ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್.. · ವಾಸ್ತವ ಸಂಚಿ

ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್..

ಸವಿತಾ ಹಾಲಪ್ಪನವರ್!. ಜೀವರಕ್ಷಣೆಗೆ ನಿರೂಪಿಸಿದ ‘ಅಮಾನುಷ’ ಕಾನೂನಿನಿಂದಾಗಿ ಜೀವ ಕಳೆದುಕೊಂಡ ನಮ್ಮ ಬೆಳಗಾವಿ ಮೂಲದ ದಂತವೈದ್ಯೆ. ಧಾರ್ಮಿಕ ಸಂಕುಚಿತತೆಯ ನೆರಳಿನಲ್ಲಿ ಜೀವಪರ ಎಂಬ ಹಣೆಪಟ್ಟ ಕಟ್ಟಿ ಐರ್ಲೆಂಡ್ ಸರಕಾರ ರೂಪಿಸಿದ ಕಾನೂನು ಒಂದು ಜೀವವನ್ನೇ ಬಲಿತೆಗೆದುಕೊಂದದ್ದು ಆ ದೇಶದ ಇತಿಹಾಸ ದುರಂತವೇ ಸರಿ. ಎಲ್ಲರಿಗೂ ಬದುಕುವ ಹಕ್ಕನ್ನು ಪ್ರತಿಪಾದಿಸುವ ಈ ಕಾನೂನು ಹೆಣ್ಣಿನ ಜೀವನದ ಮತ್ತೊಂದು ಮಜಲನ್ನು ಕಾಣದೆ ಹೋದದ್ದು ದೊಡ್ಡ ದುರಂತ.

ಮಾಜಿ ಕೆ.ಪಿ.ಟಿ.ಸಿ.ಎಲ್ ಉದ್ಯೋಗಿ ಆನಂದ್ ಯಾಳಗಿ ಮತ್ತು ಅಕ್ಕಮಹಾದೇವಿಯವರ ಪುತ್ರಿ ಸವಿತಾ ಸದಾ ಸ್ಪೂರ್ತಿಯ ಚಿಲುಮೆ, ಸ್ನಿಗ್ದ ಸೌಂದರ್ಯವತಿ. ಬಾಲ್ಯದಲ್ಲಿಯೇ ಹತ್ತು ಹಲವು ಸಾಧನೆಗಳ ರೂವಾರಿ. ಉದ್ಯೋಗ ನಿಮಿತ್ತ ಆಕೆ ಪತಿ ಪ್ರವೀಣ್ ಹಾಲಪ್ಪನವರ್ ಜೊತೆ ಕೆಲ ವರ್ಷದಿಂದ ದೂರದ ಐರ್ಲೆಂಡ್ ನಲ್ಲಿ ವಾಸವಾಗಿದ್ದರು. 5 ತಿಂಗಳ ಬಸುರಿಯಾಗಿದ್ದ ಆಕೆಗೆ ಅಕ್ಟೋಬರ್ 21ರಿಂದು ಇದ್ದಕ್ಕಿಂದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತ್ತು .ಗಾಲ್ವೆಯ ವಿವಿ ಯಲ್ಲಿ ಪರೀಕ್ಷೆ ಮಾಡಿದ ವೈದ್ಯರು ಭ್ರೂಣ ಜಾರಿದೆ, ಅಲ್ಲದೆ ಗರ್ಭಕೋಶ ಊದಿಕೊಂಡಿದ್ದು, ಅಮಿನಿಯೋಟಿಕ್ ದ್ರವ ಸೋರಿಕೆಯಾಗುತ್ತಿದ್ದರಿಂದ ಮಗು ಉಳಿಯೋದು ಕಷ್ಟ ಎಂದಿದ್ದರು. ಈ ನಡುವೆ ಆಕೆಗೆ ತೀವ್ರ ಹೊಟ್ಟೆ ನೋವೂ ಕಾಣಿಸಿಕೊಂಡಿತ್ತು. ರಕ್ತಸ್ರಾವ ತೀವ್ರವಾಗುತ್ತಿದ್ದಂತೆ ಗರ್ಭಪಾತ ಮಾಡಿಸಿ ಪತ್ನಿಯ ಜೀವ ಉಳಿಸುವಂತೆ ಪ್ರವೀಣ್ ಕೇಳಿಕೊಂಡರು. ಆದರೆ ಭ್ರೂಣ ಇನ್ನೂ ಸತ್ತಿಲ್ಲವಾದ್ದರಿಂದ ವೈದ್ಯರು ಗರ್ಭಪಾತ ಮಾಡಲು ಒಪ್ಪಿಕೊಳ್ಳಲಿಲ್ಲ. “ಇದು ಕ್ಯಾಥೊಲಿಕ್ ರಾಷ್ಟ್ರ, ಇಲ್ಲಿ ಭ್ರೂಣ ಹತ್ಯೆಗೆ ಕಾನೂನು ಅವಕಾಶ ಕೊಟ್ಟಿಲ್ಲ” ಎಂಬುದಾಗಿತ್ತು ವೈದ್ಯರ ಉತ್ತರ. ಪತ್ನಿಯ ನರಕಯಾತನೆ ನೋಡಲಾರದೆ ಪ್ರವೀಣ್ ವೈದ್ಯರ ಕಾಲಿಗೆ ಬಿದ್ದರೂ ವೈದ್ಯರ ಮನಸು ಕರಗಲಿಲ್ಲ. ಯಾತನಾಮಯ ನೋವಿನಿಂದ ಸವಿತಾ “ನಾನು ಕ್ಯಾಥೊಲಿಕ್ ಅಲ್ಲ, ಐರ್ಲೆಂಡ್ ಪ್ರಜೆಯೂ ಅಲ್ಲ, ನಾನೊಬ್ಬ ಹಿಂದೂ, ದಯಮಾಡಿ ಮಗುವನ್ನು ಹೊರ ತೆಗೀರಿ” ಅಂತ ಗೊಗೆರೆದರೂ ಅವಳ ಮೊರೆ ಕೇಳಲಿಲ್ಲ. ಭ್ರೂಣದ ಎದೆಬಡಿತ ನಿಲ್ಲುವವರೆಗೂ ನಾವು ಏನೂ ಮಾಡುವಂತಿಲ್ಲ ಎಂದು ವೈದ್ಯರು ಕೈ ಚೆಲ್ಲಿದರು. ಮುಂದಿನ ಮೂರು ದಿನಗಳಲ್ಲಿ ಸವಿತಾ ಮತ್ತು ಪ್ರವೀಣ್ ಹಲವಾರು ಬಾರಿ ಅಬಾರ್ಶನ್ ಮಾಡುವಂತೆ ಆಸ್ಪತ್ರೆ ಅಧಿಕಾರಿಗಳಲ್ಲಿ ವಿನಂತಿಸಿದ್ದರೂ, ಅವರು ಕಾನೂನಿನ ಹೆಸರು ಹೇಳಿ ನಿರಾಕರಿಸಿದ್ದರು. ಅಕ್ಟೋಬರ್ 23 ರಂದು ಶೌಚಾಲಯದಲ್ಲಿ ಕುಸಿದು ಬಿದ್ದ ಆಕೆಯನ್ನು ಐ.ಸಿ.ಯುಗೆ ಸೇರಿಸಿದ ಕೆಲವೇ ಗಂಟೆಗಳಲ್ಲಿ ಭ್ರೂಣದ ಎದೆ ಬಡಿತ ನಿಂತಿತು. ಕೊನೆಗೂ ಮಗುವನ್ನು ಅಬಾರ್ಶನ್ ಮಾಡಿ ಹೊರತೆಗೆಯಲಾಯಿತು. ಅಷ್ಟರಲ್ಲೇ ಸಮಯ ಮೀರಿತ್ತು. ಅದಾದ ಮೂರನೇ ದಿನದಲ್ಲಿ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ದೇಹದ ಉಷ್ಣತೆಯಲ್ಲಿ ಏರು ಪೇರಾಯಿತು. ಹೃದಯ, ಮೂತ್ರಜನಕಾಂಗ ಮತ್ತು ಪಿತ್ತಜನಕಾಂಗ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೊನೆಗೆ ನವೆಂಬರ್ 1ಕ್ಕೆ ಅಕೆಯ ನರಕಮಯ ಬದುಕು ಕೊನೆಗೊಂಡಿತು.

ಮಾನವ ಹಕ್ಕುಗಳ ಪಾಲಕರೆಂದು ಬೊಬ್ಬಿಡುವ ಐರ್ಲೆಂಡ್ ದೇಶದ ಕಾನೂನು ಎಷ್ಟೊಂದು ಅಮಾನುಷ ಮತ್ತು ಜೀವಭಕ್ಷಕೆವೆಂದು ಈ ಪ್ರಕರಣದ ಮೂಲಕ ಬೆಳಕಿಗೆ ಬಂದಿದೆ. ಧರ್ಮಾಂಧತೆಯ ತಳಹದಿಯ ಮೇಲೆ ದೇಶದ ಕಾನೂನನ್ನು ಕಟ್ಟಿದರೆ ಆಗುವ ಅನಾಹುತಕ್ಕೆ ಈ ಪ್ರಕರಣ ಕನ್ನಡಿಯಂತಿದೆ. 1861ರ ಕಾನೂನಿನ ಪ್ರಕಾರ ಐರ್ಲೆಂಡ್ ದೇಶದಲ್ಲಿ ಗರ್ಭಪಾತ ನಿಷೇಧಿಸಲಾಯಿತು. ಈ ಕಾನೂನಿನ ಹಿಂದೆ ಸಂಪ್ರದಾಯವಾದಿ ಕ್ಯಾಥೊಲಿಕರ ದಟ್ಟ ಪ್ರಾಭಾವವಿತ್ತು. ‘ಎಲ್ಲರಿಗೂ ಬದುಕುವ ಹಕ್ಕಿದೆ’ ಎಂಬ ನೀತಿಯನ್ನು ಜಾರಿಗೊಳುಸುವ ನಿಟ್ಟಿನಲ್ಲಿ ಈ ಕಾಯಿದೆ ಜಾರಿ ಬಂತಾದರೂ, ಸ್ತ್ರೀ ಬದುಕಿನ ಇನ್ನೊಂದು ಆಯಾಮವನ್ನು ಅಳೆಯಲು ಈ ಕಾನೂನು ಸಂಪೂರ್ಣವಾಗಿ ವಿಫಲಗೊಂಡಿತ್ತು. ಅಗತ್ಯ ಸನ್ನಿವೇಶಗಳಲ್ಲಿ ಗರ್ಭವನ್ನು ಉಳಿಸುವ ಅಥವಾ ಬಿಡುವ ಆಯ್ಕೆಯನ್ನು ವೈದ್ಯರಿಗೆ ಮತ್ತು ಆ ಮಹಿಳೆಗೆ ಬಿಟ್ಟು ಕೊಡದೆ ಕಾನೂನಿನ ಕೈಗೆ ಒಪ್ಪಿಸುವುದು ಒಂಥರಾ ಮೂರ್ಖತನದ ಪರಮಾವದಿ. ಹಲವು ಕ್ಯಾಥೊಲಿಕ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಈ ನಿಟ್ಟಿನಲ್ಲಿ ತಮ್ಮ ಕಾನೂನಿಗೆ ಅಗತ್ಯ ಬದಲಾವಣೆಯನ್ನು ತಂದಿದೆ.

ಈ ಮೊದಲು 1992ರಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಗರ್ಭಪಾತಕ್ಕೆ ಅವಕಾಶ ಕೊಡದ ಈ ಕಾನೂನಿನ ಬಗ್ಗೆ ಅಲ್ಲಿನ ಪ್ರಜ್ಞಾವಂತ ನಾಗರಿಕರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದರು. 2009ರಲ್ಲಿ ಐರೊಪ್ಯ ಒಕ್ಕೂಟ ಈ ಕಾಯಿದೆಗೆ ಬದಲಾವಣೆಯನ್ನು ತರಲು ಸೂಚನೆ ಕೊಟ್ಟಿತು. ಆದರೆ ಧಾರ್ಮಿಕ ಕಟ್ಟರ್ ವಾದಿಗಳ ಕೊಪವನ್ನೆದುರಿಸಲು ಸಿದ್ದರಿಲ್ಲದ ಅಲ್ಲಿನ ಸರಕಾರ ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ.

ಸದ್ಯ ಈ ಪ್ರಕರಣಕ್ಕೆವಿಶ್ಯವ್ಯಾಪಿ ಸಂಚಲನ ಮೂಡಿಸಿದುದಲ್ಲದೆ, ಇದರ ವಿರುದ್ದ ಭಾರಿ ಅಕ್ರೋಶ ವ್ಯಕ್ತವಾಗಿದೆ. ಸ್ವತಃ ಐರ್ಲೆಂಡ್ ನಲ್ಲೆ ಜನರು ಆಕ್ರೋಶದಿಂದ ಬೀದಿಗಿಳಿದಿದ್ದಾರೆ. ಅಲ್ಲಿನ ಅರೋಗ್ಯ ಸಚಿವರು ಎರಡು ಕಡೆಯಿಂದ ತನಿಖೆಗೆ ಆದೇಶಿಸಿದ್ದಾರೆ. ಇನ್ನಾದರೂ ಅಲ್ಲಿನ ಸರಕಾರ ಎಚ್ಚೆತ್ತು ಧಾರ್ಮಿಕ ನಂಬಿಕೆಯನ್ನು ವೈದ್ಯಕೀಯ ಕ್ಷೇತ್ರದಿಂದ ಬೇರ್ಪಡಿಸಿ ಆ ಕ್ಷೇತ್ರವನ್ನು ಸ್ವತಂತ್ರವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ಆ ಮೂಲಕ ಕಾನೂನಿನಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಬೇಕು. ಇಲ್ಲದಿದ್ದರೆ ಇನ್ನೂ ಅದೆಷ್ಟು ಸವಿತೆಯರು ಬದುಕುವ ಹಕ್ಕಿನ ಹೆಸರಲ್ಲಿ ಬದುಕನ್ನು ಕಳೆಯಬೇಕೋ ….?


1 comment

ಈ ಲೇಖನವನ್ನು VkNewz ನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಈ ಲೇಖನವನ್ನು ಗಲ್ಫ್ ಕನ್ನಡಿಗದಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ