ಮತ್ತೆ ಸಂಜೆಯಾಗುತ್ತಿದೆ..

moon-sunset
… ಮತ್ತೆ ಸಂಜೆಯಾಗುತ್ತಿದೆ… ಪಡುವಣದ ಮೂಲೆಯಲ್ಲಿ ಸಂಧ್ಯಾ ಸೂರ್ಯನ ಸಾವಿನ ಬಣ್ಣದ ಪಡಿಯಚ್ಚು ಈ ಕೊಳದ ಮೇಲೆ ಇಂದೂ ಮೂಡಿದೆ. ಮುಂಜಾವಿಗೆ ಇದೇ ರವಿಯ ಹೊಂಗಿರಣದ ಸ್ಪರ್ಶದಿ ನವಿರಾಗಿ ಅರಳಿದ್ದ ನೈದಿಲೆ ಈಗ ಅವನ ಒಂಟಿ ವಿರಹದ ಸಾವಿಗೆ ಶೋಕಗೀತೆ ಹಾಡುತ್ತಿದೆ. ಪಾರಿವಾಳದ ಹಿಂಡು ಗೂಡಿಗೆ ಮರಳುತ್ತಿದೆ. ನಾನು ಮನದ ವಿಸ್ಮಯಲೋಕವನ್ನು ಆಗಷ್ಟೇ ತೆರೆದು ನಿನ್ನಯ ನೆನಪಿನರಮನೆಗೆ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಿದ್ದೇನೆ. ನಿನ್ನ ನೆನಹುಗಳು ನನ್ನೊಳಗೆ ವರ್ಣ ಕಾರಂಜಿಯ ಚಿತ್ರೋಧ್ಯಾನ ಧೇನಿಸಿ ಕಾಮನ ಬಿಲ್ಲಿನ ಅಚ್ಚುಗಳ ಹುಚ್ಚೆಬ್ಬಿಸುವ ಸಂಭ್ರಮದಲ್ಲಿದೆ. ಅದು ನನ್ನ ಕಣ ಕಣದಲಿ ಮೆಲುವಾಗಿ ಪಸರಿಸುತ, ವಿಹರಿಸುತಾ ವಿಹಂಗಮವಾಗಿ ನನ್ನನ್ನು ಆವರಿಸಿಕೊಳ್ಳುತ್ತದೆ. ನನ್ನೊಳಗಿನ ಕನವರಿಕೆಗಳಿಗೆ ರೆಕ್ಕೆ ಪುಕ್ಕ ಮೂಡಿ ಗಗನವೇರಿ ತೇಲುತ್ತವೆ. ಕೇವಲ ಕಲ್ಪನೆಯಲ್ಲಿಯೇ ಬದುಕು ಕ್ಷಿಪಣಿಯ ವೇಗ ಪಡೆದು ಹಾರುವಾಗ ನನ್ನೆಲ್ಲ ನೋವು ಹತಾಶೆಗಳು ಕಕ್ಕಾಬಿಕ್ಕಿಯಾಗಿ ಹತಗೊಂದು ಹರಡಿ ಬೀಳುತ್ತವೆ. ಆ ಕ್ಷಣ ನಾನು ಸ್ಥಬ್ದ.. !. ಕ್ಷಣ ಮಾತ್ರದಲ್ಲಿ ವಿಷಣ್ಣ ನಗುವೊಂದನ್ನು ತುಟಿಗೆ ಎಳೆದು ತರುತ್ತೇನೆ. ಅದು ನನ್ನ ಅಸ್ತಿತ್ವಕ್ಕೆ ಸವಾಲೊಡ್ಡುವ ಮುಂಚೆಯೇ ವಿರುದ್ದ ದಿಕ್ಕಿನಲ್ಲಿ ಮೆಲ್ಲನೆ ಕವಲೊಡೆದು ಮೂಡುವ ಚಂದ್ರಮನ ಬೆಳಕಿನ ಮೊದಲ ಕಣದ ಆಹ್ಲಾದಕರ ಸೊಂಪನ್ನು ಕಣ್ತುಂಬ ತುಂಬಿಕೊಂಡು ಜಾರಿಬಿದ್ದ ಕಣ್ಣೀರ ಹನಿಗೆ ಅದೇ ಚಂದ್ರಮನನ್ನು ಹಕ್ಕುದಾರನನ್ನಾಗಿ ಮಾಡಿ ಅವನ ಮೇಲೆ ಕಲ್ಲೆಸೆಯುವ ಪ್ರಯೋಗಕ್ಕೆ ಮುಂದಾಗುತ್ತೇನೆ….

~ಹುಸೇನಿ

Leave a comment

Create a free website or blog at WordPress.com.

Up ↑

%d bloggers like this: