದು ಹೆಸರಿಟ್ಟ . “ನಿಸ್ವಾರ್ಥ ಪ್ರೀತಿ”

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕಟ್ ಕತೆಗಳು

ಕಟ್ ‘ ಕತೆಗಳು -2

images

1. ಈಗಷ್ಟೇ ಮದುವೆಯಾಗಿದ್ದೀವಿ, ಇನ್ನೊಂದಿಷ್ಟು ಕಾಲ ಹೋಗಲಿ ಅಂತ ಮೊದಲನೆಯ ಮಗುವನ್ನು ಗರ್ಭಪಾತ ಮಾಡಿದ್ದರು. ಈಗಷ್ಟೇ ಹೊಸ ಮನೆ ಕಟ್ಟಿಸಿದ್ದೀವಿ, ಈ ಸಾಲ ಗೀಲ ಎಲ್ಲ ಮುಗೀಲಿ ಆಮೇಲೆ ಸಾಕು ಮಗು ಅಂತ ಎರಡನೆಯ ಮಗುವನ್ನೂ ಗರ್ಭಪಾತ ಮಾಡಿದರು. ಅದೇಕೋ ಆಮೇಲೆ ಅವಳ ಮುಟ್ಟು ನಿಲ್ಲಲೇ ಇಲ್ಲ.

2. ಈ ಜಮಾನ ನಿಮ್ಮಂತಹ ನವಯುವಕರದು..” ಎಂದವರು ಮತ್ತೊಂದು ಕಡೆ “ಈ ಕಾಲ ಬಹಳ ಕೆಟ್ಟಿದೆ ” ಅಂದರು… ಕೊನೆಗೆ ಕಾಲವನ್ನು ಕೆಡಿಸಿದ ಅಪರಾಧವನ್ನೂ ಯುವಕರ ತಲೆಮೇಲೆ ಹಾಕಿ ನಿರಾಳವಾದರು.

3. ‘ಪ್ರೀತಿ’ ಎಂಬ ವಿಷಯದಲ್ಲಿ ನಡೆದ ಸಣ್ಣ ಕತಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವನು ಬರೆದದ್ದು ಇಷ್ಟೇ “ಪ್ರೀತಿ ಅಂದರೆ ನಾನು-ನನ್ನವಳು”.

4. ತನ್ನ ಮುಖದಲ್ಲಿ ಮೊಡವೆಯಿಂದ ಉಂಟಾದ ಕಲೆಯಿಂದ ಬೇಸರಗೊಂಡಿದ್ದ ಅವಳನ್ನು “ಆ ಚಂದಮಾಮನಲ್ಲೂ ಕಲೆಯಿಲ್ಲವೇ..?” ಅಂತ ಮುದ್ದಾಗಿ ಅವನು ಕೇಳಿದ್ದೇ ತಡ, ಅವಳ ಮುಖದಲ್ಲಿ ಮತ್ತದೇ ಹಳೆಯ ಪ್ರಸನ್ನತೆ ಮೂಡಿತು.

5. ಗಾಂಧೀ ಜಯಂತಿಯ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ನಡೆಸಿದ ಗಾಂಧಿ ಛದ್ಮ ವೇಷ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ದುಡ್ಡಿನಿಂದ ಕುಡಿದು ತೂರಾಡುತ್ತಿದ್ದ ನಮ್ಮ ಕುಮಾರಣ್ಣನನ್ನು ಸ್ನೇಹಿತರು ಮಧ್ಯ ರಾತ್ರಿ ಸೇಫ್ ಆಗಿ ಮನೆಗೆ ತಲುಪಿಸಿದ್ದಾರಂತೆ.

6. ಒಂದಷ್ಟು ಕೊಲೆ, ದರೋಡೆ, ಬಾಂಬ್ ಸ್ಪೋಟ, ರೇಪ್ ಸುದ್ದಿಗಳು ಇರದಿದ್ದರೆ ಆ ಸಂಪಾದಕನಿಗೆ ತನ್ನ ಪತ್ರಿಕೆ ಪೇಲವ ಅಂತ ಅನ್ನಿಸ್ತಿತ್ತು.

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕಟ್ ಕತೆಗಳು

ಕಟ್ ‘ ಕತೆಗಳು

1. “ಇಲ್ಲಿಗೆ ಎಲ್ಲ ಮುಗಿಯಿತು. ಇನ್ಯಾವತ್ತೂ ನಿನ್ನ ವಿಷಯಕ್ಕೆ ಬರಲ್ಲ .. ಇನ್ಯಾವತ್ತೂ ನಿನ್ನ ಮುಖ ನೋಡಲ್ಲ” ಅಂತ ಹೇಳಿ ರೋಷದಿಂದ ಹೊರಟು ಬಂದ ಅವನು ಕಣ್ಣುಗಳಲ್ಲಿ ಅವಳನ್ನು ತುಂಬಿಕೊಂಡಿದ್ದನು.

2. ಆ ಹುಡುಗನಿಗೆ ತಾನು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ಬೇಜಾರು ಪಕ್ಕದ ಮನೆಯ ವಿದ್ಯಾಳಿಗೆ ಡಿಸ್ಟಿಂಕ್ಷನ್ ಬಂದಿದೆ ಅಂತ ಕೇಳಿದಾಗ ದೂರವಾಗಿತ್ತು.

3. ಮರಿ ಮೀನುಗಳು ತಾಯಲ್ಲಿ ಕೇಳಿತು, “ನಾನು ನೀರಲ್ಲೇ ಏಕೆ ಬದುಕಬೇಕು..? ನೆಲದ ಮೇಲೆ ಬದುಕಲಾಗದೆ..?” ತಾಯಿ ಮೀನು ಹೇಳಿತು.. ಮರೀ.. ನೀರು FISHಗೆ.. ನೆಲ “SELFISH”ಗೆ..!

4. ಹಣ, ಅಂತಸ್ತಿನ ಹಿಂದೆ ಬಿದ್ದ ಅವನು ವರ್ಷಗಳ ನಂತರ ವಿದೇಶದಿಂದ ಮನೆಗೆ ಬಂದಿದ್ದ. ಹಾಲುಗಲ್ಲದ ತನ್ನ ಮಗು ಅವನನ್ನು ನೋಡಿದವನೇ ತೊದಲುತ್ತ ಪ್ರಶ್ನಿಸಿದ, “ಇದು ಯಾರಮ್ಮಾ ..? ”

5. ದಿನಾ ದೇವಸ್ಥಾನಕ್ಕೆ ಹೋಗಿ ಊರವರಿಂದ “ತುಂಬಾ ಒಳ್ಳೆಯ ಹುಡುಗಿ” ಅಂತ ಸರ್ಟಿಫಿಕೇಟ್ ಪಡೆದ ವಿಶಾಲಮ್ಮನ ಮಗಳು ಮದುವೆಯ ಮುಂಚಿನ ರಾತ್ರಿ ಪೂಜಾರಿ ಜೊತೆ ಓಡಿಹೊದಳು.

6. ಎಂದೂ ತಮ್ಮೊಳಗೆ ನಡೆಯುತ್ತಿದ್ದ ಕಲಹದಿಂದ ಬೇಸತ್ತು ಅವರು ಡೈವೋರ್ಸ್ ಪಡೆದಿದ್ದರು. ಈಗ ಬೋರ್ಡಿಂಗ್ ಸ್ಕೂಲಲ್ಲಿ ಕಲಿಯುತ್ತಿರುವ ಮಗನ ಬೇಸಿಗೆ ರಜೆಗೆ ಯಾರ ಮನೆಯಲ್ಲಿರಬೇಕೆಂಬ ವಿಚಾರದಲ್ಲಿ ಮತ್ತೆ ಕಲಹ ನಡೆಯುತ್ತಾ ಇದೆ.

7. ಕೊನೆಯ ಬಾರಿಗೆ ನಂಗೆ “ಐ ಲವ್ ಯೂ” ಅಂದದ್ದು ಯಾವಾಗ? ಅಂತ ಅವಳು ಕೇಳಿದ್ದೆ ತಡ, ಆತ ಎಂದಿನಂತೆ ಕಿಸೆಯಲ್ಲಿದ್ದ ಚಾಕೊಲೇಟನ್ನು ಅವಳಿಗೆ ಕೊಟ್ಟ..ಅವಳು ಅದನ್ನು ಚಪ್ಪರಿಸುತ್ತಾ ನುಸು ನಾಚಿಕೊಂಡಳು!!!!!!

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ