ಹುಸೇನಿ ಪದ್ಯಗಳು - 33 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 33

nenapina-sanchi-1

೧)
ಈಗೀಗ ನಿನ್ನ ನೆನಪುಗಳು
ದೀರ್ಘ ನಿಟ್ಟುಸಿರು
ಮತ್ತು
ಕಣ್ಣಂಚಲಿ ಮೂಡುವ
ಹನಿಗಳು;
ಅಷ್ಟೇ..

೨)
ನೀನು ಹೊರಟು
ಆ ತಿರುವಿನಂಚಿನಿಂದ
ಮತ್ತೆ ತಿರುಗಿ
ನೋಡಬಾರದಿತ್ತು;
ನನ್ನ ವಾಸ್ತವ ಮತ್ತು ಭವಿಷ್ಯ
ಎರಡೂ ಗೋಜಲು ನೋಡು ..

೩)
ಪತಂಗದ ಕನಲಿಕೆ
ದೀಪದ ತಟಸ್ಥ ಭಾವ
ಪ್ರೇಮದ ಇನ್ನೊಂದು ಮುಖ ?

೪)
ಆ ಮುಸ್ಸಂಜೆಯಲ್ಲಿ ಕವಲುದಾರಿಯೊಂದು ವಿದಾಯಕ್ಕೆ ಸಾಕ್ಷಿಯಾಗಿತ್ತು
ಅವಳು ಸ್ಥಬ್ದವಾಗಿದ್ದಳು;
ಅವನು ನಡೆಯುತ್ತಲೇ ಇದ್ದ;
ಮೌನದ ತುದಿಯಲ್ಲಿ ಕವಿತೆಯೊಂದು ಜೀಕುತ್ತಿತ್ತು..

೫)
ಮತ್ತದೇ ನಿಯ್ಯತ್ತಿನ
ಪೊರೆ;
ಕಳಚಿದಷ್ಟೂ ಕವಲು;

ಹುಸೇನಿ ~

Leave a comment

ಮತ್ತೆ ಸಂಜೆಯಾಗುತ್ತಿದೆ..

ಮತ್ತೆ ಸಂಜೆಯಾಗುತ್ತಿದೆ..

moon-sunset
… ಮತ್ತೆ ಸಂಜೆಯಾಗುತ್ತಿದೆ… ಪಡುವಣದ ಮೂಲೆಯಲ್ಲಿ ಸಂಧ್ಯಾ ಸೂರ್ಯನ ಸಾವಿನ ಬಣ್ಣದ ಪಡಿಯಚ್ಚು ಈ ಕೊಳದ ಮೇಲೆ ಇಂದೂ ಮೂಡಿದೆ. ಮುಂಜಾವಿಗೆ ಇದೇ ರವಿಯ ಹೊಂಗಿರಣದ ಸ್ಪರ್ಶದಿ ನವಿರಾಗಿ ಅರಳಿದ್ದ ನೈದಿಲೆ ಈಗ ಅವನ ಒಂಟಿ ವಿರಹದ ಸಾವಿಗೆ ಶೋಕಗೀತೆ ಹಾಡುತ್ತಿದೆ. ಪಾರಿವಾಳದ ಹಿಂಡು ಗೂಡಿಗೆ ಮರಳುತ್ತಿದೆ. ನಾನು ಮನದ ವಿಸ್ಮಯಲೋಕವನ್ನು ಆಗಷ್ಟೇ ತೆರೆದು ನಿನ್ನಯ ನೆನಪಿನರಮನೆಗೆ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಿದ್ದೇನೆ. ನಿನ್ನ ನೆನಹುಗಳು ನನ್ನೊಳಗೆ ವರ್ಣ ಕಾರಂಜಿಯ ಚಿತ್ರೋಧ್ಯಾನ ಧೇನಿಸಿ ಕಾಮನ ಬಿಲ್ಲಿನ ಅಚ್ಚುಗಳ ಹುಚ್ಚೆಬ್ಬಿಸುವ ಸಂಭ್ರಮದಲ್ಲಿದೆ. ಅದು ನನ್ನ ಕಣ ಕಣದಲಿ ಮೆಲುವಾಗಿ ಪಸರಿಸುತ, ವಿಹರಿಸುತಾ ವಿಹಂಗಮವಾಗಿ ನನ್ನನ್ನು ಆವರಿಸಿಕೊಳ್ಳುತ್ತದೆ. ನನ್ನೊಳಗಿನ ಕನವರಿಕೆಗಳಿಗೆ ರೆಕ್ಕೆ ಪುಕ್ಕ ಮೂಡಿ ಗಗನವೇರಿ ತೇಲುತ್ತವೆ. ಕೇವಲ ಕಲ್ಪನೆಯಲ್ಲಿಯೇ ಬದುಕು ಕ್ಷಿಪಣಿಯ ವೇಗ ಪಡೆದು ಹಾರುವಾಗ ನನ್ನೆಲ್ಲ ನೋವು ಹತಾಶೆಗಳು ಕಕ್ಕಾಬಿಕ್ಕಿಯಾಗಿ ಹತಗೊಂದು ಹರಡಿ ಬೀಳುತ್ತವೆ. ಆ ಕ್ಷಣ ನಾನು ಸ್ಥಬ್ದ.. !. ಕ್ಷಣ ಮಾತ್ರದಲ್ಲಿ ವಿಷಣ್ಣ ನಗುವೊಂದನ್ನು ತುಟಿಗೆ ಎಳೆದು ತರುತ್ತೇನೆ. ಅದು ನನ್ನ ಅಸ್ತಿತ್ವಕ್ಕೆ ಸವಾಲೊಡ್ಡುವ ಮುಂಚೆಯೇ ವಿರುದ್ದ ದಿಕ್ಕಿನಲ್ಲಿ ಮೆಲ್ಲನೆ ಕವಲೊಡೆದು ಮೂಡುವ ಚಂದ್ರಮನ ಬೆಳಕಿನ ಮೊದಲ ಕಣದ ಆಹ್ಲಾದಕರ ಸೊಂಪನ್ನು ಕಣ್ತುಂಬ ತುಂಬಿಕೊಂಡು ಜಾರಿಬಿದ್ದ ಕಣ್ಣೀರ ಹನಿಗೆ ಅದೇ ಚಂದ್ರಮನನ್ನು ಹಕ್ಕುದಾರನನ್ನಾಗಿ ಮಾಡಿ ಅವನ ಮೇಲೆ ಕಲ್ಲೆಸೆಯುವ ಪ್ರಯೋಗಕ್ಕೆ ಮುಂದಾಗುತ್ತೇನೆ….

~ಹುಸೇನಿ

Leave a comment

ನೆನಪಿನ ಹನಿ · ಮೂಕ ಮೌನ

ಮೂಕ ಮೌನ ..

ತಿರುಗಿ ನಡೆಯಲು..
ಕೂಗಿ ಕರೆಯುವಳು ಅಂದುಕೊಂಡೆ
ಅಗಲಿ ಹೋಗಲು ..
ನೆಪ ಮಾತ್ರ ಅಂದುಕೊಂಡೆ
ನಗು ಮಾಸಲು ..
ಮಾತು ಮಾಸದು ಅಂದುಕೊಂಡೆ
ಜಾರಿಬಿದ್ದ ಕಣ್ಣ ನೀರು..
ಮಳೆಹನಿ ಅಂದುಕೊಂಡೆ
ಆದರೆ …
ಮರೆವನ್ನು ಪ್ರೀತಿಸಲು ಅವಳು ಹೇಳಿದಾಗ
ಅಂದುಕೊಳ್ಳಲು ಏನೂ ಇರಲಿಲ್ಲ…!

ನೆನಪಿನ ಹನಿ · ಮೌನ ಪ್ರೀತಿಯೇ..?

ಮೌನ ಪ್ರೀತಿಯೇ..?

ಮೌನ ಪ್ರೀತಿಯೇ..?
ಗೊತ್ತಿಲ್ಲ…
ಮನದಲ್ಲಿ ಕಡಲಷ್ಟು ಪ್ರೀತಿ ಇದ್ದರೂ
ಪ್ರೀತಿಸುವುದಿಲ್ಲ ಎನ್ನುವ ಮನಸಿನ
ಮೂಕ ರೋದನೆಯೇ ಮೌನ!!
ಕಣ್ಣೀರು ಪ್ರೀತಿಯೇ..? · ನೆನಪಿನ ಹನಿ

ಕಣ್ಣೀರು ಪ್ರೀತಿಯೇ …?

ಕಣ್ಣೀರು ಪ್ರೀತಿಯೇ …?
ಗೊತ್ತಿಲ್ಲ…
ನಿನ್ನ ನೆನಪು ಮೂಡುವಾಗಲೆಲ್ಲ
ನನ್ನ ಕಣ್ಣು ತುಂಬಿ ಬರುತಿದೆ…
ನಾನು ಜೀವಿಸುತ್ತೇನೆ.. ! · ನೆನಪಿನ ಹನಿ

ನಾನು ಜೀವಿಸುತ್ತೇನೆ.. !

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು…
ಕಾರಣ..
ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ..
ಅಲ್ಲ..!!
ನೀ ನೆನಪಾಗೋ ವೇಳೆ ಮಾತ್ರ
ನಾನು ಜೀವಿಸುತ್ತೇನೆ..!!