ಏರ್ಪೋರ್ಟ್ ಚಿತ್ರಗಳು · ನ್ಯಾನೋ ಕಥೆಗಳು · ಸಣ್ಣ ಕತೆ

ಏರ್ಪೋರ್ಟ್ ಚಿತ್ರಗಳು ..

airport counters

ಏರ್ಪೋರ್ಟ್ ಹೊರಗಡೆ ತಮ್ಮವರಿಗಾಗಿ ಕಾಯುವ ದಟ್ಟ ಜನಸಂದಣಿ. ಪಿಸುಮಾತುಗಳೆಲ್ಲವೂ ಒಟ್ಟಾಗಿ ಒಂದು ಸಣ್ಣ ಸಂತೆಯಷ್ಟು ಗೌಜು,ಗದ್ದಲ..ಕೆಲವು ಮುಖಗಳಲ್ಲಿ ಕಾತರಿಕೆಯ ಚಡಪಡಿಕೆ, ಇನ್ನು ಕೆಲವು ಮುಖಗಳಲ್ಲಿ ಅಗಲಿಕೆಯ ನೋವು..ಒಂಥರಾ ವಿಕ್ಷಿಬ್ದ ವಾತಾವರಣ.. ಪತಿಯನ್ನು ಬೀಳ್ಕೊಡುವ ಪತ್ನಿಯ ನಿರ್ಲಿಪ್ತತೆ, ತಬ್ಬಿಕೊಂಡು ಅಳುವ ಜೋಡಿಗಳು, ಮಕ್ಕಳನ್ನು ಕಳುಹಿಸಿಕೊಡುವ ಅಪ್ಪ,ಅಮ್ಮಂದಿರು. ಎಂದೋ ಮರೆತ ಅಪ್ಪನ ಮುಖವನ್ನು ಮತ್ತೆ ಕಾಣಲು ಕಾತರಿಸುವ ಮಕ್ಕಳು, ಯಾರೋ ವಿಐಪಿಯ ಹೆಸರಿನ ಫ಼ಲಕವನ್ನು ಹಿಡಿದು ಕಾಯುವ ಚಾಲಕರ ನಿಸ್ತೇಜ ಮುಖ.. ಸುಮಾರು 4 ಗಂಟೆಗಳಷ್ಟು ಸಮಯ ಏರ್ಪೋರ್ಟ್ ಹೊರಗಡೆ ಗೆಳೆಯನಿಗಾಗಿ ಕಾದು ಕುಳಿತಿದ್ದ ನನಗೆ ಅಲ್ಲಿನ ಕೆಲವು ಚಿತ್ರಗಳು ಇನ್ನೂ ಕಾಡುತ್ತಿದೆ.

೧)
ವಸ್ತ್ರಧಾರಣೆ ನೋಡಿದರೆ ಅವಳು ಗಗನ ಸಖಿ ಇರಬೇಕು..ಉತ್ತರ ಭಾರತದ ಹುಡುಗಿ.. ತನ್ನ ಸಹೋದ್ಯೋಗಿಯೊಂದಿಗೆ ಚಹಾ ಕುಡಿಯಲು ಬಂದವಳು. ಪಕ್ಕದ ಟೇಬಳಲ್ಲಿ ಅಮ್ಮನ ಭುಜದ ಮೇಲಿದ್ದ ಮಗುವಿನ ಮುಖ ಅವಳಿಗೆ ಅಭಿಮುಖವಾಗಿತ್ತು. ಮಗುವಿನೊಂದಿಗೆ ಆಟಕ್ಕಿಳಿದಳು. ಗಲ್ಲವನ್ನು ಮುಟ್ಟುವುದು,ಬೆರಳನ್ನು ಹಿಡಿಯೋದು, ಮುಖವನ್ನು ವಿರೂಪ ಮಾಡಿ ಮಗುವನ್ನು ನಗಿಸಲು ಪ್ರಯತ್ನ ಪಡುವುದು ಹೀಗೆ ಸಾಗಿತ್ತು. ಅದೇನಾಯ್ತೋ ಗೊತ್ತಿಲ್ಲ.. ಒಮ್ಮೆಲೇ ಎವೆಯಿಕ್ಕದೆ ಮಗುವನ್ನು ದಿಟ್ಟಿಸಿದಳು.. ನಾನು ಅವಳನ್ನು ದಿಟ್ಟಿಸುತ್ತಿದ್ದೆ.. ಮಗುವನ್ನು ದಿಟ್ಟಿಸುತ್ತಲೇ ಕಳೆದುಹೋಗಿದ್ದಾಳೆ ಅಂತಿತ್ತು ಅವಳ ಮುಖಭಾವ.. ಮರುಕ್ಷಣ ಕಟ್ಟೆಯೊಡೆದ ನೀರಿನಂತೆ ಎರಡು ಕಣ್ಣುಗಳಿಂದ ವೇಗವಾಗಿ ಹರಿದ ಕಣ್ಣೀರು ಅವಳ ಗಲ್ಲವನ್ನು ದಾಟಿತು.. ತಕ್ಷಣ ಎಚ್ಚರಗೊಂಡವಳಂತೆ ಅಕ್ಕ ಪಕ್ಕ ಕಣ್ಣೊರಳಿಸಿದವಳು ಎರಡೂ ಕೈಗಳಿಂದ ಮುಖವನ್ನು ಮುಚ್ಚಿದಳು….

೨)
ಅದೊಂದು ಕುಟುಂಬ.. ಅಮ್ಮ,10ರ ಆಸುಪಾಸಿನ ಗಂಡು ಮಗು ಮತ್ತು 8ರ ಆಸುಪಾಸಿನ ಹೆಣ್ಣು ಮಗು.. ಮಕ್ಕಳು ಅಪ್ಪನ ಆಗಮನದ ನಿರೀಕ್ಷೆಯಲ್ಲಿ ತುಂಬಾ ಖುಷಿಯಾಗಿದ್ದರು. ಅಪ್ಪ ಏನೆಲ್ಲಾ ನಮಗಾಗಿ ತಂದಿರಬಹುದು ಎಂಬ ವಿಚಾರದಲ್ಲಿ ಮಕ್ಕಳು ಮುಗ್ದವಾಗಿ ಜಗಳ ಶುರುವಿಟ್ಟುಕೊಂಡದ್ದು ನೋಡುತ್ತಾ ಖುಶಿಪಡುತ್ತಿದ್ದೆ. ಕೆಲವು ಹೊತ್ತಿನ ಬಳಿಕ ಪುಟ್ಟ ಹುಡುಗಿ ಅಮ್ಮನಲ್ಲಿ ಹಣಕ್ಕಾಗಿ ರಚ್ಚೆಹಿಡಿಯುತ್ತಿದ್ದುದ್ದು, ಅಮ್ಮ ಬಯ್ಯುವುದು ಎಲ್ಲ ನಡೆಯಿತು. ಕೊನೆಗೆ ದುಡ್ಡು ಪಡೆದುಕೊಂಡ ಹುಡುಗಿ ಖುಷಿಯಾಗಿ ಓಡೋಡಿ ಅಲ್ಲಿದ್ದ ಪ್ರತೀ ಅಂಗಡಿಗಳಿಗೆ ಹೋಗಿ ಏನೋ ಕೇಳಿ, ಅಂಗಡಿಯಾತ ಇಲ್ಲವೆಂದಾಗ ಮಗುಮ್ಮಾಗಿ ಮುಖ ಸಣ್ಣದು ಮಾಡುತ್ತಿತ್ತು. ಅದೇನು ಕೇಳುತ್ತಿದ್ದಾಳೆ ಎಂದು ತಿಳಿಯುವ ಕುತೂಹಲ. ಕೊನೆಗೆ ನಾನು ಕೂತಿದ್ದ ಬೆಂಚಿನ ಪಕ್ಕದಲ್ಲಿರುವ ಚಾಕೊಲೇಟು ಅಂಗಡಿಗೆ ಬಂದು “ವೆಲ್ಕಮ್ ಫ್ಲವರ್ ಹೇ ಕ್ಯಾ ?” ಅಂತ ಕೇಳಿದಳು.. ಇಲ್ಲೂ ಮಗುವಿಗೆ ನಿರಾಶೆ ಕಾದಿತ್ತು.. ಅಲ್ಲೇ ಯೋಚಿಸುತ್ತಾ ನಿಂತ ಹುಡುಗಿ ಕೊನೆಗೊಂದು ಡೈರಿ ಮಿಲ್ಕ್ ಚಾಕೊಲೇಟು ಕೊಂಡು ಕುಣಿಯುತ್ತಾ ಅಮ್ಮನೆಡೆಗೆ ಸಾಗಿದಳು…

೩) ಬಹುಶಃ ವಿದೇಶದಲ್ಲಿ ಕೆಲಸದಲ್ಲಿರುವವನು ಅವನು. ರಜಾದಲ್ಲಿ ಊರಿಗೆ ಬಂದಿದ್ದಾನೆ. ಸ್ವೀಕರಿಸಲು ಅಪ್ಪ,ಅಮ್ಮ,ತಮ್ಮ ಮತ್ತು ಮನೆಯವರು ಬಂದಿದ್ದರು. ನಿರ್ಗಮನದ ಹಾದಿಯಲ್ಲಿ ಮಗನನ್ನು ನೋಡಿದ್ದೇ ತಡ ಅಮ್ಮ ಮಗನನ್ನು ತಬ್ಬಿಕೊಂಡಳು. ನಂತರದ ಸರದಿ ತಮ್ಮನದು. ನಂತರ ಮನೆಯವರು. ಅಪ್ಪ ನಿಂತಲ್ಲೇ ಇದ್ದ. ಕೊನೆಗೆ ಮಗ ಅಪ್ಪನ ಆಶೀರ್ವಾದ ಪಡೆದು ನಿಂತುಕೊಂಡು ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡ. ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದವನು ಅದನ್ನೆತ್ತಿ ತಬ್ಬಿಯೇ ಕಣ್ಣೀರೊರೆಸಿಕೊಳ್ಳುತ್ತಿದ್ದ. ಎಲ್ಲವೂ ಮುಗಿದು ಬ್ಯಾಗನ್ನೆಲ್ಲಾ ಎತ್ತಿ ಹೊರದಳಣಿಯಾದರು. ಎಲ್ಲರೂ ಮುಂದೆ ಸಾಗಿದ ನಂತರ ಅಪ್ಪ ಕರ್ಚೀಪು ಎತ್ತಿ ಕಣ್ಣಿಗಿಟ್ಟರು..

ಇನ್ನೂ ಇದೆ..
ಹುಸೇನಿ ~

Leave a comment