ಕಟ್ ಕತೆಗಳು

ಕಟ್ ‘ ಕತೆಗಳು -2

images

1. ಈಗಷ್ಟೇ ಮದುವೆಯಾಗಿದ್ದೀವಿ, ಇನ್ನೊಂದಿಷ್ಟು ಕಾಲ ಹೋಗಲಿ ಅಂತ ಮೊದಲನೆಯ ಮಗುವನ್ನು ಗರ್ಭಪಾತ ಮಾಡಿದ್ದರು. ಈಗಷ್ಟೇ ಹೊಸ ಮನೆ ಕಟ್ಟಿಸಿದ್ದೀವಿ, ಈ ಸಾಲ ಗೀಲ ಎಲ್ಲ ಮುಗೀಲಿ ಆಮೇಲೆ ಸಾಕು ಮಗು ಅಂತ ಎರಡನೆಯ ಮಗುವನ್ನೂ ಗರ್ಭಪಾತ ಮಾಡಿದರು. ಅದೇಕೋ ಆಮೇಲೆ ಅವಳ ಮುಟ್ಟು ನಿಲ್ಲಲೇ ಇಲ್ಲ.

2. ಈ ಜಮಾನ ನಿಮ್ಮಂತಹ ನವಯುವಕರದು..” ಎಂದವರು ಮತ್ತೊಂದು ಕಡೆ “ಈ ಕಾಲ ಬಹಳ ಕೆಟ್ಟಿದೆ ” ಅಂದರು… ಕೊನೆಗೆ ಕಾಲವನ್ನು ಕೆಡಿಸಿದ ಅಪರಾಧವನ್ನೂ ಯುವಕರ ತಲೆಮೇಲೆ ಹಾಕಿ ನಿರಾಳವಾದರು.

3. ‘ಪ್ರೀತಿ’ ಎಂಬ ವಿಷಯದಲ್ಲಿ ನಡೆದ ಸಣ್ಣ ಕತಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವನು ಬರೆದದ್ದು ಇಷ್ಟೇ “ಪ್ರೀತಿ ಅಂದರೆ ನಾನು-ನನ್ನವಳು”.

4. ತನ್ನ ಮುಖದಲ್ಲಿ ಮೊಡವೆಯಿಂದ ಉಂಟಾದ ಕಲೆಯಿಂದ ಬೇಸರಗೊಂಡಿದ್ದ ಅವಳನ್ನು “ಆ ಚಂದಮಾಮನಲ್ಲೂ ಕಲೆಯಿಲ್ಲವೇ..?” ಅಂತ ಮುದ್ದಾಗಿ ಅವನು ಕೇಳಿದ್ದೇ ತಡ, ಅವಳ ಮುಖದಲ್ಲಿ ಮತ್ತದೇ ಹಳೆಯ ಪ್ರಸನ್ನತೆ ಮೂಡಿತು.

5. ಗಾಂಧೀ ಜಯಂತಿಯ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ನಡೆಸಿದ ಗಾಂಧಿ ಛದ್ಮ ವೇಷ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ದುಡ್ಡಿನಿಂದ ಕುಡಿದು ತೂರಾಡುತ್ತಿದ್ದ ನಮ್ಮ ಕುಮಾರಣ್ಣನನ್ನು ಸ್ನೇಹಿತರು ಮಧ್ಯ ರಾತ್ರಿ ಸೇಫ್ ಆಗಿ ಮನೆಗೆ ತಲುಪಿಸಿದ್ದಾರಂತೆ.

6. ಒಂದಷ್ಟು ಕೊಲೆ, ದರೋಡೆ, ಬಾಂಬ್ ಸ್ಪೋಟ, ರೇಪ್ ಸುದ್ದಿಗಳು ಇರದಿದ್ದರೆ ಆ ಸಂಪಾದಕನಿಗೆ ತನ್ನ ಪತ್ರಿಕೆ ಪೇಲವ ಅಂತ ಅನ್ನಿಸ್ತಿತ್ತು.

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು

ZSDEMAU EC001
ಹೊಸತು
ಯಾವತ್ತೂ ಹೊಸತನವನ್ನು ಇಷ್ಟಪಡುತ್ತಿದ್ದ ಅವನು ಹೊಸದಾಗಿ ಬಂಗಲೆಯನ್ನು ಕಟ್ಟಿದ. ಅದರಲ್ಲಿ ಎಲ್ಲಾ ವಸ್ತುಗಳೂ ಹೊಸತಾಗಿದ್ದವು. ಹಳೆ ಮನೆಯ ಸಾಮಾಗ್ರಿಗಳನ್ನೆಲ್ಲವನ್ನೂ ಹಳೆಯದು ಎಂಬ ಕಾರಣಕ್ಕೆ ಅಲ್ಲೇ ಬಿಟ್ಟಿದ್ದ. ಕೊನೆಗೆ ಹೆಂಡತಿಯ ಅಣತಿಯಂತೆ ವಯಸ್ಸಾದ ತಾಯಿಯನ್ನೂ ವೃದ್ಧಾಶ್ರಮಕ್ಕೆ ಸೇರಿಸಿದ.

ಧರ್ಮ
“ಧರ್ಮಗಳು ಮನುಷ್ಯರನ್ನು ಒಗ್ಗೂಡಿಸಲೇ ಹೊರತು ಬೇರ್ಪಡಿಸುವುದಕ್ಕಲ್ಲ” ಅಂತ ಭಾಷಣ ಮಾಡಿದ ಧರ್ಮ ಗುರುಗಳು ಅನ್ಯ ಜಾತಿಯವನನ್ನು ಪ್ರೀತಿಸಿದ ತನ್ನ ಮಗಳನ್ನು “ಮರ್ಯಾದ ಹತ್ಯೆ” ಮಾಡಿದ ತಪ್ಪಿಗೆ ಜೀವಿತಾವಧಿ ಜೈಲು ಶಿಕ್ಷೆ ಅನುಭವಿಸಿತ್ತಿದಾನೆ.

ನೆನಪು
ಒಂದನೇ ತರಗತಿಯಲ್ಲಿದ್ದಾಗ ತನ್ನ ಶಾಲೆಯಲ್ಲಿ ಮೊದಲ ಬಾರಿಗೆ ಏರ್ಪಡಿಸಿದ್ದ ಚಲನ ಚಿತ್ರ ಪ್ರದರ್ಶನ ನೋಡುತ್ತಿದ್ದ ಹುಡುಗನನ್ನು ತಂದೆ ತೀರಿ ಹೋಗಿದ್ದಾರೆ ಅಂತ ಎಳೆದುಕೊಂಡು ಹೋಗಿದ್ದರು. ಈಗ ಯುವಕನಾದ ಆತನಿಗೆ ಸತ್ತ ತಂದೆಯ ಮುಖಕ್ಕಿಂತ ಅರ್ಧ ನೋಡಿದ ಆ ಚಿತ್ರವೇ ಹೆಚ್ಚು ನೆನಪಾಗುತ್ತಿತ್ತು.

ಕಲೆ
ಅವನೊಬ್ಬ ಸಾಧ್ವಿ. ಬದುಕುವ ಕಲೆಯನ್ನು ಬೋಧಿಸುತ್ತಿದ್ದ.. ದೇಶ ವಿದೇಶದಲ್ಲಿ ಸಾವಿರಾರು ಶಿಷ್ಯಗಣವನ್ನೂ ಹೊಂದಿದ್ದ. ಕೊನೆಗೊಮ್ಮೆ ಆತ ಸತ್ತ. ಅಂದ ಹಾಗೆ ಸಾವು ಸಹಜವಲ್ಲಂತೆ.. ಆತ್ಮಹತ್ಯೆಯಂತೆ..!

ಪ್ರೀತಿ
ಪ್ರೀತಿಯೆಂದರೆ ಬೆಸುಗೆ, ಬಂಧ, ಬಂಧನ, ಅದೇ ಬದುಕು ಅಂತಿದ್ದ ಪ್ರೇಮಿಯೊಬ್ಬ ಅಕಾಲ ಮರಣವನ್ನಪ್ಪಿದ. ಅಂದ ಹಾಗೆ ಅವನು ಪ್ರೇಯಸಿ ಕೈ ಕೊಟ್ಟಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡದ್ದಂತೆ.

ಭಾಗ್ಯ
ಮದುವೆಯ ಮುಂಚಿನ ದಿನ ಓಡಿ ಹೋದ ಮಗಳನ್ನು ನೆನಪಿಸಿ ಕಂಬನಿ ಮಿಡಿಯುತ್ತಿದ್ದ ತಾಯಿಗೆ, ಇಷ್ಟಪಟ್ಟವನೊಂದಿಗೆ ಬಾಳಲಾಗದ ತನ್ನ ಬಾಳು ಒಮ್ಮೆಲೇ ನೆನಪಾಗಿ ತನಗೆ ಸಿಗದ ಭಾಗ್ಯ ಮಗಳಿಗೆ ದೊರೆಯಿತೆಂದು ಮರುಕ್ಷಣದಿಂದ ಸಂತೋಷಪಟ್ಟಳಂತೆ..!


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕ್ಕಿಸಿ

ನ್ಯಾನೋ ಕಥೆಗಳು

ವ್ಯತ್ಯಾಸ ಮತ್ತು ಇತರೆ ನ್ಯಾನೋ ಕತೆಗಳು


ನೀನಿಲ್ಲದೆಯೂ
ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ಮಿಗಿಲಾಗಿ ಆತ ಹೆಂಡತಿಯನ್ನು ಪ್ರೀತಿಸುತ್ತಿದ್ದ. ತನ್ನ ಸರ್ವಸ್ವವನ್ನೂ ಅವಳಿಗೆ ಮುಡಿಪಾಗಿಟ್ಟಿದ್ದ. ಅವಳಿಲ್ಲದ ಒಂದು ದಿನವನ್ನು ಅವನಿಂದ ಕಲ್ಪಿಸಲೂ ಆಗುತ್ತಿರಲಿಲ್ಲ .
ಅದೊಂದು ದಿನ ಅವಳು ಮಾತಿನ ನಡುವೆ “ನೀನಿಲ್ಲದೆಯೂ ಬದುಕಬಲ್ಲೆ”.. ಎಂದಿದ್ದಳು.
ಮರುದಿನ ಆತ ಹೆಣವಾಗಿದ್ದ.

ಸಾಧನೆ
ಆ ತಂದೆಗೆ ಚಿಕ್ಕ ಪ್ರಾಯದ ತನ್ನ ಮಗನ ಬದುಕಿನ ಬಗ್ಗೆ ಅಗಾದ ಕನಸಿತ್ತು . ತನ್ನ ಮಗನ ಸಾಧನೆಯಲ್ಲಿ ಅಭಿಮಾನ ಹೊಂದಿದ್ದ ತಂದೆ, ಮಗನಿಂದ ಇನ್ನಷ್ಟು ಸಾಧನೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ವಿಧಿಯ ಆಟ ಬೇರೆಯಾಗಿತ್ತು, ಮಗನ ಅಕಾಲ ಮರಣ ಆತನನ್ನು ಕಂಗಾಲು ಮಾಡಿತ್ತು .
ಕೆಲ ದಿನಗಳ ನಂತರ ಅವನಿಗೆ ಚಿಕಿತ್ಸೆ ಕೊಟ್ಟ ಆಸ್ಪತ್ರೆಯಿಂದ ಡಾಕ್ಟರ್ ಕರೆಮಾಡಿದ್ದರು “ನಿಮ್ಮ ಮಗ ದಾನ ಮಾಡಿದ್ದ ಕಣ್ಣುಗಳಿಂದ ಇವತ್ತು ಇಬ್ಬರಿಗೆ ದೃಷ್ಟಿ ಕೊಟ್ಟೆ !”.
ತಂದೆ ತುಂಬು ಅಭಿಮಾನದಿಂದ ತೂಗು ಹಾಕಿದ ಮಗನ ಫೋಟೋವನ್ನೊಮ್ಮೆ ದಿಟ್ಟಿಸಿದರು. .

ಸತ್ತ ಮನುಷ್ಯ
ಒಂದೇ ಕುಟುಂಬದ ಮೂವರನ್ನು ಕೊಂದಿದ್ದ ಆಗಂತುಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಆತನೇ ವರ್ತನೆಯಲ್ಲಿ ಯಾವುದೇ ಪಶ್ಚಾತಾಪ ಭಾವವಿರಲಿಲ್ಲ . ಎಳ್ಳಷ್ಟೂ ಅಳುಕಿಲ್ಲದ ಅವನನ್ನು ದಿಟ್ಟಿಸಿ ನೋಡಿದ ವಯಸ್ಸಾದ ಪೇದೆಯೊಬ್ಬನನ್ನು ಆತ ದಟ್ಟ ಸ್ವರದಲ್ಲಿ ಗದರಿಸುವಂತೆ ಕೇಳಿದ “ಏನನ್ನು ನೋಡ್ತಾ ಇದ್ದೀಯ..? ”
“ನಿನ್ನೊಳಗೆ ಸತ್ತಿರುವ ಮನುಷ್ಯನನ್ನು” ಪೇದೆ ಮಾರ್ಮಿಕವಾಗಿ ಉತ್ತರಿಸಿದ.

ವ್ಯತ್ಯಾಸ
ಅವರಿಬ್ಬರು ಊರಿನ ಆಗರ್ಭ ಶ್ರೀಮಂತರು . ಒಬ್ಬ ಕೊಡುಗೈ ದಾನಿಯಾಗಿದ್ದ. ಸಹಾಯ ಯಾಚಿಸಿ ಬಂದ ಯಾರನ್ನೂ ಆತ ಬರಿಗೈಯ್ಯಲ್ಲಿ ಕಳಿಸುತ್ತಿರಲಿಲ್ಲ. ಮತ್ತೊಬ್ಬ ಕಡು ಜಿಪುನನಾಗಿದ್ದ. ಯಾರಿಗೂ ನಯಾಪೈಸೆ ದಾನ ಮಾಡಿದವನಲ್ಲ. ಕೊನೆಗೆ ಇಬ್ಬರೂ ಸತ್ತು ಹೋದರು.
ವ್ಯತ್ಯಾಸ ಇಷ್ಟೇ, ಒಬ್ಬ ಸತ್ತು ಮಣ್ಣಾಗಿ ಹೋದ. ಮತ್ತೊಬ್ಬ ಸತ್ತೂ ಜನಮಾನಸದಲ್ಲಿ ಬದುಕಿಬಿಟ್ಟ.


Leave a Comment

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ನ್ಯಾನೋ ಕಥೆಗಳು

ಮಗದಷ್ಟು ನ್ಯಾನೋ ಕತೆಗಳು


ಕೊರತೆ
ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿ ಮರುಗುತ್ತಿದ್ದ ಅವನಲ್ಲಿ ಅದೊಮ್ಮೆ ಅವಳು ಕೇಳಿದಳು.. ನಿಮಗೇನಿದೆ ಇಲ್ಲಿ ಕೊರತೆ..? ಆತ ನಿಟ್ಟುಸಿರಿಡುತ್ತಾ ಉತ್ತರಿಸಿದ.. “ನಿನ್ನ ಪ್ರೀತಿ ಮತ್ತು ಅಕ್ಕರೆ”

ಅಮರ
ತನ್ನಿಂದ ಎಲ್ಲವನ್ನೂ ಕಲಿತು ಇನ್ನೂ ಆಶ್ರಮದಲ್ಲೇ ಉಳಿದಿದ್ದ ಶಿಷ್ಯನಲ್ಲಿ ಗುರುಗಳೊಮ್ಮೆ ಕೇಳಿದರು..’ಶಿಷ್ಯಾ.. ನಿನಗೆ ಸಾವಿನ ನಂತರವೂ ಬದುಕಬೇಡವೇ..?’ . ಆಶ್ಚರ್ಯಚಕಿತನಾದ ಶಿಷ್ಯ ಗುರುಗಳನ್ನೇ ದಿಟ್ಟಿಸುತ್ತ ಕೇಳಿದ.. “ಅದು ಹೇಗೆ ಸಾದ್ಯ ಗುರುಗಳೇ? ”
ಹೋಗಿ ನೀನು ಕಲಿತ ಪಾಠವನ್ನೆಲ್ಲ ಜನರಿಗೆ ಹಂಚು…ಅದು ನೀನು ಸತ್ತ ನಂತರವೂ ನಿನ್ನನ್ನು ಅವರೊಳಗೆ ಬದುಕಿಸುತ್ತದೆ.. ಗುರುಗಳು ಉತ್ತರಿಸಿದರು.

ಅಮ್ಮ
ಬಂಜೆಯೆಂದು ಊರವರಿಂದಲೂ ಕುಟುಂಬಿಕರಿಂದಲೂ ತಿರಸ್ಕೃತಳಾಗಿದ್ದ ಹೆಣ್ಣೊಬ್ಬಳು ಹೇಳಿದ ಕತೆ..
‘ಮೂರು ವರ್ಷಗಳ ಹಿಂದೆ ಅನಾಥಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡಿದ್ದೆ..ಆತ ಇಂದು ನನ್ನನ್ನು ”ಅಮ್ಮ” ಅಂತ ಕರೆದ.

ಭಕ್ತಿ
ಮಂದಿರದ ಮುಂದಿದ್ದ ಭಿಕ್ಷುಕರ ದಯನೀಯತೆ ಕಂಡು ಏನೂ ಕೊಡಲಾಗದ ಬಡವ ಶಿಷ್ಯನೊಬ್ಬ ತನ್ನ ಗುರುಗಳಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡ..’ ಗುರುಗಳೇ ಭಗವಂತ ಇಷ್ಟು ಒಳ್ಳೆ ಅರೋಗ್ಯ ಕೊಟ್ಟರೂ ನನ್ನಿಂದ ಅವರಿಗೇನು ಸಹಾಯ ಮಾಡಲಾಗಿಲ್ಲ.. .’ . ‘ಇರುವ ಸಾವಿರದಲ್ಲಿ ಹತ್ತನ್ನು ಭಿಕ್ಷುಕರ ತಟ್ಟೆಗೆ ಎಸೆದು ಭೀಗುವ ಭೀರುಗಳಿಗಿಂತ ಏನೂ ಕೊಡಲಾಗಲಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ..ಚಿಂತೆ ಮಾಡಬೇಡ ..’ ಗುರುಗಳು ಅವನನ್ನು ಸಮಾಧಾನಪಡಿಸಿದರು…

ವ್ಯಭಿಚಾರ
ಅವಳು ಎಂದಿನಂತೆ ಸೀರೆ ಉಟ್ಟು ಮಲ್ಲಿಗೆ ತೊಟ್ಟು ಬಸ್ ಸ್ಟ್ಯಾಂಡ್ ಬಳಿ ಗಿರಾಕಿಗಾಗಿ ಕಾಯುತ್ತಿದ್ದಳು. ‘ನನಗೆ ಅವಳನ್ನು ಅನುಭವಿಸಬೇಕು ಅನ್ನಿಸುತ್ತಿದೆ.. ಆದ್ರೆ ವ್ಯಭಿಚಾರ ತಪ್ಪು ಅಂತ ನನ್ನನ್ನು ಹತೋಟಿಗೆ ತರುತ್ತಿದ್ದೇನೆ ..’ ದೂರದಿಂದ ಅವಳನ್ನೇ ದಿಟ್ಟಿಸುತ್ತಾ ಅವನೆಂದ.. ಯಾವಾಗ ನಿನಗೆ ಅನ್ನಿಸಿತೋ ಆಗಲೇ ನೀನು ಅವಳನ್ನು ವ್ಯಭಿಚಾರ ಮಾಡಿ ಆಯಿತು.. ಪಕ್ಕದವ ಹೇಳಿದ.


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ನ್ಯಾನೋ ಕಥೆಗಳು

ಇನ್ನಷ್ಟು ನ್ಯಾನೋ ಕತೆಗಳು


ಕೋಮುವಾದ
ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ.
ಅದೊಂದು ದಿನ ಆತ ಎಲ್ಲೋ ಹೊರಡಲು ಅಣಿಯಾಗುತ್ತಿದ್ದಂತೆ ಮೊಬೈಲ್ ರಿಂಗಣಿಸಿತು.. ಅಣ್ಣಾ.. ಇಬ್ಬರನ್ನು ಪಾರ್ಕಿನಲ್ಲಿ ಹಿಡ್ಕೊಂದಿದ್ದೀವಿ .. ಹುಡುಗಿ ನಮ್ಮ ಜಾತಿ.. ಹುಡುಗ ಬೇರೆ ಜಾತಿ.. “ಬಿಡಬೇಡಿ.. ಅವರನ್ನ .. ಸರಿಯಾಗಿ ಬುದ್ದಿ ಕಲಿಸಿ ”
ಆತ ಫೋನಿಟ್ಟ . ಸಂಜೆ ಮನೆಗೆ ಬಂದಾಗ ಕಾಲೇಜಿಂದ ಬಂದ ತನ್ನ ಮಗಳ ಬೆನ್ನಲ್ಲಿ ಬಾಸುಂಡೆ ಎದ್ದಿತ್ತು.

ಶವಪೆಟ್ಟಿಗೆ
ಆತ ಶವಪೆಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. ಮಳೆಗಾಲದಲ್ಲಿ ಆತನ ವ್ಯವಹಾರ ಕುಸಿದಿತ್ತು. ಮಾತಿನ ನಡುವೆ “ಈ ಮಳೆಗಾಲದಲ್ಲಿ ಯಾರೂ ಸತ್ತಿಲ್ಲ” ಅಂತ ತನ್ನ ತನ್ನ ಗೆಳೆಯನಲ್ಲಿ ಅಳಲು ತೋಡಿಕೊಳ್ಳುವಷ್ಟರಲ್ಲಿ ‘ನಮ್ಮೂರಿಗೆ ಬರುತ್ತಿದ್ದ ಗವರ್ಮೆಂಟ್ ಬಸ್ಸು ಸೇತುವೆ ಕೆಳಗೆ ಬಿದ್ದು ಕೆಲವರು ಸತ್ರಂತೆ ‘ ಓಡಿ ಬಂದ ಅವನ ಸಹಾಯಕ ಏದುಸಿರು ಬಿಡುತ್ತ ಉಸುರಿದ. ಆತನಿಗೆ ಒಳಗೊಳಗೇ ಸಂಭ್ರಮ. ಕೂಡಲೇ ಕಾರ್ಯ ಪ್ರವೃತ್ತನಾದ. ಕೆಲ ಸಮಯದ ಬಳಿಕ ಮೊಬೈಲ್ ರಿಂಗಣಿಸಿತು.. “ರೀ.. ರೀ… ನಮ್ .. ನಮ್… ನಮ್ಮಗಳು ಬ.. ಬ ಬಸ್ಸು ಸೇ .. ಸೇ..ಸೇತುವೆ ” ಆತ ಫೋನಿಟ್ಟು ತನ್ನ ಮಗಳಿಗೆ ಸರಿ ಹೊಂದುವ ಶವಪೆಟ್ಟಿಗೆಯನ್ನು ಹುಡುಕಾಡ ತೊಡಗಿದ.

ದೂರ
ಆಗಷ್ಟೇ ಯಶಸ್ವಿಯಾಗಿ ಚಂದ್ರಯಾನ ಮುಗಿಸಿ ಬಂದ ಭಾರತೀಯ ಮೂಲದ ನಾಸಾ ವಿಜ್ಞಾನಿಯ ತಾಯಿಯನ್ನು ಮಾತನಾಡಿಸಲು ಪತ್ರಕರ್ತರು ಅವರ ಮನೆಗೆ ಬಂದಿದ್ದರು. “ನಿಮ್ಮ ಮಗ ಕೊನೆಯ ಬಾರಿಗೆ ನಿಮ್ಮನ್ನು ನೋಡಲು ಬಂದದ್ದು ಯಾವಾಗ ?” . ಮಾತಿನ ನಡುವೆ ತೂರಿ ಬಂದ ಪ್ರಶ್ನೆಗೆ ಉತ್ತರಿಸಲಾರದೆ ಆಕೆಗೆ ದುಃಖ ಒತ್ತರಿಸಿ ಬಂದಿತ್ತು. ಬಹುಶಃ ಚಂದ್ರ ಲೋಕಕ್ಕಿಂತ ತಾಯಿ ಮನೆ ಮಗನಿಗೆ ದೂರವಾಗಿದ್ದಿರಬೇಕು.

ಭಕ್ತಿ
ಇಬ್ಬರು ಗೆಳೆಯರಲ್ಲಿ ಒಬ್ಬ ಅಪ್ಪಟ ದೈವ ಭಕ್ತನಾಗಿದ್ದ. ಏನೇ ಕೆಲಸಕ್ಕೂ ದೇವರ ಮೊರೆ ಹೋಗುತ್ತಿದ್ದ. ಅವರಿಬ್ಬರೂ ಮಾವಿನ ಮರದ ಕೆಳಗಡೆಯಿಂದ ಹಾದು ಹೋಗಲು ಅದರ ಹಣ್ಣು ಅವರ ಕಣ್ಣು ಕುಕ್ಕಿತು. ದೈವ ಭಕ್ತ ಅಲ್ಲೇ ದೇವರಿಗೆ ಮೊರೆಯಿಟ್ಟ .”ಭಗವಂತಾ.. ಒಂದು ಹಣ್ಣನ್ನಾದರೂ ಬೀಳಿಸು…! ” ಮತ್ತೊಬ್ಬ ಕಲ್ಲೆತ್ತಿ ಎಸೆದ .. ಹಣ್ಣು ಬಿತ್ತು .. ಹಣ್ಣನ್ನು ಚಪ್ಪರಿಸುತ್ತ ಆತ ಗೆಳೆಯನನ್ನು ದಿಟ್ಟಿಸಿದ.. ಅವನು ಪ್ರಾರ್ಥಿಸುತ್ತಲೇ ಇದ್ದ.

ವಿಚಿತ್ರ
“ಸಹನೆಯನ್ನು ಬೆಳೆಸಿ ..ಹಿಂಸೆಯಿಂದ ಸಾಧಿಸುವುದೆನಿಲ್ಲ …” ಎಂದು ಟ್ವೀಟ್ ಮಾಡಿ ಶಾಂತಿದೂತನಾದ ಬಾಲಿವುಡ್ ನಾಯಕನೊಬ್ಬ .. ಮರುದಿನ ಪಾರ್ಟಿಯಲ್ಲಿ ಗೆಳತಿಯ ಗಂಡನಿಗೆ ಕಪಾಳಮೋಕ್ಷ ಮಾಡಿದ್ದ..!

ವಿಪರ್ಯಾಸ
ಆತ ಕಟ್ಟಾ ಬ್ರಹ್ಮಚಾರಿ.. ದಿನಕ್ಕೆ ನಾಲ್ಕು ಕಡೆ ಬ್ರಹ್ಮಚರ್ಯೆಯ ಬಗ್ಗೆ ಕ್ಯಾಂಪ್ ನಡೆಸಿ ಜನರನ್ನು ಸೆಳೆಯುತ್ತಿದ್ದ. ವಿಪರ್ಯಾಸವೆಂದರೆ ಆತನ ತಂದೆಯೂ ಅವನ ಹಾದಿ ಹಿಡಿದಿದ್ದರೆ ಇಂದು ಆತ ಇರುತ್ತಿರಲಿಲ್ಲ ಎಂಬುದನ್ನು ಮರೆತಿದ್ದ.

Leave a Comment

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು


ದುಬಾರಿ ಕಸ
ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು…’ಇದರಲ್ಲೂ ಹಾಕುವ ಕಸವು ಅಷ್ಟೇ “ದುಬಾರಿಯದ್ದಾಗಿರಬೇಕು”…’ ಮತ್ತೊಬ್ಬ ಹೌದೆನ್ನುತ್ತ ತಲೆಯಾಡಿಸಿದ.. ಮರುದಿನ ಬೆಳಿಗ್ಗೆ ಕಸದೊಂದಿಗೆ ಆಗಷ್ಟೇ ಹುಟ್ಟಿದ ನವ ಜಾತ ಹೆಣ್ಣು ಮಗು ಸಿಕ್ಕಿತ್ತು.

ಹಣ

ಆತ ಮದುವೆಯಾಗಿ ೬ ತಿಂಗಳಾಗುವಷ್ಟರಲ್ಲಿ ಉದ್ಯೋಗ ಅರಸಿ ದುಬೈಗೆ ಹೊರಟ. ಕೈ ತುಂಬಾ ಸಂಬಳದ ಕೆಲಸವೊಂದು ಸಿಕ್ಕಿತ್ತು.. ಒಂದು ವರ್ಷದಲ್ಲೇ ತನ್ನದೇ ಆದ ಬಿಸಿನೆಸ್ ಆರಂಭಿಸಿದ. ನೋಡ ನೋಡುತ್ತಲೇ ಆತ ಕೊಟ್ಯಾದಿಪತಿಯಾದ .. ವರ್ಷಗಳ ನಂತರ ಕೈ ತುಂಬು ದುಡ್ದೊಂದಿಗೆ ಆತ ಆತ ಊರಿಗೆ ಹೊರಟಿದ್ದ . ತನ್ನ ಹೆಂಡತಿಯ ಜೊತೆಗಿದ್ದ ಹಾಲುಗಲ್ಲದ ಮಗು ಆತನ್ನು ನೋಡಿದವನೇ ಕೈ ತೋರಿಸಿ “ಇದ್ಯಾರಮ್ಮ ” ಅಂತ ಕೇಳಿದ.. ಆತನಿಗೆ ಮೊತ್ತ ಮೊದಲಾಗಿ ಹಣದ ಮೇಲೆ ಜಿಗುಪ್ಸೆ ಹುಟ್ಟಿತು.

ವಿಚಿತ್ರ
ಫೇಸ್ ಬುಕ್ ನಲ್ಲಿ ಸಿಕ್ಕ ಸಿಕ್ಕವರ ವಾಲ್ ಮೇಲೆ ಪೋಸ್ಟ್ ಮಾಡಿದ ಅವನು .. ತನ್ನ ಸ್ವಂತ ಮನೆಯ ಗೋಡೆ ಮೇಲೆ ತನ್ನ ಮಗ ಕರಿ ಹಲಗೆಯಿಂದ ಚಿತ್ರ ಗೀಚಿದ್ದನ್ನು ನೋಡಿ ಕೆಂಡಾಮಂಡಲನಾದ .

ನಂಬಿಕೆ
‘ನಂಬಿಕೆಯೇ ದಾಂಪತ್ಯದ ಬುನಾದಿ’. ಧರ್ಮ ಗುರುಗಳು ದಾಂಪತ್ಯದ ಬಗ್ಗೆ ಉಪನ್ಯಾಸ ನೀಡುತ್ತಾ ನುಡಿದರು . ಹೌದು .. ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆ.. ಸಭಿಕರಲ್ಲೊಬ್ಬ ಪಿಸುಗುಟ್ಟಿದ.

ವಿಪರ್ಯಾಸ
ಬೋಳು ತಲೆಯವ ತನಗಾಗಿ ಹೆಣ್ಣು ನೋಡಲು ಹೋಗಿ .. ಹುಡುಗಿಯ ಕೂದಲು ಉದ್ದವಿಲ್ಲವೆಂದು ತಿರಸ್ಕರಿಸಿ ಬಂದಿದ್ದ..


Leave a Comment

ನ್ಯಾನೋ ಕಥೆಗಳು

ಜಗದ ವಿ’ಚಿತ್ರಗಳು

ವಿಧಿ
ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.
ಅಂದ ಹಾಗೆ ಆತ ಮಾವನ ಮನೆಗೆ ತಲುಪಿಲ್ಲವಂತೆ . ದಾರಿ ಮಧ್ಯೆ ಸಂಭವಿಸಿದ ಆಕ್ಸಿಡೆಂಟಲ್ಲಿ ಸತ್ತುಹೋದನಂತೆ.

ಅಭಿಪ್ರಾಯ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕನ್ನಡಿ ಹಿಡಿಯುವ ಟಿ .ವಿ ನೇರಪ್ರಸಾರ ಕಾರ್ಯಕ್ರಮವದು. ಪತ್ರಕರ್ತ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜನರ ಅಭಿಪ್ರಾಯವನ್ನು ಕೇಳುತ್ತಿದ್ದನು.ಮುಂದಿನಿಂದ ಬಂದ ಐಶಾರಾಮಿ ಕಾರನ್ನು ತಡೆದು ನಿಲ್ಲಿಸಿ ಅಭಿಪ್ರಾಯ ಪಡೆಯಲು ಮುಂದಾದ. “ನಾವು ಸಾರ್ವಜನಿಕ ಬಸ್ಸುಗಳನ್ನು ಉಪಯೋಗಿಸಬೇಕು , ಸ್ವಂತ ವಾಹನವಿದ್ದರೆ ಶೇರಿಂಗ್ ವ್ಯವಸ್ಥೆ ಯನ್ನು ಪಾಲಿಸಬೇಕು” ಆತ ಮಾತು ಮುಂದುವರೆಸುತ್ತಿದ್ದಂತೆ ಪತ್ರಕರ್ತ ಕಾರಿನ ಒಳಗೆ ಇಣುಕಿದ. ಉಳಿದ ಸೀಟ್ ಗಳೆಲ್ಲ ಖಾಲಿಯಾಗಿತ್ತು…

ಬೆಲೆ
ಆತ ಆಗರ್ಭ ಶ್ರೀಮಂತ. ಬಡವರನ್ನು ಎಂದೂ ತನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.. ಅದರಿಂದ ತನ್ನ ‘ಬೆಲೆ’ ಕಡಿಮೆಯಾಗುತ್ತದೆ ಅಂತ ಹೇಳುತ್ತಿದ್ದ. ತನ್ನ ೪ ಅಂತಸ್ತಿನ ಮನೆಯ ‘ಗೃಹಪ್ರವೇಶ’ಕ್ಕೂ ಮೊನ್ನೆ ಮೊನ್ನೆ ನಡೆದ ಮಗಳ ಅದ್ದೂರಿ ‘ಮದುವೆ’ಗೂ ಊರಿನ ಯಾವುದೇ ಬಡವರನ್ನು ಆತ ಅಮಂತ್ರಿಸಿರಲಿಲ್ಲ.. ಆದರೆ ಪ್ರತೀ ಶುಕ್ರವಾರದ ನಮಾಜಿನಲ್ಲಿ ಆತನ ತಲೆ ಬಡವನೊಬ್ಬನ ಕಾಲ ಬುಡದಲ್ಲಿರುತ್ತಿತ್ತು..

ಬಡವ
ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರ ಮದುವೆಗೆ ಆತನ ಬಡತನ ಅಡ್ಡ ಬಂತು. ಅವಳ ತಂದೆ ಬೇರೊಬ್ಬ ಶ್ರೀಮಂತನಿಗೆ ಕೊಟ್ಟು ಮದುವೆ ಮಾಡಿಸಿದರು. ಮದುವೆ ಆದ ಮರುವರ್ಷವೇ ಆತನ ವ್ಯವಹಾರವೆಲ್ಲ ನೆಲಗಚ್ಚಿದವು.. ನೋಡ ನೋಡುತ್ತಲೇ ಆತ ದರಿದ್ರನಾದ.

ವಿಪರ್ಯಾಸ
ಎಕರೆ ಗಟ್ಟಲೆ ಭೂಮಿಯಲ್ಲಿ ವಿಸ್ತಾರವಾಗಿ ಹರಡಿರುವ ಗಗನ ಚುಂಬಿ ಕಟ್ಟಡ ಕೊನೆಯ ಅಂತಸ್ತಿನಲ್ಲಿ “ಗೋ ಗ್ರೀನ್ ” ಎಂಬ ಹಸಿರು ಪೋಸ್ಟರ್ ರಾರಾಜಿಸುತ್ತಿತ್ತು ..


Leave a Comment