ಹಸಿವಾಗಲು ಮಾತ್ರೆಯಿದೆ;
ಕೇರಿಯ ಅನಾಥ ಹುಡುಗ
ಕಾಯುತ್ತಿದ್ದಾನೆ,
ಹಸಿವಾಗದಿರಲು ಔಷಧಿ ಬೇಕಂತೆ..
—
ಅಲ್ಲಿ ಅವರು
ಶಾಂತಿ ಸ್ಥಾಪನೆಗಾಗಿ
ಯುದ್ಧ ನಿರತರಾಗಿದ್ದಾರೆ;
—
ಒಡೆದ ಗಾಜು
ಮರು-ಜೋಡಿಸಲಾರದಂತೆ;
ಮತ್ತೆ ಬದುಕು ?
—
ಎಲ್ಲವನ್ನೂ ಸಹಿಸಬಲ್ಲೆ;
ಜಗದಗಲ ಹರಡಿದ ಶೂನ್ಯತೆ ಒಂದನು
ಬಿಟ್ಟು
—
ಅವಸರಬೇಡ,
ಸಾವು
ನಿನ್ನ ಪಾದಕ್ಕಂಟಿದ ಚಪ್ಪಲಿ;
—
ಹಾಳೂರಿನ
ಹಾದಿಯಲ್ಲೊಂದು
ಮದುವೆ ದಿಬ್ಬಣಕೆ
ಎದುರಾದ ಶವಯಾತ್ರೆ;
ಮುದಿಯನೊಬ್ಬ ಗೊಂದಲದಲ್ಲಿದ್ದಾನೆ
—
ಸ್ವಗತಗಳಲಿ
ಸಾಂತ್ವನವಿದೆ;
ಹೊರಸಾಯುವ
ಪದಗಳಿಗಿಂತ,
ಇರಿದ ನಿನ್ನೆಗಿಂತ, ಸಾವ ಕರೆವ ನಾಳೆಗಿಂತ..