ಅಮ್ಮಂದಿರ ಕಥೆ · ನ್ಯಾನೋ ಕಥೆಗಳು · ಸಣ್ಣ ಕತೆ

ಅಮ್ಮಂದಿರ ಕಥೆ

mothers-love-julie-reyes
೧)
ಆಗ ನಾನು ಬೆಂಗಳೂರಿನ ಬ್ರಿಗೇಡ್ ರೋಡ್ ಪಕ್ಕ ಮೆಟ್ರೋ ಸಿಟಿ ಲೋಡ್ಜಲ್ಲಿ ಗೆಳೆಯನೊಂದಿಗೆ ವಾಸವಾಗಿದ್ದೆ. ಅಡುಗೆ ಮಾಡಲು ಅಸಾಧ್ಯವಾದ್ದರಿಂದ ಮೂರು ಹೊತ್ತು ಹೊರಗಡೆಯಿಂದಲೇ ಊಟ. ಅದನ್ನು ತಿಂದು ತಿಂದು ಸುಸ್ತಾದ ನಮಗೆ ಇನ್ನೇನು ಬರಲಿರುವ ರಂಜಾನ್ ತಿಂಗಳ ಊಟದ ಬಗ್ಗೆ ತುಂಬಾ ಗೊಂದಲವಿತ್ತು. ರಂಜಾನ್ ತಿಂಗಳಲ್ಲಿ ಬೆಳ್ಳಂ ಬೆಳಿಗ್ಗೆ ೪ ಗಂಟೆಗೆ ಎದ್ದು ಅತ್ತಾಳ(ಸಹರಿ) ಊಟ ಮಾಡ್ಬೇಕು. ಹೊರಗಡೆಯಿಂದ ರಾತ್ರಿಯೇ ತಂದಿದುವ ಯೋಜನೆ ನಮ್ಮದಾಗಿತ್ತಾದರೂ ನಮ್ಮೊಳಗೆ ಅಸಮಾಧಾನವಿತ್ತು.

ನಮ್ಮ ರೂಮಿನ ಪಕ್ಕದ ರೂಮಲ್ಲಿ ಒಬ್ಬರು ಮಲಯಾಳಿ ಚೇಚ್ಚಿ(ಅಕ್ಕ) ಅವರ ಗಂಡನೊಂದಿಗೆ ವಾಸವಗಿದ್ದರು. ತುಂಬಾ ಸೌಮ್ಯ ಸ್ವಭಾವದ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದು. ರಂಜಾನ್ ತಿಂಗಳ ಆರಂಭಕ್ಕೆ ಇನ್ನೇನು 2 ದಿನ ಇರುವಾಗ ಮಾತಿನ ಮದ್ಯೆ ನನ್ನ ಗೆಳೆಯ ಅತ್ತಾಳದ ಕಷ್ಟವನ್ನು ಅವರೊಂದಿಗೆ ಹಂಚಿಕೊಂಡಿದ್ದ. ಕೇರಳದ ತ್ರಿಶೂರಿನವರಾಗಿದ್ದ ಅವರ ನೆರೆಹೊರೆಯವರೆಲ್ಲರೂ ಮುಸ್ಲಿಮರೇ ಆಗಿದ್ದರಿಂದ ರಂಜಾನ್ ತಿಂಗಳ ಬಗ್ಗೆ ಅವರು ಚೆನ್ನಾಗಿ ಬಲ್ಲವರಾಗಿದ್ದರು. ಒಂದು ತಿಂಗಳ ನಮ್ಮ ಊಟದ ಸಂಪೂರ್ಣ ಜವಾಬ್ದಾರಿ ಅವರು ವಹಿಸಿಕೊಂಡರು. ರಾತ್ರಿ 11ರ ವೇಳೆಗೆ ಸಹರಿಯ ಊಟ ತಯಾರಾಗಿ ಬರುತ್ತಿತ್ತು. ಮನೆಯಿಂದ ದೂರವಿದ್ದು ತಾಯಿಯನ್ನು ಪ್ರತೀಕ್ಷಣ ಮಿಸ್ ಮಾಡ್ಕೊತ್ತಿದ್ದ ನಾನು ಅವರಲ್ಲಿ ಮತ್ತೊಬ್ಬಳು ತಾಯಿಯನ್ನು ಕಾಣುತ್ತಿದ್ದೆ.

೨)
ಅದೇ ಲಾಡ್ಜಲ್ಲಿ ತಂಗುತ್ತಿದ್ದ ಕಾಲ. ಅದೊಂದು ದಿನ ಭಾನುವಾರದ ಊಟ ಕೈ ಕೊಟ್ಟಿತು. ರಾತ್ರಿ ೨ ಗಂಟೆಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಜೊತೆಗೆ ಫುಡ್ ಪೋಯ್ಸನ್ ಸೈಡ್ ಎಫೆಕ್ಟ್ಸ್. ಬೆಳಗಿನವರೆಗೂ ನಾನುಭವಿಸಿದ ‘ಯಾತನೆ’ ಅಷ್ಟಿಷ್ಟಲ್ಲ. ಹೇಗೋ ಬೆಳಗಾಯ್ತು. ರೂಂ ಮೇಟ್ ಅಂತೂ ಎದ್ದವನೇ ಆಫೀಸಿಗೆ ಹೋದ.

ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಪಕ್ಕದ ರೂಮಿನಲ್ಲಿ ಸಮೀಪದ Hosmat ಆಸ್ಪತ್ರೆಗೆ ಟ್ರೀಟ್ಮೆಂಟ್ಗೆ ಪಶ್ಚಿಮ ಬಂಗಾಳದಿಂದ ಒಬ್ರು ಆಂಟಿ ಅವರ ಮಗಳೊಂದಿಗೆ ಬಂದಿದ್ರು. ೧೩ ವರ್ಷದ ಮಗಳಿಗೆ ಏನೋ ಆಪರೇಶನ್ ಅಗೊದಿತ್ತು. ಅವರು ಈ ಮೊದಲು ನಮ್ಮ ಲಾಡ್ಜಿಗೆ ಬಂದಿದ್ರಿಂದ ಅವರ ಪರಿಚಯ ಇತ್ತು. ಅವರಿಗೋ ಬೆಂಗಾಲಿ ಬಿಟ್ರೆ ಬೇರೆ ಯಾವ ಭಾಷೆನೂ ಬರುತ್ತಿರಲಿಲ್ಲ. ಆದರು ಮಾತನಾಡಿಸೋರು. ನನ್ನ ಅವಸ್ತೆಯನ್ನು ಕಂಡು ಮರುಗಿದ ಅವರು ಅದೇನೋ ಬೆಂಗಾಲಿ ಶೈಲಿಯ ಲಘು ಆಹಾರವನ್ನು ಅವತ್ತು ಮೂರು ಹೊತ್ತು ಮಾಡಿಕೊಟ್ರು. ಅಲ್ಲದೆ ಆಗಾಗ ನನ್ನ ರೂಮಿಗೆ ಬಂದು ಹೋಗುತ್ತಿದ್ದರು. ಎಲ್ಲಿಯ ಬಂಗಾಳ ಎಲ್ಲಿಯ ಕರ್ನಾಟಕ !, ಪರಸ್ಪರ ಮಾತನಾಡಲಾಗದೆ ಇದ್ದರು ಅವರು ನನ್ನನ್ನು ನೋಡಿಕೊಂಡ ರೀತಿ… ಜೀವನದಲ್ಲಿ ಮರೆಯುವ ಹಾಗಿಲ್ಲ. ತಾಯಿ ಮಗನ ಸಂಭಂದವೊಂದು ಅಲ್ಲಿ ಮೂಡಿತ್ತು, ಅಲ್ಲ.. ಅವತ್ತಿನ ಪಾಲಿಗೆ ನನ್ನ ತಾಯಿಯೇ ನನ್ನ ಬಳಿ ಇದ್ದರು.

೩)
ನಾನು ತಿರುವನಂತಪುರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಜ್ವರ ಬಂದು ಮನೆಯಲ್ಲಿದ್ದವನು ಸುಧಾರಿಸಿಕೊಂಡು ಮತ್ತೆ ಹೊರಟು ನಿಂತು ಕಾಸರಗೋಡಿನಿಂದ ತಿರುವನಂತಪುರಕ್ಕೆ ಟ್ರೈನ್ ಹತ್ತಿದ್ದೆ. ರಾತ್ರಿಗೆ ಬೇಕಾದ ಆಹಾರ, ನೀರು ಎಲ್ಲವೂ ನನ್ನ ಬಳಿಯಿತ್ತು. ಟ್ರೈನ್ ಹತ್ತಿ ಕೂತು ಸ್ವಲ್ಪ ಸಮಯದಲ್ಲೇ ನಿದ್ದೆ ಆವರಿಸಿತ್ತು. ಎದ್ದು ನೋಡುವಾಗ ಮದ್ಯ ರಾತ್ರಿ!. ಎದ್ದು ಮುಖ ತೊಳೆದು ಬಂದು ಪಾರ್ಸೆಲ್ ಬಿಚ್ಚಿ ಊಟ ಮಾಡತೊಡಗಿದೆ. ಮಧ್ಯೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ನೀರಿನ ಬಾಟಲಿಗಾಗಿ ತಡಕಾದುವಷ್ಟರಲ್ಲಿ ತಿಳಿಯಿತು ಬಾಟಲಿಯನ್ನು ಯಾರೋ ಎಗರಿಸಿದ್ದಾರೆಂದು.. ಬಿಕ್ಕಳಿಗೆ ಜೋರಾಯಿತು. ಬಿಕ್ಕುತ್ತಲೇ ಪಕ್ಕದ ಸೀಟಲ್ಲಿದ್ದ ಮಲಯಾಳಿ ಅಂಕಲ್ ಹತ್ರ ವಾಟರ್ ಬಾಟಲ್ ನೋಡಿದ್ದೀರಾ ಎಂದು ವಿಚಾರಿಸಿದೆ. ನೋಡಿಲ್ಲ ಎಂದವರು ಸುಮ್ಮನಾಗುವಷ್ಟರಲ್ಲಿ ಅವರ ಹೆಂಡತಿ ತನ್ನ ಬ್ಯಾಗಿಂದ ನೀರಿನ ಬಾಟ್ಲಿ ತೆಗೆದು ಕೊಟ್ರು, ನೀರು ಕುಡಿದು ಕೆಮ್ಮುವಾಗ ತಲೆ ಮಧ್ಯೆಗೆ ಕೈಯ್ಯಿಂದ ಒತ್ತಿ ನೇವರಿಸಿದರು. ಸುಧಾರಿಸಿಕೊಂಡು ನಾನು ಅವನ ಮುಖವನ್ನು ದಿಟ್ಟಿಸಿದೆ. ಅಮ್ಮ ನನ್ನ ಮುಂದೆ ನಿಂತಿದ್ದರು.

ಹುಸೇನಿ ~

Leave a comment

ಎರಡು ನ್ಯಾನೋ ಕತೆಗಳು · ನ್ಯಾನೋ ಕಥೆಗಳು

ಎರಡು ನ್ಯಾನೋ ಕತೆಗಳು

634085963146408441-mother-and-child-blue
ಪ್ರೀತಿ
ಜಗತ್ತನ್ನೇ ಎದುರು ಹಾಕಿ ತಾನು ಗಳಿಸಿದ ಈ ಪ್ರೀತಿ ನನಗೆ ಕೊಟ್ಟದ್ದಾದರೂ ಏನು?. ಸಾಯಂ ಸಂಧ್ಯೆಯ ಏಕಾಂತದಲ್ಲಿ ಅವಳ ಯೋಚನಾ ಲಹರಿ ತೆರೆದುಕೊಂಡಿತ್ತು
ದಿನಂಪ್ರತಿ ಒಗೆಯಲು ರಾಶಿ ಬಟ್ಟೆಗಳು, ತೊಳೆಯಲು ಪಾತ್ರಗಳು, ಗುಡಿಸಿ ಚೆಂದಗಾಣಿಸಲು ಮನೆ ಅಂಗಳ, ಯಾವತ್ತೂ ಬೆಂಕಿ ಆರದ ಓಲೆ ಮತ್ತು… ಮತ್ತು ಕೈಯಲ್ಲೊಂದು ಮಗು.
ದೀರ್ಘ ನಿಟ್ಟುಸಿರೊಂದು ಅವಳ ನಿರಾಶೆಗೆ ಕನ್ನಡಿ ಹಿಡಿದಂತಿತ್ತು .

ಅಭಿವೃದ್ಧಿ
ಒಕ್ಕಲೆಬ್ಬಿಸಲ್ಪಟ್ಟವರ ಕೂಗು, ಮಕ್ಕಳ , ಮಹಿಳೆಯರ, ಹಿರಿ ಜೀವ ಗಳ ಮುಗಿಲು ಮುಟ್ಟುವ ಕರಾಡತನ, ಪ್ರಕೃತಿ ಸ್ನೇಹಿಗಳ, ಪರಿಸರ ಸಂರಕ್ಷಣೆ ಸಂಘಗಳ ಪ್ರತಿಭಟನೆ . ಎಲ್ಲ ಅನ್ಯಾಯಗಳಿಗೆ ಪ್ರಜಾಪರ್ಭುತ್ವದಲ್ಲಿ ಏಕ ಸಮರ್ಥನೆ – “ಅಭಿವೃದ್ಧಿ”

Leave a Comment

ಮಗ ಕಲಿಸಿದ ಜೀವನ ಪಾಠ · ಸಣ್ಣ ಕತೆ · Kannada Stories, Kannada Kathegalu

Kannada Stories, Kannada Kathegalu

ಸಣ್ಣ ಕತೆ :: ಮಗ ಕಲಿಸಿದ ಜೀವನ ಪಾಠ


ಮಗ : ಅಪ್ಪ .. ನಾನೊಂದು ಪ್ರಶ್ನೆ ಕೇಳಲೇ ..?
ಅಪ್ಪ : ಹ್ಮ್ , ಕೇಳು…
ಮಗ : ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ಅಪ್ಪಾ … ?!
ಅಪ್ಪ : (ಕೋಪದಿಂದ) ನಿನಗ್ಯಾಕೆ ಅದೆಲ್ಲ …?
ಮಗ : ನನಗೆ ಗೊತ್ತಾಗಬೇಕು .. ಪ್ಲೀಸ್ ಅಪ್ಪ … ಹೇಳು … ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ?
ಅಪ್ಪ : (ಕೋಪವನ್ನು ನಿಯಂತ್ರಿಸುತ್ತಾ)ಒಂದು ಸಾವಿರ ರೂಪಾಯಿ..
ಮಗ : ಓಹ್ (ತಲೆ ತಗ್ಗಿಸುತ್ತಾ)
ಮಗ: ಅಪ್ಪಾ , ನನಗೆ ಐನೂರು ರುಪಾಯಿ ಕೊಡ್ತ್ಯಾ ಪ್ಲೀಸ್..
ಮಗನ ಈ ಪ್ರಶ್ನೆ ಕೇಳಿದ್ದೆ ತಡ ತಂದೆ ಕೆಂಡಾಮಂಡಲನಾದ.ಅಪ್ಪ : (ಏರು ದನಿಯಲ್ಲಿ) ಓಹೋ .. ಗೊತ್ತಾಯ್ತು … ಯಾವುದೊ ಅಂಗಡಿಯಲ್ಲಿ ನೋಡಿದ ಆಟಿಕೆ ಖರೀದಿಸಲು ನಿನಗೆ ದುಡ್ಡು ಬೇಕು ಆಲ್ವಾ .. ಹೋಗು .. ತಾಯಿ ಹತ್ರ ಹೋಗಿ ಬಿದ್ಕೋ … ಏನು ಅಂತ ಅನ್ಕೊಂಡಿದ್ದೀಯ .. ಎರಡು ದಿವಸದಲ್ಲಿ ಮುರಿದು ಹಾಕ್ಲಿಕ್ಕೆ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾ ನಿಂಗೆ…?. ಆ ದುಡ್ಡಿನ ಹಿಂದಿನ ಶ್ರಮ ಏನು ಅಂತ ನಿಂಗೆ ಗೊತ್ತಾ…? ನನ್ನ ತಲೆ ಕೆಡಿಸ್ಬೇಡ.. ಹೋಗು…

ಮಗು ಮರುಮಾತನಾಡದೆ ನೇರ ಬೆಡ್ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡ .

ಅಪ್ಪ ಮಗ ಏನೋ ಕೇಳಬಾರದನ್ನು ಕೇಳಿದನೆಂದು ನಖಶಿಖಾಂತ ಉರಿದುಹೋದ.. ‘ಅವನಿಗೆ ಧೈರ್ಯ ಆದರೂ ಹೇಗೆ ಬಂತು ಅಂತಹ ಪ್ರಶ್ನೆ ಕೇಳಿ ನನ್ನಿಂದ ದುಡ್ಡು ಪಡೆಯಲು….’ ಅವನ ಮತ್ತಷ್ಟು ಉದ್ರಿಕ್ತನಾದ ..

ಕೆಲ ಸಮಯದ ಬಳಿಕ ಅವನ ಕೋಪ ಕರಗಿತು.. ಅವನು ಯೋಚಿಸಲು ಆರಂಭಿಸಿದ.. ನನ್ನ ಮಗ ಯಾವತ್ತು ನನ್ನಲ್ಲಿ ದುಡ್ಡು ಕೇಳಿದವನಲ್ಲ.. ಐನೂರು ರುಪಾಯಿ ಏನಾದ್ರೂ ತುಂಬಾ ಅವಶ್ಯ ವಸ್ತುವನ್ನು ಖರೀದಿಸಲು ಆಗಿರಬಹುದೇನೋ… ಅವನು ಯೋಚಿಸುತ್ತಲೇ ಇದ್ದ. ನನ್ನ ಮಗನಲ್ಲಿ ನಾನು ಆ ರೀತಿ ನಡೆದುಕೊಳ್ಳಬಾರದಿತ್ತು … ಛೆ ! ಎಂತಹಾ ತಪ್ಪು ಮಾಡಿಬಿಟ್ಟೆ…

ತಂದೆ ಮೆಲ್ಲ ಮಗನ ಬೆಡ್ರೂಮಿನ ಬಾಗಿಲ ತೆರೆದು ಒಳಹೊಕ್ಕ.

ಅಪ್ಪ : ಮಲಗಿದ್ದೀಯ ಮಗು… ?!
ಮಗ : ಇಲ್ಲಪ್ಪ .. ನಿದ್ದೆ ಬರ್ತಾ ಇಲ್ಲ ಅಪ್ಪಾ ..
ಅಪ್ಪ : ನಾನು ತುಂಬಾ ಕೆಟ್ಟದಾಗಿ ನಡೆದುಕೊಂಡೆ ಮಗೂ.. ಈ ಕೆಲಸದ ಒತ್ತಡ…. ಯಾರದೋ ಮೇಲಿನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಟ್ಟೆ.. ಹೋಗ್ಲಿ ಬಿಡು…. ತಗೋ ಮಗು.. ನೀನು ಕೇಳಿದ ಐನೂರು ರೂಪಾಯಿ…

ಮಗು ಛಕ್ಕನೆ ಎದ್ದು ಕುಳಿತ… ಅವನ ಕಂಗಳು ಇಷ್ಟಗಲ ಅರಳಿದವು. ನೋಟನ್ನು ಎದೆಗೆ ಅವಚಿಕೊಳ್ಳುತ್ತಾ “ಥಾಂಕ್ ಯೂ ವೆರಿ ಮಚ್ ಅಪ್ಪಾ ..!” ಎಂದವನೇ ಅವಸರದಿಂದ ತನ್ನ ತಲೆ ದಿಂಬಿನ ಕೆಳಗಿನಿಂದ ಹರಕಲಾಗಿ ಮಡಚಿಟ್ಟಿದ್ದ ಮತ್ತಷ್ಟು ನೋಟನ್ನು ಹೊರ ತೆಗೆದು ಮುಗ್ಧವಾಗಿ ಎಣಿಸತೊಡಗಿದ. ಮಗನಲ್ಲಿ ಇನ್ನಷ್ಟು ದುಡ್ಡನ್ನು ಕಂಡ ತಂದೆಯ ಮುಖ ಮತ್ತ್ತೆ ಕೆಂಪೇರಿತು.

ಅಪ್ಪ : ನಿನ್ನಲ್ಲಿ ದುಡ್ಡು ಇದ್ದರೂ ಮತ್ಯಾಕೆ ನನ್ನಲ್ಲಿ ಕೇಳಿದೆ…?

ಮಗ : ಯಾಕೆಂದರೆ ನನ್ನಲ್ಲಿ ಬೇಕಾದಷ್ಟು ಹಣ ಇರಲಿಲ್ಲ. ಈಗ ಬೇಕಾದಷ್ಟಾಯಿತು.

ಈ ಮಾತನ್ನು ಹೇಳುವಾಗ ಮಗನ ಮುಖ ಸಂತಸದಿಂದ ರಂಗೇರಿತ್ತು .

ತಂದೆ ಮಗನ ಮುಖವನ್ನುಶೂನ್ಯ ಭಾವದಿಂದ ದಿಟ್ಟಿಸಿದ .

ಮಗ ತನ್ನ ಮಾತನ್ನು ಮುಂದುವರೆಸಿದ ..

“ಅಪ್ಪಾ ನನ್ನಲ್ಲೀಗ ಒಂದು ಸಾವಿರ ರೂಪಾಯಿ ಇದೆ, ನಿನ್ನ ಸಮಯದಿಂದ ಒಂದು ಗಂಟೆಯನ್ನು ನನಗೆ ಕೊಡು. ನಾಳೆ ಮನೆಗೆ ಬೇಗ ಬಾ.. ನನಗೆ ನಿನ್ನ ಜೊತೆ ಊಟ ಮಾಡ್ಬೇಕು….”

ತಂದೆ ಕುಳಿತಲ್ಲೇ ಅಚೇತನನಾದ. ಅವನು ಆ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿದ. ಅವನ ದೇಹ ಪ್ರಶ್ನೆಯ ತೀಕ್ಸ್ನತೆಯನ್ನು ತಡೆಯಲಾರದೆ ಬೆವರಿತು. ಉಮ್ಮಡಿಸಿ ಗಂಟಲುಬ್ಬಿ ಮಾತು ಹೊರಡದಾಯಿತು. ಕೂಡಲೇ ತನ್ನೆರಡು ಕೈಗಳನ್ನು ಬಾಚಿ ಮಗನನ್ನು ತಬ್ಬಿಕೊಂಡ ಅವನು ಮಗನ ಹಣೆಗೆ ಮುತ್ತಿಟ್ಟು ಗೊಳೋ ಅಂತ ಅಳತೊಡಗಿದ.

son
ಹಣವೆಂಬ ಅಮೂರ್ತ ಮೌಲ್ಯದ ಹಿಂದೋಡಿ ಸಂಭಂದಗಳನ್ನು ಕಾಲಕಸದಂತೆ ಮಾಡಿದ ಎಲ್ಲ ಹೆತ್ತವರಿಗೊಂದು ಎಚ್ಚರಿಕೆಯ ಕರೆಘಂಟೆ ಇದು. ಜೀವನದ ನಾಗಾಲೋಟದಲ್ಲಿ ನಮ್ಮನ್ನು ಇಷ್ಟಪಡುವವರಿಗಾಗಿ ಒಂದಿಷ್ಟು ಕ್ಷಣವನ್ನು ಮೀಸಲಿಡಿ. ನಿಮ್ಮ ಒಂದು ದಿನದ ಸಾವಿರ ರೂಪಾಯಿ ಮೌಲ್ಯವಿರುವ ಒಂದು ಗಂಟೆಯನ್ನಾದರೂ ಹೃದಯಕ್ಕೆ ಹತ್ತಿರವಾದವರಿಗೆ ನೀಡಿ. ಅದು ಮಹತ್ತರವಾದ ಬದಲಾವಣೆಗೊಂದು ನಾಂದಿಯಾಗಬಹುದು.

ಮುಂದೆ ನೀವು ಸತ್ತಾಗ ನೀನು ನಿಮ್ಮ ಸಮಯವನ್ನೆಲ್ಲವನ್ನು, ಪರಿಶ್ರಮವನ್ನು ಕೊಟ್ಟು ಬೆಳೆಸಿದ ಕಂಪೆನಿ ಒಂದೆರಡು ದಿನದಲ್ಲಿ ಮತ್ತೊಬ್ಬರನ್ನು ನಿಮ್ಮ ಬದಲಾಗಿ ನೇಮಿಸಬಹುದು.
ಆದರೆ ನಿಮ್ಮ ಕುಟುಂಬಕ್ಕೆ, ನಿಮ್ಮ ಮಿತ್ರರಿಗೆ ನೀವಿಲ್ಲದ ನೋವು ಅವರ ಉಳಿದ ಜೀವನ ಪೂರ್ತಿ ಇರುತ್ತದೆ.

ಒಂದು ಕ್ಷಣ ಯೋಚಿಸಿ. ಈ ಅನಿಶ್ಚಿತವಾದ ಪ್ರಪಂಚದಲ್ಲಿ ನಾವ್ಯಾರೂ ಶಾಶ್ವತವಲ್ಲವೆನ್ನುವುದು ಸರ್ವವಿಧಿತ. ಹಣ,ಅಂತಸ್ತನ್ನು ಗಳಿಸುವ ಹೋರಾಟಕ್ಕೆ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಒಂದು ದಿನ ಮೃತ್ಯುವಿನ ಮನೆಯೆಡೆಗೆ ವಿಷಾದಪೂರ್ವಕವಾಗಿ ತೆರಳುವುದರಲ್ಲಿ ಯಾವುದೇ ಅರ್ಥ ಇಲ್ಲ.
ನಮ್ಮ ಬದುಕು ನಮ್ಮದು ಮಾತ್ರವಲ್ಲ. ಅದಕ್ಕೆ ಒಂದಿಷ್ಟು ಪಾಲುದಾರರಿದ್ದಾರೆ. ಅವರಿಗೂ ನಮ್ಮ ಬದುಕನ್ನು ಹಂಚೋಣ.. ಹಂಚಿದಷ್ಟು ಸಂತೋಷ ಹೆಚ್ಚಾಗುವುದು ತಾನೇ..?
ಅಂತಹ ಸಂತಸದ ಬದುಕನ್ನು ನಮ್ಮದಾಗಿಸೋಣ …

ಇತೀ ನಿಮ್ಮ ಪ್ರೀತಿಯ,
ಹುಸೇನ್
ಕಥಾ ಮೂಲ: ಅಂತರ್ಜಾಲ


ಹೇಗಿದೆ ಹೇಳಿ

ಒಬ್ಬಂಟಿಯಾದುದು.. · ನೆನಪಿನ ಹನಿ

ಒಬ್ಬಂಟಿಯಾದುದು..

beautiful_eye_small

ನಿನ್ನ ಕಣ್ಣಂಚಿನ
ದೇದೀಪ್ಯಮಾನ
ಬೆಳಕಿನಿಂದ
ನನ್ನೀ
ಹೃದಯ
ಚಲಿಸುತ್ತಿದ್ದರಿಂದೇನೋ
ನೀ
ಅಗಲಿದಾಗ
ಏಕಾಂತತೆಯ
ಕಾರಿರುಳಲ್ಲಿ
ನಾನು
ಒಬ್ಬಂಟಿಯಾದುದು..


ಹೇಗಿದೆ ಹೇಳಿ

ನ್ಯಾನೋ ಕಥೆಗಳು · ಪವಾಡ ಮತ್ತು ಇತರ ನ್ಯಾನೋ ಕತೆಗಳು

ಪವಾಡ ಮತ್ತು ಇತರ ನ್ಯಾನೋ ಕತೆಗಳು

ಶತ್ರು
ಒಂದು ಹಕ್ಕಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಅದನ್ನು ಕುಕ್ಕಲು ಶುರುವಿಟ್ಟಿತು. ತನ್ನ ಕೊಕ್ಕಿಗೆ ನೋವಾದರೂ ಅದು ಕುಕ್ಕುದನ್ನು ನಿಲ್ಲಿಸಲಿಲ್ಲ. ಕೊನೆಗೆ ತಣ್ಣಗಾಗಿ ಅದು ದೂರ ಹಾರಿ ಹೋಯ್ತು. ಮರು ದಿನವೂ ಇದೇ ಪುನರಾವರ್ತನೆ ಆಯಿತು. ತಾನು ಕುಕ್ಕುವುದು ತನ್ನ ಪ್ರತಿಬಿಂಬವನ್ನು ಅಂತ ಅದಕ್ಕೆ ತಿಳಿಯಲಿಲ್ಲ. ಕೊನೆಗೆ ತನ್ನಲ್ಲಿದ್ದ ಎಲ್ಲ ಶಕ್ತಿಯನ್ನು ಉಪಯೋಗಿಸಿ ಕುಕ್ಕಿದಾಗ ಕನ್ನಡಿ ಒಡೆದು ಚೂರಿ ಚೂರಾಯಿತು.ಈಗ ಅದರ ಪ್ರತಿಬಿಂಬ ನಾಲ್ಕಾಯ್ತು…. ಐದಾಯ್ತು. ಅದು ತನ್ನ ಶತ್ರುಗಳ ಸಂಖ್ಯೆ ಹೆಚ್ಚಾದುದು ಕಂಡು ಹೆದರಿ ದೂರಕ್ಕೆ ಹಾರಿ ಹೋಯ್ತು..
ಮನಷ್ಯನಿಗೆ ಶತ್ರುಗಳು ಹೆಚ್ಚಾಗುವುದು ಹೀಗೆಯೇ .. ಕತೆ ಮುಗಿಸಿದ ಸಂತ ದೀರ್ಘ ನಿಟ್ಟಿಸಿರು ಬಿಡುತ್ತಾ ಅದರ ತಾತ್ಪರ್ಯವನ್ನು ತನ್ನ ಶಿಷ್ಯಂದಿರ ಮುಂದಿಟ್ಟ .

ಪವಾಡ
ತನ್ನ ಪವಾಡದಿಂದ ದೇಶ ವಿದೇಶಗಳಿಂದ ಸಾವಿರಾರು ಭಕ್ತರನ್ನು ಹೊಂದಿದ್ದ ಸ್ವಾಮೀಜಿಯ ಆಸ್ಥಾನವದು. ಭಕ್ತರು ಒಬ್ಬೊಬ್ಬರಾಗಿ ತಮ್ಮ ಕಷ್ಟಗಳನ್ನು ಸ್ವಾಮೀಜಿ ಬಳಿ ನಿವೇದಿಸುತ್ತಿದ್ದರು. ಸ್ವಾಮೀಜಿ ತನ್ನ ಪವಾಡದಿಂದ ಗಾಳಿಯಿಂದ ಭಸ್ಮವನ್ನು ಸೃಷ್ಟಿಸಿ ಹಸನ್ಮುಖರಾಗಿ ಅವರಿಗೆ ಹಂಚುತ್ತಿದ್ದನು. ಭಕ್ತ ಸಮೂಹ ಅದನ್ನು ಅಷ್ಟೇ ಆದರದಿಂದ ಪಡೆದು ಧನ್ಯತೆಯ ಭಾವದಿಂದ ಹಿಂತಿರುಗುತ್ತಿದ್ದರು.
ಬರಗಾಲದಿಂದ ಕಂಗಾಲಾಗಿದ್ದ ರೈತನೊಬ್ಬ ಸ್ವಾಮೀಜಿ ಬಳಿ ಬಂದು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡನು.. ಸ್ವಾಮೀಜಿ ಎಂದಿನಂತೆ ಗಾಳಿಯಿಂದ ಭಸ್ಮವನ್ನು ತೆಗೆದು ಕೊಟ್ಟಾಗ ಅದನ್ನು ತಿರಸ್ಕರಿಸುತ್ತಾ ‘ ಬರದಿಂದ ಕಂಗಾಲಾದ ನನಗೆ ಬೇಕಾದುದು ಭಸ್ಮವಲ್ಲ, ಒಂದಿಷ್ಟು ಅಕ್ಕಿ ಮತ್ತು ಒಂದಿಷ್ಟು ಕಾಳುಗಳನ್ನು ತಾವು ಗಾಳಿಯಿಂದ ಸೃಷ್ಟಿಸಿ ಕೊಡಿ ..’ ನಯವಾಗಿ ರೈತನು ಬೇಡಿಕೆಯಿಟ್ಟನು.. ಸ್ವಾಮೀಜಿಯ ಮುಖದಲ್ಲಿದ್ದ ‘ಪ್ರಸನ್ನತೆ’ ಒಮ್ಮೆಲೇ ಮಾಯವಾಯ್ತು…

ನಾನು – ನೀನು
“ಪ್ರೀತಿ ಅಂದರೆ ಏನು ?” ಹಾಲು ಚೆಲ್ಲಿದ ಬೆಳದಿಂಗಳ ಬೆಳಕಿನಲ್ಲಿ ಆತನೊಂದಿಗಿದ್ದ ಅವಳು ಒಮ್ಮೆಲೇ ಪ್ರಶ್ನೆಯ ಬಾಣವನ್ನು ಛೂ ಬಿಟ್ಟಳು. ಪ್ರೀತಿಯೆಂದರೆ ಒಲವು , ವಿಶ್ವಾಸ, ಕಾಳಜಿ , ನವಿರು ಸ್ಪರ್ಶ , ಭಾವನೆಗಳು , ಕಾಮನೆಗಳ ಮಧುರ ಮಿಲನ ಆತ ಯೋಚಿಸುತ್ತ ಹೋದ, ಹೇಳಿದರೂ ಹೇಳಲಾಗದ ವಿವರಿಸಿದರೂ ವಿವರಿಸಲಾಗದ ವಿಚಿತ್ರ ವಿಕ್ಷಿಪ್ತ ವಿಸ್ಮಯವಾದ ಪ್ರೀತಿಯನ್ನು ಆತ ಪದಗಳಲ್ಲಿ ಕಟ್ಟಿ ಹಾಕಲು ಹೋಗಿ ಕೊನೆಗೆ ಸೋಲೊಪ್ಪಿ ಮೆಲ್ಲನೆ ಉಸಿರಿದ ” ಏನಿಲ್ಲ ಹುಡುಗಿ , ಪ್ರೀತಿಯೆಂದರೆ ಬರಿ ನಾನು ನೀನು…!”

ಕಾಗೆಗಳು
ನಡೆದು ಸುಸ್ತಾದ ಅವನು ಒಂದು ಕಲ್ಲಿನ ಮೇಲೆ ಕೂತ. ದೂರದಲ್ಲಿ ಕಾಗೆಗಳು ಏನನ್ನೋ ಕುಕ್ಕಿ ಎಳೆಯುತ್ತಿದೆ. ಜೊತೆ ಜೊತೆಗೆ ಆ ಕಾಗೆಗಳು ಇನ್ನಿತರ ಕಾಗೆಗಳನ್ನು ಕೂಗಿ ಕರೆಯುತ್ತಿವೆ. ಅವನು ಅಲ್ಲಿಂದ ಎದ್ದು ನಡೆದ. ಅವನ ಗೆಳೆಯನೊಬ್ಬ ಆವರೆಗೂ ಅವನ ಜೊತೆಗೆ ಇದ್ದ. ಅಲ್ಲಿಂದ ಮತ್ತೆ ಅವರು ಎರಡು ದಾರಿಯಲ್ಲಿ ಹೊರಟರು. ನಡೆದು ಕ್ಷೀಣಿಸಿದ ಅವನು ಹೋಟೆಲನ್ನು ಕಂಡದ್ದೇ ಅದರೊಳಗೆ ಹೊಕ್ಕ . ಹೊಟ್ಟೆ ತುಂಬಾ ತಿಂದು ತೇಗು ಬಿಡುತ್ತ ಹೊರಬರುತ್ತಿದ್ದಂತೆ ಅವನಿಗೆ ತನ್ನ ಗೆಳೆಯನ ನೆನಪಾಯ್ತು… “ಅವನೀಗ ಹಸಿದು ಕಂಗಾಲಾಗಿ ನಡೆಯುತ್ತಿರಬಹುದೇನೋ…?!”

ಕಾಡು
ತಾನು ಕಾಡೊಳಗೆ ಸಿಕ್ಕಿ ಹಾಕಿಕೊಂಡಿದ್ದೇನೆ ಅಂತ ಸಿಂಹಕ್ಕೆ ತಟ್ಟನೆ ಗೊತ್ತಾಯ್ತು, ಸುತ್ತಲು ದಟ್ಟವಾದ ಕಾಡು. ಅಲ್ಲಿ ಓಡುತ್ತಿರುವ ಯಾವುದೋ ವಿಚಿತ್ರ ಜೀವಿಗಳು (ಮನುಷ್ಯರು ಮತ್ತು ವಾಹನಗಳು) . ತಾನು ಸೂಕ್ಹ್ಮವಾಗಿ ಗಮನಿಸಿ ನಡೆಯದಿದ್ದರೆ ತನ್ನ ಜೀವಕ್ಕೆ ಆಪತ್ತು ಎಂದು ಅವನಿಗೆ ತಿಳಿಯಿತು. ಅವನು ಅವರ ಕಣ್ಣಿಗೆ ಬೀಳದಂತೆ ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟ. ಆದರೂ ಅದ್ಯಾವುದೋ ಕ್ಷಣದಲ್ಲಿ ಅವರ ಕಣ್ಣಿಗೆ ಬಿದ್ದ. ತೂರಿ ಬಂದ ಅವರ ಆಯುಧ (ಗುಂಡು) ಅವನನ್ನು ನೆಲಕ್ಕೆ ಅಪ್ಪಳಿಸಿತು. ಅವನ ಕೊನೆಯ ಘರ್ಜನೆಯಲ್ಲಿ ರಾಜ ಗಾಂಭೀರ್ಯವಿತ್ತು. ಆದರೆ ಆ “ಕಾಂಕ್ರೀಟ್ ಕಾಡಿನಲ್ಲಿ” ಅದನ್ನು ಯಾರು ತಾನೆ ಕೇಳಿಯಾರು….?

ಚಿತ್ರಕೃಪೆ : ಅಂತರ್ಜಾಲ


Leave comments

ಕನ್ನಡ ಬ್ಲಾಗಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

ಕುರುಡ ಯಾರು ?

ಕುರುಡ ಯಾರು ?

ಅಂದು ಬೆಳಿಗ್ಗೆ ಎಂದಿಗಿಂತ ತುಸು ಬೇಗನೆ ಎದ್ದಿದ್ದೆ.. ಮನದಲ್ಲಿ ಒಂಥರಾ ಸಂಭ್ರಮದ ವಾತಾವರಣ..ಇಂದಿಗೆ ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷವಾಯ್ತು…ಖುಷಿ ಅದಕ್ಕಲ್ಲ! ಇವತ್ತು ಸಿಗುವ ಬೋನಸ್ ಮತ್ತು ಸಂಬಳದಲ್ಲಾಗುವ ಹೆಚ್ಚಳ…!
ಅದೊಂತರ ನನ್ನ ಪಾಲಿಗೆ ಡಬಲ್ ಧಮಾಕ.. ಅದಕ್ಕೆ ಮನಸ್ಸು ಹುಚ್ಚು ಕೋಡಿಯಾಗಿತ್ತು.. ಬೇಗನೆ ರೆಡಿಯಾಗಿ ಆಫೀಸಿಗೆ ಹೊರಟೆ.
ಬಸ್ಸಿನಿಂದ ಇಳಿದವನೇ ದರ ದರನೆ ಆಫೀಸಿನ ಕಡೆ ಹೆಜ್ಜೆ ಹಾಕಿದೆ. ಆಫೀಸಿಗೆ ಸೇರಿದ ಮೊದಲ ವಾರ ಮಾತ್ರ ಇಷ್ಟು ಬೇಗ ಬಂದಿರಬಹುದೇನೋ..? ಗೊತ್ತಿಲ್ಲ! ಮನಸ್ಸು ಸುಮ್ಮನಿರದೆ ಏನೇನೋ ಪರ್ಸಂಟೇಜ್ ಲೆಕ್ಕದಲ್ಲಿ calculation ಮಾಡುತ್ತಿತ್ತು!!
ಸಾರ್.. ಸಾರ್.. ಯಾರದೋ ಶಬ್ದ ನನ್ನ ಮನಸಿನ ಗುಣಾಕಾರ , ಭಾಗಾಕರಕ್ಕೆ ಭಂಗ ತಂದಿತ್ತು.. ಹಿಂದಿರುಗಿ ನೋಡಿದರೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕ ಅದೊಂದು ಚೀಟಿ ಹಿಡಿದು ಏನೋ ಕೇಳಕ್ಕೆ ಕೈ ಬೀಸಿ ಕರೆಯುತ್ತಿದ್ದ.
ಸಾರ್ … ಇಲ್ಲಿ ನಿರ್ಮಲ ಹೈ- ಸ್ಕೂಲ್ ಎಲ್ಲಿ ಬರುತ್ತೆ.. ಆತ ವಿನಮ್ರವಾಗಿ ಕೇಳಿದ.. ಹೌದು ಈ ಅಡ್ರೆಸ್ಸ್ ನಂಗೆ ಗೊತ್ತು… “ಇಲ್ಲಿಂದ .. ಸ್ಟ್ರೈಟ್ ಹೋಗಿ… ಲೆಫ್ಟ್ … ರೈಟ್…… ” ನಾನು ತಡಬಡಿಸಿದೆ.. ಮತ್ತೊಂದು ಸುತ್ತಿನ ನೆನಪು ಮಾಡಿಕೊಂಡು ಪ್ರಯತ್ನಿಸಿದೆ.. “ಸ್ಟ್ರೈಟ್ ಹೋಗಿ .. ಫಸ್ಟ್ ಲೆಫ್ಟ್ ….ಅಲ್ಲ .. ರೈಟ್…. ” ಛೆ ! ಅದ್ಯಾಕೋ ಆ ವಿಳಾಸ ಮನಸ್ಸಿಗೆ ಹತ್ತಲೇ ಇಲ್ಲ .. ಅಷ್ಟರಲ್ಲಿ ಆ ದಾರಿಯಲ್ಲಿ ಹಾದು ಬರುತ್ತಿದ್ದ ಕುರುಡನೊಬ್ಬ ನನ್ನ ಮಾತನ್ನು ಕೇಳಿಸಿದವನೇ ..”ಸಾರ್ .. ಮುಂದೆ ಸ್ಟ್ರೈಟ್ ಹೋಗಿ ಫಸ್ಟ್ ಲೆಫ್ಟ್ ತಗೊಳ್ಳಿ ಆಮೇಲೆ ರೈಟ್ ತಗೊಳ್ಳಿ.. ಅಲ್ಲೇ ಇದೆ ನಿರ್ಮಲ ಹೈ -ಸ್ಕೂಲ್ ! ”

ನನಗೆ ಬೆನ್ನಿಗೆ ಈಟಿಯಿಂದ ತಿವಿದ ಅನುಭವ. ಒಂದು ವರ್ಷದಿಂದ ಇದೇ ದಾರಿಯಲ್ಲಿ ಹೋಗುತ್ತಿದ್ದೇನೆ .. ಬರುತ್ತೇನೆ… ಆದರೂ ನನ್ನಿಂದ ಆ ವಿಳಾಸವನ್ನು ಹೇಳಲಾಗಲಿಲ್ಲ.. ಆದರೆ ಇವನು ಕುರುಡ… ಬರ ಬರನೆ ಹೇಳಿಬಿಟ್ಟ.. ಜಗದ ಪಾಲಿಗೆ ನಾನು ಕಣ್ಣಿದ್ದೂ ಕುರುಡನಾದೆ… ಒಂದು ವರ್ಷದಿಂದ ಹಾದು ಹೋಗುವ ದಾರಿಯ ಅಕ್ಕ ಪಕ್ಕವನ್ನು ಗುರುತಿಸುವಷ್ಟು ವಿವೇಚನೆ ಇಲ್ಲದ ನಾನು .. ವರ್ಷದ ಬೋನಸ್ ಗೆ ಅರ್ಹನೇ…ಮನಸ್ಸು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಲೇ ಇತ್ತು.. ಮನಸಿನ ಸಂಭ್ರಮವು ಮಾಸಿತ್ತು..
ಮುಂದಿನ ಪ್ರತಿಯೊಂದು ಹೆಜ್ಜೆಯೂ ನನಗೆ ಭಾರವಾಗುತ್ತಾ ಹೋಯಿತು..


Leave a Comment

ನ್ಯಾನೋ ಕಥೆಗಳು

ಗೊಂದಲ

ಈ ಇಳಿ ವಯಸ್ಸಿನಲ್ಲೂ ಅವರು ಕ್ರಿಕೆಟ್ ಅಭಿಮಾನಿ.. ಮಿಗಿಲಾಗಿ ತನ್ನ ಹುಟ್ಟೂರು ಬಗ್ಗೆ ತುಂಬು ಅಭಿಮಾನವನ್ನು ಹೊಂದಿದ್ದರು .. ಭಾರತ – ಪಾಕಿಸ್ತಾನ – ಬಾಂಗ್ಲಾದೇಶ ತ್ರಿಕೋಣ ಕ್ರಿಕೆಟ್ ಸರಣಿ ನಡೆಯುವ ವೇಳೆ ತಾನು ಯಾವ ದೇಶಕ್ಕೆ ಸಪೋರ್ಟ್ ಕೊಡಬೇಕೆಂಬ ವಿಚಾರದಲ್ಲಿ ಅವರಿಗೆ ಎಲ್ಲಿಲ್ಲದ ಗೊಂದಲ.
ಅವರು ಹುಟ್ಟೂರು ಸ್ವಾತಂತ್ರ ಪೂರ್ವದಲ್ಲಿ ಭಾರತದಲ್ಲಾದರೆ , ಅನಂತರ ಪಾಕಿಸ್ತಾನವಾಯ್ತು. ಈಗ ಅದು ಬಾಂಗ್ಲಾದೇಶದ ಒಂದು ಭಾಗ..!!


Leave a Comment

ನ್ಯಾನೋ ಕಥೆಗಳು

ಬೆನ್ನಲುಬು

ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು.


Leave a Comment