ದುರ್ಮರಣ ಮತ್ತಿತರ ನ್ಯಾನೋ ಕತೆಗಳು · ನ್ಯಾನೋ ಕಥೆಗಳು

ದುರ್ಮರಣ ಮತ್ತಿತರ ನ್ಯಾನೋ ಕತೆಗಳು


school bus seat

ದುರ್ಮರಣ
ಬಸ್ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿದ್ದು ಪೇಪರಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅವರ ಹೆತ್ತವರ ಕನಸುಗಳು ಮತ್ತು ನಿರೀಕ್ಷೆಗಳು ಅವರೊಂದಿಗೆ ದುರ್ಮರಣ ಹೊಂದಿದ್ದು ಸುದ್ದಿಯಾಗಲೇ ಇಲ್ಲ…

ಕೊಲ್ಲು
ಹದಿಹರೆಯದ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದ ಪಾಪಿಗೆ ಗಲ್ಲು ಶಿಕ್ಷೆ ನೀಡಿ ಕೊಲ್ಲಲಾಯಿತು. ಆ ಯುವತಿಯ ತಂದೆಗೆ ಈ ಸುದ್ದಿಯನ್ನು ತಿಳಿಸಲು ಹೋದವನು ಮಾತಿನ ನಡುವೆ ಕೇಳಿದರು. “ಆತನನ್ನು ಕೊಂದಿದ್ದು ನಿಮಗೆ ಸಮಾಧಾನ ನೀಡಿರಬೇಕಲ್ವಾ ..?”
“ಅವನನ್ನು ಪ್ರತೀ ದಿನ, ಪ್ರತೀ ಕ್ಷಣ ಮನಸ್ಸಿನಲ್ಲಿ ಕೊಂದು ಹಾಕುತ್ತಾ ಸಮಾಧಾನಪಟ್ಟಿದ್ದೆ”. ನಿಟ್ಟುಸಿರು ಬಿಡುತ್ತಾ ಯುವತಿಯ ತಂದೆ ಉತ್ತರಿಸಿದ.

ಪ್ರೀತಿ
“ಕಡು ಬಡತನದಲ್ಲಿ ತನ್ನೆಲ್ಲ ಸಂತೋಷವನ್ನು ಬಲಿ ಕೊಟ್ಟು, ತನ್ನದೆಲ್ಲವನ್ನೂ ನನಗಾಗಿ ಮುಡಿಪಿಟ್ಟು ನನ್ನನ್ನು ಸಾಕಿ, ಸಲುಹಿ ವಿದ್ಯಾವಂತೆಯನ್ನಾಗಿ ಮಾಡಿದ ನನ್ನ ತಾಯಿಯನ್ನು ತೊರೆದು ನಾನು ನಿನ್ನ ಜೊತೆ ಬರೆಲಾರೆ” ಆತನ ಮುಂದೆ ಆಕೆ ಗೊಗರೆಯುವಾಗ ಅವನಿಗೆ ನಿಜವಾದ ಪ್ರೀತಿ ಯಾವುದೆಂದು ಅರಿವಾಯಿತು.

ಮೌಢ್ಯ
“ಆ ಜನಾಂಗ ಕೆಟ್ಟ ಮೌಢ್ಯಗಳಿಂದ ತುಂಬಿ ಕೆಟ್ಟು ಹೋಗಿದೆ. ಯಾರೋ ತಿಂದು ಬಿಟ್ಟು ಹೋದ ಎಂಜಲೆಲೆಯ ಮೇಲೆ ಉರುಳಿ ಹರಕೆ ತೀರಿಸುತ್ತಾರಂತೆ. ಇವರನ್ನು ಇಂತಹ ಮೌಢ್ಯಗಳಿಂದ ಮೇಲೆತ್ತುವ ಕಾರ್ಯ ಈ ಕೂಡಲೇ ಆಗಬೇಕು” ಸ್ವಯಂ ಘೋಷಿತ ಆ ಬುದ್ದಿಜೀವಿ ಒಂದು ಜನಾಂಗದ ಮೇಲೆ ತನ್ನ ಪ್ರೀತಿ ಪ್ರದರ್ಶಿಸುತ್ತಿದ್ದ. ವಿಪರ್ಯಾಸವೆಂದರೆ ತಾವು ಬಿಟ್ಟು ಹೋದ ಎಂಜಲೆಲೆಯ ಮೇಲೆ ಉರುಳುತ್ತಾರೆಂದು ಗೊತ್ತಿದ್ದೂ ಎಂಜಲೆಲೆಯನ್ನು ಬಿಟ್ಟು ಹೋಗುತ್ತಿದ್ದವರ ಮೌಢ್ಯದ ಬಗ್ಗೆ ಆತ ಜಾಣ ಮೌನವಹಿಸಿದ್ದ.


Leave a Comment

4 thoughts on “ದುರ್ಮರಣ ಮತ್ತಿತರ ನ್ಯಾನೋ ಕತೆಗಳು

Leave a comment