ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ

ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ

ಅಂದಹಾಗೆ ಇವತ್ತಿಗೆ ನನ್ನ ಅಸಂಬದ್ದ ಅಲಾಪಗಳ “ನೆನಪಿನ ಸಂಚಿ” ಯ ಓದುಗರ ಸಂಖ್ಯೆ 6 0 0 0 0 0 (೬ ಲಕ್ಷ) ದಾಟಿದೆ..
2011 ಅಕ್ಟೋಬರ್ 14 ರಂದು ಆರಂಭಿಸಿದ್ದ ಬ್ಲಾಗು ಕೇವಲ ಮೂರೂವರೆ ವರ್ಷದಲ್ಲಿ ಇಷ್ಟೊಂದು ಜನರಿಗೆ ತಲುಪಿದೆ ಎಂಬುದು ಪುಟ್ಟ ಬರಹಗಾರನಾಗಿ ನನ್ನ ಪಾಲಿಗೆ ಹೆಮ್ಮೆಯ ವಿಚಾರ. ಅರ್ಥವಿಲ್ಲದ ನನ್ನ ಮನಸ್ಸಿನ ಮರ್ಮರಗಳನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿದ ಪ್ರತೀ ಓದುಗನಿಗೆ ಹೃದಯಾಂತರಾಳದ ಧನ್ಯವಾದಗಳು..

ಒಂದಷ್ಟು ಕತೆ, ಕವನ, ಕಾಲಹರಣ.. ಇದು ನಿಮ್ಮದೇ “ನೆನಪಿನ ಸಂಚಿ”

Leave a comment

ಹುಸೇನಿ ಪದ್ಯಗಳು - 22 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 22

goobe

೧)
ಇಲ್ಲೆಲ್ಲೋ ಕಳಕೊಂಡ ನಿನನ್ನು
ನೆನಪಿನ ನಶೆಯಲ್ಲಿ ಹುಡುಕುತ್ತೇನೆ,
ಅಮಲೇರಿದಾಗ ಕಣ್ಣಂಚಲಿ
ಮೂಡುತ್ತೀಯ ನೀನು,
ಹನಿಯಾಗಿ..
೨)
ನಿನ್ನೆ ನಿನ್ನ ನೆನಪನ್ನೆಲ್ಲಾ
ತೇಲಿ ಬಿಟ್ಟ ತೊರೆಯಿಂದ
ಮೊಗೆದು ನೀರು ಕುಡಿದವರೆಲ್ಲಾ ಇಂದು
ತೂರಾಡುತ್ತಿದ್ದಾರೆ,ಚೀರಾಡುತ್ತಿದ್ದಾರೆ;
ಮೊನ್ನೆ ಅವರು ನನ್ನ ಹುಚ್ಚ ಅಂತ ಹಂಗಿಸಿದ್ದರು..
೩)
ಒಂದೊಮ್ಮೆ ನೆನಪಿನ ನಶೆ
ಪರಿಧಿ ದಾಟುತ್ತದೆ, ಸುತ್ತಲೆಲ್ಲಾ ಬರೀ ಶೂನ್ಯ,
ದೂರದಲ್ಲಿ ಒದರುವ ಗೂಬೆ,
ಯಾಕೆಂದೊಮ್ಮೆ ನನಗೆ ನಾನೇ
ಕೇಳಿಕೊಳ್ಳುತ್ತೇನೆ, ಪ್ರಶ್ನೆಗೆ ಹುಟ್ಟಿ
ಸಾಯುವ ಸಮಯವದು…_ಹುಸೇನಿ

Leave a comment

ಹುಸೇನಿ ಪದ್ಯಗಳು - 21 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 21

nakshatra
೧)
ಆ ನೋಟದಲ್ಲೇ ನೀ
ಹರಡಿಟ್ಟ ಮೋಡದ ಚೂರು
ಮಧ್ಯ ರಾತ್ರಿ ಹನಿಯಾಗುತ್ತದೆ;
ಅದನಾಯ್ದು ಕವಿತೆ ಕಟ್ಟುವ ಸಂಭ್ರಮ ನನಗೆ..

೨)
ನೀ ತೊರೆದು ಹೋದ ಹಾದಿಗುಂಟ
ಸಾಲು ನಕ್ಷತ್ರಗಳ ಕಾವಲುಂಟು;
ದಾರಿಯುದ್ದಕ್ಕೂ ಇನ್ನೊಂದಿಷ್ಟಿರುಳು ಉಳಿದಿದೆ,
ಬಹುಶಃ ನೀನು ಬಿಟ್ಟು ಹೋದ ನೆನಪುಗಳದ್ದಾಗಿರಬೇಕು..

೩)
ಅಪರಾತ್ರಿ ನೀನು ನೆನಪಾಗುತ್ತೀಯ;
ಹೊರಗಡೆ ಜೋರು ಮಳೆ, ಈಗೀಗ
ಯಾಕೋ ಮಳೆಯೂ ಎದೆಯೊಳಗಿಳಿಯುವುದಿಲ್ಲ;
ಒಡಲೊಳಗಿನ ತಪನೆಯ ತಂಪಿಗೆ ಕಣ್ಣೀರೇ ಬೇಕಂತೆ..

_ಹುಸೇನಿ

Leave a comment

ಹನಿ ಕಥನ

ಹನಿ ಕಥನ

ಯುದ್ಧ ಬೇಕು ಯುದ್ದ ಬೇಕು
ಅಟ್ಟಹಾಸಗೈದವನ ಮಗ ಅಮೆರಿಕಾದಲ್ಲಿ
ಸಾಫ್ಟ್ವೇರ್ ಇಂಜಿನಿಯರ್;
ಶಾಂತಿ, ಶಾಂತಿ, ಯುದ್ದ ಬೇಡ
ಗೋಗರೆಯುತ್ತಿದ್ದವನ ಮಗ
ಗಡಿ ಕಾಯುವ ಯೋಧ..

__

ವೃದ್ದಾಶ್ರಮ ಸೇರಿರುವ ರಾಯರು
ಹೊತ್ತು ಕಳೆಯಲು
“ಪೋಷಕರ ಪೋಷಣೆ ಮಕ್ಕಳ ಕರ್ತವ್ಯ”
ವಿಷಯದ ಮೇಲೆ ಹೊಸ ತಲೆಮಾರಿನ ಯುವಕರಿಗೆ
ಆದರ್ಶ ಪಾಠ ಹೇಳಿಕೊಡುತ್ತಿದ್ದಾರೆ.

__

“ಯತ್ರ ನಾರ್ಯಸ್ತು ಪೂಜ್ಯಂತೆ,
ರಮಂತೆ ತತ್ರ ದೇವತಾ” ಎಂದು
ಮೊನ್ನೆ ಪ್ರವಚನ ಕೊಟ್ಟ ಅಧ್ಯಾತ್ಮಿಕ
ಗುರುವನ್ನು , ನಿನ್ನೆ ಅತ್ಯಾಚಾರ
ಪ್ರಕರಣದಲ್ಲಿ ಬಂದಿಸಲಾಗಿದೆ.

Add Comments

ಟೈಮ್ ಪಾಸ್ ಹನಿಗಳು

ಟೈಮ್ ಪಾಸ್ ಹನಿಗಳು

ನಿನ್ನ
ಮಾತು
ಮುತ್ತು
ಮೌನ
ಮತ್ತು
__

ನೀನು
ನನ್ನ
ಕತ್ತಲಿನ ಬೆಳಕು
ಬೆಳಕಿನ ಕತ್ತಲು

__

ಈ ಸುರಿದ ಮಳೆಗೆ
ನಾ ನಿನ್ನ ನೆನೆದಿದ್ದೇನೆ
ಹುಡುಗಿ!
__

ಮೇಘ
ನು ಭುವಿ
ಯ ಸೇರಿದ
ಹುಟ್ಟಿದ ಮಕ್ಕಳು
ಹಸಿರು…

(ಈ ಸಾರಿ ಕ್ಷಮಿಸಿಬಿಡಿ ಇನ್ನೆಂದೂ ಇಷ್ಟು ಕೆಟ್ಟದಾಗಿ ಗೀಚೋದಿಲ್ಲ 😦 )

Leave a comment

ಒಬ್ಬಂಟಿಯಾದುದು.. · ನೆನಪಿನ ಹನಿ

ಒಬ್ಬಂಟಿಯಾದುದು..

beautiful_eye_small

ನಿನ್ನ ಕಣ್ಣಂಚಿನ
ದೇದೀಪ್ಯಮಾನ
ಬೆಳಕಿನಿಂದ
ನನ್ನೀ
ಹೃದಯ
ಚಲಿಸುತ್ತಿದ್ದರಿಂದೇನೋ
ನೀ
ಅಗಲಿದಾಗ
ಏಕಾಂತತೆಯ
ಕಾರಿರುಳಲ್ಲಿ
ನಾನು
ಒಬ್ಬಂಟಿಯಾದುದು..


ಹೇಗಿದೆ ಹೇಳಿ

ಕಟ್ ಕತೆಗಳು

ಕಟ್ ‘ ಕತೆಗಳು

1. “ಇಲ್ಲಿಗೆ ಎಲ್ಲ ಮುಗಿಯಿತು. ಇನ್ಯಾವತ್ತೂ ನಿನ್ನ ವಿಷಯಕ್ಕೆ ಬರಲ್ಲ .. ಇನ್ಯಾವತ್ತೂ ನಿನ್ನ ಮುಖ ನೋಡಲ್ಲ” ಅಂತ ಹೇಳಿ ರೋಷದಿಂದ ಹೊರಟು ಬಂದ ಅವನು ಕಣ್ಣುಗಳಲ್ಲಿ ಅವಳನ್ನು ತುಂಬಿಕೊಂಡಿದ್ದನು.

2. ಆ ಹುಡುಗನಿಗೆ ತಾನು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ಬೇಜಾರು ಪಕ್ಕದ ಮನೆಯ ವಿದ್ಯಾಳಿಗೆ ಡಿಸ್ಟಿಂಕ್ಷನ್ ಬಂದಿದೆ ಅಂತ ಕೇಳಿದಾಗ ದೂರವಾಗಿತ್ತು.

3. ಮರಿ ಮೀನುಗಳು ತಾಯಲ್ಲಿ ಕೇಳಿತು, “ನಾನು ನೀರಲ್ಲೇ ಏಕೆ ಬದುಕಬೇಕು..? ನೆಲದ ಮೇಲೆ ಬದುಕಲಾಗದೆ..?” ತಾಯಿ ಮೀನು ಹೇಳಿತು.. ಮರೀ.. ನೀರು FISHಗೆ.. ನೆಲ “SELFISH”ಗೆ..!

4. ಹಣ, ಅಂತಸ್ತಿನ ಹಿಂದೆ ಬಿದ್ದ ಅವನು ವರ್ಷಗಳ ನಂತರ ವಿದೇಶದಿಂದ ಮನೆಗೆ ಬಂದಿದ್ದ. ಹಾಲುಗಲ್ಲದ ತನ್ನ ಮಗು ಅವನನ್ನು ನೋಡಿದವನೇ ತೊದಲುತ್ತ ಪ್ರಶ್ನಿಸಿದ, “ಇದು ಯಾರಮ್ಮಾ ..? ”

5. ದಿನಾ ದೇವಸ್ಥಾನಕ್ಕೆ ಹೋಗಿ ಊರವರಿಂದ “ತುಂಬಾ ಒಳ್ಳೆಯ ಹುಡುಗಿ” ಅಂತ ಸರ್ಟಿಫಿಕೇಟ್ ಪಡೆದ ವಿಶಾಲಮ್ಮನ ಮಗಳು ಮದುವೆಯ ಮುಂಚಿನ ರಾತ್ರಿ ಪೂಜಾರಿ ಜೊತೆ ಓಡಿಹೊದಳು.

6. ಎಂದೂ ತಮ್ಮೊಳಗೆ ನಡೆಯುತ್ತಿದ್ದ ಕಲಹದಿಂದ ಬೇಸತ್ತು ಅವರು ಡೈವೋರ್ಸ್ ಪಡೆದಿದ್ದರು. ಈಗ ಬೋರ್ಡಿಂಗ್ ಸ್ಕೂಲಲ್ಲಿ ಕಲಿಯುತ್ತಿರುವ ಮಗನ ಬೇಸಿಗೆ ರಜೆಗೆ ಯಾರ ಮನೆಯಲ್ಲಿರಬೇಕೆಂಬ ವಿಚಾರದಲ್ಲಿ ಮತ್ತೆ ಕಲಹ ನಡೆಯುತ್ತಾ ಇದೆ.

7. ಕೊನೆಯ ಬಾರಿಗೆ ನಂಗೆ “ಐ ಲವ್ ಯೂ” ಅಂದದ್ದು ಯಾವಾಗ? ಅಂತ ಅವಳು ಕೇಳಿದ್ದೆ ತಡ, ಆತ ಎಂದಿನಂತೆ ಕಿಸೆಯಲ್ಲಿದ್ದ ಚಾಕೊಲೇಟನ್ನು ಅವಳಿಗೆ ಕೊಟ್ಟ..ಅವಳು ಅದನ್ನು ಚಪ್ಪರಿಸುತ್ತಾ ನುಸು ನಾಚಿಕೊಂಡಳು!!!!!!

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ