ಮತ್ತೆ ಸಂಜೆಯಾಗುತ್ತಿದೆ.. · ಸಂಜೆ ಕಳೆದು ಕತ್ತಲಾಗುತ್ತಿದೆ ..

ಸಂಜೆ ಕಳೆದು ಕತ್ತಲಾಗುತ್ತಿದೆ …


sanje-1
ಮತ್ತೆ ಕತ್ತಲಾಗಿದೆ..
ನೆನಹುಗಳು ಬೆತ್ತಲಾಗಬಹುದು…

ಹೌದು .. ಪಡುವಣ ಅಂಬರ ಹೊಂಬಣ್ಣವನ್ನು ಪಡೆದು ಜಗಮಗಿಸುತ್ತಿದೆ. ಇನ್ನೇನು ಕತ್ತಲಾಗುವ ಹೊತ್ತು.. ನೆರಳೂ ಜೊತೆಯಿರದ ಕತ್ತಲು!
ನಿನಗಿನ್ನೂ ನೆನಪಿರಬಹುದು.. “ನಾನಿನ್ನ ನೆರಳು ಕಣೋ.. ” ಎಂದು ಪೆಚ್ಚಾಗಿ ನೀನುಲಿದ ಆ ಸಂಧ್ಯಾ ತೀರ.. ನೇಸರ ತೋಯಿಸಿದ ಹೊಂಬಣ್ಣದ ಮರಳಿನಲ್ಲಿ ನಿನ್ನ ಹೆಸರಿನೊಂದಿಗೆ ನನ್ನ ಹೆಸರನ್ನು ತಾಳೆಹಾಕಿ ನೀನಂದು ಸಂಭ್ರಮಪಟ್ಟಿದ್ದ ನೆನಪು! ಇರಲಿ ಬಿಡು.. ಕತ್ತಲೆಂದರೆ ‘ನೆರಳು’ ಅಸ್ತಿತ್ವ ಕಳೆದುಕೊಳ್ಳುವ ಸಮಯ ತಾನೆ..

ಸೌ ದರ್ದ್ ಹೇ , ಸೌ ರಾಹತೇ
ಸಬ್ ಮಿಲಾ ದಿಲ್ ನಶೀ
ಎಕ್ ತೂಹೀ ನಹೀ… !

ಈ ದೂರದೂರಿನ ಸಂಜೆಯೂ ಕೆಲವೊಮ್ಮೆ ಮಂಕಾಗಿ ಬಿಡುತ್ತದೆ. ಊರಿನ ಹಳದಿಗೆಂಪು ಹರವಿ ಬಾನಿನೂರಿನಲ್ಲಿ ಚಿತ್ತಾರ ಹೊಯ್ಯುವ, ಬಾನತುಂಬಾ ಕತ್ತು ಹೊರಳಿಸುವ ಕೀಲುಗುದುರೆಯ ಆಕಾರಗಳ ಕೆಂಬಣ್ಣ ಮೇಘಗಳು.. ಪಟಪಟನೆ ರೆಕ್ಕೆ ಬಿಚ್ಚಿ ಚೀರಿ ಹಾರುವ ಹಕ್ಕಿಯ ಹಿಂಡು, ದಿನಚರಿಯನ್ನು ಮುಗಿಸಿ ಬರುವ ಜನರ ಜೊತೆಗೇ ಹೆಜ್ಜೆಯಿಡುವ ಹಸುಗಳ ಹಿಂಡು.. ಶಾಲೆಯ ಹಾದಿಯಲ್ಲಿ ಸಂಭ್ರಮ ಮೈಗೆತ್ತಿಕೊಂಡು ಓಡೋಡಿ ಬರುವ ಪುಟ್ಟ ಪುಟ್ಟ ಮಕ್ಕಳು,ಹೊಂಡಗಳ ನಡುವೆ ಅಲ್ಲಲ್ಲಿ ಡಾಮರಿನ ಪಳೆಯುಳಿಕೆ ಕಾಣುವ ರಸ್ತೆಯಲ್ಲಿ ಧೂಳೆಬ್ಬಿಸುತ್ತಾ ಬರುವ ಬಸ್ಸುಗಳು, ಕರ್ತನೆಡೆಗೆ ಬಾಗುವಂತೆ ಮೆದುಗಾಳಿಗೆ ತಲೆದೂಗುವ ಪೈರುಗಳು.. .. ಆಹಾ ನಮ್ಮೂರಿನ ಸೊಬಗೇ ಅಂಥದ್ದು… ಅದನ್ನು ಆಸ್ವಾದಿಸಿ ನಡೆಯುವುದೆಂದರೆ ಕೋಟಿ ಬಣ್ಣದ ಕಲ್ಪನೆಯಲ್ಲಿ ರಾಗವೊಂದನ್ನು ಕಟ್ಟಿ ಎದೆ ಬಿರಿಯುವಂತೆ ಹಾಡುವುದು!.

ಯೇ ಶೆಹರೇ ತಮನ್ನಾ ಅಮೀರೊಂಕಿ ದುನಿಯಾ
ಏ ಖುದ್ಗರ್ಝ್ಹ್ ಔರ್ ಬೆಝಮೀರೋಂಕಿ ದುನಿಯಾ
ಯಹಾನ್ ಸುಖ್ ಮುಜೆ ದೋ ಜಹಾನ್ ಕ ಮಿಲಾ ಹೈ
ಮೇರಾ ಗಾವೋ ಜಾನೆ ಕಹಾ ಖೊ ಗಯಾ ಹೈ

ಅದೆಷ್ಟು ಕಾಲವಾಯಿತು!. ಸಂಜೆಯ ಜಿಟಿಪಿಟಿ ಮಳೆಗೆ ಊರಿನ ದಾರಿಯ ಪ್ರತೀ ಕವಲಿನ ಮಣ್ಣಿನ ಗಂಧವನ್ನು ಆಘ್ರಾಣಿಸಿ, ಎದೆಬಿರಿಯುವ ರಾಗಕೆ ಹುಚ್ಚೆದ್ದು ಕುಣಿದು ಸಂಭ್ರಮಪಟ್ಟು ಅದೆಷ್ಟು ಕಾಲ ಸರಿದು ಹೋಯಿತು. ಒಂದು ಹಿಡಿ ಒಲವು, ಒಂದು ಹಿತವಾದ ಕವಿತೆ… ಬದುಕು ಇನ್ನೂ ಬೇಯಬೇಕಿದೆ, ಬಾಡಿದ ಹೂವಿನಿಂದ ಎಸಳು ಉದುರುವಂತೆ ಒಂದೊಂದೇ ಕನಸನ್ನೂ ಅವಳ ಸಿಗದ ಪ್ರೀತಿಯ ಹೆಸರಿನಲ್ಲಿ ಸಮಾಧಿ ಮಾಡುವಾಗ ನನಗೆ ನಷ್ಟವಾದದ್ದು ‘ನಾನು’ ಅಲ್ಲವೇ ?

ದಿಲ್-ಇ-ನಾದಾನ್ ತುಜೆ ಹುವಾ ಕ್ಯಾ ಹೈ?
ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ ?
ಹಮ್ಕೋ ಉನ್ಸೇ ವಫಾ ಕಿ ಹೈ ಉಮೀದ್
ಜೋ ನಹೀ ಜಾನತೇ ವಫಾ ಕ್ಯಾ ಹೈ ?

ಮನಸ್ಸು ತಾಳ ತಪ್ಪಿದಾಗ ಅಪರಿಮಿತವಾಗಿ ಚಡಪಡಿಸುತ್ತದೆ. ಕೆಲವೊಮ್ಮೆ ಹೀಗೆ ಯೋಚಿಸುವುದು ಕೂಡ ತಪ್ಪೆನಿಸುತ್ತದೆ. ಭೂತದ ಗೋರಿಯನ್ನು ಬಗೆದು ಬೇತಾಳವನ್ನು ಹೊರುವುದು ನನ್ನೊಳಗಿನ ಸೂಕ್ಷ್ಮತೆಯ ಸೋಲೆನಿಸುತ್ತದೆ. ಕಳಕೊಂಡದ್ದು ಬೃಹದಾಕಾರವಾಗಿ ಕಣ್ಣೆದುರಿಗೆ ನಿಲ್ಲುವಾಗ ಪಡೆದುಕೊಂಡದ್ದು ಅಣಕವಾಡುತ್ತದೆ. ಆ ದಿನಗಳು.. ಯಾರೂ ಸಾಗದ ಹಾದಿಯಲ್ಲಿ ಪಯಣ ಆರಂಭಿಸಿ ಯಾರೂ ಮುಟ್ಟದ ಗುರಿಯೊಂದನ್ನು ನಾನು ತಲುಪಿದ್ದೆ. ಮಿಕ್ಕೆಲ್ಲರೂ ಬದುಕಿನ ಪಾಠವನ್ನು ಉರು ಹೊಡೆಯುವ ಹೊತ್ತಿಗೆ ನಾನು ನನ್ನದೇ ಆದ ಅಸ್ಮಿತೆ ಪಡೆದುಕೊಂಡಿದ್ದೆ.. ಹೀಗೆ ಬದುಕಿನೊಂದಿಗಿನ ಅವಿನಾಭಾವತೆಯನ್ನು ದಾರಿಯುದ್ದಕ್ಕೂ ಕಾಪಿಟ್ಟು ಇಂದಿನ ನಾನಾದೆ.

ನೆನಪುಗಳು ಹೀಗೆ, ಅಕ್ಷಯ ಸಂಚಿಯದು..ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು… ಇನ್ನೇನು ಪೂರ್ಣವಾಗಿ ಕತ್ತಲಾವರಿಸುವ ಸಮಯ .. ತೀರ ತುಂಬಾ ನಿಯಾನ್ ದೀಪಗಳು ಹೊಳೆಯಳು ಶುರುವಿಟ್ಟಿದೆ.

ಕತ್ತಲೆಂದರೆ ನಿರಾಳತೆ. ಸದ್ದೆಲ್ಲ ಅಡಗಿ, ಮೌನ ಮೊದಲಾಗಿ ಮನಸು ಖಾಲಿ ಖಾಲಿ.. ಕತ್ತಲೆಂದರೆ ಕಾಯುವಿಕೆ ಕೂಡ.. ಹೊರಬಾಗಿಲ ಹಾಕದೆ ಮಕ್ಕಳಿಗಾಗಿ ಕಾಯುವ ಅಮ್ಮಂದಿರು, .. ಮತ್ತು ಅಲೆಯ ನಿಯ್ಯತ್ತಿನೊಂದಿಗೆ ಮತ್ತೆ ಮತ್ತೆ ತೀರದಲಿ ಪ್ರೇಮಿಗಾಗಿ ಕಾಯುವ ಹುಡುಗರು, ಥೇಟ್ ನನ್ನಂತೆ!.

ಯೇ ಶಾಮ್ ಮಸ್ತಾನಿ .. ಮಧ್ಹೋಶ್ ಕಿಯ ಜಾಯೇ
ಮುಜೆ ಡೋರ್ ಕೊಯಿ ಕೀಂಚೆ ತೇರೆ ಔರ್ ಲಿಯೆ ಜಾಯೇ ..

ಹುಸೇನಿ ~

Leave a comment

7 thoughts on “ಸಂಜೆ ಕಳೆದು ಕತ್ತಲಾಗುತ್ತಿದೆ …

  1. ಬದುಕಿನ ಅಸ್ಮಿತೆಗೆ, ಭಾವಗಳ ಕಾಪಿಟ್ಟು
    ಭಾವಲೋಕದ ಸಂಚಾರಿ ಕವಿಯ
    ಭಾವಸಂಚಯದಲಿ ಬತ್ತದಿರಲೆಂದೂ ಭಾವ ಲಹರಿಯ ಓಯಸೀಸ್…
    ಮರೆತ ಮಾತು,
    ಭಾವಾಂತರಂಗದ ತೀರದಲಿ ಕಾಯುವ ಪ್ರೇಮಿಯಿರಬಹುದು
    ಥೇಟ್ ನಿಮ್ಮಂತೆ….
    ನಿಮ್ಮ ಮನದಾಳದ ಕವಿ ಭಾವದಂತೆ….

    ಸಾಗಲಿ ಭಾವಸಂಚಯದ ಯಾನ ಸದಾ
    ಸದಾಶಯಗಳೊಂದಿಗೆ
    ಮಧುಸ್ಮಿತ

    Like

Leave a reply to ಹುಸೇನಿ (Nenapinasanchi ) Cancel reply