ಹುಸೇನಿ ಪದ್ಯಗಳು – 39 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 39

root

೧)
ಕಂಪ್ಪೌಂಡಾವೃತ ಬಹುಮಡಿಯ ಮನೆಯ
ಅಲ್ಸೇಶನ್ ನಾಯಿಗೂ..
ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ
ಬೀದಿನಾಯಿಗೂ ಇರುವ ವ್ಯತ್ಯಾಸ
ಬರಿಯ ‘ಸ್ವಾತಂತ್ರ್ಯ’
೨)
ಸಮಯದ ವೇಗಕ್ಕೆ ಕುಪಿತನಾದವನು
ಗಡಿಯಾರವನ್ನು ಹೊಡೆದು ಹಾಕಿದ;
ಆದರೂ ಸಮಯ ನಿಲ್ಲಲಿಲ್ಲ ಎಂಬುದು
ಈ ಸಮಯದ ಸತ್ಯ…
೩)
ತನ್ನದೆಲ್ಲವನ್ನೂ ಬಡವರಿಗೆ ಧಾರೆ ಎರೆದವನೂ
ಆಗರ್ಭ ಶ್ರೀಮಂತ ಜಿಪುಣ ಇಬ್ಬರೂ ಸತ್ತರು
ವ್ಯತ್ಯಾಸ ಇಷ್ಟೇ…
ಮೊದಲನೆಯವನು ಜನಮಾನಸದಲ್ಲಿ ಈಗಲೂ
ಬದುಕಿದ್ದಾನೆ..
೪)
ಕುಡಿಗಳು ಎಷ್ಟೇ ಬಲಿತು ಹೊರಚಾಚಿ
ಹಾರಲಣಿಯಾಗಿ
ಆಕಾಶದತ್ತ ಮೊಗವಿಟ್ಟರೂ
ತಾಯಿ ಬೇರು
ಸಡಿಲವಾಗುವುದೇ ಇಲ್ಲ…
(ಮುಂದುವರೆಯುತ್ತದೆ)
ಹುಸೇನಿ ~

Leave a comment

ಹುಸೇನಿ ಪದ್ಯಗಳು – 39 · ಹುಸೇನಿ_ಪದ್ಯಗಳು

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ;
ಕೇರಿಯ ಅನಾಥ ಹುಡುಗ
ಕಾಯುತ್ತಿದ್ದಾನೆ,
ಹಸಿವಾಗದಿರಲು ಔಷಧಿ ಬೇಕಂತೆ..

ಅಲ್ಲಿ ಅವರು
ಶಾಂತಿ ಸ್ಥಾಪನೆಗಾಗಿ
ಯುದ್ಧ ನಿರತರಾಗಿದ್ದಾರೆ;

ಒಡೆದ ಗಾಜು
ಮರು-ಜೋಡಿಸಲಾರದಂತೆ;
ಮತ್ತೆ ಬದುಕು ?

ಎಲ್ಲವನ್ನೂ ಸಹಿಸಬಲ್ಲೆ;
ಜಗದಗಲ ಹರಡಿದ ಶೂನ್ಯತೆ ಒಂದನು
ಬಿಟ್ಟು


ಅವಸರಬೇಡ,
ಸಾವು
ನಿನ್ನ ಪಾದಕ್ಕಂಟಿದ ಚಪ್ಪಲಿ;

ಹಾಳೂರಿನ
ಹಾದಿಯಲ್ಲೊಂದು
ಮದುವೆ ದಿಬ್ಬಣಕೆ
ಎದುರಾದ ಶವಯಾತ್ರೆ;
ಮುದಿಯನೊಬ್ಬ ಗೊಂದಲದಲ್ಲಿದ್ದಾನೆ

ಸ್ವಗತಗಳಲಿ
ಸಾಂತ್ವನವಿದೆ;
ಹೊರಸಾಯುವ
ಪದಗಳಿಗಿಂತ,
ಇರಿದ ನಿನ್ನೆಗಿಂತ, ಸಾವ ಕರೆವ ನಾಳೆಗಿಂತ..

ಹುಸೇನಿ ~

ಹೇಗಿದೆ ಹೇಳಿ